ನಾಳೆಯಿಂದ ಬದಲಾಗುವುದೇನು?; ಇಲ್ಲಿದೆ ಆ ಎಲ್ಲ ವಿವರ...

Nation
Published on

ದೇಶದ ಕಾನೂನು, ನಿಯಮಗಳ ಪರಿಷ್ಕೃತ ಚೌಕಟ್ಟು, ಕೆಲವು ಹಣಕಾಸು ಸೇವೆಗಳ ಮೇಲಿನ ಪರಿಷ್ಕೃತ ಶುಲ್ಕ ನಾಳೆಯಿಂದ (ಗುರುವಾರ) ಜಾರಿಗೆ ಬರಲಿವೆ. ಈಗಾಗಲೇ ಕೆಲವು ಪರಿಷ್ಕೃತ ನಿಯಮಗಳು, ಪರಿಷ್ಕೃತ ದರಗಳು ಜೂನ್ ತಿಂಗಳಿಂದ ಚಾಲ್ತಿಗೆ ಬಂದಿವೆ. ಸರ್ಕಾರ ಹಂತ ಹಂತವಾಗಿ ನಿಯಮ ಪರಿಷ್ಕರಣೆ, ದರ ಪರಿಷ್ಕರಣೆಗಳನ್ನು ಮಾಡುತ್ತಿದೆ. ಜುಲೈ 1ರಿಂದ ಬದಲಾಗಲಿರುವ ನಿಯಮ, ಜಾರಿಗೊಳ್ಳಲಿರುವ ಪರಿಷ್ಕೃತ ಸೇವಾ ಶುಲ್ಕಗಳ ವಿವರ ಇಲ್ಲಿದೆ.

ಎಸ್​ಬಿಐ ಸೇವೆಗಳ ಶುಲ್ಕ ಪರಿಷ್ಕರಣೆ

ಎಟಿಎಂನಿಂದ ನಗದು ಪಡೆಯುವುದು, ಬ್ಯಾಂಕ್ ಶಾಖೆಯಿಂದ ನಗದು ಪಡೆಯುವುದು, ಚೆಕ್ ಪುಸ್ತಕದ ಶುಲ್ಕ ಸೇರಿ ಉಳಿತಾಯ ಖಾತೆದಾರರಿಗೆ ಒದಗಿಸುತ್ತಿರುವ ಕೆಲವು ಸೇವೆಗಳ ಶುಲ್ಕವನ್ನು ಪರಿಷ್ಕರಿಸಿ ಜಾರಿಗೊಳಿಸುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ತಿಳಿಸಿದೆ. ಇದು ಎಸ್​ಬಿಐನ ಬೇಸಿಕ್ ಸೇವಿಂಗ್ಸ್ ಡೆಪಾಸಿಟ್ ಖಾತೆದಾರರಿಗೆ ಅನ್ವಯ. ಬ್ಯಾಂಕ್ ಶಾಖೆ ಮತ್ತು ಎಟಿಎಂ ಮೂಲಕ ತಿಂಗಳಿಗೆ ನಾಲ್ಕು ಬಾರಿ ಉಚಿತವಾಗಿ ಹಣ ನಗದೀಕರಿಸಬಹುದು. ಅದಾದ ನಂತರದಲ್ಲಿ ಪ್ರತಿ ಬಾರಿ ಹಣ ನಗದೀಕರಿಸುವಾಗ 15 ರೂಪಾಯಿ ಮತ್ತು ಜಿಎಸ್​ಟಿಯನ್ನು ಸೇವಾ ಶುಲ್ಕವಾಗಿ ಪಾವತಿಸಬೇಕು. ಹಣಕಾಸು ವರ್ಷಕ್ಕೆ ಆಗುವಂತೆ 10 ಚೆಕ್ ಲೀವ್ಸ್ ಇರುವ ಪುಸ್ತಕವನ್ನು ಬ್ಯಾಂಕು ಉಚಿತವಾಗಿ ಖಾತೆದಾರರಿಗೆ ನೀಡುತ್ತದೆ. ಇದಾದ ನಂತರ, ಪ್ರತಿ 10 ಲೀಫ್ ಇರುವ ಚೆಕ್ ಪುಸ್ತಕಕ್ಕೆ 40 ರೂಪಾಯಿ+ಜಿಎಸ್​ಟಿ, 25 ಚೆಕ್ ಲೀಫ್ ಇರುವ ಚೆಕ್ ಪುಸ್ತಕಕ್ಕೆ 75 ರೂ.+ಜಿಎಸ್​ಟಿ, 10 ಚೆಕ್ ಲೀಫ್ ಇರುವ ಎಮರ್ಜೆನ್ಸಿ ಚೆಕ್ ಪುಸ್ತಕಕ್ಕೆ 50 ರೂ.+ಜಿಎಸ್​ಟಿ ಪಾವತಿಸಬೇಕು. ಹಿರಿಯ ನಾಗರಿಕರಿಗೆ ಚೆಕ್​ಪುಸ್ತಕ ಶುಲ್ಕ ವಿನಾಯಿತಿ ಇದೆ.

ಚಾಲನಾ ತರಬೇತಿ ಕೇಂದ್ರಗಳಲ್ಲೇ ಡಿಎಲ್ ಟೆಸ್ಟ್

ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದು ಡಿಎಲ್ ಟೆಸ್ಟ್ ಕೊಟ್ಟರೆ ಸಾಕು. ಆರ್​ಟಿಒ ಕಚೇರಿಯಲ್ಲಿ ಟೆಸ್ಟ್ ಕೊಡಬೇಕಾಗಿಲ್ಲ!. ಈ ತರಬೇತಿ ಕೇಂದ್ರಗಳು ಉತ್ತಮ ಗುಣಮಟ್ಟದ ಚಾಲನಾ ಕೋರ್ಸ್​ಗಳನ್ನು ಅಭ್ಯರ್ಥಿಗಳಿಗೆ ಕೊಡಬೇಕು. ಅಲ್ಲಿ ಅವರು ಉತ್ತೀರ್ಣರಾದರೆ ಮುಂದೆ ಚಾಲನಾ ಪರವಾನಗಿ ಪಡೆಯುವ ವೇಳೆ ಚಾಲನಾ ಪರೀಕ್ಷೆಗೊಳಪಡಬೇಕಾಗಿಲ್ಲ. ಚಾಲನಾ ತರಬೇತಿ ಕೋರ್ಸ್​ಗಳ ಪೈಕಿ, ಲಘು ಮೋಟಾರು ವಾಹನ ಚಾಲನಾ ತರಬೇತಿ ಕೋರ್ಸ್ 4 ವಾರಗಳದ್ದು. ಒಟ್ಟು 29 ಗಂಟೆಯಲ್ಲಿ ಪೂರ್ಣಗೊಳಿಸಬೇಕು. ಇದೇ ರೀತಿ, ಮಧ್ಯಮ ಮತ್ತು ಬೃಹತ್ ಗಾತ್ರದ ಮೋಟಾರು ವಾಹನ ಚಾಲನಾ ತರಬೇತಿ ಕೋರ್ಸ್​ಗಳು ಆರು ವಾರಗಳದ್ದಾಗಿದೆ. ಒಟ್ಟು 38 ಗಂಟೆ ಅವಧಿಯ ಕೋರ್ಸ್ ಇದಾಗಿದ್ದು, ಥಿಯರಿ ಮತ್ತು ಪ್ರಾಕ್ಟೀಸ್ ಇರಲಿದೆ.

ಟಿಡಿಎಸ್ ಹೊಸ ನಿಯಮ

ಅತಿ ಹೆಚ್ಚಿನ ಪ್ರಮಾಣದ ಟಿಡಿಎಸ್ ಡಿಡಕ್ಟರ್ಸ್ ಮತ್ತು ಟಿಸಿಎಸ್ ಕಲೆಕ್ಟರ್​ಗಳನ್ನು ಗುರುತಿಸುವಂತಹ ವಿಶೇಷ ‘ಸ್ಪೆಸಿಫೈಡ್ ಪರ್ಸನ್ಸ್’ ಸೇವೆಯನ್ನು ಆದಾಯ ತೆರಿಗೆ ಇಲಾಖೆ ಜು.1ರಿಂದ ಆರಂಭಿಸಲಿದೆ. ಇದರಂತೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಟಿಡಿಎಸ್ ಅಥವಾ ಟಿಸಿಎಸ್ 50,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅಂಥವರು ಇನ್ನು ತೆರಿಗೆ ಇಲಾಖೆಯು ‘ಸ್ಪೆಸಿಫೈಡ್ ಪರ್ಸನ್ಸ್’ಆಗಿ ಗುರುತಿಸಲಿದೆ. ಜುಲೈ 1ರಿಂದ ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​ನಲ್ಲಿ ‘ಕಾಂಪ್ಲಯೆನ್ಸ್ ಚೆಕ್ ಫಾರ್ ಸೆಕ್ಷನ್ 206ಎಬಿ ಆಂಡ್ 206 ಸಿಸಿಎ’ ಎಂಬುದನ್ನು ಕ್ಲಿಕ್ ಮಾಡಿ ಪ್ಯಾನ್ ಸಂಖ್ಯೆ ನಮೂದಿಸಿದರೆ ‘ಸ್ಪೆಸಿಫೈಡ್ ಪರ್ಸನ್ಸ್’ ಹೌದೋ ಅಲ್ಲವೋ ಎಂಬುದು ಖಾತರಿಯಾಗಲಿದೆ.

ಎಲ್​ಪಿಜಿ ದರ ಪರಿಷ್ಕರಣೆ

ಅಡುಗೆ ಅನಿಲದ ದರ ಪ್ರತಿ ತಿಂಗಳು ಪರಿಷ್ಕರಣೆ ಆಗುತ್ತಿದ್ದು, ಜುಲೈ 1ರಂದೂ ಇದು ಮುಂದುವರಿಯ ಲಿದೆ. ತೈಲೋತ್ಪನ್ನದ ದರ ಏರುತ್ತಿರುವ ಹಿನ್ನೆಲೆಯಲ್ಲಿ ಎಲ್​ಪಿಜಿ ಸಿಲಿಂಡರ್ ಬೆಲೆ ಕೂಡ ಏರಿಕೆ ಆಗುವ ಸಾಧ್ಯತೆ ಇದೆ. ದೆಹಲಿಯಲ್ಲಿ ಪ್ರಸ್ತುತ ಪ್ರತಿ ಸಿಲಿಂಡರ್​ನ ದರ 809 ರೂ. ಇದೆ.

ಹೀರೋ ಮೋಟಾರ್ ವಾಹನ ಬೆಲೆ ಅಧಿಕ

ಕಚ್ಚಾ ಸಾಮಗ್ರಿಗಳು ಮತ್ತು ತಯಾ ರಿಕಾ ವೆಚ್ಚ ಏರುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಹೀರೋ ಮೋಟಾರ್ ಕಂಪನಿ ಕಳೆದ ವಾರ ಘೋಷಿಸಿದೆ. ಏರಿಕೆ ಪ್ರಮಾಣವನ್ನು ತಿಳಿಸಿಲ್ಲ.

ಐಎಫ್​ಎಸ್​ಸಿ ಕೋಡ್ ಬದಲು

ಕೆನರಾ ಬ್ಯಾಂಕ್ ಜತೆಗೆ ವಿಲೀನವಾಗಿರುವ ಸಿಂಡಿಕೇಟ್ ಬ್ಯಾಂಕಿನ ಶಾಖೆಗಳ ಐಎಫ್​ಎಸ್​ಸಿ ಕೋಡ್ ಜು.1ರಿಂದ ಬದಲಾಗಲಿದೆ. ಸಿಂಡಿಕೇಟ್ ಬ್ಯಾಂಕ್​ನ ಗ್ರಾಹಕರು ಇನ್ನು ಅಧಿಕೃತವಾಗಿಯೇ ಕೆನರಾ ಬ್ಯಾಂಕ್ ಗ್ರಾಹಕರಾಗುತ್ತಿದ್ದಾರೆ.

ಗ್ರಾಹಕರಿಗೆ ಹೊಸ ಚೆಕ್​ಬುಕ್

ಆಂಧ್ರ ಬ್ಯಾಂಕ್ ಮತ್ತು ಕಾರ್ಪೋರೇಷನ್ ಬ್ಯಾಂಕ್​ಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜತೆಗೆ ವಿಲೀನಗೊಂಡಿವೆ. ಹೀಗಾಗಿ, ಆಂಧ್ರ ಬ್ಯಾಂಕ್ ಮತ್ತು ಕಾರ್ಪೋರೇಷನ್​ ಬ್ಯಾಂಕುಗಳ ಗ್ರಾಹಕರಿಗೆ ಜು.1ರಿಂದ ಹೊಸ ಚೆಕ್ ಪುಸ್ತಕ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net