ಈ ರಾಶಿಯವರಿಗೆ ಬರಬೇಕಾದ ಲಾಭಗಳು ಹೆಚ್ಚಾಗಿ ಧನದ ಕೊರತೆ ನೀಗುವುದು: ವಾರಭವಿಷ್ಯ

Vaara-Bhavishya
Published on
ಮೇಷ ರಾಶಿ

ಉತ್ತರಾಯಣದ ಕಡೆಯ ಭಾಗಕ್ಕೆ ಬಂದಿದ್ದು, ಸೂರ್ಯನು ಇದೇ ಜುಲೈ 16ರಂದು ಕಟಕ ರಾಶಿಗೆ ಬಂದು ಸೇರುತ್ತಾನೆ. ಚಂದ್ರನ ಮನೆಗೆ ಸೂರ್ಯನು ಬರುವುದು ಹಗಲು ರಾತ್ರಿಯಲ್ಲಿ ಬೆಳಕನ್ನು ಕೊಡುವ ದೇವತೆಗಳಾಗಿರುತ್ತಾರೆ. ಮೇಷ ರಾಶಿಯವರು ಸೂರ್ಯನನ್ನು ಎಷ್ಟು ಪೂಜಿಸುತ್ತಾರೋ ಅಷ್ಟೇ ಒಳ್ಳೆಯ ಫಲಗಳನ್ನು ಕಾಣುತ್ತಾರೆ . ಮೇಷ ರಾಶಿಯಲ್ಲಿ ಗುರು ಇರುವುದರಿಂದ ಜೀವನದಲ್ಲಿ ಅಡೆತಡೆಗಳು ದುಃಖಗಳು ದೂರವಾಗುತ್ತದೆ. ಸಕಲ ಸಂಪತ್ತನ್ನು ಪಡೆಯಲು ಸುಬ್ರಮಣ್ಯನನ್ನು ಪ್ರಾರ್ಥಿಸಿ ಪೂಜಿಸಿ.

ವೃಷಭ ರಾಶಿ

ದ್ವಾದಶದಲ್ಲಿ ಗುರುವು ಆತಂಕ ಸೃಷ್ಟಿಸಿದ್ದು, ಎಚ್ಚರಿಕೆಯಿಂದ ಹೆಜ್ಜೆ ಹಾಕಲೇಬೇಕು. ಸದ್ದು ಮಾಡದೆ ಗದ್ದಲವಿಲ್ಲದೆ ಜೀವನವನ್ನು ಮುಂದೆ ಸಾಗಿಸಿದರೆ ಸಕಲ ಇಷ್ಟಾರ್ಥಗಳು ನೆರವೇರುತ್ತವೆ. ಶ್ರೀರಾಮನನ್ನು ಪೂಜಿಸಿ. ಸುಂದರಕಾಂಡ ಪಾರಾಯಣ ಮಾಡಿ. ನಿಮ್ಮಧನ ಬಲ ಬುದ್ಧಿಬಲಕ್ಕೆ ಸಮನಾಗಿ ಸಾಗಿದರೆ ಸುಖವು ಪ್ರಗತಿಯು ಉಂಟಾಗುತ್ತದೆ.

ಮಿಥುನ ರಾಶಿ

ಮಿಥುನಕ್ಕೆ ಏಕಾದಶದಲ್ಲಿ ಗುರುವಿದ್ದು, ಬುದ್ಧಿಯನ್ನು ಕೆಡಿಸಲು ರಾಹು ಸಹ ಜತೆಯಲ್ಲೇ ಇದ್ದಾನೆ. ಸೂರ್ಯನು ಮಿಥುನದಿಂದ ಮುಂದಕ್ಕೆ ಸಾಗಿ ಕರ್ಕಾಟಕ ರಾಶಿಗೆ ಬಂದಿದ್ದು, ನಿಮ್ಮಆತಂಕ, ಆರೋಗ್ಯ ಎಲ್ಲವೂ ತಕ್ಕ ಮಟ್ಟಿಗೆ ಸುಧಾರಿಸುತ್ತಾನೆ. 9ನೇ ಮನೆ ಶನಿಯು ಧನವನ್ನು, ಕೆಲಸಗಳಲ್ಲಿ ಜಯ ತಂದು ಹರ್ಷವನ್ನು ನೀಡುತ್ತಾನೆ. ಸುಖ, ಶಾಂತಿಗೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ಒಳ್ಳೆಯದಾಗುತ್ತದೆ.

ಕಟಕ ರಾಶಿ

ಜುಲೈ 16ರಂದು ಸೂರ್ಯನು ಕಟಕ ರಾಶಿಗೆ ಬಂದು ಚಂದ್ರನ ಮನೆಯಲ್ಲಿ ವಾಸ ಮಾಡುತ್ತಾನೆ . ಸೂರ್ಯ ಚಂದ್ರರು ಸಮನಾಗಿ ಬೆಳಕನ್ನು ಚೆಲ್ಲಿ ನಿಮ್ಮ ಕೆಲಸಗಳನ್ನು ನಡೆಸಿಕೊಡುತ್ತಾರೆ. ದೇಹಕ್ಕೆ ಹೆಚ್ಚಿನ ಶ್ರಮ ಕೊಡದಿರಿ. ದೈಹಿಕ ಉಷ್ಣಾಂಶದಲ್ಲಿ ಕೆಲವೊಂದು ಸಣ್ಣಪುಟ್ಟ ವ್ಯತ್ಯಯ ಆಗಿ ಆರೋಗ್ಯದಲ್ಲಿ ಕಿರಿಕಿರಿ ಉಂಟಾಗಬಹುದು. ಎಚ್ಚರವಾಗಿರಿ. ಪಾರ್ವತಿ ಪರಮೇಶ್ವರರನ್ನು ಪೂಜಿಸಿ. ಅವರೇ ನಿಮ್ಮನ್ನು ಕಾಯುತ್ತಾರೆ.

ಸಿಂಹ ರಾಶಿ

11ನೇ ಮನೆಯ ಸೂರ್ಯನು 12ಕ್ಕೆ ವಾರಾಂತ್ಯದಲ್ಲಿ ಬಂದು ನಿಮ್ಮ ಚಿಂತಿತ ಕಾರ್ಯಗಳಿಗೆ ಬೆಳಕನ್ನು ಕೊಡುತ್ತಾನೆ. ಜಲರಾಶಿಯನ್ನೂ ಪ್ರವೇಶ ಮಾಡುತ್ತಾನೆ . 12ಕ್ಕೆ ರವಿ ಬಂದಾಗ ಆರೋಗ್ಯದಲ್ಲಿ ಎಚ್ಚರ ವಹಿಸಬೇಕು. ಅತಿ ವೇಗದಲ್ಲಿ ಕೆಲಸವನ್ನು ಮಾಡಿ ನಿಮ್ಮ ದೇಹಕ್ಕೆ ಅನಾನುಕೂಲ ಉಂಟು ಮಾಡಿಕೊಳ್ಳಬಾರದು. ತಪ್ಪದೇ ಸೂರ್ಯನಾರಾಯಣನನ್ನು ಪೂಜಿಸಿ. ಸಪ್ತಮ ಶನಿಗೆ ಶನಿ ಅಷ್ಟೋತ್ತರ ಪಾರಾಯಣ ಮಾಡಿದರೆ ದೈವ ವೃದ್ಧಿಯಾಗಿ ಎಲ್ಲವೂ ಸುಖವಾಗಿರುತ್ತದೆ.

ಕನ್ಯಾ ರಾಶಿ

11ಕ್ಕೆ ರವಿ ಬಂದು ಶುಭಫಲ ನೀಡುವುದರಲ್ಲಿ ಸಂದೇಹವಿಲ್ಲ. ಆದರೆ, ಬೇಕಾಗಿರುವುದು ಬುದ್ಧಿ ಬಲ, ಗ್ರಹ ಬಲ, ದೈವಬಲ. ಕನ್ಯಾ ರಾಶಿಯವರಿಗೆ ಗುರುವಿನ ಬಲವಿಲ್ಲ. ಷಷ್ಟದಲ್ಲಿ ಶನಿ ಇದ್ದು ಸನ್ನಡತೆಯಿಂದ ನಡೆದುಕೊಂಡಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಲ್ಲಿ ನಿಮ್ಮ ಗೌರವ ಕಾಪಾಡುತ್ತಾನೆ. ಸಾಲಿಗ್ರಾಮದ ಗುರು ನರಸಿಂಹನನ್ನು ದರ್ಶಿಸಿ.

ತುಲಾ ರಾಶಿ

ತುಲಾ ರಾಶಿ ಗುರು ಶುಭಫಲ ಕೊಟ್ಟು ನಿಮಗೆ ಹರ್ಷ, ಕೀರ್ತಿಯನ್ನು ನೀಡಿ ಮಹತ್ಕಾರ್ಯಗಳನ್ನು ಸಾಧಿಸಿ ಕೊಡುತ್ತಾನೆ. ಗುರು ದತ್ತಾತ್ರೇನನ್ನು ಪ್ರಾರ್ಥಿಸಿ ಪೂಜಿಸಿ. ಸದಾ ಕಾಲಕ್ಕೆ ಶುಭ ಫಲ ಪಡೆಯಲು ದುರ್ಗಾ ಅಷ್ಟೋತ್ತರದಿಂದ ದುರ್ಗೆಯನ್ನು ಅರ್ಚಿಸಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಹಿರಿಯರ ಸಲಹೆಯನ್ನು ಕೇಳಿ, ಅವರ ಮಾತಿಗೆ ಬೆಲೆಕೊಟ್ಟು, ಸುಬ್ರಹ್ಮಣ್ಯನನ್ನು ವಿಶೇಷವಾಗಿ ಅರ್ಚಿಸಿದಲ್ಲಿ ನಿಮಗೆ ಧನವು ಒದಗಿ ಬಂದು ಕಷ್ಟಕಾರ್ಪಣ್ಯಗಳು ಕಳೆಯುತ್ತವೆ. ಏನು ಇಲ್ಲವೆಂಬ ಪರಿಸ್ಥಿತಿ ಇರಬಹುದು. ಆದರೆ, ನಿಮ್ಮನ್ನು ಈ ಸಂಕೋಲೆಗಳಿಂದ ಬಿಡಿಸಿ ಧನವೆಂಬ ಆಮ್ಲಜನಕವನ್ನು ಷಣ್ಮುಖನೇ ನೀಡುತ್ತಾನೆ. ದ್ವಾದಶದ ಕೇತುವಿಗೆ ಗಣಪತಿಯನ್ನು ಪೂಜಿಸಿ ಪ್ರಾರ್ಥಿಸಿ.

ಧನು ರಾಶಿ

ಧನುರ್ ರಾಶಿಗೆ ಪಂಚಮದಲ್ಲಿ ಗುರು ಇದ್ದಾನೆ. ಶನಿಯು ತೃತೀಯದಲ್ಲಿ ಸ್ವಕ್ಷೇತ್ರ ಸೇರಿದ್ದಾನೆ. ಧನುರ್, ಮೀನ ರಾಶಿಯಲ್ಲಿ ಜನಿಸಿದವರಿಗೆ ಗುರುವೇ ಅಧಿಪತಿ. ಗುರು ಸ್ಮರಣೆ, ಗುರುವಿನಲ್ಲಿ ದೃಢವಾದ ಭಕ್ತಿ ಇದ್ದಲ್ಲಿ ನೀವು ಬೇಕಾದ್ದನ್ನು ಪಡೆದು ಸುಖವಾಗಿರಬಹುದು. ನರಸಿಂಹನ ಪ್ರಾರ್ಥನೆ, ಚಂಡಿಕಾ ಪಾರಾಯಣ ಇನ್ನು ಹೆಚ್ಚು ಲಾಭವನ್ನು ಕೊಟ್ಟು ಸುಖವನ್ನು ನೀಡುತ್ತದೆ.

ಮಕರ ರಾಶಿ

ಸುಂದರವಾದ ಮುಖಾರವಿಂದ ಇದ್ದವನು ಅಜಾನುಬಾಹು ಶ್ರೀರಾಮಚಂದ್ರನೇ ನಿಮ್ಮ ವಕ್ರ ಗತಿಯ ಶನಿಯನ್ನು ಸರಿ ಮಾಡಿ ಸಾಡೇ ಸಾತಿಯ ಕಡೆಯ ಹಂತದಲ್ಲಿರುವ ನಿಮಗೆ ಶನಿಯ ತಾಪವನ್ನು ತಡೆಯಲು ಮನಸ್ಸಿಗೆ ಪುಷ್ಟಿಯನ್ನು ನೀಡುತ್ತಾನೆ. ಶ್ರೀರಾಮನನ್ನು ಪೂಜಿಸಿ. ನಿಮ್ಮ ಜೀವನವು ಮುಂದೆ ಸಾಗಿ ಒಳ್ಳೆಯ ದಿನಗಳು ಬರಲಿವೆ.

ಕುಂಭ ರಾಶಿ

ಕುಂಭ ರಾಶಿಗೆ ಶನಿಯು ದ್ವಾದಶದಲ್ಲಿದ್ದಾನೆ. ಹೆಚ್ಚಿನ ಸುಖವೂ ಸಿಗುವುದಿಲ್ಲ, ಹಾಗೆಂದು ಜೀವನದ ಪಯಣವು ಕಷ್ಟಕರವೂ ಅಲ್ಲ. ತೃತೀಯದಲ್ಲಿ ಗುರು ಇರುವುದು ಶುಭದಾಯಕವಾದರೂ ನಿಮ್ಮ ದೈನಂದಿನ ವಿಘ್ನಗಳನ್ನು ತಡೆಯಲು ಶ್ರೀ ವೆಂಕಟೇಶ್ವರನನ್ನು ಪೂಜಿಸಿ, ಪ್ರಾರ್ಥಿಸಿ.

ಮೀನ ರಾಶಿ

ಮೀನ ರಾಶಿಗೆ 2ನೇ ಮನೆಯಲ್ಲಿ ಗುರು ಇರುವುದು ಶುಭವೇ. ನಿಮಗೆ ಬರಬೇಕಾದ ಲಾಭಗಳು ಹೆಚ್ಚಾಗಿ ಧನದ ಕೊರತೆ ನೀಗಲು ದೈವವೇ ನಿಮ್ಮೊಂದಿಗೆ ಇದ್ದು ಕೆಲಸವನ್ನು ಮಾಡಿಕೊಡುತ್ತಾನೆ. ಸಾಂಬಸದಾಶಿವನ ಅಷ್ಟೋತ್ತರವನ್ನು ಪಾರಾಯಣ ಮಾಡಿ. ಸಂಕ್ರಮಣದಂದು ನೀವು ಯಾವುದಾದರೂ ಪುಣ್ಯಕ್ಷೇತ್ರಕ್ಕೆ ತೆರಳಿ, ಅಲ್ಲಿ ಯಥಾವಿಧಿಯಾಗಿ ಶಿವರಾಧನೆ ಮಾಡಿ ನಾಲ್ಕು ಜನರಿಗೆ ಭೋಜನ ನೀಡಿದಲ್ಲಿ ಜೀವನದಲ್ಲಿ ನಿಮಗೆ ಸುಖ-ಶಾಂತಿಯು ಲಭಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net