

ಮೇಷ: ಕಾರ್ತಿಕ ಮಾಸದ ದೀಪೋತ್ಸವ ಏಕದೀಪದಿಂದ ಹಿಡಿದು ಲಕ್ಷದೀಪದೊಂದಿಗೆ ಸಾಗಿ ಭಾರತವು ಬೆಳಕನ್ನು ಚೆಲ್ಲಿ ವಿಶ್ವವನ್ನೇ ಕಾಪಾಡುವ ಏಕೈಕ ರಾಷ್ಟ್ರ. ಇಂಥ ಭಾರತದಲ್ಲಿ ಜನಿಸಿದವರೇ ಪುಣ್ಯವಂತರು. ಮೇಷಾಧಿಪತಿ ಅಂಗಾರಕ. ಈಗ ಸಮಯವು ಚೆನ್ನಾಗಿದೆ. ಕೆಲಸಗಳಲ್ಲಿ ನಿಮ್ಮ ಕೌಶಲ, ವಿಭಿನ್ನತೆಗಳನ್ನು ತೋರಿದ್ದೆ ಆದರೆ, ಅಭಿವೃದ್ಧಿ ಇದೆ. ಗುರು ಲಗ್ನದಲ್ಲಿ ಇರುವುದರಿಂದ ಗುರುವಿಗೆ ಶರಣಾಗಿ. ಗುರುವಿನಲ್ಲಿ ನಂಬಿಕೆಯನ್ನು ಇಟ್ಟು ಸಾಗಿದರೆ ಜಯ ನಿಮ್ಮದೇ.
ವೃಷಭ: ಕನ್ನಡನಾಡಿನ ದೇವತೆ ಚಾಮುಂಡಿ. ದುರ್ಗಾಸ್ವರೂಪಿಣಿಯೂ ಹೌದು. ದುಃಖ, ದಾರಿದ್ರ್ಯವನ್ನು ನಾಶ ಮಾಡುವ ಪರಮೇಶ್ವರಿ ಅವಳೇ. ಪಂಚದುರ್ಗಾ ಎಂಬ ಬಿರುದನ್ನು ಪಡೆದವಳು, ದುರ್ಗೆಯು ದೀಪದ ಮೂಲವೇ ಆಗಿರುತ್ತಾಳೆ. ದುರ್ಗೆಯ ಅವತಾರವೇ ಹೆಣ್ಣಿನ ಮೂಲಸ್ವರೂಪ. 12ರ ರಾಹುವಿಗೆ ದುರ್ಗಾಪೂಜೆಯು ವಿಶೇಷ ಫಲ ನೀಡುತ್ತದೆ. ಆತುರ, ಅವಾಂತರ ಬೇಡ. ಮೇ 1ರ ನಂತರ ಜೀವನವೇ ಬಂಗಾರವಾಗುತ್ತದೆ.
ಮಿಥುನ: ಸಮಯೋಚಿತ ಮಾತನ್ನಾಡಿದರೆ ಮನುಷ್ಯನಿಗೆ ಬೆಲೆ. ಯಾವುದೇ ಕಾರಣಕ್ಕೂ ವ್ಯಕ್ತಿಗಳ ಟೀಕೆ, ದ್ವೇಷ ಮಾಡಿದರೆ ತಾಪತ್ರಯಗಳಲ್ಲಿ ಸಿಲುಕುವಿರಿ. ಪೂಜೆ ಮಾಡುವುದು, ಧರ್ಮಮಾರ್ಗದಲ್ಲಿ ನಡೆಯುವುದು ಮುಖ್ಯ. ನಾವು ಮಾಡಿದ ಪುಣ್ಯವು ಇಡೀ ಕುಟುಂಬವನ್ನೇ ಕಾಪಾಡುತ್ತದೆ. ಕಾರಣವಿಲ್ಲದೆ ಪರರನ್ನು ನಿಂದಿಸುವುದು ಬೇಡ. ಇದನ್ನು ಸರಿ ಮಾಡಿಕೊಂಡು ನಡೆದರೆ 11ರ ಗುರು, ನವಮ ಶನಿ ಅತ್ಯುತ್ತಮ ಫಲ ಕೊಟ್ಟು ನಡೆಸುತ್ತಾನೆ. ಚಿಂತಾಮಣಿ ಮಹಾಗಣಪತಿಯನ್ನು ಪೂಜಿಸಿ. ವಿಘ್ನಗಳನ್ನು ದೂರ ಮಾಡಿಕೊಳ್ಳಿ.
ಕಟಕ: ಬಿಳಿಯ ಬಟ್ಟೆ ಮೇಲೆ ಯಾವುದೇ ಕಲೆಯಾದರೂ ಬಟ್ಟೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಚಂದ್ರನ ರಾಶಿಯಲ್ಲಿ ಹುಟ್ಟಿದ ನೀವು ನಿಮ್ಮ ಮುಖದ ಸೌಂದರ್ಯವನ್ನು, ಚಂದ್ರನು ಕೊಟ್ಟ ಬೆಳದಿಂಗಳನ್ನು ಹಾಳು ಮಾಡಿಕೊಳ್ಳಬಾರದು. ಮತ್ತೊಬ್ಬರಿಗೆ ಕೇಡು ಬಯಸ ದವರು, ದೈವಬಲ ಇರುವವರು ಈಶ್ವರನನ್ನು ಪೂಜಿಸಿ. ಕೆಲಸವನ್ನು ನಿಮ್ಮಂತೆ ಮಾಡಿಕೊಳ್ಳುವುದಕ್ಕೆ ಈಶ್ವರ ಪ್ರಾರ್ಥನೆಯೇ ಮೂಲ.
ಸಿಂಹ: ಹಿರಿಯರು ಹೇಳಿದ್ದಾರೆ, ‘ಗಜರಾಜನಂತೆ ನಡಿಗೆ ಇರಬೇಕು. ಜಿಂಕೆಯಂತೆ ಚುರುಕಾಗಿರಬೇಕು. ಸಿಂಹದಂತೆ ಗರ್ಜನೆ ಇರಬೇಕು’. ಸಿಂಹವಾಹಿನಿ ದುರ್ಗೆಯು ಸಿಂಹ ರಾಶಿಯವರಿಗೆ ವಿಶೇಷ ಫಲವನ್ನು ನೀಡುತ್ತಾಳೆ. ಮುಂದಿನ 4 ತಿಂಗಳ ಸಮಯ ಹಾಳು ಮಾಡದೆ ಅನಿರೀಕ್ಷಿತವಾಗಿ ಬರುವ ಧನಸಂಪತ್ತನ್ನು ಪಡೆದು ಉಪಕಾರಿಗಳಾಗಿ ಬದುಕಿ. ಸೂರ್ಯನನ್ನು ಪೂಜಿಸಿ. ವಾಕ್ಸಿದ್ಧಿಗೆ ಸುಬ್ರಹ್ಮಣ್ಯನನ್ನು ಪೂಜಿಸಿದರೆ ಸಾಕು. ಭಗವಂತನನ್ನು ನಿರಂತರವಾಗಿ ಸ್ಮರಿಸಿ. ನಾಮಸ್ಮರಣೆ ಮರೆಯಬೇಡಿ.
ಕನ್ಯಾ: ಕಷ್ಟಕಾರ್ಪಣ್ಯ ನೀಗಿ ಮಹತ್ತರ ಬದಲಾವಣೆಗಳನ್ನು ಕಾಣುವ ಕಾಲ. ದಶರೂಪದಲ್ಲಿ ಕಾಣಿಸಿ ಜಗತ್ತಿಗೆ ಬೆಳಕನ್ನು ಕೊಟ್ಟು, ದುಷ್ಟರನ್ನು ಶಿಕ್ಷಿಸಿ ಲೋಕಕ್ಕೆ ಬದುಕುವ ಮಾರ್ಗವನ್ನೂ ಭಗವಂತನು ತೋರಿಸಿ ಕೊಟ್ಟಿದ್ದಾನೆ. ಚಾಮುಂಡೇಶ್ವರಿಯ ದರ್ಶನ ಮಾಡಿ. ಸಾಧ್ಯವಾದಲ್ಲಿ ಚಂಡಿಕಾ ಹವನ ಮಾಡಿಸಿ. ಎಲ್ಲವೂ ಶುಭಕ್ಕೆ ತಿರುಗಿ ಸಂತೋಷ ಉಂಟಾಗುತ್ತದೆ.
ತುಲಾ: ಪ್ರಸಕ್ತ ಕಾರ್ಯವೈಖರಿಯಿಂದ ಒತ್ತಡ ಬರಲು ಸಾಧ್ಯವೆ ಹೊರತು ನಿಮಗೆ ಸಮಯ ಸಿಗುವುದಿಲ್ಲ. ನಿಮ್ಮನ್ನು ನೋಡಿದವರು ಗಡಿಯಾರವನ್ನು ನೋಡಬೇಕಾಗಿಲ್ಲ. ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೀರಿ. ಈ ದೇಹಕ್ಕೆ ಸೌಂದರ್ಯ ಕೊಟ್ಟಿರುವ ಪರಮಾತ್ಮ, ಬುದ್ಧಿಶಕ್ತಿಯ ಮಡಿಕೆಯನ್ನು ನಿಮಗೆ ನೀಡಿದ್ದಾನೆ. ನಿಮ್ಮ ಮಾತು ಹತೋಟಿಯಲ್ಲಿ ಇದ್ದು, ದೇವರನ್ನು ಪೂಜಿಸಿದರೆ, ಶುಭಫಲವು, ಜಯವು ಮುಂದುವರಿಯುತ್ತದೆ.
ವೃಶ್ಚಿಕ: ನಿರೀಕ್ಷೆಯಲ್ಲಿ ಇರಬೇಕಾದದ್ದು ಮನುಷ್ಯರ ಕರ್ತವ್ಯ. ನಮ್ಮ ಸಮಯ ಬಾರದೆ ನಮಗೆ ಯಾವುದೂ ದಕ್ಕುವುದಿಲ್ಲ. ದಕ್ಕಿದ್ದನ್ನು ಉಳಿಸಿಕೊಳ್ಳಲು ದೇವರು ನಮಗೆ ಕೊಟ್ಟಾಗ ಅದರ ಬೆಲೆ ತಿಳಿಯುವುದಿಲ್ಲ. ಶಾಂತಿ, ಸಂಯಮ, ದೈವಭಕ್ತಿ, ಗುರುಗಳಲ್ಲಿ ಭಕ್ತಿ ಇರಲಿ. ಗುರುಹಿರಿಯರು ತೋರಿದ ಮಾರ್ಗದಲ್ಲಿ ನಡೆದರೆ ಸಾಕ್ಷಾತ್ ಮಹಾಲಕ್ಷ್ಮಿ ಧನದ ಪೆಟ್ಟಿಗೆಯ ಕೀಲಿಯನ್ನು ನಿಮ್ಮ ಕೈಯಲ್ಲಿ ಇರಿಸುತ್ತಾಳೆ. ಚತುರ್ಥದಲ್ಲಿ ಶನಿ ಇದ್ದು, ಒಳ್ಳೆಯ ಆರೋಗ್ಯವನ್ನು ಪಡೆಯಲು ನಿಮ್ಮ ಅಭ್ಯಾಸಗಳು ಶುಚಿಯಾಗಿರಲಿ.
ಧನುಸ್ಸು: ಓಟಗಾರ್ತಿ ಉಷಾಳಂತೆ ಓಡಿದರೆ ಎಲ್ಲರೂ ಚಿನ್ನ ಗೆಲ್ಲಲು ಆಗುವುದಿಲ್ಲ. ಓಟಕ್ಕೆ ಒಳ್ಳೆಯ ಊಟ ಬೇಕು. ನೋಟಕ್ಕೆ ಸೌಂದರ್ಯ ಬೇಕು. ಎಲ್ಲಕ್ಕೂ ನಮ್ಮ ಸದ್ಗುಣಗಳು ಇರಲೇ ಬೇಕು. ಪಂಚಮದಲ್ಲಿ ಗುರು, ತೃತೀಯದಲ್ಲಿ ಶನಿಯು ಇದ್ದು, ಇದೇ 16ರ ನಂತರ ರಘುವಂಶದ ಒಡೆಯ ರಾಮನಂತೆ ರಾಜ ಪದವಿಯನ್ನೇ ಪಡೆಯಬಹುದು. ಶುಭವಾಗಲಿ. ಗುರುಚರಿತ್ರೆ ಪಾರಾಯಣ ಮಾಡಲೇಬೇಕು.
ಮಕರ: ‘ಸತ್ಯಾದ್ರಿರಾಮಂ ಸರಸೀರುಹಾಕ್ಷಂ ನಾಸಾಮಣಿಂ ರಾಜಿತ ಶಂಖಚಕ್ರಂ | ಧನುರ್ಧರಂ ಸಾಯಕ ದಿವ್ಯಹಸ್ತಂ ನಮಾಮಿ ವಿಷ್ಣುಂ ಶಿರಸಾ ಚತುರ್ಭಜಂ’ || ಈ ದೇವತಾ ಸ್ತುತಿಯನ್ನು ಮಾಡಿ ಶನಿಯ ತಾಪ ಕಳೆದುಕೊಳ್ಳಲು ಪ್ರಯತ್ನಿಸಿ. ಮಕರ ರಾಶಿ ಶನಿಯು ಅಂತ್ಯಭಾಗದಲ್ಲಿ ಇರುವುದರಿಂದ ಕಡೆಯ ಭಾಗದ ಶನಿಗೆ ವಿಷ್ಣುವಿನ ಅನುಗ್ರಹ ಬೇಕೆಬೇಕು. ಬ್ರಹ್ಮನು ಸೃಷ್ಟಿ ಮಾಡಿದ್ದಾನೆ. ಒಳ್ಳೆಯ ಕೆಲಸ ಮಾಡಿದರೆ ವಿಷ್ಣು ದಶಹಸ್ತ ಕೊಡುತ್ತಾನೆ. ಕೆಟ್ಟ ಕೆಲಸ ಮಾಡಿದರೆ ನಮ್ಮನ್ನು ಅಳಿಸಲು ಶಿವನೇ ಅವತಾರ ಮಾಡುತ್ತಾನೆ. ನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.
ಕುಂಭ: ವಿಘ್ನಗಳು ಬರುವುದು ಪಾಪಪುಣ್ಯದ ಫಲದಿಂದ. ಮಧ್ಯವಸ್ಥೆಯಲ್ಲಿ ಶನಿ ಇರುವುದರಿಂದ ಕೆಲಸಗಳು ತಡವಾಗಿ ನಿರಾಶೆ ಹುಟ್ಟುವುದು ಸ್ವಾಭಾವಿಕ. ಶನಿಯ ಸಂಚಾರ ಕೇಡು ಮಾಡುವುದಕ್ಕಾಗಿ ಅಲ್ಲ. ಅದು ಮನುಷ್ಯನ ಬುದ್ಧಿಬಲವನ್ನು ಪರೀಕ್ಷಿಸುವ ಕಾಲ. ಜೀವನದಲ್ಲಿ ಸಾಧಕರನ್ನಾಗಿ ಮಾಡುವುದು ಶನಿಯೊಬ್ಬನೇ. ಜೀವನದಲ್ಲಿ ಸಾಧನೆ ಮಾಡಬೇಕು ಹೊರತು ಶನಿಕಾಟವೆಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಡಿ. ಕಾರಂಜಿ ಹನುಮಂತನನ್ನು ಪೂಜಿಸಿ. ಕೈಲಾದ ಸೇವೆ ಮಾಡಿ. ಶನಿ ನಿಮ್ಮನ್ನು ಬಿಟ್ಟು ನಿಮ್ಮ ಬಾಳಿಗೆ ಹನುಮಂತನೇ ಸಹಾಯ ಮಾಡುತ್ತಾನೆ.
ಮೀನ: ಇಡೀ ರಾಮಾಯಣದ ಮೂಲದಲ್ಲಿ ವಾಲ್ಮೀಕಿ ಮಹರ್ಷಿಗಳಾಗಲಿ, ತುಳಸಿದಾಸರಾಗಲಿ ಸುಂದರಕಾಂಡಕ್ಕೆ ವಿಶೇಷ ಮಹತ್ವ ಹೇಳಿದ್ದಾರೆ. ಕಷ್ಟಕಾರ್ಪಣ್ಯಗಳು ಯಾವ ರಾಶಿ, ನಕ್ಷತ್ರ, ಎಷ್ಟು ಒಳ್ಳೆಯ ಯೋಗಕರ್ಣಗಳು ಇದ್ದರೂ ಬಿಡವು. ದೃಢವಾದ ಸಂಕಲ್ಪದಿಂದ ಕೆಲಸಗಳಲ್ಲಿ ಮುಂದೆ ಸಾಗಿ. ಗುರು ದ್ವಿತೀಯದಲ್ಲಿ ಇರುವುದರಿಂದ ಸರ್ವಕಾರ್ಯದಲ್ಲಿ ವಿಜಯವನ್ನು ನೀಡುತ್ತಾನೆ. ಸುಂದರಕಾಂಡ ಪಾರಾಯಣ ಮಾಡಿ ದೈವಾನುಗ್ರಹವನ್ನು ಪಡೆಯಿರಿ. ಶನಿಯು ಶರೀರಕ್ಕೆ ಸ್ವಾಸ್ಥ್ಯ, ಕಾರ್ಯಚಟುವಟಿಕೆ, ಮನೋಉಲ್ಲಾಸ ಕೊಟ್ಟು ನಿಮ್ಮನ್ನು ಕಾಯುತ್ತಾನೆ.