

ಬೆಂಗಳೂರು: ಸಿಡಿ ವಿಚಾರವಾಗಿ ಪ್ರತಿಪಕ್ಷ ಕುಂಟುನೆಪ ಹೇಳಿ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಂಗಳವಾರ ಮಾತನಾಡಿದ ಸಿಎಂ, ಬಜೆಟ್ ಅಧಿವೇಶನ ಸುಸೂತ್ರವಾಗಿ ನಡೆಯಬೇಕು. ಎಲ್ಲ ಶಾಸಕರು ತಮ್ಮ ಅಭಿಪ್ರಾಯ ತಿಳಿಸಬೇಕೆಂದು ಅವಕಾಶ ಮಾಡಿಕೊಡಲಾಗಿದೆ. ಆದರೆ ಪ್ರತಿಪಕ್ಷ ವಿನಾಕಾರಣ ಧರಣಿ ಮಾಡುತ್ತಿದೆ ಎಂದರು.
ಸಿಡಿ ಪ್ರಕರಣದಲ್ಲಿ ಈಗಾಗಲೇ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಕರಣದ ತನಿಖೆ ಕೂಡ ನಡೆಯುತ್ತಿದೆ. ಆದರೂ ಏಕೆ ಪ್ರತಿಭಟಿಸುತ್ತಿದ್ದಾರೋ ಗೊತ್ತಿಲ್ಲ. ಸಂಬಂಧಪಟ್ಟ ಮಹಿಳೆ ಕೈಗೆ ಸಿಗುತ್ತಿಲ್ಲ ಎಂದು ಯಡಿಯೂರಪ್ಪ ಹೇಳಿದರು.