

ಮೇಷ: ದೀಪಮಾಸವೆಂದೇ ಪ್ರಸಿದ್ಧವಾಗಿರುವ ಕಾರ್ತಿಕ ಮಾಸವು ವಿಕ್ರಮ ಶಕಾರಂಭವಾಗುತ್ತದೆ. ರಾಶಿಗೆ ಗುರುವು ವಕ್ರಿಯಾಗಿರುವುದು ದ್ವಿತೀಯ ಸ್ಥಾನದ ಪಲವನ್ನು ಕೊಡುವ ಸಾಧ್ಯತೆ ಕಡಿಮೆಯಾದರೂ ಗುಣಾತೀತನೂ, ಗುಣಾತ್ಮಕನೂ ಆದ ಗುರು ದಕ್ಷಿಣಾಮೂರ್ತಿ ಸ್ತೋತ್ರ ಪಾರಾಯಣಮಾಡಿ. ಎಲ್ಲ ವಿಚಾರದಲ್ಲಿ ಒಮ್ಮೆ ಯೋಚನೆ ಮಾಡಿ ಮುಂದುವರಿಯುವುದು ನಿಮ್ಮ ಧ್ಯೇಯವಾಗಿರಲಿ.
ವೃಷಭ: ವೃಷಭ ರಾಶಿಗೆ 12ರ ಗುರುವಿನ ಫಲವು ವಕ್ರಗತಿಯಲ್ಲಿ ಬಂದು ಮನಸ್ಸಿಗೆ ಅಲ್ಪ ಸ್ವಲ್ಪ ಬೇಸರ ಆಗುವ ಸಂಭವವಿದ್ದರೂ ಮೌನ ಧರಿಸಿ ನಗು ಬೀರುತ್ತೀರಿ. ಯಾರಿಗೂ ಯಾವುದೇ ಕೆಡುಕು ಉಂಟು ಮಾಡುವ ದುರ್ಬುದ್ಧಿ ಬೇಡ. ಅನ್ಯರಿಗೆ ನೀವು ಏನನ್ನು ಕೊಡುವಿರೋ ಅದನ್ನು ಪಡೆದುಕೊಳ್ಳುವಿರಿ. ‘ದುರ್ಗಾಂ ಪ್ರಾರ್ಥಯತೇ ಸರ್ವತ್ರಂ ವಿಜಯಾಂ’. ದುರ್ಗೆಯನ್ನು ಪೂಜಿಸಿ, ಪ್ರಾರ್ಥಿಸಿ. ಜಯವು ನಿಮ್ಮದಾಗುತ್ತದೆ.
ಮಿಥುನ: ಗುರುವು ವಕ್ರಗತಿಯಲ್ಲಿ 11ನೇ ಮನೆಯಲ್ಲಿದ್ದು, ಮಿಥುನ ರಾಶಿಯವರಿಗೆ ಚಿಂತೆ ದೂರಮಾಡುವ ಅಗತ್ಯ ಇಲ್ಲದಿದ್ದರೂ ಹತ್ತರ ಶನಿ ಉದ್ದೇಗ, ಏರುಪೇರು ಉಂಟು ಮಾಡುವ ಸಂಭವವಿರುತ್ತದೆ. ತ್ರಿಗುಣಾತ್ಮಕನೂ ತ್ರಿಗುಣಾತೀತನೂ ಆದ ಶ್ರೀರಾಮಚಂದ್ರನನ್ನು ಪೂಜಿಸಿ. ಶುದ್ಧ ಮನಸ್ಸು, ಅಂತರಾತ್ಮದಲ್ಲಿ, ಬುದ್ಧಿಯಲ್ಲಿ ಶುದ್ಧತೆ ಇದ್ದು ಮುನ್ನಡೆದಲ್ಲಿ ಕೆಲಸವು ಕೈಗೂಡುತ್ತದೆ.
ಕಟಕ: ರಾಕ್ಷಸ ಸಂಹಾರ ಮಾಡಲು ಲೋಕೋದ್ಧಾರಕ ಶ್ರೀರಾಮನು ಜನಿಸಿದ ಕಟಕ ರಾಶಿಯಲ್ಲಿ ಹುಟ್ಟಿದ ನೀವು ಬಲಾಡ್ಯರೂ ಬುದ್ಧಿವಂತರೂ ಆಗಿರುವಿರಿ. ರಾಮಧ್ಯಾನ ಮಾಡಿದರೆ ಆರೋಗ್ಯವು ಚೆನ್ನಾಗಿರುತ್ತದೆ. ಸ್ಥಿರ ಮನಸ್ಸಿದ್ದರೆ ಏನನ್ನೂ ಪಡೆಯಬಹುದು. ರಾಮೋಪಾಸನೆಯೇ ಮಹಾ ಮಂತ್ರವಾಗಲಿ.
ಸಿಂಹ: ಎರಡನೇ ಮನೆಯಲ್ಲಿ ಕೇತುವು ಕುಳಿತಿದ್ದು ಕೆಲಸದಲ್ಲಿ ಅಡಚಣೆ ಉಂಟು ಮಾಡುತ್ತಾನೆ. ಪ್ರಾಣಿಗಳಿಗೆ ಮೂಗುದಾರ ಹಾಕಿದರೆ ಉಸಿರಾಡಲು ತೊಂದರೆ ಇಲ್ಲ. ಹಾಗೆಯೇ ಸಿಂಹರಾಶಿಯವರ ಬಾಯಿಯಿಂದ ಮಾತೇ ಮುಗಿಯದು. ಆದರೆ, ಯೋಚಿಸಿ, ಚಿಂತಿಸಿ, ಹಿತವಚನ ಹೇಳಿ ಕಾರ್ಯಸಾಧನೆ ಮಾಡಿಕೊಳ್ಳಿ. ಧನ,ಆರೋಗ್ಯವನ್ನೂ ಸುಬ್ರಹ್ಮಣ್ಯನು ನೀಡುತ್ತಾನೆ. ಸೂರ್ಯ ಅಷ್ಟಕ ಪಠಿಸಿ.
ಕನ್ಯಾ: ಕೇತು ರಾಹುಗಳ ಮಧ್ಯೆ ಸಿಲುಕಿಕೊಂಡಾಗ ಗುರು ಉಪದೇಶವೇ ಮೂಲವಾಗಿ ಇರಲಿ. ಗುರುವನ್ನು ಬಿಟ್ಟು ಯಾರೂ ಬಾಳಲು ಸಾಧ್ಯವಿಲ್ಲ. ಗುರುಸ್ವರೂಪ ವನ್ನು ದೇವರು ಮಾನವನಲ್ಲಿ ಸೃಷ್ಟಿಸಿರುವುದನ್ನು ಕಾಣಬಹುದು. ತಂದೆ-ತಾಯಿ ಯನ್ನು ಪ್ರಥಮ ಗುರುವೆಂದು ಪೂಜಿಸಿ. ಸುಖವನ್ನು ಕಾಣುತ್ತೀರಿ.
ತುಲಾ: ರವಿಯು ತುಲಾರಾಶಿಯನ್ನು ಸೇರಿದ್ದಾನೆ. ದ್ವಾದಶದಲ್ಲಿ ಕೇತು ಇದ್ದಾನೆ. ಜೊತೆಯಲ್ಲಿ ಪಂಚಮ ಶನಿಯಿದ್ದಾನೆ. ಕಾರ್ಯಗಳು ತಡವಾಗಬಹುದು, ಆದರೆ ಹಾನಿ ಉಂಟಾಗದು ಎಂಬುದು ತಿಳಿದಿರಲಿ. ಮಾಡುವ ಕೆಲಸದಲ್ಲಿ ನಂಬಿಕೆ, ಶ್ರದ್ಧೆ ಇದ್ದರೆ ದೇವರೇ ಅದನ್ನು ಸರಿಮಾಡಿ ಉತ್ತುಂಗಕ್ಕೆ ಕೊಂಡೊಯ್ಯುತ್ತಾನೆ. ಆದಿತ್ಯ ಹೃದಯ ಪಾರಾಯಣ ಮಾಡಿ. ಕೈಗೊಂಡ ಕೆಲಸಗಳಲ್ಲಿ ಶುಭವಾಗುವುದು.
ವೃಶ್ಚಿಕ: ವೃಶ್ಚಿಕ ರಾಶಿಯಲ್ಲಿ ಬುಧನಿದ್ದಾನೆ. ಅದು ಅಂಗಾರಕನ ಮನೆ. ಬುಧ-ಕುಜರು ಒಂದಾಗುವುದು ಕಷ್ಟ. ಬರಬೇಕಾದ ಹಣವು ಅಲ್ಪ ಸ್ವಲ್ಪ ಅಥವಾ ಮುಕ್ಕಾಲು ಭಾಗ ಬರಬಹುದು. ಸತ್ಯನಾರಾಯಣನನ್ನು ಪೂಜಿಸಿ. ನಿಮಗೆ ಅವನೇ ಸತ್ಯಕ್ಕೂ ಜಯಕ್ಕೂ ಧನಕ್ಕೂ ಕಾರಣನಾಗುತ್ತಾನೆ.
ಧನುಸ್ಸು: ಏಕಾದಶದಲ್ಲಿ ರವಿ ಇದ್ದಾನೆ. ಶುಕ್ರನು ಬಲವಾಗಿದ್ದಾನೆ. ನಾವು ಏನೇ ಚಿಂತಿಸಿದರೂ ದೇವರು ಅದನ್ನು ಕೊಡದೇ ಇರಬಹುದು. ಆದರೆ ಅದಕ್ಕಿಂತ ಒಳ್ಳೆಯದನ್ನೇ ಕೊಡುವ ಚಿಂತನೆ ದೇವರಿಗಿರುತ್ತದೆ. ಗುರುವಿಗಾಗಿ ಗುರು ದತ್ತಾತ್ರೇಯನನ್ನು ಪ್ರಾರ್ಥಿಸಿ. ಮನಸ್ಸು ಶುದ್ಧಿಯಾಗುತ್ತದೆ.
ಮಕರ: ಶನಿಯು ವಕ್ರಗತಿಯಲ್ಲಿದ್ದು ಮಾಡಬಾರದ ತಪ್ಪನ್ನು ಮಾಡಿ ಸಿಕ್ಕಿಹಾಕಿಕೊಳ್ಳ ಬೇಡಿ. ತಡವಾದರೂ ಪರವಾಗಿಲ್ಲ. ಯೋಚಿಸಿ, ತಡೆದು ನಿಧಾನವಾಗಿ ಕಾರ್ಯಗತ ಮಾಡಿ. ಕೆಲವೇ ಸಮಯದಲ್ಲಿ ಶನಿಯು ಮೂರನೇ ಮನೆಗೆ ಹೋದಾಗ ಶುಭವಾಗುತ್ತದೆ. ಶನಿಸ್ತೋತ್ರ ಪಠಿಸಿ. ಒಳ್ಳೆಯದಾಗುತ್ತದೆ.
ಕುಂಭ: ಶನಿಯು 12ನೇ ಮನೆಯಲ್ಲಿದ್ದು ಬೇಡದ ಕೆಲಸ ಮಾಡುವುದರಲ್ಲಿ ಉತ್ಸುಕತೆ ಇರುತ್ತದೆ. ಆದ್ದರಿಂದ ಈ ದಿನಗಳಲ್ಲಿ ಎಚ್ಚರಿಕೆಯಿಂದ ಸಾಗಬೇಕು. ನಿಧಾನಗತಿಯಲ್ಲಿ ಸಾಗಿ ಕೆಲಸವನ್ನು ಪೂರ್ಣಗೊಳಿಸಿಕೊಳ್ಳಿ. ಶನಿ ಅಷ್ಟೋತ್ತರವನ್ನು ಪಠಿಸಿ.
ಮೀನ: ಲಗ್ನದಲ್ಲಿ ರಾಹು ಇದ್ದಾನೆ. ಚಿಂತೆಯನ್ನು ಮಾಡುವುದು ಸೋಮಾರಿತನದ ಲಕ್ಷಣ. ಚಿಂತೆ ಬಿಡುವುದು ಬುದ್ಧಿವಂತ ಮನುಷ್ಯರ ಲಕ್ಷಣ. ಬೆಂಕಿ ಬೆಳಕನ್ನೂ ಕೊಡುತ್ತದೆ, ಕೈಯನ್ನೂ ಸುಡುತ್ತದೆ. ನಿಮ್ಮ ಬುದ್ದಿಯನ್ನು ಒಳ್ಳೆಯ ಕೆಲಸಕ್ಕೆ ಉಪಯೋ ಗಿಸಿಕೊಂಡು ಅದಕ್ಕೆ ಸಮಯವನ್ನು ನಿಗದಿಪಡಿಸಿಕೊಳ್ಳಿ. ದೈವಮಾರ್ಗದಲ್ಲಿ ನಡೆದು ಕಾರ್ಯಸಾಧನೆ ಮಾಡಿ. ಆರೋಗ್ಯದ ಚಿಂತೆ ಬೇಡ. ಆರೋಗ್ಯದ ಯಾವ ತೊಂದರೆಯೂ ನಿಮಗಿಲ್ಲ. ಗುರು ಅಷ್ಟೋತ್ತರ ಪಠಿಸಿ. ಗುರು ನರಸಿಂಹನನ್ನು ಪೂಜಿಸಿ.