

ಬೆಂಗಳೂರು: ರೈತರು ಹಾಗೂ ರಫ್ತುದಾರರಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸಿದರೆ ರಾಜ್ಯದ ಸುಸ್ಥಿರ ಅಭಿವೃದ್ಧಿಯತ್ತ ಸಾಗಲಿದೆ ಎಂದು ಸರ್ಕಾರದ ಅಭಿವೃದ್ಧಿ ಆಯುಕ್ತೆ ಡಾ. ಶಾಲಿನಿ ರಜನೀಶ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ‘ಅಪೇಡಾ’ ಗುರುವಾರ ಸಂಯುಕ್ತವಾಗಿ ಹಮ್ಮಿಕೊಳ್ಳಲಾಗಿದ್ದ ರಫ್ತುದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ದೇಶವು ಕೃಷಿ ಉತ್ಪನ್ನ ಸಂಸ್ಕರಣೆಯಲ್ಲಿ ಮೂಂಚೂಣಿಯಲ್ಲಿದೆ. ಜತೆಗೆ ಹಾಲು, ಹಣ್ಣು ಮತ್ತು ತರಕಾರಿಗಳ ಉತ್ಪಾದನೆಗೂ ಹೆಸರುವಾಸಿಯಾಗಿದೆ. ಕಾಫಿ, ಹೂಕೋಸು, ಗುಲಾಬಿ, ರೇಷ್ಮೆ, ಟಮೊಟೋ, ದ್ರಾಕ್ಷಿ, ಕಬ್ಬು, ಮಾವು, ತೆಂಗು, ಕೋಳಿ ಮಾಂಸವನ್ನು ಹೆಚ್ಚಾಗಿ ಉತ್ಪಾದಿಸುತ್ತಿದೆ. ಕೃಷಿ ಹಾಗೂ ಸಂಬಂಧಿತ ವಲಯಗಳಾದ ತೋಟಗಾರಿಕೆ, ಪಶುಸಂಗೋಪನೆಯಲ್ಲಿ ಸಹ ರಾಜ್ಯ ಉತ್ತಮ ಸಾಧನೆ ಮಾಡಿದೆ. ಸಾವಯವ ಕೃಷಿ ಪ್ರೋತ್ಸಾಹಿಸಲು ಸಾವಯವ ಭಾಗ್ಯ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿರುವುದು ರೈತರಿಗೆ ವರದಾನವಾಗಿದೆ ಎಂದರು.
ರಾಜ್ಯದಲ್ಲಿ ಶೇ.65 ಕೃಷಿ ಭೂಮಿಯಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. ಉಳಿದ ಶೇ.35 ಒಣ ಭೂಮಿಯಲ್ಲಿ ಉಳುಮೆ ಮಾಡಿ ಬೆಳೆ ಬೆಳೆಯುವುದೇ ಸವಾಲಾಗಿದೆ. ರೈತರು ಹೊಸ ತಂತ್ರಜ್ಞಾನದಿಂದ ಬರಡು ಭೂಮಿಯಲ್ಲಿ ಸಹ ಒಳ್ಳೆಯ ಬೆಳೆ ಬೆಳೆಯಬಹುದು. ವಿಷನ್-2030ರಲ್ಲಿ ರೈತರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಗುರಿ ಹೊಂದಲಾಗಿದೆ. ಸಿಎಂ ೋಷಿಸಿರುವ ಆಯವ್ಯಯದಲ್ಲಿ ಕೃಷಿ, ತೋಟಗಾರಿಕೆಗೆ ಒತ್ತು ನೀಡಿ ಹಲವು ಯೋಜನೆಗಳನ್ನು ನೀಡಿದ್ದಾರೆ. ರೈತರಿಗೆ ಸಲಹೆ ಸೂಚನೆ ನೀಡಿ ಅವರು ಬೆಳೆದ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಬಂದಲ್ಲಿ ದೇಶ, ರಾಜ್ಯ ಅಭಿವೃದ್ದಿಯಾಗಲು ಸಾಧ್ಯ ಎಂದು ಪ್ರತಿಪಾದಿಸಿದರು.
ಆನ್ಲೈನ್ ಸೇವೆ ವಿಸ್ತರಣೆ ಅಗತ್ಯ:
ರೈತರು ಹಾಗೂ ರಫ್ತುದಾರರಿಗೆ ಆನ್ಲೈನ್ ಸೇವೆಗಳನ್ನು ವಿಸ್ತರಿಸಲು ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಹಾಲು ಉತ್ಪನ್ನಗಳ ಸಂಬಂಧಿತ ಕೃಷಿಗೂ ಮನ್ನಣೆ ದೊರೆಯಬೇಕು. ಕೋಳಿ ಸಾಗಣೆಯಲ್ಲಿ ರಾಜ್ಯ ದೇಶದಲ್ಲೇ 3ನೇ ಸ್ಥಾನದಲ್ಲಿದ್ದು, ಪ್ರತಿ ವರ್ಷ 9,000 ಟನ್ ಮಾಂಸವು ಇಲಾಖೆಗಳು ನಿರ್ವಹಿಸುವ 24 ಕೋಳಿ ಫಾರ್ಮ್ಗಳಲ್ಲಿ ಉತ್ಪಾದನೆಗೊಳ್ಳುತ್ತಿದೆ. ಮೀನುಗಾರಿಕೆ ವಲಯದಲ್ಲೂ ರಾಜ್ಯ ಹೆಚ್ಚು ಸಾಧನೆ ಮಾಡಿದೆ ಎಂದು ಶಾಲಿನಿ ರಜನೀಶ್ ವಿವರಿಸಿದರು.
ಸಮಾವೇಶದಲ್ಲಿ ‘ಅಪೇಡಾ’ ಬೆಂಗಳೂರು ವಿಭಾಗ ಡೆಪ್ಯುಟಿ ಜನರಲ್ ಮ್ಯಾನೇಜರ್ ರೀಬಾ ಅಬ್ರಹಾಂ ಹಾಗೂ ಇತರ ಗಣ್ಯರು ಪಾಲ್ಗೊಂಡಿದ್ದರು.
ರಾಜ್ಯವು ಗೋಡಂಬಿ, ರಾಗಿ, ಭತ್ತವನ್ನು ಹೇರಳವಾಗಿ ಬೆಳೆಯುತ್ತದೆ. ರೈತರು ಹಾಗೂ ಬಳಕೆದಾರರಿಗೆ ಸೇತುವೆಯಾಗಿ ಮಾರುಕಟ್ಟೆ ಹಾಗೂ ರಫ್ತು ನಡೆಯಬೇಕು. ಜನರಿಗೆ ಒಳ್ಳೆಯ ಆಹಾರ ಒದಗಿಸುವುದು ಕೂಡ ಕೃಷಿಕರಿಗೆ ಸವಾಲಾಗಿದೆ. 2023ರನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನಾಗಿ ಘೋಷಿಸಿದ್ದು, ರಾಜ್ಯವು ದೇಶದ ಕೃಷಿ ರಫ್ತು ಮಾರುಕಟ್ಟೆಯಲ್ಲಿ ಮುಂಚೂಣಿಗೆ ಬರಬೇಕಿದೆ.
- ರೋಹಿಣಿ ಸಿಂಧೂರಿ, ಆಹಾರ ಸಂಸ್ಕರಣೆಯ ವಿಶೇಷ ಕಾರ್ಯದರ್ಶಿ