

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಚಳಿ ಹೆಚ್ಚಾಗಿದೆ. ಸಂಕ್ರಾಂತಿ ಬಳಿಕ ಇಳಿಕೆಯಾಗಿದ್ದ ಚಳಿಯು ಒಣಹವೆ ವಾತಾವರಣ ಇರುವ ಹಿನ್ನೆಲೆಯಲ್ಲಿ ರಾತ್ರಿಯಲ್ಲಿ ಚಳಿಯ ಅನುಭವವಾಗುತ್ತಿದೆ. ಕಳೆದ ಮೂರ‌್ನಾಲ್ಕು ದಿನಗಳಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಸರಾಸರಿ 2-4 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುತ್ತಿದೆ. ಮಂಗಳವಾರ ಬೀದರ್‌ನಲ್ಲಿ 7.6, ಹಾಸನದಲ್ಲಿ 10.4, ಧಾರವಾಡದಲ್ಲಿ 11.0, ವಿಜಯಪುರದಲ್ಲಿ 11.5, ಹಾವೇರಿಯಲ್ಲಿ 13.0, ದಾವಣಗೆರೆಯಲ್ಲಿ 13.0, ಬೆಂಗಳೂರಿನಲ್ಲಿ 13.3 ಕನಿಷ್ಟ ಉಷ್ಣಾಂಶ ದಾಖಲಾಗಿದೆ.
ಒಣಹವೆ ವಾತಾವರಣ ಹಿನ್ನೆಲೆಯಲ್ಲಿ ಹಗಲಿನಲ್ಲಿ ಹೆಚ್ಚು ಬಿಸಿಲು ಇದ್ದರೆ ರಾತ್ರಿ ವೇಳೆ ಅಷ್ಟೇ ಚಳಿ ಇರುತ್ತದೆ. ಚಳಿಗಾಲದಲ್ಲಿ ಕನಿಷ್ಟ ತಾಪಮಾನದಲ್ಲಿ 12 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಟ ತಾಪಮಾನದಲ್ಲಿ 28 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತದೆ. ಮಾನ್ಸೂನ್ ಸಂದರ್ಭದಲ್ಲಿ ಕನಿಷ್ಟ ತಾಪಮಾನದಲ್ಲಿ 20 ಡಿಗ್ರಿ ಹಾಗೂ ಗರಿಷ್ಟ ತಾಪಮಾನದಲ್ಲಿ 28 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬೇಸಿಗೆಯಲ್ಲಿ ಕನಿಷ್ಟ ತಾಪಮಾನದಲ್ಲಿ 27 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಟ ತಾಪಮಾನದಲ್ಲಿ 38 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತದೆ. ಅಲ್ಲದೆ, ಕಲಬುರಗಿ ಹಾಗೂ ರಾಯಚೂರು ಸೇರಿ ರಾಜ್ಯದ ಇನ್ನಿತರ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಸರಾಸರಿ 40-45 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದರು.