

ನವದೆಹಲಿ: ಬರೀ ಹದಿನೇಳು ವಯಸ್ಸಿನ ಈ ಹುಡುಗಿಯ ಹೊಟ್ಟೆಯಲ್ಲಿ 2 ಕೆ.ಜಿ. ತೂಕದ ತಲೆಗೂದಲ ಉಂಡೆ ಕಾಣಿಸಿಕೊಂಡಿದ್ದು, ಬಳಿಕ ವೈದ್ಯರು ಅದನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯುವ ಮೂಲಕ ಬಾಲಕಿಯನ್ನು ಹೆಚ್ಚಿನ ಅಪಾಯದಿಂದ ಪಾರು ಮಾಡಿದ್ದಾರೆ.
ಅಪ್ರಾಪ್ತ ವಯಸ್ಸಿನ ಈಕೆ ಕಳೆದೆರಡು ವರ್ಷಗಳಿಂದ ಕೃಶವಾಗುತ್ತಲೇ ಇದ್ದು, ಪಾಲಕರ ಪಾಲಿಗೆ ಇವಳ ಈ ಸಮಸ್ಯೆ ತಲೆನೋವಾಗಿ ಪರಿಣಮಿಸಿತ್ತು. ಅಲ್ಲದೆ ಕಳೆದ ಹತ್ತು ದಿನಗಳಿಂದ ಹುಡುಗಿಯ ತಲೆಯಿಂದ ಗಣನೀಯ ಪ್ರಮಾಣದಲ್ಲಿ ಕೂದಲು ಉದುರಿರುವುದನ್ನೂ ಗಮನಿಸಿದ ಪಾಲಕರು, ಬಾಲಕಿ ಇತ್ತೀಚೆಗೆ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದುದನ್ನು ನೋಡಿ ವೈದ್ಯರಲ್ಲಿ ಕರೆದೊಯ್ದಿದ್ದರು.
ಉತ್ತರಪ್ರದೇಶದ ಲಕ್ನೋದಲ್ಲಿನ ಬಲರಾಮ್ಪುರ ಆಸ್ಪತ್ರೆಯಲ್ಲಿ ಪರಿಶೀಲಿಸಿದಾಗ, ಅಲ್ಲಿನ ಡಾ.ಎಸ್.ಆರ್. ಸಮ್ದಾರ್ ಬಾಲಕಿಯನ್ನು ಅಲ್ಟ್ರಾಸೌಂಡ್ ಪರೀಕ್ಷೆಗೆ ಒಳಪಡಿಸಿದ್ದರು. ಆಗ ಹೊಟ್ಟೆಯಲ್ಲಿ ಒಂದು ರೀತಿಯ ಗಂಟಿನಂಥ ರಚನೆ ಕಾಣಿಸಿಕೊಂಡಿದ್ದು, ನಂತರ ಸಿಟಿ ಸ್ಕ್ಯಾನ್ಗೆ ಒಳಪಡಿಸಿದಾಗ ಕೂದಲಿನ ಉಂಡೆ ಇರುವುದು ಕಾಣಿಸಿತ್ತು. ಸುಮಾರು ಒಂದೂವರೆ ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, 2 ಕೆ.ಜಿ. ತೂಕದ ಕೂದಲುಂಡೆಯನ್ನು ಹೊಟ್ಟೆಯಿಂದ ತೆಗೆದಿದ್ದಾರೆ.
ಈ ಬಾಲಕಿ ಹುಟ್ಟಿದ ಸಮಯದಿಂದಲೇ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಕೂದಲು ತಿನ್ನುವಂಥ ವಿಚಿತ್ರ ರೋಗದಿಂದ ಬಳಲುತ್ತಿದ್ದಳು. ಟ್ರೈಕೋಬೆಜೋವರ್ ಎನ್ನುವ ಈ ವಿಚಿತ್ರ ರೋಗದಿಂದ ಬಳಲುವವರು ತಮ್ಮದೇ ತಲೆಗೂದಲನ್ನು ಕಿತ್ತು ತಿನ್ನುತ್ತಿರುತ್ತಾರೆ. ಕೂದಲು ಜೀರ್ಣವಾಗದ ಹಿನ್ನೆಲೆಯಲ್ಲಿ ಹೊಟ್ಟೆಯಲ್ಲಿ ಗಂಟುಕಟ್ಟಿಕೊಂಡು ಸಮಸ್ಯೆ ಉಂಟಾಗಿದ್ದು, ಅದನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.