

‘ಗುಲ್ಟೂ’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನವೀನ್ ಶಂಕರ್, ಡೆಬ್ಯೂ ಚಿತ್ರದಲ್ಲೇ ಭರವಸೆ ಮೂಡಿಸಿದ್ದರು. ಆ ಬಳಿಕ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದಲ್ಲಿ ನಟಿಸಿದ್ದ ಅವರು, ಸದ್ಯ ನಾಲ್ಕು ಚಿತ್ರಗಳಲ್ಲಿ ಬಿಜಿಯಿದ್ದಾರೆ. ವಿಶೇಷ ಅಂದರೆ ಕಳೆದ ಎರಡು ವರ್ಷಗಳಲ್ಲಿ ಮೂರು ಚಿತ್ರಗಳಿಗಾಗಿ ಮೂರು ಬಾರಿ ತೂಕ ಇಳಿಸಿಕೊಂಡು, ಹೆಚ್ಚಿಸಿಕೊಂಡಿದ್ದಾರೆ. ‘ನಾನು ಮೊದಲಿಂದಲೂ ಸಣ್ಣ ಇದ್ದೆ. ‘ನೋಡಿದವರು ಏನಂತಾರೆ’ ಚಿತ್ರಕ್ಕಾಗಿ ಮತ್ತಷ್ಟು ತೂಕ ಇಳಿಸಿಕೊಳ್ಳಬೇಕಾಯಿತು. ಕೇವಲ 28 ದಿನಗಳಲ್ಲಿ 12 ಕೆಜಿ ತೂಕ ಕಡಿಮೆಯಾಗಬೇಕಿತ್ತು. 64 ಕೆಜಿ ತೂಕವಿದ್ದವನು, 51 ಕೆಜಿಗೆ ಇಳಿಸಿಕೊಂಡೆ. ಬಳಿಕ ‘ಕ್ಷೇತ್ರಪತಿ’ ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳಬೇಕಾಗಿ ಬಂತು. ಆಗ ಮತ್ತೆ 63 ಕೆಜಿವರೆಗೆ ತೂಕ ಹೆಚ್ಚಿಸಿಕೊಂಡೆ. ನಂತರ ಡಾಲಿ ಧನಂಜಯ ಅವರು ನಾಯಕನಾಗಿರುವ ‘ಹೊಯ್ಸಳ’ ಚಿತ್ರಕ್ಕಾಗಿ ಮತ್ತಷ್ಟು ತೂಕ ಹೆಚ್ಚಿಸಿಕೊಳ್ಳಬೇಕಾಯಿತು. ಆಗ 76 ಕೆಜಿವರೆಗೆ ತೂಕ ಹೆಚ್ಚಿಸಿಕೊಂಡೆ. ಹೀಗೆ ಎರಡು ವರ್ಷಗಳಲ್ಲಿ ಮೂರು ಬಾರಿ ತೂಕ ಇಳಿಸಿಕೊಂಡು, ಹೆಚ್ಚಿಸಿಕೊಳ್ಳಬೇಕಾಯಿತು’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.
ಎರಡು ವರ್ಷಗಳಲ್ಲಿ ಒಮ್ಮೆ 13 ಕೆಜಿ ತೂಕ ಇಳಿಸಿಕೊಂಡಿದ್ದ ನವೀನ್, ಎರಡು ಚಿತ್ರಗಳಿಗೆ ಒಟ್ಟು 25 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ. ‘40 ದಿನಗಳಲ್ಲಿ 12 ಕೆಜಿ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಆಗ ಪ್ರತಿದಿನ ವರ್ಕೌಟ್ ಮಾಡಿ, ತಿಂದು, ಮಲಗಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ. ತೂಕ ಹೆಚ್ಚಿಸಿಕೊಳ್ಳುವುದು ಸಮಸ್ಯೆಯಲ್ಲ, ತೂಕ ಇಳಿಸಿಕೊಂಡು ಸಣ್ಣ ಆಗುವುದು ತುಂಬ ರಿಸ್ಕ್. ಹೆಚ್ಚು ಪ್ರೊಟೀನ್ಯುುಕ್ತ ಆಹಾರ ಸೇವಿಸಬೇಕು, ಕಾರ್ಬೆಹೈಡ್ರೇಟ್ಸ್ ಕಡಿಮೆ ಮಾಡಬೇಕು. ಕ್ಯಾಲರೀಸ್ ಜಾಸ್ತಿ ಬರ್ನ್ ಮಾಡಬೇಕು’ ಎಂದು ಮಾಹಿತಿ ನೀಡುತ್ತಾರೆ ನವೀನ್.
ಹೀಗೆ ಕಡಿಮೆ ಸಮಯದಲ್ಲಿ ತೂಕ ಇಳಿಸಿಕೊಳ್ಳುವುದು, ಹೆಚ್ಚಿಸಿಕೊಳ್ಳುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ? ಎಂದರೆ, ನಗುವ ನವೀನ್, ‘ಶ್ರಮ ಹಾಕಲೇಬೇಕು. ಚಿತ್ರರಂಗದಲ್ಲಿ ಬೆಳೆಯುವ ವಯಸ್ಸಿನಲ್ಲಿ ಇದೆಲ್ಲ ಮಾಡಲೇಬೇಕು. ಒಬ್ಬ ನಟನಾಗಿ ಅವಕಾಶಗಳು ಸಿಕ್ಕಾಗ ಪ್ರೂವ್ ಮಾಡಿಕೊಳ್ಳಬೇಕು. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಕಾರಣದಿಂದಾಗಿ ಬೇರೆಯವರಿಗೆ ಹೀಗೆ ಮಾಡಿ ಅಂತ ಹೇಳುವುದಿಲ್ಲ. ಪ್ರತಿ ಬಾರಿ ವೈದ್ಯರ ಸಲಹೆ ಪಡೆದು ವರ್ಕೌಟ್, ಡಯಟ್ ಶುರು ಮಾಡುತ್ತಿದ್ದೆ. ಜತೆಗೆ ಹಲವು ನಟರಿಗೆ ತರಬೇತಿ ನೀಡಿರುವ ಮಸಲ್ ಸ್ಟುಡಿಯೋಸ್ನ ನುರಿತ ಟ್ರೇನರ್ ಗಣೇಶ್ ನನಗೂ ತರಬೇತಿ ನೀಡಿದರು. ಅವರಿಗೆ ಧನ್ಯವಾದ ಹೇಳುತ್ತೇನೆ’ ಎನ್ನುತ್ತಾರೆ.