

ಹೂಗ್ಲಿ: ಗೋವಿನ ಸಗಣಿ ಮತ್ತು ಮೂತ್ರ ಮಾರಾಟ ಮಾಡುತ್ತ, ಇವುಗಳನ್ನೆಲ್ಲ ಸೇವಿಸಿದರೆ ಕರೊನಾ ಸೋಂಕು ತಗುಲುವುದಿಲ್ಲ ಎಂದು ಪ್ರತಿಪಾದಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಗೋವಿನ ಸಗಣಿ, ಮೂತ್ರಗಳನ್ನು ಸೇವಿಸಿ. ಕರೊನಾ ನಿಮ್ಮ ಬಳಿಯೂ ಸುಳಿಯುವುದಿಲ್ಲ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದ ಶೇಖ್ ಮಾಮುದ್ನನ್ನು ಪೊಲೀಸರು ಬಂಧಿಸಿದ್ದಾರೆ.
50 ವರ್ಷದ ಶೇಖ್ ಮಾಮುದ್ ವಿರುದ್ಧ ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಕೆರಳಿಸಿದ ಹಾಗೂ ಕ್ರಿಮಿನಲ್ ಪಿತೂರಿ ನಡೆಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ಪೊಲೀಸರು ತನ್ನನ್ನು ಬಂಧಿಸಿದ ಕ್ರಮವನ್ನು ಪ್ರಶ್ನಿಸಿದ ಮಾಮುದ್, ಕಳೆದ ವಾರ ದೆಹಲಿಯಲ್ಲಿ ನಡೆದ ಹಿಂದುಮಹಾಸಭಾ ಕಾರ್ಯಕ್ರಮದಲ್ಲಿ ಮುಖಂಡರು ಸಾರ್ವಜನಿಕವಾಗಿ ಗೋಮೂತ್ರ ಸೇವನೆ ಮಾಡಿದ್ದನ್ನು ನೋಡಿ ಸ್ಫೂರ್ತಿಗೊಂಡು ನಾನೂ ಅದನ್ನು ಮಾರಾಟ ಮಾಡಿದ್ದೇನೆ ಎಂದು ಹೇಳಿದ್ದಾನೆ.
ಮಾಮುದ್ನನ್ನು ಇಂದು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ಸದ್ಯ ಆತನಿಗೆ ಕೋರ್ಟ್ ನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಶೇಖ್ ಮಾಮುದ್ ರಸ್ತೆಬದಿಗೆ ಹಸುವಿನ ಸಗಣಿ, ಮೂತ್ರದ ಅಂಗಡಿ ಇಟ್ಟಿದ್ದ. ಸಗಣಿಯನ್ನು ಕೆಜಿಗೆ 400 ರಿಂದ 500 ರೂ.ಗೆ ಮಾರಾಟ ಮಾಡುತ್ತಿದ್ದ. (ಏಜೆನ್ಸೀಸ್)