

ದ್ವಾದಶ ರಾಶಿಯ ಗ್ರಹಸಂಚಾರದಲ್ಲಿ ಸಂತೋಷ, ಇಚ್ಛಿತ ಫಲ ಪಡೆಯಲು ದೈವಕೃಪೆ ಅತ್ಯಗತ್ಯ. ಸೂರ್ಯನು ಮರೆಯಾದರೆ ಬೆಳಕು ಕಡಿಮೆ ಆಗುತ್ತದೆ. ಚಂದ್ರ ಬರುವವರೆಗೂ ಕತ್ತಲೆ ಕಾಣುತ್ತದೆ. ಮೇಷ ರಾಶಿಯವರಿಗೆ ಕೆಲ ವಿಚಾರದಲ್ಲಿ ಕತ್ತಲಾಗುವ ಸಂಭವ. ಗುರು ದತ್ತಾತ್ರೇಯನನ್ನು ಪೂಜಿಸಿ ಪ್ರಾರ್ಥಿಸಿ, ದತ್ತಾತ್ರೇಯ ಅಷ್ಟಕ ಪಾರಾಯಣ ಮಾಡಿ ಗುರುಬಲ ವೃದ್ಧಿಸಿಕೊಳ್ಳಿ.
ಏಕಾದಶ ಗುರು ನಿರೀಕ್ಷಿಸಿದ್ದನ್ನು ಕೊಟ್ಟರೂ, 9ರ ಶನಿಯು ಬಿಡುವಿಲ್ಲದ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿ ಮೂಲ ಕರ್ತವ್ಯಕ್ಕೆ ಸ್ಪಂದಿಸಲು ಸಮಯದ ಅಭಾವ ಕಾಣುತ್ತದೆ. ಅಷ್ಟಮ ಶನಿಯಲ್ಲಿ ಉಂಟಾದ ಕಷ್ಟಗಳನ್ನು ದಾಟಿ ಬರುವ ಸಮಯ. ಗುರುಗಳ ಮಾರ್ಗದರ್ಶನ, ನುರಿತ ನ್ಯಾಯವಾದಿಗಳ ಸಹಾಯ ಪಡೆದು ಮುಂದೆ ಸಾಗಿ. ದುರ್ಗೆಯನ್ನು ಪೂಜಿಸಲೆಬೇಕು.
ಮಿಥುನ ರಾಶಿಗೆ ಏಕಾದಶದಲ್ಲಿ ರಾಹು ಇರುವುದರಿಂದ ಸಮಯೋಚಿತ ನಿರ್ಧಾರ ತೆಗೆದುಕೊಳ್ಳಲು ಆಗದೆ ಆತುರದಿಂದ ಭಿನ್ನಾಭಿಪ್ರಾಯ ಹೊರಹಾಕಲು ಉದ್ಯುಕ್ತರಾಗುತ್ತೀರಿ. ಯಾವುದೇ ಕೆಲಸವನ್ನೂ ಶ್ರಮಪಟ್ಟು ಮಾಡಿ ದೇವರನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಬೇಕು. ಏಪ್ರಿಲ್ ನಂತರ ಮೇಷ ರಾಶಿಗೆ ಬರುವ 11ರ ಗುರುವು ನಿಮಗೆ ಎಲ್ಲವನ್ನೂ ಕೊಡುತ್ತಾನೆ. ಇಚ್ಛಿತ ವರ ಪಡೆಯುವ ಸಮಯ.
ಮನುಷ್ಯ ನಿರ್ವಿುಸಿದ ಯಂತ್ರೋಪಕರಣಗಳು ಸವೆಯುತ್ತವೆ. ಮಾನವನ ದೇಹದ ಒಳಗೆ ಪರಮಾತ್ಮನೇ ಯಂತ್ರವನ್ನು ಅಡಗಿಸಿಟ್ಟಿದ್ದಾನೆ. ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದರೂ ಅದನ್ನು ದೇಹವೇ ಒಪ್ಪದಿರಬಹುದು. 9ರಲ್ಲಿ ಗುರು ಇದ್ದಾನೆ. ಗುರು ಗಣೇಶನನ್ನು ಪ್ರಾರ್ಥಿಸಿ. ರಾಮೇಶ್ವರನನ್ನು ಪೂಜಿಸಿ.
ಸಿಂಹ ರಾಶಿಯವರಿಗೆ ಒಂದಲ್ಲ ಒಂದು ಗ್ರಹಗಳು ಒಳ್ಳೆಯ ಜಾಗಗಳಲ್ಲಿ ಕುಳಿತು ಬರುವ ಅಡೆತಡೆಗಳನ್ನು ನೀಗಿ ದೈವಕೃಪೆಯಿಂದ ಭವ ಸಾಗರ ದಾಟಲು ದಾರಿ ತೋರುತ್ತವೆ. ಶನಿಯು ಒಳ್ಳೆಯದನ್ನು ನೀಡಲು ಉದ್ಯುಕ್ತನಾಗಿದ್ದಾನೆ. ಮುಂದೆ ಗುರುವು 9ರ ಮನೆಯಲ್ಲಿ ಒಳ್ಳೆಯ ಫಲ ನೀಡುತ್ತಾನೆ. ಸೂರ್ಯಾಷ್ಠಕವನ್ನು ಪಠಿಸಿ. ಅರುಣ ಪಾರಾಯಣ ಮಾಡಿಸಿ.
ಗ್ರಹಗಳು ಇನ್ನೇನು ಒಳ್ಳೆಯ ಸ್ಥಾನಗಳಿಗೆ ಬರುವ ಸಮಯ. ಹಿಂದೆ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಡು ಬಾಳನ್ನು ಬಂಗಾರವಾಗಿ ಮಾಡಿಕೊಳ್ಳಿ. ಕನ್ಯಾ ರಾಶಿಗೆ ಜನವರಿ 17ರಿಂದ ಶನಿಯು ಮುಂದೆ ಸಾಗಿ ಏಪ್ರಿಲ್ನಲ್ಲಿ ಗುರುವು ಅಷ್ಟಮಕ್ಕೆ ಜರುಗುತ್ತಾನೆ. ಗುರುದ್ರೋಹ ಮಾಡದೆ ಜೀವಿಸಿದರೆ ಸಾಕ್ಷಾತ್ ಈಶ್ವರನ ಕರುಣೆಯಿಂದ ಕಷ್ಟಗಳಿಂದ ಹೊರಬರುತ್ತೀರಿ. ಶನಿ ಬಿಡುವ ಕಾಲಕ್ಕೆ ವೇದ ಪಂಡಿತರು, ಮುತೆôದೆಯರನ್ನು ಕರೆದು ವಸ್ತ್ರಾದಿಗಳನ್ನು ಕೊಟ್ಟು ಆಶೀರ್ವಾದ ಪಡೆಯಿರಿ.
ಗ್ರಹಣಗಳು ಕಳೆದು ಆಗಲೇ ಒಂದು ತಿಂಗಳು ಉರುಳಿದೆ. ಅದರ ಫಲಾನುಫಲಗಳನ್ನು ಭಗವಂತನು ನಿಮಗೆ ಕೊಟ್ಟೇ ತೀರುತ್ತಾನೆ. ದೇವರ ಅಭಯಹಸ್ತ ಇರುವವರೆಗೂ ತೊಂದರೆಯಿಲ್ಲ. ಬಂದದ್ದನ್ನು ಇಟ್ಟುಕೊಂಡು ಪರರಿಗೂ ಕೊಡುವುದೇ ಧರ್ಮ. ಗ್ರಹಗಳ ಸ್ಥಾನಪಲ್ಲಟವನ್ನು ಯೋಚಿಸಬೇಡಿ. ಅಗೋಚರ ದೈವಶಕ್ತಿಯಿಂದ ಕಲ್ಪನೆಗೂ ಮೀರಿದ ಘಟನೆ ನಡೆದು ಸಂತೋಷ ನೀಡುತ್ತದೆ.
ಕಷ್ಟಪಟ್ಟು ದುಡ್ಡನ್ನು ಸಂಪಾದಿಸಿದಂತೆ ಅದರ ಮೇಲೆ ನಿಮ್ಮ ಹಕ್ಕು ಇದ್ದೇ ಇರುತ್ತದೆ. ರಾಶ್ಯಾಧಿಪತಿ ಸುಬ್ರಹ್ಮಣ್ಯನ ಅನುಗ್ರಹವಿರಲೇಬೇಕು. ಅದನ್ನು ಮರೆತರೆ ಗ್ರಹಗಳು ಎಷ್ಟೇ ಚೆನ್ನಾಗಿದ್ದರೂ ಫಲ ನೀಡುವುದು ನಿಧಾನವಾಗುತ್ತದೆ. ನಿಮಗೆ ಬರಬೇಕಾದ ಧನ ಕೈ ಸೇರಿ ಋಣಬಾಧೆ ಹರಿದು ರಕ್ಷಿಸಲು ಪಂಚಮಗುರು ಸಾಕ್ಷಿಯಾಗಿದ್ದಾನೆ.
ಪುರುಷಂ ಪೌರುಷಃ. ಪುರುಷರು ಪೌರುಷದಿಂದ ಬದುಕಬೇಕು. ಧರ್ಮ ದೈವತ್ವ ಸಂಪಾದಿಸಿಕೊಂಡು ಬಾಳಿದರೆ ಜೀವನ ಸುಗಮ. ನಿಮಗೆ ಬೇಕಾದ್ದನ್ನು ಕೊಡುವವನು ರಾಶ್ಯಾಧಿಪತಿ ಗುರು. ಪ್ರತಿನಿತ್ಯ ಗುರುಚರಿತ್ರೆ ಪಾರಾಯಣ ಮಾಡಿದರೆ ಬೇಕಾದ್ದು ಸಿಕ್ಕಿ ಸುಖವಾಗಿರಬಹುದು. ರಾಜಯೋಗ ಬೇಕಾದಲ್ಲಿ ಅಧ್ಯಾತ್ಮ ರಾಮಾಯಣದ ಪಟ್ಟಾಭಿಷೇಕ ಸರ್ಗವನ್ನು ಪಾರಾಯಣ ಮಾಡಿ.
ಜನ್ಮ ಶನಿ ಬಿಡುವ ಕಾಲ. ಶನಿಯು ದ್ವಿತೀಯಕ್ಕೆ ಬಂದು ನಿಮ್ಮ ಜೀವನವನ್ನು ಸುಧಾರಿಸುತ್ತಾನೆ. ಶನಿ ಬಿಡುವ ಈ ಕಾಲದಲ್ಲಿ ಈಶ್ವರನನ್ನು ಧ್ಯಾನಿಸಿ. ಅವನ ಶಿರದ ಮೇಲೆ ಜಲಾಭಿಷೇಕ ಮಾಡಿಸಿ. ನಿಮ್ಮ ಅಭ್ಯುದಯ ಕಾಲ ಪ್ರಾರಂಭವಾಗುತ್ತದೆ. ಶನಿ ಅಷ್ಟೋತ್ತರ ಪಠಿಸಿ. ದಶರಥ ವಿರಚಿತ ಶನಿಸ್ತೋತ್ರ ಪಾರಾಯಣ ಮಾಡಿ.
ಗಾಣಗಾಪುರವನ್ನು ದಾಟಿದರೆ ಕುಮಸಿ ಎಂಬ ಗ್ರಾಮವಿದೆ. ಇಲ್ಲಿ ತ್ರಿವಿಕ್ರಮ ಭಾರತಿ ಮಹಾಮುನಿಗಳಿಗೆ ಗುರುಗಳೇ ವಿಶ್ವರೂಪ ದರ್ಶನ ಕೊಟ್ಟು ಅವರನ್ನು ಉದ್ಧರಿಸಿ ಶಾಶ್ವತ ಪದವಿ ಕೊಟ್ಟು ಅನುಗ್ರಹಿಸಿದ್ದಾರೆ. ಅಲ್ಲಿಗೆ ಯಾರೇ ಬಂದರೂ ಅವರ ದುಃಖಗಳು ಕಳೆಯುತ್ತದೆ. ಗುರುಗಳು, ಸಾಧು ಸಂತರನ್ನು ಪೂಜಿಸಿ ಬೇಕಾದ ವರ ಪಡೆಯಬಹುದು.
ಪಾಕಶಾಸ್ತ್ರದಲ್ಲಿ ಎಷ್ಟೇ ಪರಿಣತಿ ಇದ್ದರೂ ಉಪ್ಪು-ಹುಣಸೆಗೆ ಪರ್ಯಾಯವಾದ ಪದಾರ್ಥಗಳಿಲ್ಲ. ಅದರಂತೆ ಧರ್ಮ-ದೇವರು ಒಂದೇ ಹಾದಿಯ ಎರಡು ರೇಖೆಗಳು. ಅದರಲ್ಲಿ ಸಾಗಿ. ಲಗ್ನದಲ್ಲಿ ಗುರು ಇರುವುದರಿಂದ ಅಲ್ಪ ದುಃಖ ಬಂದರೂ ದೇವರನ್ನು ಧ್ಯಾನಿಸಿ. ಬೇಕಾದ್ದೆಲ್ಲವನ್ನು ಕೊಟ್ಟು ಹರಸಿ ಹರ್ಷದಿಂದ ಇರಿಸುತ್ತಾನೆ. ಸಕಲ ಅಭೀಷ್ಟಗಳನ್ನೂ ಕೊಡುವ ಮಹಾಸರಸ್ವತಿಯನ್ನು ಆರಾಧಿಸಿ.