

ಬೆಂಗಳೂರು: ಪ್ರತಿ ನಿತ್ಯ ಚಳಿ, ಮಳೆ ಎನ್ನದೆ ಮನೆಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ವಿತರಕರಿಗಾಗಿ ಸರ್ಕಾರ ಘೋಷಣೆ ಮಾಡಿದ್ದ ಕ್ಷೇಮನಿಧಿ 3 ವರ್ಷ ಕಳೆದರೂ ಜಾರಿಗೆ ಬಂದಿಲ್ಲ. ಸಿದ್ದರಾಮಯ್ಯ ಸಿಎಂ ಆಗಿ 2018ರ ಫೆಬ್ರವರಿಯಲ್ಲಿ ಮಂಡಿಸಿದ ಕೊನೆಯ ಬಜೆಟ್ನಲ್ಲಿ ಪತ್ರಿಕೆಗಳನ್ನು ಹಂಚುತ್ತ ಅನಿಶ್ಚತತೆಯ ಬದುಕು ಸಾಗಿಸುವವರ ಕ್ಷೇಮಾಭಿವೃದ್ಧಿಗಾಗಿ 2 ಕೋಟಿ ರೂ. ಮೀಸಲಿಟ್ಟು ಕ್ಷೇಮನಿಧಿ ಯೋಜನೆ ಘೋಷಣೆ ಮಾಡಿದ್ದರು. ಬಹುತೇಕ ಯೋಜನೆಗಳಂತೆ ಇದು ಸಹ ಕೇವಲ ಬಜೆಟ್ ಘೋಷಣೆಯಾಗಿರಲಿಲ್ಲ. 2 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆದರೆ ಯೋಜನೆಯ ರೂಪುರೇಷೆ ಸಿದ್ಧವಾಗುವಲ್ಲಿ ವಾರ್ತಾ ಇಲಾಖೆ ಅನುಸರಿಸುತ್ತಿರುವ ನಿಧಾನಗತಿ ಧೋರಣೆಯಿಂದಾಗಿ ಅನುಷ್ಠಾನ ವಿಳಂಬವಾಗಿದೆ.
ಪತ್ರಿಕಾ ವಿತರಕರ ಯೋಜನೆಗೆ ರೂಪುರೇಷೆ ಸಿದ್ಧಪಡಿಸುವ ಹೊಣೆಯನ್ನು ಆಗ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ವಹಿಸಲಾಗಿತ್ತು. ಅಕಾಡೆಮಿಯು ರಾಜ್ಯದಲ್ಲಿರುವ ಪತ್ರಿಕಾ ವಿತರಕರ ನಿಖರ ಅಂಕಿ-ಅಂಶ ಸಂಗ್ರಹಿಸಲು ಸಾಕಷ್ಟು ಪ್ರಯತ್ನ ನಡೆಸಿತ್ತು. ಅಂಕಿ-ಅಂಶಗಳು ಎಲ್ಲ ಜಿಲ್ಲೆಗಳಿಂದ ಸಿಗಲಿಲ್ಲ. ಬಹುತೇಕ ಮಾಧ್ಯಮ ಕಚೇರಿಗಳು ಅಕಾಡೆಮಿಯ ಮನವಿಗೆ ಸ್ಪಂದಿಸಲಿಲ್ಲ. ಆ ವೇಳೆಗೆ ಅಕಾಡೆಮಿಯ ಅವಧಿ ಮುಕ್ತಾಯವಾಯಿತು. ವಾರ್ತಾ ಇಲಾಖೆ ಈ ಕೆಲಸವನ್ನು ಮುಂದುವರಿಸ ಬೇಕಾಗಿತ್ತು. ಆದರೆ, ಆ ಪ್ರಯತ್ನ ಇಲಾಖೆಯ ಕಡೆಯಿಂದ ಆಗಲಿಲ್ಲ. ಸರ್ಕಾರದ ಬದಲಾವಣೆಯಿಂದಾಗಿ ಅಕಾಡೆಮಿ ಪುನಾರಚನೆಯೂ ಎರಡು ವರ್ಷ ನನೆಗುದಿಗೆ ಬಿದ್ದಿತ್ತು. ಇದೀಗ ಅಕಾಡೆಮಿ ಹೊಸದಾಗಿ ರಚನೆಯಾಗಿದೆ. ಅಕಾಡೆಮಿಯು ಕ್ಷೇಮನಿಧಿ ಯೋಜನೆಗೆ ರೂಪುರೇಷೆ ಸಿದ್ಧಪಡಿಸಿಕೊಡುವ ಮೂಲಕ ಜಾರಿಗೆ ತರುವ ಪ್ರಯತ್ನ ಮಾಡಬೇಕಾಗಿದೆ.
ಸರ್ಕಾರ ಘೋಷಣೆ ಮಾಡಿದ್ದ 2 ಕೋಟಿ ರೂ. ಆರಂಭಿಕ ಮೊತ್ತವಾಗಿದೆ. ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆಯೋ, ಗುಂಪು ವಿಮೆಯೋ ಯಾವ ರೀತಿಯಲ್ಲಿ ಜಾರಿಗೆ ತರಬೇಕೆಂದು ನಿಯಮಾವಳಿಗಳು ರೂಪುಗೊಂಡಿದ್ದರೆ ಸರ್ಕಾರದಿಂದ ಹೆಚ್ಚಿನ ಆರ್ಥಿಕ ನೆರವು ಪಡೆಯಲು ಸಾಧ್ಯತೆಗಳಿದ್ದವು. 2018ರ ಸೆಪ್ಟೆಂಬರ್ 5ರಂದು ಸರ್ಕಾರ ಅನುಷ್ಠಾನ ಸಮಿತಿ ರಚನೆ ಮಾಡಿರುವುದಾಗಿ ಆದೇಶ ಹೊರಡಿಸಿರುವುದು ಬಿಟ್ಟರೆ, ಮತ್ತೆ ಯಾವುದೇ ಪ್ರಕ್ರಿಯೆ ನಡೆದಿಲ್ಲ.
ಕರೊನಾ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸಿದ ವಿತರಕರು, ಸಾವಿಗೆ ಗುರಿಯಾಗಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಉದ್ಯೋಗದ ಭದ್ರತೆಯೇ ಇಲ್ಲದಿರುವುದರಿಂದ ಯಾವ ಆರ್ಥಿಕ ನೆರವು ಅವರ ಕುಟುಂಬಕ್ಕೆ ಸಿಕ್ಕಿಲ್ಲ. ಸರ್ಕಾರದಿಂದಲೂ ಸ್ಪಂದನೆಯಾಗಿಲ್ಲ. ಕ್ಷೇಮನಿಧಿ ಯೋಜನೆ ಜಾರಿಗೆ ಬಂದಿದ್ದರೆ ಒಂದಷ್ಟು ನೆರವು ಅವರಿಗೂ ದೊರಕುತ್ತಿತ್ತು. ಸರ್ಕಾರ, ವಾರ್ತಾ ಇಲಾಖೆ, ಮಾಧ್ಯಮ ಅಕಾಡೆಮಿ ಇನ್ನಾದರೂ ಮೂರು ವರ್ಷದಿಂದ ಕಪಾಟಿನಲ್ಲಿ ಕೊಳೆಯುತ್ತಿರುವ ಯೋಜನೆ ಜಾರಿಗೆ ತರಲು ಪ್ರಯತ್ನ ಮಾಡಬೇಕಾಗಿದೆ.
ಬೆಂಗಳೂರು: ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ವತಿಯಿಂದ ಶನಿವಾರ (ಸೆ.4) ಬೆಳಗ್ಗೆ 10 ಗಂಟೆಗೆ ರಾಜಾಜಿನಗರದ ಪಾರ್ವತಿ ಕನ್ವೆನ್ಷನ್ ಹಾಲ್ನಲ್ಲಿ ‘ವಿಶ್ವ ಪತ್ರಿಕಾ ವಿತರಕರ ದಿನಾಚರಣೆ’ ಕಾರ್ಯಕ್ರಮ ಆಯೋಜಿಸಲಾಗಿದೆ. ವಸತಿ ಸಚಿವ ವಿ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹಿರಿಯ ಪತ್ರಿಕಾ ವಿತರಕರಿಗೆ ಸನ್ಮಾನಿಸಲಿದ್ದಾರೆ. ಅಬಕಾರಿ ಸಚಿವ ಕೆ.ಗೋಪಾಲಯ್ಯ ಪತ್ರಿಕೆ ಹಂಚುವ ಹುಡುಗರಿಗೆ ಸನ್ಮಾನಿಸಲಿದ್ದಾರೆ. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಸುರೇಶ್ಕುಮಾರ್, ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಮತ್ತಿತರರು ಉಪಸ್ಥಿತರಿರಲಿದ್ದಾರೆ.