ಭಾರತದಲ್ಲಿ ಸ್ಟಾರ್​ಲಿಂಕ್; ಇದರಿಂದ ಜನರಿಗೆ ಏನ್ನೆಲ್ಲ ಲಾಭ?

ವಿಜಯವಾಣಿ (13)
Published on

ನವದೆಹಲಿ: ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್​ಎಕ್ಸ್ ಕಂಪನಿಯ ಸ್ಟಾರ್​ಲಿಂಕ್ ಇದೀಗ ಭಾರತವನ್ನೂ ಪ್ರವೇಶಿಸಿದೆ. ಉಪಗ್ರಹ ಆಧಾರಿತ ಇಂಟರ್​ನೆಟ್ ಸೇವೆಯನ್ನು ಭಾರತದಲ್ಲಿ ಆರಂಭಿಸಲು ಸ್ಟಾರ್​ಲಿಂಕ್​ಗೆ ಕೇಂದ್ರ ದೂರಸಂಪರ್ಕ ಇಲಾಖೆ ಮೊನ್ನೆಯಷ್ಟೆ ಪರವಾನಿಗೆ ನೀಡಿದೆ. ಇದು ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಒಂದು ಪ್ರಮುಖ ಮೈಲಿಗಲ್ಲು. ವಿಶೇಷವಾಗಿ ಗ್ರಾಮೀಣ ಮತ್ತು ದುರ್ಗಮ ಪ್ರದೇಶಗಳ ಜನರಿಗೆ ಸಿಗುತ್ತಿರುವ ಇಂಟರ್​ನೆಟ್ ಸೇವೆಯಲ್ಲಿ ಇದು ಕ್ರಾಂತಿಕಾರಿ ಬದಲಾವಣೆ ತರುವ ಸಾಧ್ಯತೆ ಇದೆ.

ಹೈಸ್ಪೀಡ್, ಕಡಿಮೆ ಲೇಟೆನ್ಸಿ

ಸ್ಟಾರ್​ಲಿಂಕ್​ನ ಇಂಟರ್​ನೆಟ್ 220 ಎಂಬಿಪಿಎಸ್ (ಮೆಗಾಬಿಟ್ಸ್ ಪರ್ ಸೆಕೆಂಡ್) ವೇಗವನ್ನು ಒದಗಿಸುತ್ತದೆ. ಜೊತೆಗೆ 25-60 ಮಿಲಿಸೆಕೆಂಡ್​ಗಳ ಕಡಿಮೆ ಲೇಟೆನ್ಸಿ (ವಿಳಂಬ) ಹೊಂದಿದೆ. ಇದು ವಿಡಿಯೋ ಸ್ಟ್ರೀಮಿಂಗ್, ಆನ್​ಲೈನ್ ಗೇಮಿಂಗ್, ವಿಡಿಯೋ ಕಾನ್ಪರೆನ್ಸಿಂಗ್​ನಂತಹ ಡೇಟಾ-ಹೆವಿ ಕಾರ್ಯಗಳಿಗೆ ಸೂಕ್ತವಾಗಿದೆ. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಆನ್​ಲೈನ್ ಶಿಕ್ಷಣ, ರೈತರಿಗೆ ಕೃಷಿ ಮಾಹಿತಿ ಮತ್ತು ಸಣ್ಣ ವ್ಯಾಪಾರಿಗಳಿಗೆ ಇ-ಕಾಮರ್ಸ್ ಪ್ರವೇಶ ಸುಲಭ ಲಭ್ಯವಾಗುತ್ತದೆ.

ಕೈಗೆಟಕುವ ಬೆಲೆ

ಸ್ಟಾರ್​ಲಿಂಕ್ ಭಾರತದಲ್ಲಿ ತನ್ನ ಸೇವೆಯನ್ನು ತಿಂಗಳಿಗೆ 1,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಆರಂಭಿಕ ಆಫರ್​ನೊಂದಿಗೆ ಪ್ರಾರಂಭಿಸಲಿದೆ ಎನ್ನಲಾಗಿದೆ. ಇದು ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಾಮಾನ್ಯ ಜನರಿಗೆ ಕೈಗೆಟಕುವಂಥ ಬೆಲೆ. ಗ್ರಾಮೀಣ ಬಳಕೆದಾರರಿಗೆ ವಾರ್ಷಿಕ ಯಾವುದೇ ಶುಲ್ಕವಿಲ್ಲದೆ ಸೇವೆ ಒದಗಿಸುವ ಸಾಧ್ಯತೆಯೂ ಇದೆ. ಬೆಲೆ, ಲಭ್ಯತೆ ಮತ್ತು ಇತರ ವಿವರಗಳು ಅಂತಿಮ ಸ್ಪೆಕ್ಟ್ರಮ್ ಹಂಚಿಕೆ ಮತ್ತು ಇನ್-ಸ್ಪೇಸ್​ನ ಒಪ್ಪಿಗೆಯ ನಂತರವೇ ಗೊತ್ತಾಗಲಿವೆ.

ಜಿಯೋ, ಏರ್​ಟೆಲ್ ಜತೆ ಸಹಕಾರ

ಭಾರತದ ಪ್ರಮುಖ ದೂರಸಂಪರ್ಕ ಕಂಪನಿಗಳಾದ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್​ಟೆಲ್​ನೊಂದಿಗೆ ಸ್ಟಾರ್​ಲಿಂಕ್ ಒಪ್ಪಂದ ಮಾಡಿಕೊಂಡಿದ್ದು, ಇದರಿಂದ ಸ್ಟಾರ್​ಲಿಂಕ್​ನ ಉಪಕರಣಗಳನ್ನು ಈ ಕಂಪನಿಗಳ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಸಬಹುದು.

ಇತ್ತೀಚಿನ ಬೆಳವಣಿಗೆಗಳು

ಪರವಾನಗಿ ಪ್ರಕ್ರಿಯೆ: ಭಾರತದ ದೂರಸಂಪರ್ಕ ಇಲಾಖೆ ಜೂನ್ 6ರಂದು ಸ್ಟಾರ್​ಲಿಂಕ್​ಗೆ ಗ್ಲೋಬಲ್ ಮೊಬೈಲ್ ಪರ್ಸನಲ್ ಕಮ್ಯುನಿಕೇಷನ್ ಬೈ ಸೆಟಲೈಟ್ (ಜಿಎಂಪಿಸಿಎಸ್) ಪರವಾನಿಗೆ ನೀಡಿದೆ. ಇದಕ್ಕೂ ಮುಂಚೆ ಮೇ 7ರಂದು ಒಂದು ಲೆಟರ್ ಆಫ್ ಇಂಟೆಂಟ್ ನೀಡಲಾಗಿತ್ತು. ಸ್ಟಾರ್​ಲಿಂಕ್ ಇನ್ನೂ ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರಮೋಷನ್ ಆಂಡ್ ಆಥರೈಸೇಷನ್ ಸೆಂಟರ್​ನ (ಇನ್-ಸ್ಪೇಸ್) ಅಂತಿಮ ಒಪ್ಪಿಗೆ ಪಡೆಯಬೇಕಿದೆ.

ಸ್ಪೆಕ್ಟ್ರಮ್ ಹಂಚಿಕೆ: ಸ್ಟಾರ್​ಲಿಂಕ್​ನಂತಹ ಕಂಪನಿಗಳಿಗೆ ಸ್ಪೆಕ್ಟ್ರಮ್ ಹಂಚಿಕೆ ಕುರಿತು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಶಿಫಾರಸುಗಳನ್ನು ಸಲ್ಲಿಸಿದೆ. ಇದರಲ್ಲಿ ಶೇ. 4 ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ (ಎಜಿಆರ್) ಶುಲ್ಕ ಮತ್ತು ಗ್ರಾಮೀಣ ಬಳಕೆದಾರರಿಗೆ ಶುಲ್ಕರಹಿತ ಸೇವೆಯ ಶಿಫಾರಸುಗಳು ಸೇರಿವೆ.

ಬೆಲೆ, ಉಪಕರಣ: ಸ್ಟಾರ್​ಲಿಂಕ್ ಸೇವೆ ಪಡೆಯಲು ಬಳಕೆದಾರರು ಉಪಗ್ರಹ ಡಿಶ್ ಮತ್ತು ವೈಫೈ ರೂಟರ್​ನ ಒನ್​ಟೈಮ್ ಹಾರ್ಡ್​ವೇರ್ ಕಿಟ್​ಗೆ 20,000ದಿಂದ 35,000 ರೂ.ವರೆಗೆ ಖರ್ಚು ಮಾಡಬೇಕಾಗುತ್ತದೆ. ಇದು ಗ್ರಾಹಕರಿಗೆ ದುಬಾರಿ ಎನಿಸಬಹುದು. ಆದರೆ, ಗ್ರಾಮೀಣ ಡಿಜಿಟಲ್ ಯೋಜನೆಗಳ ಮೂಲಕ ಈ ವೆಚ್ಚವನ್ನು ಕಡಿಮೆ ಮಾಡಲು ಅವಕಾಶವಿದೆ.

ಏನಿದು ಸ್ಟಾರ್​ಲಿಂಕ್?

ಸ್ಟಾರ್​ಲಿಂಕ್ ಎನ್ನುವುದು ಸ್ಪೇಸ್​ಎಕ್ಸ್​ನ ಒಂದು ಉಪಗ್ರಹ ಆಧಾರಿತ ಇಂಟರ್​ನೆಟ್ ಸೇವೆ. 7 ಸಾವಿರಕ್ಕೂ ಹೆಚ್ಚು ಲೋ ಅರ್ಥ್ ಆರ್ಬಿಟ್ (ಲಿಯೊ) ಉಪಗ್ರಹಗಳ ಮೂಲಕ ವಿಶ್ವಾದ್ಯಂತ ಹೈಸ್ಪೀಡ್, ಕಡಿಮೆ ಲೇಟೆನ್ಸಿಯ ಇಂಟರ್​ನೆಟ್ ಸಂಪರ್ಕವನ್ನು ಒದಗಿಸುತ್ತದೆ. ಈ ಉಪಗ್ರಹಗಳು ಭೂಮಿಯಿಂದ ಕೇವಲ 550 ಕಿಮೀ ದೂರದಲ್ಲಿ ಇರುವುದರಿಂದ, ಸಾಂಪ್ರದಾಯಿಕ ಜಿಯೋಸ್ಟೇಷನರಿ ಉಪಗ್ರಹಗಳಿಗಿಂತ ವೇಗವಾದ ಮತ್ತು ವಿಶ್ವಾಸಾರ್ಹ ಸಂಪರ್ಕವನ್ನು ಒದಗಿಸುತ್ತವೆ. ಭಾರತದಲ್ಲಿ ಸ್ಟಾರ್​ಲಿಂಕ್​ನ ಸೇವೆಗಳು 2025ರ ಕೊನೆಯಲ್ಲಿ ಅಥವಾ 2026ರ ಆರಂಭದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆ ಇದೆ.

ಜನರಿಗೆ ಲಾಭಗಳು

ಭಾರತದಲ್ಲಿ 143 ಕೋಟಿ ಜನಸಂಖ್ಯೆ ಇದ್ದರೂ, ಇಂಟರ್​ನೆಟ್ ಸಂಪರ್ಕ ಇರೋದು 95 ಕೋಟಿ ಜನರಿಗೆ ಮಾತ್ರ. ಗ್ರಾಮೀಣ ಪ್ರದೇಶಗಳಲ್ಲಿ ಫೈಬರ್ ಆಪ್ಟಿಕ್ ಕೇಬಲ್​ಗಳು ಅಥವಾ ಮೊಬೈಲ್ ಟವರ್​ಗಳಂತಹ ಸಾಂಪ್ರದಾಯಿಕ ಇಂಟರ್​ನೆಟ್ ಮೂಲಸೌಕರ್ಯ ಕಡಿಮೆ ಇದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಮಧ್ಯೆ ಇರುವ ಈ ಡಿಜಿಟಲ್ ಅಂತರವನ್ನು ಸ್ಟಾರ್​ಲಿಂಕ್​ನ ಉಪಗ್ರಹ ಆಧಾರಿತ ಸೇವೆಯಿಂದ ಕಡಿಮೆ ಮಾಡಬಹುದು. ಗ್ರಾಮೀಣ ಭಾಗದ ರೈತರು, ವಿದ್ಯಾರ್ಥಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ವಿಶ್ವದರ್ಜೆಯ ಇಂಟರ್​ನೆಟ್ ಸಂಪರ್ಕ ಸಿಗುತ್ತದೆ.

ಕಠಿಣ ಪರಿಸ್ಥಿತಿಗಳಲ್ಲಿ ಕೈಹಿಡಿವ ಸಾಮರ್ಥ್ಯ

ಯುದ್ಧಪೀಡಿತ ಪ್ರದೇಶಗಳು, ನೈಸರ್ಗಿಕ ವಿಪತ್ತುಗಳಂತಹ ಕಠಿಣ ಪರಿಸ್ಥಿತಿಗಳಲ್ಲಿ ಕೂಡ ಸ್ಟಾರ್​ಲಿಂಕ್​ನ ಸೇವೆಯ ಅವಶ್ಯಕತೆ ಬೀಳಬಹುದು. ಚಂಡಮಾರುತ, ಪ್ರವಾಹ ಅಥವಾ ಭೂಕಂಪದಂತಹ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಇಂಟರ್​ನೆಟ್ ಸಂಪರ್ಕ ಕಡಿತಗೊಂಡಾಗ, ಸ್ಟಾರ್​ಲಿಂಕ್ ಒಂದು ಜೀವರಕ್ಷಕ ಸೇವೆಯಾಗಬಹುದು.

ಸ್ಪರ್ಧಾತ್ಮಕ ಬೆಲೆ

ಭಾರತದ ಸ್ಯಾಟ್​ಕಾಮ್ ಮಾರುಕಟ್ಟೆಯಲ್ಲಿ ಭಾರ್ತಿ ಏರ್​ಟೆಲ್​ನ ಒನ್​ವೆಬ್, ರಿಲಯನ್ಸ್ ಜಿಯೋ-ಎಸ್​ಇಎಸ್ ಜಂಟಿ ಉದ್ಯಮ ಮತ್ತು ಗ್ಲೋಬಲ್​ಸ್ಟಾರ್​ನಂತಹ ಸ್ಪರ್ಧಿಗಳನ್ನು ಸ್ಟಾರ್​ಲಿಂಕ್ ಎದುರಿಸಲಿದೆ. ಆದರೆ, ಸ್ಟಾರ್​ಲಿಂಕ್​ನ 7,000ಕ್ಕೂ ಹೆಚ್ಚು ಉಪಗ್ರಹಗಳ ಜಾಲ ಇತರರ ಸಾಮರ್ಥ್ಯವನ್ನು ಮೀರಿಸುತ್ತದೆ. ಇದಲ್ಲದೆ, ಅಮೆಜಾನ್​ನ ಪ್ರಾಜೆಕ್ಟ್ ಕೈಪರ್ ಕೂಡ ಭಾರತದ ಮಾರುಕಟ್ಟೆಗೆ ಪ್ರವೇಶಿಸಲು ಮುಂದಾಗಿದೆ. ಇದರಿಂದ ಗ್ರಾಹಕರಿಗೆ ಹೆಚ್ಚು ಆಯ್ಕೆಗಳು ಮತ್ತು ಸ್ಪರ್ಧಾತ್ಮಕ ಬೆಲೆಗಳು ಲಭ್ಯವಾಗಲಿವೆ. ಒಟ್ಟಾರೆ, ಸ್ಟಾರ್​ಲಿಂಕ್​ನ ಸೇವೆ ಭಾರತದಲ್ಲಿ ಒಂದು ಡಿಜಿಟಲ್ ಕ್ರಾಂತಿಯನ್ನು ತರುವ ಸಾಮರ್ಥ್ಯ ಹೊಂದಿದೆ. ಆದರೆ, ಇದರ ಯಶಸ್ಸು ಸರ್ಕಾರದ ಬೆಂಬಲ, ಕೈಗೆಟಕುವ ಬೆಲೆ ಮತ್ತು ಸ್ಥಳೀಯ ಸ್ಪರ್ಧೆಯ ಮೇಲೆ ಅವಲಂಬಿತವಾಗಿದೆ.

ವ್ಯಾಪಾರ, ಶಿಕ್ಷಣಕ್ಕೆ ಉತ್ತೇಜನ

ಸ್ಟಾರ್​ಲಿಂಕ್​ನ ಆಗಮನದಿಂದ ಗ್ರಾಮೀಣ ಪ್ರದೇಶಗಳ ಸಣ್ಣ ವ್ಯಾಪಾರಿಗಳು ಇ-ಕಾಮರ್ಸ್, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಆನ್​ಲೈನ್ ವಹಿವಾಟುಗಳಿಗೆ ಸುಲಭವಾಗಿ ಪ್ರವೇಶಿಸಬಹುದು. ವಿದ್ಯಾರ್ಥಿಗಳಿಗೆ ಆನ್​ಲೈನ್ ಕೋರ್ಸ್​ಗಳು, ಶಿಕ್ಷಣ ಸಂಪನ್ಮೂಲಗಳು ಮತ್ತು ವಿಶ್ವಾದ್ಯಂತ ಲಭ್ಯವಿರುವ ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ. ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net