ವಾರ ಭವಿಷ್ಯ: ಈ ರಾಶಿಯವರಿಗಿಂದು ದೇವತಾ ಧ್ಯಾನವೇ ಔಷಧ

weekly haroscope
Published on

ಮೇಷ: ರಾಶಿಯ ಅಧಿಪತಿ ಕುಜನು ಮಿಥುನದಲ್ಲಿದ್ದಾನೆ. ನಂಬಿದವರೇ ಕೆಲಸಕ್ಕೆ ಅಡ್ಡಿಪಡಿಸಿ ಆತಂಕ ಸೃಷ್ಟಿಸುವ ಕಾಲ. ಷಣ್ಮುಖನನ್ನು ಪೂಜಿಸಿದರೆ ಶ್ರೇಯಸ್ಸನ್ನು ಕಾಣಬಹುದು. ಗುರು, ದ್ವಿತೀಯದಲ್ಲಿದ್ದು, ನಿಮಗೆ ಗುರುಬಲ ಇರುವುದರಿಂದ ಕುಂಭಕೋಣಂನಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ದೇವರನ್ನು ಪೂಜಿಸಿ. ಅಂಗಾರಕನು ಬುಧನ ಮನೆಯಲ್ಲಿರುವುದು ಶ್ರೇಯಸ್ಕರವಲ್ಲ. ದೇವತಾ ಧ್ಯಾನವೇ ನಿಮಗೆ ಔಷಧ.

ವೃಷಭ: ರಾಶಿಯ ಅಧಿಪತಿ ಶುಕ್ರನು ಮಹಾಲಕ್ಷ್ಮಿ, ಮಹಾಕಾಳಿ, ಮಹಾ ಸರಸ್ವತಿ, ದುರ್ಗೆಯ ಯಾವುದೇ ಸ್ವರೂಪವನ್ನು ಪೂಜಿಸಿದರೂ ಸಂತೃಪ್ತನಾಗಿ ಬೇಕಾದ ವರವನ್ನು ಕೊಡುತ್ತಾನೆ. ನವರಾತ್ರಿಯಲ್ಲಿ ಮೂರು ರಾತ್ರಿಗಳು ಕಳೆದು 10 ದಿನಗಳ ಕಾಳರಾತ್ರಿ ಆರಂಭವಾಗಿ ವಿಜಯದಶಮಿ ಉತ್ಸವದೊಂದಿಗೆ ಸಂಪನ್ನಗೊಳ್ಳುತ್ತದೆ. ನಿತ್ಯ ದುರ್ಗಾ ಸಹಸ್ರನಾಮ ಪಾರಾಯಣ ಮಾಡಿ. ಖಡ್ಗಮಾಲಾ ಸ್ತೋತ್ರವನ್ನು ಪಠಿಸಿ.

ಮಿಥುನ: ರಾಶಿಯ ಅಧಿಪತಿ ಬುಧನು, ಶುಕ್ರನ ಮನೆಗೆ 10ನೆ ತಾರೀಕಿನಂದು ಬರುತ್ತಾನೆ. ಬುಧ -ಶುಕ್ರರ ಸಂಯೋಗ ವಿಶೇಷವೇ ಆದರೂ, ಕುಜನಿಂದಾಗಿ ಕಾರ್ಯಗಳು ವಿಳಂಬವಾಗಿ, ಶ್ರಮವಾಗಿ ಕಾಣುತ್ತದೆ. ಆದ್ದರಿಂದ ಈ ಸಮಯದಲ್ಲಿ ಶ್ರೀಕೃಷ್ಣನನ್ನು ಪೂಜಿಸಿ. ಕೃಷ್ಣಾಷ್ಟೋತ್ತರ ಪಠಿಸಿ, ಒಳ್ಳೆಯ ಮಾರ್ಗವನ್ನು ಪಡೆಯಬಹುದು.

ಕಟಕ: ರಾಶಿಯಲ್ಲಿ ಯಾವುದೇ ಗ್ರಹಗಳಿಲ್ಲ. ಸ್ವಚ್ಛ ಮನಸ್ಸಿನಿಂದ ದೇವರನ್ನು ಪ್ರಾರ್ಥಿಸಿ. 9ರಲ್ಲಿ ಶನಿ ಸ್ವಕ್ಷೇತ್ರದಲ್ಲಿ, ರಾಹು ದಶಮದಲ್ಲಿ, ಏಕಾದಶದಲ್ಲಿ ಗುರುವಿರುವುದು ಜನ್ಮಜನ್ಮಾಂತರದ ಭಾಗ್ಯ. ಉತ್ತಮ ಸಮಯ. ಪಾರ್ವತಿ ಸಹಿತ ಸಾಂಬ ಸದಾಶಿವನನ್ನು ಪೂಜಿಸಿ.

ಸಿಂಹ: ದಶಮದಲ್ಲಿ ಗುರುವಿದ್ದು ನಿಮ್ಮನ್ನು ಸಮತೋಲನವಾಗಿ ಇಟ್ಟಿದ್ದಾನೆ. ಗುರು ಒಬ್ಬನೇ ಕಾಪಾಡುವುದರಲ್ಲಿ ಸಂದೇಹವೇ ಬೇಡ. ಸಪ್ತಮದಲ್ಲಿ ಶನಿ ಇರುವುದರಿಂದ ಮನಸ್ಸಿಗೆ ಅಶಾಂತಿ, ಏಕಾಏಕಿ ಖರ್ಚು ಜಾಸ್ತಿಯಾಗಿ ನಿಮ್ಮನ್ನು ಪರೀಕ್ಷಿಸುವ ಕಾಲ. ದೇವರನ್ನು ನಂಬಿ ಕೆಟ್ಟವರಿಲ್ಲ. ಸೂರ್ಯನಾರಾಯಣನ್ನು ಪ್ರಾರ್ಥಿಸಿ, ಆದಿತ್ಯ ಹೃದಯ ಪಾರಾಯಣ ಮಾಡಿ.

ಕನ್ಯಾ: ತಮ್ಮನ್ನು ತಾವು ಸುಖದ ಅಂಚಿಗೆ ಕೊಂಡೊಯ್ಯುವ ಶಕ್ತಿ, ಯುಕ್ತಿ, ದೇವರಲ್ಲಿ ಭಕ್ತಿ ಇರುತ್ತದೆ. 6 ರ ಶನಿ, 9ರ ಗುರು ಕೊಡುವುದನ್ನು ಕೊಟ್ಟು ಬಿಡುವುದನ್ನೆಲ್ಲ ಬಿಟ್ಟು ನಿಮ್ಮನ್ನು ರಕ್ಷಿಸುತ್ತಿದ್ದಾನೆ. ಕುಲದೇವರನ್ನು ಪ್ರಾರ್ಥಿಸಿ, ಪೂಜಿಸಿ.

ತುಲಾ: ಪಾರ್ವತಿಯು ಶಿವನನ್ನು ಎಷ್ಟು ಪ್ರೀತಿಸುತಿದ್ದಳೋ ಅಷ್ಟೇ ಕಠೋರವಾಗಿದ್ದಳು. ಎಲ್ಲಾ ಶಕ್ತಿಯನ್ನು ಯುಕ್ತಿಯನ್ನು ಅವಳು ಶಿವನಿಂದ ಪಡೆದು ಲೋಕ ಕಲ್ಯಾಣಕ್ಕಾಗಿ ಮಹಿಷಿ, ಮೂಕಾಂಬಿಕಾ, ಚಾಮುಂಡಿ, ರಕ್ತಾಕ್ಷಿ, ಬನಶಂಕರಿ, ನೀಲಾಂಬಿಕೆ ಆಗಿ ಕಾಲಕಾಲಕ್ಕೆ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುತ್ತಿದ್ದಾಳೆ. ಶುದ್ಧ ಮನಸ್ಸಿನಿಂದ ತ್ರಿಕಾಲದಲ್ಲಿ ಯಾವಾಗಲಾದರೂ ಲಲಿತಾ ಸಹಸ್ರನಾಮವನ್ನು ಪಾರಾಯಣ ಮಾಡಿ. ನಿಮಗೆ ನೀವೇ ಸನ್ಮಂಗಳರಾಗಿ ಬದುಕಬಹುದು.

ವೃಶ್ಚಿಕ: ಅನಂತವಾದ ಗುರು ಭಕ್ತಿ ಇದ್ದರೆ ಯಾವುದೂ ಕಷ್ಟವಾಗುವುದಿಲ್ಲ. ಗುರು ಒಬ್ಬನು ಚೆನ್ನಾಗಿದ್ದರೆ ಸಾವಿರ ಮೆಟ್ಟಿಲನ್ನು ಕ್ಷೇಮವಾಗಿ ಹತ್ತಿ ಬರಬಹುದು. ನಿಮ್ಮ ಚಾಣಾಕ್ಷತೆ, ದೈವಬಲ ಮತ್ತು ಜಾಣ್ಮೆಯಿಂದ ದೇವರು ಕೊಟ್ಟ ಧನವನ್ನು ರಕ್ಷಿಸಿಕೊಂಡು ಆಪತ್ ಕಾಲಕ್ಕಾಗಿ ಉಳಿಸಿಕೊಳ್ಳಿ. ಬೆಳೆದು ಬೇಕಾದವರನ್ನು ಬೆಳೆಸುವ ಕಾಲವಿದು. ಪಳನಿಯ ಸುಬ್ರಹ್ಮಣ್ಯನನ್ನು ಪೂಜಿಸಿ ಸಕಲವನ್ನು ಪಡೆದುಕೊಳ್ಳಿ.

ಧನಸ್ಸು: ಬಾಣಕ್ಕೆ ಗುರಿ ಇದ್ದಂತೆ ಮನುಷ್ಯನಿಗೆ ಕಷ್ಟಕಾರ್ಪಣ್ಯವನ್ನು ದಾಟುವ ಗುರಿ ಇರಬೇಕು. ಏನೇ ಬಂದರೂ ಯಾರಿಗೂ ಸಲಹೆ, ಬುದ್ದಿವಾದ ಹೇಳದೆ ನಿಮ್ಮ ಯೋಗಕ್ಷೇಮವನ್ನು ಕಾಪಾಡಿಕೊಳ್ಳಿ. ಬ್ಯಾಟರಿ ಇದ್ದರೆ ಕೆಲವೇ ಸಮಯ ದೀಪವು ಬೆಳಕು ಕೊಡುತ್ತದೆ. ಆದರೆ ಗುರುವನ್ನು ನಂಬಿ, ಗುರುವಿನ ರಕ್ಷಣೆಯಲ್ಲಿ ನಡೆಯುವವನಿಗೆ ಸದಾಕಾಲವೂ ಶ್ರೇಯಸ್ಕರವಾಗುತ್ತದೆ.

ಮಕರ: ಸ್ಥಾನಪಲ್ಲಟ ಆಗುವ ಶನಿಯು ಕುಂಭ ರಾಶಿಯಲ್ಲಿ ಇನ್ನು ಕೆಲ ಕಾಲ ಮಾತ್ರವೇ ಇದ್ದು, ಪಟ್ಟ ಕಷ್ಟಕ್ಕೆ ಸಮನಾಗಿ ಸುಖವನ್ನು ಕೊಡುವ ಕಾಲವನ್ನು ನಿರೀಕ್ಷಿಸಬಹುದು. ಮಾರ್ಚ್ 2025 ರವರೆಗೆ ತಾಳ್ಮೆಯಿಂದ ಇರಬೇಕಾಗುತ್ತದೆ. ನೀವು ಶಾಂತಿಯಿಂದ ಇದ್ದರೆ, ಶಾಂತಿಕಾ ಪರಮೇಶ್ವರಿಯೇ ನಿಮ್ಮ ಕೈ ಹಿಡಿದು ನಡೆಸುವಳು. ಸಾಧ್ಯವಾದರೆ ಶಾಂತಿಕಾಪರಮೇಶ್ವರಿಯನ್ನು ದರ್ಶಿಸಿ ಕೈಲಾದ ಸೇವೆಯನ್ನು ಮಾಡಿಸಿ. ಮನೋ ಇಚ್ಛೆ ಪೂರ್ಣಗೊಳ್ಳುತ್ತದೆ.

ಕುಂಭ: ಶನಿಯು ಜನ್ಮದಿಂದ ದ್ವಿತೀಯಕ್ಕೆ ಮಾ. 2025 ರಂದು ಬಂದು ನಿಮ್ಮ ಸುಖವು ವ್ಯಯ ಆಗದಂತೆ ನೋಡಿಕೊಳ್ಳುತ್ತಾನೆ. ಕುಲದೇವರ ಸಹಿತ ನವಗ್ರಹವನ್ನು, ಇಷ್ಟ ದೇವರನ್ನು ಪೂಜಿಸಿ. ಇಷ್ಟ ಪಟ್ಟ ಕೆಲಸ ಆಗದಿದ್ದರೆ, ಯಾವುದೋ ಕಾರಣದಿಂದ ದೇವರೇ ಅದನ್ನು ತಪ್ಪಿಸಿದ್ದಾನೆಂದು ಅರಿತು ಮುಂದೆ ಸಾಗಿರಿ. ಶುಭವಾಗಲಿ.

ಮೀನ: ಕಷ್ಟ -ಸುಖ, ದುಃಖ- ದಾರಿದ್ರ್ಯ, ಜಯ -ಅಪಜಯ ಎಲ್ಲವೂ ಪರ್ಯಾಯ ಶಬ್ದಗಳು. ಮನುಷ್ಯನು ಇದರ ನಡುವೆ ಬೆಳೆಯಲು ದೇವರ ಸಹಾಯ ಬೇಡಲೇಬೇಕು. ಶನಿಯ ಸಂಚಾರದ ಕಾಲವು ಇನ್ನೂ ಐದು ವರ್ಷಗಳು ಬಾಕಿ ಇದ್ದು, ತಾಳ್ಮೆ ಪರೀಕ್ಷಿಸುವ ಕಾಲ. ಆದರೆ ಗುರು ರಾಶಿಯಲ್ಲಿ ಜನಿಸಿದ ನೀವು ಗುರುವನ್ನು ನಂಬಿದರೆ ದಡ ಮುಟ್ಟಬಹುದು. ಗುರುದತ್ತಾತ್ರೇಯನ ಗುಣಗಾನ ಮಾಡಿ. ಗುರು ಚರಿತ್ರೆಯ 14ನೆ ಅಧ್ಯಾಯ ಪಾರಾಯಣ ಮಾಡಿ, ಕತ್ತಲಲ್ಲೂ ಬೆಳಕನ್ನು ಕಾಣುವಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net