

ನವದೆಹಲಿ: ಸಂಶಯಾತ್ಮಕ ವಹಿವಾಟುಗಳನ್ನು ಪತ್ತೆ ಹಚ್ಚಿ, ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡುವಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿಫಲವಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯದ ಗುಪ್ತಚರ ಘಟಕ ಅಭಿಪ್ರಾಯಪಟ್ಟಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ 5.49 ಕೋಟಿ ರೂ. ದಂಡ ವಿಧಿಸಿರುವ ಮಾರ್ಚ್ 1ರ ಆದೇಶದಲ್ಲಿ ಈ ಅಭಿಪ್ರಾಯವನ್ನು ಅದು ವ್ಯಕ್ತಪಡಿಸಿದೆ. 4 ವರ್ಷಕ್ಕೂ ಹೆಚ್ಚು ಅವಧಿಯ ತನಿಖೆಯಿಂದ ಪೇಟಿಎಂ ವೈಫಲ್ಯ ದೃಢಪಟ್ಟಿದೆ. 2022ರ ಫೆಬ್ರವರಿ 14ರಂದೇ ಈ ಸಂಬಂಧ ಶೋಕಾಸ್ ನೋಟಿಸ್ ಕೂಡ ನೀಡಲಾಗಿತ್ತು. ವಿದೇಶಿ ಸಂಪರ್ಕ ಹೊಂದಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಪೇಟಿಎಂ ಬ್ಯಾಂಕ್ನಲ್ಲಿ ಗ್ಯಾಂಬ್ಲಿಂಗ್ನಂತಹ ಸಾಕಷ್ಟು ಅಕ್ರಮ ಆರ್ಥಿಕ ಚಟುವಟಿಕೆಗಳು ನಡೆಯುತ್ತಿವೆ; ಅದರಿಂದ ಬಂದ ಹಣವನ್ನು ಇದೇ ಬ್ಯಾಂಕಿನ ಖಾತೆಗಳ ಮೂಲಕ ಹೊರಕ್ಕೆ ಕಳಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ 2020ರಿಂದಲೇ ಕಾನೂನು ಪ್ರಕ್ರಿಯೆ ಆರಂಭವಾಗಿತ್ತು. ನಂತರ ಹೈದರಾಬಾದ್ನ ಸೈಬರ್ ಅಪರಾಧ ಘಟಕವು ತೆಲಂಗಾಣದ ಜೂಜು ನಿಷೇಧ ಕಾಯ್ದೆ ಮತ್ತು ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ಗಳಡಿ ಎಫ್ಐಆರ್ ದಾಖಲಿಸಿತ್ತು. ಈ ವ್ಯಕ್ತಿಗಳು ನಿಷೇಧಿತ ಡೇಟಿಂಗ್, ಗ್ಯಾಂಬ್ಲಿಂಗ್, ಸ್ಟ್ರೀಮಿಂಗ್ ಸೇವೆಗಳ ಮೂಲಕ ಲಕ್ಷಾಂತರ ಭಾರತೀಯರಿಗೆ ವಂಚನೆ ಮಾಡಿರುವುದು ಮತ್ತು ಹಣವನ್ನು ವಿದೇಶಗಳಿಗೆ ಕಳಿಸಿರುವುದು ತನಿಖೆ ವೇಳೆ ಗೊತ್ತಾಗಿತ್ತು. ಇಂತಹ 34 ಫಲಾನುಭವಿ ಖಾತೆಗಳಿದ್ದರೂ ಬ್ಯಾಂಕ್ ಮೌನ ವಹಿಸಿತ್ತು ಎಂದು ಗುಪ್ತಚರ ಘಟಕ ತನ್ನ ಆದೇಶದಲ್ಲಿ ವಿವರಿಸಿದೆ.
ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ನ 4ನೇ ಅಧ್ಯಾಯದ ಪ್ರಕಾರ, ಇಂತಹ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳುವುದು ಬ್ಯಾಂಕ್ನ ಜವಾಬ್ದಾರಿ. ಯಾರು ಹಣ ಕಳಿಸುತ್ತಿದ್ದಾರೆ ಮತ್ತು ಅದರ ಫಲಾನುಭವಿ ಯಾರು ಎಂಬುದರ ವಿವರ ಒಳಗೊಂಡ ದಾಖಲೆಗಳನ್ನು ಇಟ್ಟುಕೊಳ್ಳಲೇಬೇಕು. ಈ ವಿಷಯದಲ್ಲಿ ಪೇಟಿಎಂ ಬ್ಯಾಂಕ್ ವಿಫಲವಾಗಿದೆ. ಇಂತಹ ಸಂಶಯಾಸ್ಪದ ವಹಿವಾಟನ್ನೆಲ್ಲ ಪತ್ತೆ ಹಚ್ಚಲು ಮತ್ತು ವರದಿ ಮಾಡಲು ಬ್ಯಾಂಕ್ನಲ್ಲಿ ಆಂತರಿಕ ವ್ಯವಸ್ಥೆ ಇರಬೇಕಿತ್ತು. ಕಾಯ್ದೆ ಪ್ರಕಾರ, ಇಂತಹ ವ್ಯವಸ್ಥೆಯನ್ನು ಹೊಂದಿರುವುದು ಕಡ್ಡಾಯ. ಇದಕ್ಕೆ ತಪ್ಪಿದ್ದರಿಂದಾಗಿಯೇ 5.49 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ವಿವರಿಸಿದೆ.
ಈ ಕುರಿತು ಕೇಂದ್ರ ವಿತ್ತ ಸಚಿವಾಲಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ವಕ್ತಾರರು, ‘ಇದು 2 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದ್ದು. ಅದಾದ ಬಳಿಕ ಬ್ಯಾಂಕಿನ ಕಾರ್ಯ ನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದ್ದರು. ಆದರೆ ನಂತರದ ದಿನಗಳಲ್ಲಿ ಪೇಟಿಎಂ ಬ್ಯಾಂಕ್ನ ಅಧ್ಯಕ್ಷ ಸ್ಥಾನಕ್ಕೆ ವಿಜಯ್ಶೇಖರ್ ಶರ್ಮಾ ರಾಜೀನಾಮೆ ನೀಡಿದ್ದರು. ಗ್ರಾಹಕರಿಂದ ಹೊಸದಾಗಿ ಠೇವಣಿ ಸಂಗ್ರಹಿಸುವುದನ್ನು ಮಾರ್ಚ್ 15ರಿಂದ ನಿಲ್ಲಿಸುವಂತೆ ಪೇಟಿಎಂ ಬ್ಯಾಂಕ್ಗೆ ಆರ್ಬಿಐ ನಿರ್ದೇಶನ ನೀಡಿದೆ.