ದೇವರಿಗೆ ಏನು ಕೊಡಬೇಕು?

krishna
Published on

ಶ್ರೀಕೃಷ್ಣ ಗೋಪಿಕಾಸ್ತ್ರೀಯರ ಭಕ್ತಿಗೆ ಮೆಚ್ಚಿ ಅವರಿಗೆ ತನ್ನ ಮನಸ್ಸನ್ನು ಕೊಟ್ಟಿದ್ದಾನೆ. ಆಗ ಒಬ್ಬ ಭಕ್ತ ಬಂದು ಕೃಷ್ಣನನ್ನು ಕೇಳಿದನಂತೆ. ಒಬ್ಬ ಕವಿ ಹೇಳುತ್ತಾನೆ: ‘ರತ್ನಾಕರಸ್ತವಗೃಹಂ ಗೃಹಿಣೀ ಚ ಪದ್ಮಾ ಕಿಂ ದೇಯಮಸ್ತಿ ಭವತೇ ಜಗದೀಶ್ವರಾಯ’ -‘ಕೃಷ್ಣ, ನಿನಗೆ ನಾನು ಏನು ಕೊಡಲಿ. ಮುತ್ತು ರತ್ನಗಳನ್ನು ಕೊಡೋಣ ಎಂದರೆ ನೀನು ಇರುವುದೇ ಸಮುದ್ರದಲ್ಲಿ. ಸಮುದ್ರವನ್ನು ರತ್ನಾಕರ ಎಂದು ಕರೆಯುತ್ತಾರೆ. ರತ್ನಗಳು ಹುಟ್ಟುವುದೇ ನೀನಿದ್ದ ಮನೆಯಲ್ಲಿ. ಹಾಗಾದರೆ ಮುತ್ತುರತ್ನಗಳನ್ನು ಕೊಟ್ಟು ಏನೂ ಪ್ರಯೋಜನವಿಲ್ಲ. ದುಡ್ಡು ಕೊಡೋಣ, ಅದರಿಂದ ಸಂತೋಷ ಪಡಿಸೋಣ ಎಂದರೆ ನಿನ್ನ ಹೆಂಡತಿ ಲಕ್ಷ್ಮೀದೇವಿ.

ಲಕ್ಷ್ಮೀಪತಿಯಾದ ನಿನಗೆ ನಾವು ಏನು ಸಂಪತ್ತು ಕೊಡುವುದು? ಆದರೂ ನಿನ್ನಲ್ಲಿ ಒಂದು ವಸ್ತುವಿನ ಕೊರತೆ ಇದೆ. ಅದೇನೆಂದರೆ ನಿನಗೆ ಮನಸ್ಸಿನ ಕೊರತೆ ಇದೆ. ಏಕೆಂದರೆ ಈಗಾಗಲೇ ನೀನು ನಿನ್ನ ಮನಸ್ಸನ್ನು ಗೋಪಿಕಾಸ್ತ್ರೀಯರಿಗೆ ಕೊಟ್ಟು ಬಿಟ್ಟಿದ್ದೀಯಾ? ಈಗ ನಿನ್ನ ಮನಸ್ಸು ನಿನ್ನಲ್ಲಿ ಇಲ್ಲ. ಅದಕ್ಕೆ ನಾನು ನನ್ನ ಮನಸ್ಸನ್ನು ಕೊಡುತ್ತೇನೆ ಸ್ವೀಕರಿಸು’ ಎನ್ನುತ್ತಾನೆ. ನನ್ನ ಮನಸ್ಸನ್ನು ನಿನಗೆ ಕೊಡುತ್ತೇನೆ ಎಂದರೆ ನಿನ್ನ ಪಾದಾರವಿಂದಗಳಲ್ಲಿ ನನ್ನ ಮನಸ್ಸು ಯಾವಾಗಲೂ ಇರುವಂತೆ ಮಾಡು ಎಂದು ಪ್ರಾರ್ಥಿಸುತ್ತಿದ್ದಾನೆ. ಕೆಲವರು ದಾನ ಕೊಡುವಾಗ ಏನು ಬೇಕು ಎಂದು ಕೇಳುತ್ತಾರೆ. ಏಕೆಂದರೆ ಇರುವುದನ್ನೇ ಕೊಟ್ಟರೆ ಹೆಚ್ಚು ಉಪಯೋಗಕ್ಕೆ ಬರುವುದಿಲ್ಲ, ದಾನಪಡೆದವರು ನಿತ್ಯ ಉಪಯೋಗಿಸಬೇಕು ಎಂಬ ಕಾರಣಕ್ಕಾಗಿ. ಹಾಗೆ ಭಕ್ತನೊಬ್ಬ ಕೃಷ್ಣನನ್ನು ಕೇಳುತ್ತಿದ್ದಾನೆ. ಕೃಷ್ಣ ನಿನ್ನ ಬಳಿ ಏನು ಇಲ್ಲ ಹೇಳು, ಅದನ್ನು ಕೊಡುತ್ತೇನೆ ಎಂದು.

‘ಆಭೀರವಾಮನಯನಾಹೃತಮಾನಸಾಯ ದತ್ತಂ ಮನೋ ಯದುಪತೇ ತದಿದಂ ಗೃಹಾಣ’ ನಿನ್ನಲ್ಲಿ ಎಲ್ಲವೂ ಇದೆ. ಮನಸ್ಸನ್ನು ಮಾತ್ರ ಗೋಪಿಕಾಸ್ತ್ರೀಯರು ಕದ್ದಿದ್ದಾರೆ. ಅದು ಬೇಕಾದರೆ ನನ್ನದು ಇದೆ. ಸ್ವೀಕರಿಸು ಎಂದು ಪ್ರಾರ್ಥಿಸುತ್ತಿದ್ದಾನೆ. ಭಕ್ತರ ಭಕ್ತಿಗೆ ಮೆಚ್ಚುವವನು ಎನ್ನುವುದು ಇಲ್ಲಿ ಕವಿಯ ಹೃದಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net