ಕ್ರೖೆಸ್ತಮತದ ಪಾಶ್ಚಾತ್ಯ ಯೋಗಿಗಳು

yoga
Published on

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಯೇಸುಕ್ರಿಸ್ತ ಪೌರ್ವಾತ್ಯ ಯೋಗದ ಪ್ರಭಾವದಿಂದಲೇ ಅದ್ಭುತ ಪವಾಡಗಳನ್ನು ತೋರಿ ಸಿದ್ಧಪುರುಷನೆನಿಸಿದನು. ಮೂಢ ಜನರನ್ನು ಸನ್ಮಾರ್ಗಕ್ಕೆ ತರಲು ಪ್ರಯತ್ನಿಸಿದನು. ಅವರಿಗಾಗಿ ತನ್ನ ಜೀವನವನ್ನೇ ಬಲಿಯಾಗಿ ಕೊಟ್ಟು ಯುಗಾವತಾರಿ ಮಹಾತ್ಮನೆನಿಸಿದನು. ಅವನು ದೈವದತ್ತವಾಗಿ ಸಿದ್ಧಪುರುಷನಾಗಿದ್ದರೂ ಗುರು-ಶಿಷ್ಯ ಪರಂಪರೆಯ ‘ಯೋಗ ಮಾರ್ಗ’ದ ರಕ್ಷಣೆಗಾಗಿ ವೃದ್ಧಯೋಗಿ ಯೋಹಾನನಿಂದ ದೀಕ್ಷಾ ಸ್ನಾನ ಪಡೆಯುತ್ತಾನೆ. ಬೈಬಲ್ಲಿನ ಆ ಸನ್ನಿವೇಶ ರೋಮಾಂಚನಕಾರಿಯಾಗಿದೆ.

Yogakshema
ಯೊರ್ದನ್ ನದಿಯ ತೀರದ ಕಾಡಿನಲ್ಲಿ ಹುಚ್ಚನಂತೆ ಅಲೆಯುತ್ತಿದ್ದ ಅವಧೂತ ಯೋಹಾನನು ಯೇಸುವು ಬರುವುದನ್ನು ಮೊದಲೇ ತಿಳಿದು ಜನರಿಗೆ ಸೂಚನೆ ನೀಡುತ್ತಿದ್ದನು. ಅವನು ಭಾರತೀಯ ಯೋಗಿಗಳಂತೆ ಕಾಡು ಕಂದಮೂಲ ಹಣ್ಣು ಮತ್ತು ಜೇನು ತುಪ್ಪದ ಸಾತ್ವಿಕ ಆಹಾರವನ್ನೇ ಸ್ವೀಕರಿಸುತ್ತಿದ್ದನು. ಮೊಹಮ್ಮದ ಪೈಗಂಬರರ ಪೂರ್ವದಲ್ಲಿ ಅರಬ ಸ್ಥಾನದಲ್ಲಿದ್ದ ಸೂಫಿ ಸಂತ ಯೋಗಿಗಳ ಸಾತ್ವಿಕತೆಯ ಪೂರ್ವರೂಪ ಯೋಹಾನನ ವ್ಯಕ್ತಿತ್ವದಲ್ಲಿ ಪ್ರತಿಕೃತಿಗೊಂಡಿದೆ. ಯೇಸುವನ್ನು ಶಿಲುಬೆಗೇರಿಸಿದ ಮೇಲೂ ಅವನು ಸಾಮಾನ್ಯರಂತೆ ಮರಣ ಹೊಂದಲಿಲ್ಲ. ಕೊನೆಗೆ ತನ್ನ ಗುರುವಿನ ಸಿಂಧೂ ಸಂಸ್ಕೃತಿಯ ಜನ್ಮಭೂಮಿ ಹಿಮಾಲಯದಲ್ಲಿಯ ಕಾಶ್ಮೀರಕ್ಕೆ ಬಂದು ದೀರ್ಘಾಯುವಾಗಿ ಬಾಳಿದರೆಂದು ಇತ್ತೀಚಿನ ಕೆಲವು ಸಂಶೋಧಕರು ಅಭಿಪ್ರಾಯಪಡುತ್ತಾರೆ. ಯೋಹಾನನ ಮತ ಕ್ರಿಶ್ಚಿಯನ್ ಯೋಗಕ್ಕೆ ತಳಹದಿಯೆಂದು ಪಂಡಿತರು ಅಭಿಪ್ರಾಯಪಡುತ್ತಾರೆ. ಸಾಕ್ರೆಟಿಸ್, ಪ್ಲೇಟೋ, ಅರಿಸ್ಟಾಟಲ್ ಮತ್ತು ಪ್ಲಾಟೇನಸ್ ಇವರುಗಳ ಪ್ರಭಾವವೂ ಕ್ರಿಶ್ಚಿಯನ್ ಯೋಗದ ಮೇಲೆ ಸಾಕಷ್ಟಾಗಿದೆ. ಯೇಸುವು ಕ್ರೖೆಸ್ತಮತವನ್ನು ಹರಡಿದ ಮೇಲೆ, ಸಂತ ಆಗಸ್ಟೀನನೇ ಕ್ಯಾಥೋಲಿಕ್ ಪಂಗಡದ ಯೋಗಿಗಳ ಮೂಲಪುರುಷ. ಅವನ ಸುಪ್ರಸಿದ್ಧವಾದ ‘ಕನ್​ಪೆಷನ್ಸ್’ ಎಂಬ ಗ್ರಂಥದ ಮೊದಲ ವಾಕ್ಯದಲ್ಲಿ ‘ನೀನು ನಿನಗಾಗಿ ನನ್ನನ್ನು ಕರೆತಂದೆ. ನಿನ್ನಲ್ಲಿ ಹೋಗುವ ಹೊರತು ನಮ್ಮ ಕರುಳಿಗೆ ತಂಪೆರೆದಂತಾಗದು’ ಎಂದು ಹೇಳಿರುವನು. ಆ ಭಗವಂತನನ್ನು ಅರಸುತ್ತಾ ಅವನು ಹೀಗೆ ನುಡಿದಿರುವನು. ‘ನೀನು ನನ್ನ ಅತ್ಯಂತ ಅಂತರಭಾಗಕ್ಕಿಂತ ಸನಿಹದಲ್ಲಿರುವೆ. ಜಾಗೃತನಾಗಿ ನಿನ್ನ ಅನಂತರೂಪವನ್ನು ಕಂಡೆ. ಇದು ಪ್ರಾಕೃತೇಂದ್ರಿಯದಿಂದ ಬಂದುದಲ್ಲ.’ ಭಗವಂತನ ಅರಸುವಿಕೆ ಎಷ್ಟು ತೀವ್ರವಾದದ್ದು, ಭಗವಂತ ಎಲ್ಲಕ್ಕಿಂತಲೂ ಹೇಗೆ ದೂರವಾಗಿದ್ದನೆಂಬುದು ಚೆನ್ನಾಗಿ ವರ್ಣಿತವಾಗಿದೆ.

ಡಯೊನಿಯಸ್, ಸಂತ ಫ್ರಾನ್ಸಿಸ್, ಥಾಮಸ್ ಆಕ್ವಿನಾಸ್ ಇವರುಗಳೆಲ್ಲ ಕ್ರಿಸ್ತಮತದ ದೊಡ್ಡ ಯೋಗಿಗಳು. ಎಕ್ಹಾರ್ಟನು ಹದಿನಾಲ್ಕನೆಯ ಶತಮಾನದಲ್ಲಿದ್ದ ಜರ್ಮನಿಯ ಅತ್ಯಂತ ಪ್ರತಿಭಾಶಾಲಿಯಾದ ಯೋಗಿಯು. ಅವನ ವಾಕ್ಯಗಳಲ್ಲಿ ಧ್ಯಾನಪ್ರಕಾರವು ಉಕ್ತವಾಗಿರುವುದು. ಎಕ್ಹಾರ್ಟನು ಭಗವಂತನು ಅವಾಚ್ಯನು ಎಂದು ಹೇಳುವನು. ಇವನು ಸುಗುಣ-ನಿರ್ಗಣ ಬ್ರಹ್ಮರುಗಳು ಬೇರೆ ಎಂಬ ಸಗುಣ ಬ್ರಹ್ಮಸಾಕ್ಷಾತ್ಕಾರಕ್ಕೆ ವಿಷಯನು. ನಿರ್ಗಣ ಬ್ರಹ್ಮನು ಅವಾಚ್ಯನು; ಆಜ್ಞೇಯನು ಎಂದು ಹೇಳುವನು. ಎಕ್ಹಾರ್ಟನಾದ ಮೇಲೆ ಟಾಲರ್, ಹೆನ್ರಿಸೊಸೋ, ಜಾನ್​ರೂಸ್​ಬರ್ಗ್ ಮೊದಲಾದವರು ಪ್ರಸಿದ್ಧ ಯೋಗಿಗಳಾದರು. ರೂಸ್​ಬರ್ಗನು ಅತ್ಯಂತ ಭಾವಜೀವಿ, ಎಲ್ಲರ ಜೀವನವೂ ಪ್ರೀತಿಯಲ್ಲಿ ಮುಳುಗಬೇಕೆಂಬುದೇ ಅವನ ಸಿದ್ಧಾಂತ. ಅವನ ವಾಕ್ಯಗಳೂ ಹೃದಯರ್ಸ³ಯಾಗಿದೆ. ಇಷ್ಟಾದರೂ ಭಗವದನುಭವದ ಪರಮಾವಧಿಯಲ್ಲೂ ದೇವರೊಡನೆ ಐಕ್ಯವನ್ನು ರೋಸ್​ಬರ್ಗ್​ನು ಒಪ್ಪನು. ದೇವರೆಂದೆಂದಿಗೂ ದೇವರೇ. ಜೀವನೆಂದೆಂದಿಗೂ ಜೀವನೇ. ಇವರಿಬ್ಬರಿಗೂ ಸಾದೃಶ್ಯ ಉಂಟೇ ಹೊರತು, ಐಕ್ಯ ಕೂಡದು. ಭಗವದಪರೋಕ್ಷಆದರೆ ನಿಜಸುಖಾನುಭವ ಆಗುವುದೆಂದು ಅವರ ಅಭಿಪ್ರಾಯ.

ಕ್ರೖೆಸ್ತಯೋಗದ ಇತಿಹಾಸದಲ್ಲಿ ‘ಇಮಿಟೆಷನ್ ಆಫ್ ಗಾಡ್’ನ ಸ್ಥಾನ ಹಿರಿದು. ಇದರ ಉಚ್ಚಭಾವನೆ, ಭಕ್ತಿಯ ಉದಾತ್ತತೆ, ಭಗವದ್ವಿಷಯದಲ್ಲಿನ ಉದ್ವೇಗ ಅದ್ವಿತೀಯವಾದದ್ದು, ಅಂತೆಯೇ ಇಂದಿಗೂ ಅದು ಮರೆಯದ ಪುಸ್ತಕವಾಗಿದೆ. ಅಂತೂ ಕ್ರೖೆಸ್ತ ಮತದಲ್ಲಿ ಯೋಗಿಗಳು ಅನೇಕರು ಆಗಿಹೋಗಿದ್ದಾರೆ.

ಪಾಶ್ಚಾತ್ಯ ಕವಿಗಳಲ್ಲಿ ವ್ಲರ್ಡ್ಸ್​ವರ್ತ್, ಗಯಟೆ, ಟಾಲ್ಸ್​ಟಾಯ್ ಈ ಮೂವರ ವಿನಾ ಭಕ್ತಿಪರ ಸಾಹಿತ್ಯವನ್ನು ಇತರ ಕವಿಗಳು ಹೆಚ್ಚಾಗಿ ರಚಿಸಿರುವುದು ಕಂಡುಬರುವುದಿಲ್ಲ. ದೇವರ ಅವತಾರಗಳನ್ನು ಹೇಳುವ ಮತ್ತು ದೇವರಲ್ಲಿ ಭಕ್ತಿಯನ್ನು ಬೆಳೆಸುವ ದರ್ಶನಗಳು, ಆಧ್ಯಾತ್ಮಿಕ ಸಾಹಿತ್ಯಗಳು ಪಾಶ್ಚಾತ್ಯರಲ್ಲಿ ಕಂಡುಬರುವುದಿಲ್ಲ. ಯೇಸುಕ್ರಿಸ್ತನನ್ನು ದೇವರ ಮಗನೆಂದು ಕರೆಯುವುದಕ್ಕಿಂತ ಹೆಚ್ಚಿನ ದೇವತ್ವದ ಅನುಭವವನ್ನು ಭಾರತೀಯರಂತೆ ಪಾಶ್ಚಾತ್ಯರು ಪಡೆದಿರುವುದಿಲ್ಲ. ದೇವರನ್ನು ಎದುರಿಗೆ ನಿಲ್ಲಿಸಿಕೊಂಡು ಸಖನಂತೆ, ಸ್ವಾಮಿಯಂತೆ, ಪರಿಯಂತೆ, ತನಯನಂತೆ ಮಾತನಾಡಿದ, ಯೋಗ ಹಾಗೂ ಆಧ್ಯಾತ್ಮಿಕ ಅನುಭೂತಿ, ಸಾಕ್ಷಾತ್ಕಾರ, ಅಪರೋಕ್ಷಾನುಭವ, ಸಿದ್ದಿಯನ್ನು ಪಡೆಯುವ ಭಾಗ್ಯವಂತ ಭರತಖಂಡದಲ್ಲಿ ವಿನಾ ಅನ್ಯತ್ರ ಈ ಪ್ರಮಾಣದಲ್ಲಿರಲು ಸಾದ್ಯವಿಲ್ಲ. ಭಾರತೀಯರ ಮನಸ್ಸು, ಸಂಸ್ಕಾರ ಬೆಳೆದಿರುವ ರೀತಿಯೇ ಬೇರೆ. ಅದಕ್ಕೆ ತಕ್ಕಂತೆ ಭಾರತೀಯರ ಅನುಭೂತಿಯು ಬೇರೆ.

(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net