

ಉತ್ತರಕನ್ನಡ: ರಾಜ್ಯದಲ್ಲಿ ಆಗಾಗ ಜಿಲ್ಲೆ-ತಾಲೂಕುಗಳು ಇಬ್ಭಾಗವಾಗಿ ಹೊಸ ಜಿಲ್ಲೆ-ತಾಲೂಕು ಸೃಷ್ಟಿಯಾಗುತ್ತಲೇ ಇರುತ್ತದೆ. ಇನ್ನು ಕೆಲವು ಜಿಲ್ಲೆ-ತಾಲೂಕುಗಳ ರಚನೆ ಸಂಬಂಧ ಬೇಡಿಕೆಗಳು ಕೇಳಿ ಬರುತ್ತಿರುತ್ತವೆ. ಇಂಥದ್ದೇ ಒಂದು ವಿಚಾರ ಇದೀಗ ಮುನ್ನೆಲೆಗೆ ಬಂದಿದ್ದು, ಶಿರಸಿ ಜಿಲ್ಲೆಯಾಗುತ್ತಾ ಎಂಬ ಚರ್ಚೆ ಉಂಟಾಗಿದೆ.
ಈಗ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಶಿವರಾಮ ಹೆಬ್ಬಾರ್ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಅಂಕೋಲದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಶಿರಸಿ ಜಿಲ್ಲೆ ರಚನೆ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದಾಗ್ಯೂ ಅವರು ಈ ವಿಷಯದಲ್ಲಿ ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತಪಡಿಸದ್ದರಿಂದ ಅಡ್ಡಗೋಡೆ ಮೇಲೆ ದೀಪವಿಟ್ಟಂತಾಗಿದೆ.
ಉತ್ತರಕನ್ನಡ ಜಿಲ್ಲೆಯನ್ನು ಇಬ್ಭಾಗ ಮಾಡುವ ಕುರಿತು ನಾನು ಯಾವತ್ತೂ ಪ್ರಸ್ತಾಪವನ್ನು ಮಾಡಿಲ್ಲ, ಇವತ್ತು ನಾನು ಹೇಳುವುದಿಲ್ಲ. ಈ ಬಗ್ಗೆ ಮಾತನಾಡಲಿಕ್ಕೆ ನಾನು ಉಸ್ತುವಾರಿ ಸಚಿವನಲ್ಲ, ಜವಾಬ್ದಾರಿಯೂ ನನ್ನದಲ್ಲ. ಜಿಲ್ಲೆಯ ಶಾಸಕನಾಗಿ ನಾನು ಮಾತನಾಡುವುದು ಅವಶ್ಯಕತೆ ಇದೆ. ಜಿಲ್ಲೆ ಇಬ್ಭಾಗದ ಕುರಿತು ಬುದ್ಧಿಜೀವಿಗಳು ಹಾಗೂ ನಮ್ಮೆಲ್ಲ ಶಾಸಕರ ಜೊತೆ ಚರ್ಚೆ ಮಾಡುತ್ತೇನೆ. ಪ್ರಜಾಪ್ರಭುತ್ವದಲ್ಲಿ ಎಲ್ಲರ ಅಭಿಮತ ಮುಖ್ಯ. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕು, ಆದರೆ ಎಲ್ಲರ ಅಭಿಪ್ರಾಯದೊಂದಿಗೆ ಆಗಬೇಕು ಎಂದು ಅವರು ತಿಳಿಸಿದ್ದಾರೆ.