ರಾಜ್ಯಕ್ಕೆ ನಿಮ್ಮಿಂದ ಶಾಶ್ವತ ಕೊಡುಗೆಗಳೇನು?

ರಾಜ್ಯಕ್ಕೆ ನಿಮ್ಮಿಂದ ಶಾಶ್ವತ ಕೊಡುಗೆಗಳೇನು?
Published on

ಹಾಸನ: ಅಧಿಕಾರದ ಅವಧಿ ಪೂರೈಸಿದ ಮಾತ್ರಕ್ಕೆ ದೇವರಾಜ ಅರಸು ಆಗಲು ಸಾಧ್ಯವಿಲ್ಲ. ಇರುವಷ್ಟು ದಿನ ಏನು ಕೆಲಸ ಮಾಡಿದ್ದೀರಿ ಎಂಬುದು ಮುಖ್ಯ. ನಾಡಿನ ಜನರಿಗಾಗಿ ಶಾಶ್ವತವಾಗಿ ಏನು ಕೆಲಸಗಳನ್ನು ಮಾಡಿದ್ದೀರಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಎಲ್ಲರೂ ಆಕಾಶದಲ್ಲೇ ಹಾರಾಡುತ್ತಿದ್ದೀರಿ. ನೆಲಕ್ಕೆ ಇಳಿದು ಸ್ವಲ್ಪ ಜನರ ಸಮಸ್ಯೆಗೆ ಕಿವಿಯಾಗಿ. ನಿಮ್ಮ ಎಷ್ಟು ಶಾಸಕರು ಜನರ ಬಳಿಗೆ ಹೋಗಿ ಸಮಸ್ಯೆ ಕೇಳಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಪಕ್ಷದ ಬಗ್ಗೆ ಅನುಮಾನ ಇದ್ದವರು, ಪಕ್ಷವನ್ನು ಸರ್ವನಾಶ ಮಾಡಬೇಕು ಅಂದುಕೊಂಡಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ಗುರುವಾರ ಮಂಡ್ಯದಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದೇನೆ. ದೀಪಾವಳಿ ಬಳಿಕ ರಾಜ್ಯಾದ್ಯಂತ ಸುತ್ತಾಟ ನಡೆಸುತ್ತೇನೆ. ಜನಮಾನಸದಿಂದ ನಾನು ದೂರ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.

ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ. ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರ ವರ್ತಿಸಿದ ರೀತಿ ಬೇಸರ ತರಿಸಿದೆ. ಎನ್‌ಡಿಆರ್‌ಎಫ್‌ನಿಂದ ಹಣ ಬಂದ ಬಳಿಕ ಪ್ರತಿ ಹೆಕ್ಟೇರ್ ಬೆಳೆ ನಷ್ಟಕ್ಕೆ 8,500 ರೂ. ಹೆಚ್ಚುವರಿಯಾಗಿ ಕೊಡುವುದಾಗಿ ಹೇಳಿದ್ದಾರೆ. ಬೆಳೆ ನಷ್ಟ ಸಮೀಕ್ಷೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆಯೇ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಾನು ಯಾವತ್ತೂ ಟೀಕಿಸಿಲ್ಲ. ಗ್ಯಾರಂಟಿ ಯೋಜನೆಗಳಿಂದ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಮಹಿಳೆಯರು ಗೃಹಲಕ್ಷ್ಮಿ ಹಣದಿಂದ ವಾಷಿಂಗ್ ಮಷಿನ್, ಟೈಲರಿಂಗ್ ಮಷಿನ್, ರೆಫ್ರಿಜರೇಟರ್ ಖರೀದಿಸುವುದು ಅಭಿವೃದ್ಧಿಯೇ? ಖಜಾನೆ ತುಂಬಿಸಿಕೊಳ್ಳಲು ಮದ್ಯ ಮಾರಾಟ ಪ್ರಮಾಣ ಹೆಚ್ಚಳ ಮಾಡುವುದು ಒಳ್ಳೆಯ ಸರ್ಕಾರದ ಲಕ್ಷಣವೇ ಎಂದು ತರಾಟೆಗೆ ತೆಗೆದುಕೊಂಡರು.

ಅಸೂಯೆ ಏಕೆ?: ಬೆಂಗಳೂರು ನಗರವನ್ನು ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಮಾಡಿ ಅಭಿವೃದ್ಧಿಪಡಿಸುತ್ತಿರುವುದನ್ನು ಸಹಿಸದೆ ನಾನು ಅಸೂಯೆಪಡುತ್ತಿದ್ದೇನೆಂದು ಉಪಮುಖ್ಯಮಂತ್ರಿ ಹೇಳಿದ್ದಾರೆ. ಸುರಂಗ, ಹೊರವರ್ತುಲ ರಸ್ತೆಗೆ 2006-07ರಲ್ಲಿ ನಾವೇ ಯೋಜನೆ ರೂಪಿಸಿದ್ದೆವು. 16 ವರ್ಷಗಳ ಹಿಂದೆಯೇ ಘೋಷಣೆ ಮಾಡಿದ್ದ ಯೋಜನೆಗಳನ್ನು ಈಗ ರಿಮೇಕ್ ಮಾಡುತ್ತಿದ್ದೀರಿ. ಅಭಿವೃದ್ಧಿ ಕಾಮಗಾರಿಗೆ ಅಸೂಯೆಪಡುವ ಬುದ್ದಿ ನನಗಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

ಉಪಮುಖ್ಯಮಂತ್ರಿ ಹಾಸನಾಂಬ ಸನ್ನಿಧಿಯಲ್ಲಿ ಖಡ್ಗಮಾಲಾ ಪೂಜೆ ಮಾಡಿಸಿದ್ದಾರೆ. ನಾವು ದೈವಭಕ್ತರೇ. ಆದರೆ, ಇವರ ಹಾಗೆ ಯಾವತ್ತೂ ಮಾಡಿಲ್ಲ. ಪದ ಬಳಕೆಯಲ್ಲಿ ಶುದ್ಧತೆ ಇಲ್ಲದಿದ್ದರೆ ಏನು ಮಾಡುವುದು? ರಾಜ್ಯದ ಜನರು ನಿಮ್ಮನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ. ಚುನಾವಣೆಗೂ ಮೊದಲು ನೀಡಿದ್ದ ಭರವಸೆಗಳನ್ನು ಈಡೇರಿಸಲು ನಿಮ್ಮಿಂದ ಸಾಧ್ಯವಾಗಿಲ್ಲ. ಪ್ರತಿದಿನ ಸುಳ್ಳು ಹೇಳುವುದನ್ನು ಬಿಟ್ಟರೆ ಬೇರೆ ಏನೂ ಮಾಡುತ್ತಿಲ್ಲ ಎಂದು ಜರಿದರು.

ಮೈತ್ರಿ ಪಕ್ಷಕ್ಕೆ ಕಿವಿ ಹಿಂಡಿದ ಎಚ್‌ಡಿಕೆ: ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ರೈತರು ಭಾರಿ ತೊಂದರೆ ಅನುಭವಿಸಬೇಕಾಯಿತು. ಈ ವಿಚಾರದಲ್ಲಿ ಆಡಳಿತ ನಡೆಸುತ್ತಿರುವವರು ಹಾಗೂ ಮೈತ್ರಿ ಪಕ್ಷದ ನಮ್ಮ ಸ್ನೇಹಿತರು ಹೇಗೆ ನಡೆದುಕೊಂಡರು ಎಂಬುದನ್ನು ಗಮನಿಸಿದ್ದೇನೆ. ಯಾವ ವಿಷಯವಾಗಿ ಆಡಳಿತ ಪಕ್ಷ ಗಮನಹರಿಸಬೇಕು, ಪ್ರತಿಪಕ್ಷಗಳ ಜವಾಬ್ದಾರಿ ಏನು ಎಂಬುದನ್ನು ಅರಿಯಬೇಕು. ಈ ನಿಟ್ಟಿನಲ್ಲಿ ಕೆಲಸಗಳಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಎಂಗೆ ಬಹಿರಂಗ ಸವಾಲು: ಶಾಸಕರಿಗೆ ಅನುದಾನ ಹಂಚಿಕೆ ವಿಚಾರದಲ್ಲಿ ತಾರತಮ್ಯ ಮಾಡಿಲ್ಲವೆಂಬುದು ನಿಜವೇ ಆಗಿದ್ದರೆ ಮುಖ್ಯಮಂತ್ರಿ ಬಹಿರಂಗ ಚರ್ಚೆಗೆ ಬರಲಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸವಾಲ್ ಹಾಕಿದರು.

2018ರಲ್ಲಿ ಮುಖ್ಯಮಂತ್ರಿಯಾಗಿದ್ದ ನಾನು ಶಾಸಕರಿಗೆ ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದೆ. ಈಗಲೂ ಅದೇ ಅನುದಾನದ ಕೆಲಸಗಳು ನಡೆಯುತ್ತಿವೆ ಎಂದು ನಿಮ್ಮ ಪಕ್ಷದ ಶಾಸಕರೇ ನನಗೆ ಹೇಳಿದ್ದಾರೆಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ವಿರುದ್ಧ ಗುತ್ತಿಗೆದಾರರು: ಹಿಂದಿನ ಬಿಜೆಪಿ ಸರ್ಕಾರವನ್ನು ಶೇ.40 ಕಮಿಷನ್ ಸರ್ಕಾರವೆಂದು ಟೀಕಿಸಿದಿರಿ. ಪ್ರಕರಣ ತನಿಖೆಗೆ ವಿಶೇಷ ತಂಡವನ್ನು ರಚಿಸಿದಿರಿ. ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಅಂದು ಬಿಜೆಪಿ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರು ಈಗ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಭ್ರಷ್ಟ ಸರ್ಕಾರವನ್ನು ನಾನು ಎಂದೂ ನೋಡಿಲ್ಲ ಎಂದರು.

136 ಸೀಟು ಗೆದ್ದಿದ್ದು ಹೇಗೆ?: ರಾಜ್ಯದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸುವ ಕಾಂಗ್ರೆಸ್ ರಾಜ್ಯದಲ್ಲಿ 136 ಸೀಟು ಗೆಲ್ಲಲು ಹೇಗೆ ಸಾಧ್ಯವಾಯಿತು? ಈ ಬಗ್ಗೆ ಗಂಭೀರವಾಗಿ ಆರೋಪಿಸುತ್ತಿರುವ ಆಳಂದ ಶಾಸಕ ಕಳ್ಳತನದ ವೋಟಿನಿಂದಲೇ ಗೆದ್ದಿದ್ದಾರಾ ಎಂಬುದನ್ನು ಹೇಳಬೇಕು. ಕಾಂಗ್ರೆಸ್‌ನವರೇ ದರೋಡೆಕೋರರು. ಕೇವಲ ಪ್ರಚಾರದಲ್ಲಿರಬೇಕೆಂದು ಈ ರೀತಿಯ ವಾದ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೀಪಾವಳಿ ಕೊಡುಗೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಜನರ ಜೇಬಿಗೆ ಕೈ ಹಾಕಿದೆ. ಕಂದಾಯ ಆಸ್ತಿಯನ್ನು ಬಿ ಖಾತಾದಿಂದ ಎ ಖಾತೆಗೆ ಪರಿವರ್ತನೆ ಮಾಡುವ ಅರ್ಜಿಗೆ 500 ರೂ. ಶುಲ್ಕದ ಹೆಸರಿನಲ್ಲಿ ನೂರಾರು ಕೋಟಿ ರೂ. ಕೊಳ್ಳೆ ಹೊಡೆಯಲಾಗುತ್ತಿದೆ. ಈ ಬಗ್ಗೆ ಸಚಿವ ಜಿ.ಪರಮೇಶ್ವರ್ ಅವರಿಗೆ ಗೊತ್ತಿಲ್ಲ. ಅವರಿಗೆ ಯಾರಾದರೂ ಮಂತ್ರಿ ಅಂತಾರಾ. ಸಣ್ಣ ಮಕ್ಕಳಿಗೆ ಗೊತ್ತಾಗುವ ವಿಚಾರ ಅವರಿಗೆ ತಿಳಿಯುವುದಿಲ್ಲವೆಂದರೆ ನಾನೇನು ಮಾಡಲಿ ಎಂದು ವ್ಯಂಗ್ಯವಾಡಿದರು.

ಬ್ಯಾನ್ ನಿಮ್ಮಿಂದ ಸಾಧ್ಯವಾ?: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಬ್ಯಾನ್ ಮಾಡುವುದು ಸಾಧ್ಯವಿಲ್ಲ. ಇಂತಹ ವಿಷಯಗಳಿಗೆ ಯಾಕೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ಗಾಂಧೀಜಿ ಅವರನ್ನು ಗೋಡ್ಸೆ ಹತ್ಯೆಗೈದ ಸಂದರ್ಭದಲ್ಲಿ ಆರ್‌ಎಸ್‌ಎಸ್ ನಿಷೇಧಿಸಲಾಗಿತ್ತು. ನೆಹರು ನಿಷೇಧ ಆದೇಶ ವಾಪಸ್ ಪಡೆಯಲಿಲ್ಲವೇ. ನೆಹರೂಗೆ ಅಸಾಧ್ಯವಾದದ್ದು ಸಿದ್ದರಾಮಯ್ಯ-ಪ್ರಿಯಾಂಕ್ ಖರ್ಗೆ ಅವರಿಂದ ಸಾಧ್ಯವೇ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ನಡೆಯುತ್ತಿರುವುದು ಸಾಮಾಜಿಕ ಮತ್ತು ಶೈಕ್ಷಣಿಕ ಸಮಿತಿಯಲ್ಲ. ಅದು ಸಿದ್ದರಾಮಯ್ಯ ಗಣತಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net