ಈ ರಾಶಿಯವರು ದೈನಂದಿನ ಕಾರ್ಯ ಪೂರೈಸಲು ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ: ವಾರಭವಿಷ್ಯ

Vaara-Bhavishya
Published on
vaara

ಮೇಷ: ಧರ್ಮದ ಹಾದಿ ಬಿಡದೆ ಧರ್ಮವನ್ನು ರಕ್ಷಿಸುವ ಸಕಲರನ್ನು ಪ್ರೀತಿಸಿ. ಲಗ್ನದಲ್ಲಿ ಮಹಾ ಗುರು ದಕ್ಷಿಣಾಮೂರ್ತಿಯು ಕುಳಿತಿದ್ದಾನೆ. ಸಂಯಮದಿಂದ ನಡೆದರೆ, ಉದ್ವೇಗಕ್ಕೆ ಒಳಗಾಗದೆ ದೈನಂದಿನ ಕಾರ್ಯ ಪೂರೈಸಲು ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ, ಆಗ ಮಾಡುವ ಕೆಲಸಗಳಲ್ಲಿ ಜಯ ಮತ್ತು ಆನಂದವು ಸಿಗುತ್ತದೆ.

ವೃಷಭ: ಆತುರ, ಉದ್ವೇಗ ಕೋಪ ನಕಾರಾತ್ಮಕ ಚಿಂತನೆಯನ್ನು ಜೀವನ ದಲ್ಲಿ ದೂರವಿರಿಸಿ. 12ನೇ ಮನೆಯ ಗುರು ಜನ್ಮಕ್ಕೆ ಬರಲಿದ್ದು ನಿಮಗೆ ಭಾಗ್ಯವನ್ನು ತರುತ್ತಾನೆ. ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿ ಐಕ್ಯರೂಪವಾದ ಕೇರಳದ ಎರ್ನಾಕುಲಂನಲ್ಲಿ ನೆಲೆಸಿರುವ ಭಗವತಿಯನ್ನು ಸಂದರ್ಶಿಸಿ ಬಂದರೆ ಸಂಕಟಗಳು ದೂರವಾಗುವಿರಿ. ಆರೋಗ್ಯದ ಬಗ್ಗೆ ಜಾಗ್ರತೆಇರಲಿ.

ಮಿಥುನ: ಪುನರ್ವಸು ನಕ್ಷತ್ರದಲ್ಲಿ ಜನಿಸಿದ ಶ್ರೀರಾಮಚಂದ್ರನು 500 ವರ್ಷಗಳ ನಂತರ ಅಯೋಧ್ಯೆಗೆ ಬಂದು ಸೇರಿದ್ದಾರೆ. ಏಕಾದಶ ಗುರುವೇ ಇದಕ್ಕೆ ಮೂಲಪುರುಷ. ಶೃಂಗೇರಿ ಶಾರದಾ ಪೀಠ ಸೇರಿದಂತೆ ನಾಲ್ಕು ಪೀಠಗಳು ಇದರ ತಪಸ್ಸಿನಲ್ಲಿ ತೊಡಗಿವೆ. ಮಿಥುನ ರಾಶಿಯವರಿಗೆ ಯಾವ ಭಯವೂ ಇಲ್ಲ. ಏಕಾದಶ ಗುರು, 9ನೇ ಮನೆಯ ಶನಿ ಪುಣ್ಯ ಪಾಪದ ಲೆಕ್ಕಾಚಾರ ಮಾಡಿ ಜೀವನವನ್ನು ಆನಂದಮಯವಾಗಿ ಇರಿಸುತ್ತಾರೆ.

ಕಟಕ: ಯಾವ ಗ್ರಹವು ಎಲ್ಲೇ ಇರಲಿ, ದೇವನಾಮ ಸ್ಮರಣೆ ಒಂದೇ ಸಾಕು ಎಲ್ಲ ಗ್ರಹಗಳನ್ನು ಶಾಂತವಾಗಿರಿಸಲು ಹಾಗೂ ಆರೋಗ್ಯ ಕೊಟ್ಟು ಮನುಷ್ಯನನ್ನು ಸಂರಕ್ಷಿಸಲು ಎಂಬ ಮಾತಿಗೆ ಕಟಕ ರಾಶಿಯವರೇ ಸಾಕ್ಷಿ. ದಶಮದಲ್ಲಿ ಗುರು, ಅಷ್ಟಮದಲ್ಲಿ ಶನಿ ಇದ್ದರೂ ಪೂರ್ವ ಪುಣ್ಯದ ಫಲವು ನಿಮ್ಮನ್ನು ಸಂತೃಪ್ತಿ, ಸಂತೋಷದಿಂದ ಇಟ್ಟಿರುತ್ತದೆ.

ಸಿಂಹ: ಈ ರಾಶಿಯವರಿಗೆ 9ನೇ ಮನೆಯಲ್ಲಿ ಗುರು ಇರುವುದು ಶುಭದ ಸಂಕೇತ. ಸಪ್ತಮದಲ್ಲಿ ಶನಿ ಇದ್ದರೂ ಯಾವ ಅಡ್ಡಿ ತರುವುದಿಲ್ಲ. ಕೊಡಬೇಕಾದವರು ಕೊಡದೆ ಸತಾಯಿಸಿದರೂ ಗುರು ಕೃಪೆ ಇರುವುದರಿಂದ ದೈವವೇ ಎಲ್ಲವನ್ನೂ ನೀಡಿ ನಿಮ್ಮಿಂದ ಕಾರ್ಯ ಸಾಧನೆಯನ್ನು ಮಾಡಿಸಿ ಸಂತೋಷಪಡಿಸುತ್ತದೆ. ಆರೋಗ್ಯಕ್ಕಾಗಿ ಸೂರ್ಯನಾರಾಯಣನ ಪ್ರಾರ್ಥನೆ ಇರಲಿ. ಕೇತುವಿಗೆ ನಿರಂತರವಾಗಿ ಗಣಪತಿಯನ್ನು ಪೂಜಿಸಿ.

ಕನ್ಯಾ: 6ರಲ್ಲಿ ಶನಿ ಇದ್ದು ಬೇಡಿದ್ದನ್ನೆಲ್ಲ ಕೊಡುತ್ತಾನೆ. ಅಷ್ಟಮದಲ್ಲಿ ಗುರುವಿರುವುದರಿಂದ ಬುದ್ಧಿಯನ್ನು ಕೆಡಿಸಿ ನಿಮ್ಮನ್ನು ನೀವೇ ಹಾಳು ಮಾಡಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಮೌನದಿಂದ ದೈವವನ್ನು ಪ್ರಾರ್ಥಿಸಿದರೆ ಏನನ್ನಾದರೂ ಪಡೆಯಬಹುದು. ಗುರುವಾಯೂರಿನ ಗುರುವಾಯೂರಪ್ಪನನ್ನು ಸಂದರ್ಶಿಸಿ ಬನ್ನಿ, ಶುಭವಾಗುವುದು.

ತುಲಾ: ಶುಕ್ರಾಧಿಪತ್ಯ ಇರುವ ಈ ರಾಶಿಯವರಿಗೆ ದುರ್ಗೆಯು ಆತ್ಮದಲ್ಲೇ ನಿಂತು ದಾರಿಯನ್ನು ತೋರಿಸುತ್ತಾಳೆ. ಸಪ್ತಮದಲ್ಲಿ ಗುರು ಸುಖವನ್ನು, ಶಾಂತಿಯನ್ನು ಕೊಡುತ್ತಾನೆ. ಪಂಚಮ ಶನಿಯಿಂದ ನಿಮಗೆ ಬೇಕಾದವರು ಬೇಡವಾದ ವಿಚಾರಗಳನ್ನು ತುಂಬಿಸಿ, ನಿಮ್ಮನ್ನು ಜರಿದು ಸಂತೋಷ ಪಡುತ್ತಾರೆ. ನಡೆಯುವುದೆಲ್ಲ ನಡೆಯಲಿ, ಈಶ್ವರನ ದಯೆ ಇರಲಿ ಎಂದು ಮುಂದೆ ಸಾಗಿರಿ. ಉಮಾಮಹೇಶ್ವರನನ್ನು ಪ್ರಾರ್ಥಿಸಿ, ಉಮಾಮಹೇಶ್ವರ ವ್ರತ ಕತೆ ಓದಿರಿ.

ವೃಶ್ಚಿಕ: ನೀವು ಗಳಿಸಿದ ಧನವು ಪೂರ್ಣವಾಗಿ ನೀವು ಕೂತಲ್ಲೇ ಬರಬೇಕಾದರೆ ಬಂದು ಸೇರುತ್ತದೆ. ಪಂಚಮಕ್ಕೆ ಗುರು ಬರಲಿದ್ದಾನೆ. ಒಳ್ಳೆಯ ಸಮಯಕ್ಕಾಗಿ ಕಾದಿರಿ. ಬಂದ ಲಾಭದಿಂದ ಋಣವನ್ನು ತೀರಿಸಿ. ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ, ಕೋಲ್ಹಾಪುರದ ಮಹಾಲಕ್ಷ್ಮಿಗೆ ತಲೆಬಾಗಿ ನಮಿಸಿ.

ಧನುಸ್ಸು: ಧನು ರಾಶಿಯ ಜೀವಿಗಳು ಅತ್ಯಂತ ದೈವಭಕ್ತರು. ಕಾರ್ಯ ಸಾಧಿಸಲು ದೇವರನಾಮ ಜಪ ಒಂದೇ ಸಾಕು. ಇರುವ ಜೀವನವನ್ನು ಸಾರ್ಥಕಪಡಿಸಿಕೊಳ್ಳಿ. ನಿಮ್ಮ ತಂದೆ- ತಾಯಿ ಕುಟುಂಬದೊಂದಿಗೆ ಸಂತೋಷದಿಂದಿರುವ ಕಾಲವಿದು. ಗುರುವಿನ ಅಧಿ ಪತ್ಯವಿರುವ ಈ ರಾಶಿಯವರಿಗೆ ಪಂಚಮ ಗುರುವಿನ ಸಂಪೂರ್ಣ ಅನುಗ್ರಹವಿದೆ.

ಮಕರ: ಶನಿಯು ಧನಿಷ್ಠ ನಕ್ಷತ್ರವನ್ನು ಬಿಟ್ಟು ಶತಭಿಷಕ್ಕೆ ಬಂದು ಸೇರಿದ್ದಾಗಿದೆ. ಶ್ರವಣ, ಧನಿಷ್ಠ ನಕ್ಷತ್ರದವರಿಗೆ ಶನಿಯ ತಾಪವು ಕಡಿಮೆಯಾಗಿದ್ದು, ಬಯಸಿದ ಕಾರ್ಯದಲ್ಲಿ ಜಯವನ್ನು ಕಾಣುತ್ತೀರಿ. ದೈವಬಲವಿದೆ. ಎರಡನೇ ಮನೆಯ ಶನಿಗಾಗಿ ಶನಿ ಸ್ತೋತ್ರವನ್ನು ಪಠಿಸಿ. ಸಾಂಬ ಸದಾಶಿವನನ್ನು ಪೂಜಿಸಿ.

ಕುಂಭ: ಕುಂಭ ರಾಶಿಯವರಿಗೆ 12 ರ ಶನಿ ಜನ್ಮಕ್ಕೆ ಬಂದು ಬೇಕಾದ ಪಾಠವನ್ನು ಕಲಿಸಿ ನಿಮ್ಮನ್ನು ತಿದ್ದಿ ಸರಿದಾರಿಗೆ ತಂದಿದ್ದಾನೆ. ಕಷ್ಟಕರ ಸನ್ನಿವೇಶಗಳು ಈ ವಾರದಲ್ಲಿ ಎದುರಾಗಬಹುದು. ನಿತ್ಯ ಶನಿ ಅಷ್ಟೋತ್ತರ ಪಠಿಸಿ. ಕುಂಭಾಸಿ ಗಣಪತಿಯನ್ನು ಪೂಜಿಸಿ, ಮನಸ್ಸು ಹಗುರವಾಗಿ ಕಾರ್ಯಗಳು ಮುನ್ನಡೆಯುತ್ತವೆ.

ಮೀನ: ಜಲರೂಪಿಯಾದ ನಾರಾಯಣನು ಜಲವನ್ನೇ ಕೊಡದಿದ್ದರೆ ಗತಿ ಏನು? ಒಂದು ಲೋಟ ನೀರಿನಿಂದ ಹಸಿವು ಇಂಗುತ್ತದೆ. ಹಾಗೆಯ ದ್ವಿತೀಯ ಗುರುವಿನಿಂದ ನೀವು ಬಯಸಿದ ಕಾರ್ಯಗಳು ಈಡೇರುತ್ತವೆೆ. ಶನಿಯ ತಾಪಕ್ಕೆ ನಟರಾಜನನ್ನು ಪೂಜಿಸಿ. ಶ್ರೀಕಂಠೇಶ್ವರನನ್ನು ಅರ್ಚಿಸಿ. ಶಾಂತ ಚಿತ್ತರಾಗುತ್ತೀರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net