ಈ ರಾಶಿಯವರಿಗೆ ಗುರು ಪಂಚಮಕ್ಕೆ ಬಂದಿರುವುದು ಒಳ್ಳೆಯ ಕಾಲ: ವಾರಭವಿಷ್ಯ

Vaara-Bhavishya
Published on
ಮೇಷ

ಅಧಿಕ ಶ್ರಾವಣವು 16ರಂದು ಮುಗಿದು ನಿಜ ಶ್ರಾವಣ ಆರಂಭವಾಗುವ ಮುನ್ನ ಸಕಲ ದೇವತೆಗಳನ್ನು ಆರಾಧಿಸುವ ಕಾಲವೂ ಹೌದು. ದಾನ-ಧರ್ಮವನ್ನು ಮಾಡಿ ಪುಣ್ಯ ಸಂಪಾದನೆ ಮಾಡಬಹುದು. ಮೇಷ- ಮೀನ ದ್ವಾದಶ ರಾಶಿಯ ಎಲ್ಲರೂ ತಮ್ಮ ಕೈಲಿಂದ ಧಾನ್ಯ-ವಸ್ತ್ರದಾನ ಕೊಟ್ಟು ಪುಣ್ಯ ಸಂಪಾದನೆ ಮಾಡುವ ಕಾಲವು ಒದಗಿ ಬಂದಿದೆ. ಗುರು-ರಾಹು ಒಟ್ಟಿಗೆ ಇರುವುದರಿಂದ ಗುರು ಪ್ರೀತ್ಯರ್ಥವಾಗಿ ಕಡಲೆಯನ್ನು ತುಪ್ಪವನ್ನು ದಾನ ಮಾಡಿ. ಸಂತೋಷವು ಒದಗಿ ಬರುತ್ತದೆ. ಜ್ಞಾನಮೂರ್ತಿಯಾದ ಷಣ್ಮುಖನನ್ನು ಪೂಜಿಸಿ.

ವೃಷಭ

ವೃಷಭ ರಾಶಿಯವರಿಗೆ ಶುಕ್ರನು ವಕ್ರನಾಗಿ ಆಶ್ಲೇಷ ನಕ್ಷತ್ರದಲ್ಲಿ ಸಂಚರಿಸುವ ಕಾಲದಲ್ಲಿ ವೃಷಭಾಧಿಪತಿ ಶುಕ್ರನನ್ನು ನೀಳಾದೇವಿಯ ಹೆಸರಿನ ನಾಮೋಚ್ಛಾರಣೆ ಮಾಡಿ ಆಕೆಯನ್ನು ಪೂಜಿಸಿ. ಅಥವಾ ಮಂಗಳೂರಿನ ಸಮೀಪವಿರುವ ಲಲಿತಾಪರಮೇಶ್ವರಿಯನ್ನು ಪೂಜಿಸಿದರೆ ಕೆಲಸದಲ್ಲಿ ಜಯ, ಧನವೂ ಲಭಿಸುತ್ತದೆ.

ಮಿಥುನ

ಮಿಥುನ ರಾಶಿಯವರು ಮಿತಿ ಮೀರಿ ಮಾತನಾಡದೆ ಮಾತನ್ನು-ಊಟವನ್ನು ಹತೋಟಿಯಲ್ಲಿ ಇಟ್ಟುಕೊಂಡರೆ 9ರ ಶನಿ ರಾಹುಗ್ರಸ್ತನಾದ 11ರ ಗುರುವು ಬೇಕಾದ ಫಲ ಕೊಟ್ಟು, ಮುನ್ನಡೆಸುತ್ತಾನೆ. ಹೆಜ್ಜೆಯನ್ನು ಇಡುವಾಗ ಜಾರಿದರೆ ಅಪಾಯ ಎದುರಾಗುತ್ತದೆ. ನಿಮ್ಮ ಮಾರ್ಗವನ್ನು ಬದಲಾಯಿಸಿಕೊಂಡರೆ ನಿಮಗೆ ಕೆಲವು ತೊಂದರೆ ಉಂಟಾದೀತು. ನಿಧಾನವಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಧನ್ವಂತರಿ ಧ್ಯಾನ ಮಾಡಿ ಆರೋಗ್ಯ ಪಡೆಯಿರಿ.

ಕಟಕ

ಕಟಕ ರಾಶಿಯು ಗುರುವಿಗೆ ಉಚ್ಚ ರಾಶಿಯಾದ್ದರಿಂದ, ಚಂದ್ರಾಂಶವುಳ್ಳ ಪಾರ್ವತಿಯನ್ನು ಹಾಗೂ ದುರ್ಗೆಯನ್ನು ಏಕಕಾಲದಲ್ಲಿ ಪೂಜಿಸಿ. ಸತ್ಪಲ ಬಂದು ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ. ಅಷ್ಟಮ ಶನಿಗೆ ಈಶ್ವರನನ್ನು ಪೂಜಿಸಿದರೆ ಸಾಕು. ಆಯಸ್ಸು, ಆರೋಗ್ಯ, ಸಂಪತ್ತು ದೊರಕುತ್ತದೆ.

ಸಿಂಹ

ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಸೂರ್ಯನು ದ್ವಾದಶದಲ್ಲಿ ಇದ್ದು, ಶರೀರದಲ್ಲಿ ಕೆಲವೊಂದು ಬದಲಾವಣೆ ಉಂಟಾಗಿ ಆಯಾಸ-ಆಲಸ್ಯ ಉಂಟಾದರೂ ಹೆದರುವ ಅಗತ್ಯವಿಲ್ಲ. ಸೂರ್ಯನೇ ರಾಶ್ಯಾಧಿಪತಿ ಆಗಿರುವುದರಿಂದ ಅವನ ಪ್ರಾರ್ಥನೆ ಒಂದೇಸಾಕು. ಎಲ್ಲವನ್ನು ಗೆದ್ದು, ವಿಜಯದ ಹಾದಿ ಯಲ್ಲಿ ಸಾಗಿ 9ರ ಗುರು ರಕ್ಷಣೆಯನ್ನು ಕೆಲಸ-ಕಾರ್ಯದಲ್ಲಿ ಜಯವನ್ನು ತರುತ್ತಾನೆ. ಶ್ರೇಯಸ್ಸಿಗಾಗಿ ಸುಬ್ರಹ್ಮಣ್ಯ ದೇವರನ್ನು ಆರಾಧಿಸಿ.

ಕನ್ಯಾ

ಕನ್ಯಾಕುಮಾರಿ ದೇವಿಯು ಅನುಗ್ರಹಿಸುವ ಕಾಲವಿದು. ದೇವಿ ಕಟಾಕ್ಷದ ಮುಂದೆ ಯಾವ ಗ್ರಹಗಳ ಆರಾಧನೆಯೂ ಸರಿಸಾಟಿಯಲ್ಲ. ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಿರಿ. ಕೈಲಾದಷ್ಟು ಹಣ್ಣು-ವಸ್ತ್ರವನ್ನು 8 ವಯಸ್ಸಿನ ಮಕ್ಕಳಿಗೆ ಕೊಟ್ಟು ಪುಣ್ಯ ವೃದ್ಧಿಸಿಕೊಳ್ಳಿ. ಆರರ ಶನಿ ಇರುವಾಗ ಸಾಲ ತೀರಿಸಿಕೊಳ್ಳುವುದರ ಬಗ್ಗೆ ಗಮನ ಕೊಟ್ಟು ಸುಖವನ್ನು ಪಡೆದುಕೊಳ್ಳಿ.

ತುಲಾ

ತುಲಾ ರಾಶಿಗೆ ಸಪ್ತಮ ಗುರುವೇ ಭಾಗ್ಯದಲ್ಲಿ ಇರುವಾಗ ಗುರುವಿಗೆ ಸರಿಸಾಟಿಯಾದ ಗ್ರಹಗಳೇ ಇಲ್ಲ. ಏಕಮಾತ್ರ ಗುರು ಸ್ವರೂಪವನ್ನು ನಂಬಿಕೆ ಇಟ್ಟು ಪೂಜಿಸಿದರೆ, ಸಕಲ ಅಭೀಷ್ಟಗಳನ್ನು ನೆರವೇರಿಸುತ್ತಾನೆ. ಗುರು ದತ್ತಾತ್ರೇಯನನ್ನು ಆರಾಧಿಸಿ. 14ನೇ ಅಧ್ಯಾಯ ಓದಿರಿ. ಮನೋಇಚ್ಛೆಯನ್ನು ಪೂರೈಸಿಕೊಳ್ಳಿ.

ವೃಶ್ಚಿಕ

ವೃಶ್ಚಿಕ ರಾಶಿಗೆ ಬೇಕಾದದ್ದು, ಆರು ಕ್ಷೇತ್ರದ ಅಧಿಪತಿ ಸುಬ್ರಹ್ಮಣ್ಯ ದರ್ಶನ-ಪೂಜೆ. ಸಕಲ ಮಂಗಳವನ್ನು, ಶ್ರೇಯಸ್ಸನ್ನು, ಮನಸ್ಸಿಗೆ ಕಾಂತಿಯನ್ನು ಬೇಡಿದ ವರಕೊಡುವ ಕಾಲ. ಗ್ರಹಗಳ ಪಲ್ಲಟ ಏನೇ ಇದ್ದರೂ ನವಚೈತನ್ಯ ತುಂಬಿ ಬೇಕಾದ್ದನ್ನು ಕೊಡುವ ರಾಶ್ಯಾಧಿಪತಿಯು ನಿಮ್ಮನ್ನು ರಕ್ಷಿಸುವುದರಲ್ಲಿ ಸಂದೇಹವಿಲ್ಲ. ಗಣೇಶನನ್ನು ಪೂಜಿಸಿ. ವಿಘ್​ನಗಳು ಬಾರದಂತೆ ಕಾಪಾಡುತ್ತಾನೆ. ಶ್ರೇಯೋವಂತರಾಗಿ ಬಾಳನ್ನು ನಡೆಸುವ ಸಮಯವು ಒದಗಿಬಂದಿದೆ.

ಧನು

ಸಮುದ್ರಕ್ಕೆ ಕಾಲಿಡಲು ಸಮುದ್ರ ರಾಜನ ಅಪ್ಪಣೆ ಬೇಕು. ಮನುಷ್ಯನ ಯೋಗಾನುಯೋಗಗಳು ನಡೆಯಲು ಮಹಾವಿಷ್ಣುವಿನ ಕೃಪಾದೃಷ್ಟಿ ಬೇಕು. ಸಕಾಲದಲ್ಲಿ ಶನಿ ಮಾತ್ರವೇ ಹಿಂದಕ್ಕೆ ಬಂದು, ಗುರು ಪಂಚಮಕ್ಕೆ ಬಂದಿರುವುದು ಒಳ್ಳೆಯ ಕಾಲ. ನಿಮಗೆ ಕಷ್ಟಗಳು ಕಾಣದೆ ಲವಲವಿಕೆಯಿಂದ ಇದ್ದು ಕಾರ್ಯ ಮಾಡಲು ದೈವಾನು ಗ್ರಹವಿದೆ. ಪವಮಾನಸೂಕ್ತ ಪಾರಾಯಣ ಮಾಡಿದರೆ ವಿಶೇಷ ಅನುಗ್ರಹ ಉಂಟಾಗಿ ಪವಮಾನ ಸ್ವರೂಪಿ ವಿಷ್ಣುವೇ ನಿಮ್ಮನ್ನು ಅನುಗ್ರಹಿಸುತ್ತಾನೆ.

ಮಕರ

ವಕ್ರಗತಿಯಲ್ಲಿ ಶನಿಯು ಮಕರ ರಾಶಿಗೆ ಸ್ವಕ್ಷೇತ್ರದಲ್ಲಿ ಇದ್ದರೂ ಯಾವ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ ಎಂಬಂತೆ ಕಲಿಯುಗದ ದೇವರಾದ ಪಾಪಗಳನ್ನು ಪರಿಹರಿಸುವ ವೆಂಕಟೇಶ್ವರನನ್ನು ಪೂಜಿಸಿ, ನಾರಾಯಣ ಮಂತ್ರ ಜಪಿಸಿ. ನಿಮ್ಮನ್ನು ಕಷ್ಟ-ಕೋಟಲೆಗಳಿಂದ ಬಿಡಿಸಿ ರಕ್ಷಿಸುತ್ತಾನೆ. ವಿಷ್ಣುವಿನ ಪ್ರೀತ್ಯಾರ್ಥವಾಗಿ ಶುದ್ಧವಾದ ಪಾತ್ರೆಯಲ್ಲಿ ಕ್ಷೀರವನ್ನು ಶರ್ಕರ ಸಹಿತ ನೈವೇದ್ಯ ಮಾಡಿ. ಇದು ನಿಮಗೆ ಅಮೃತವಾಗಿ ದೈವ ನಿಮ್ಮನ್ನು ರಕ್ಷಿಸುತ್ತದೆ.

ಕುಂಭ

12ರಲ್ಲಿ ಶನಿ ಇದ್ದಾನಾದರೂ ಹೆದರುವುದು ಬೇಡ. 3ರಲ್ಲಿ ರಾಹು-ಗುರು ಇದ್ದರೂ ಗುರು ಒಬ್ಬನೇ ಎಲ್ಲವನ್ನೂ ಸರಿಪಡಿಸಿ ಬೇರೆ ಗ್ರಹಗಳು ತನ್ನಿಂದ ತಾನೇ ದಾರಿಗೆ ತಂದು ಸಂಕೋಲೆ ಬಿಡಿಸಿ ನಿಮ್ಮ ಅವಶ್ಯಕತೆಗಳನ್ನು ನಡೆಸಿಕೊಳ್ಳುತ್ತಾನೆ. 18ನೇ ಅಧ್ಯಾಯ ಗುರುಚರಿತ್ರೆಯನ್ನು ಓದಿರಿ. ನಿಮ್ಮ ದುಃಖ-ದಾರಿದ್ರ್ಯ ಹೊಡೆದೋಡಿಸುತ್ತಾನೆ. ಬೇಕಾದಷ್ಟು ಧನವನ್ನು ತಂದುಕೊಡುತ್ತಾನೆ. ಕುಬೇರ ಅಷ್ಟೋತ್ತರ ಪಾರಾಯಣ ಮಾಡಿರಿ.

ಮೀನ

ಮಕ್ಕಳಲ್ಲಿ ಯಾವ ಆಸೆಯೂ ಇಲ್ಲ. ಯಾವ ಕೆಟ್ಟ ನುಡಿಯೂ ಇರುವುದಿಲ್ಲ. ಶನಿಯ ಏಳೂವರೆ ಸಂಚಾರ ದಲ್ಲಿ ನೀವು ಮುಗ್ಧ ಮಕ್ಕಳಂತೆ ಇದ್ದು, ನಿಮ್ಮ ದೇವರನ್ನು, ಗುರುಗಳನ್ನು ನಂಬಿ. ದೃಢವಾದ ಗುರುಭಕ್ತಿ ಇದ್ದರೆ 2ನೇ ಮನೆ ಗುರುವೇ ಸಾಕು ನಿಮ್ಮನ್ನು ರಕ್ಷಿಸಲು, ಸಂತೋಷದಿಂದ ಇಡಲು. ಗುರುಚರಿತ್ರತೆಯ ದತ್ತಾತ್ರೇಯ ಅವತಾರ ಕಥನ ಪಾರಾಯಣ ಮಾಡಿ. ದೇವರೇ ನಿಮ್ಮ ಕೈಹಿಡಿದು ನಡೆಸುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net