

ಮೇಷ: ಕ್ರೋಧಿ ನಾಮ ಸಂವತ್ಸರದ ಶುಕ್ಲ ಪಕ್ಷವು ಅಂತ್ಯ ಭಾಗಕ್ಕೆ ಬಂದು, ಸಂವತ್ಸರವು ಕಳೆದು ನೂತನ ಸಂವತ್ಸರಕ್ಕೆ ನಾವೆಲ್ಲರೂ ಕಾಲಿಡುತ್ತೇವೆ. ಈ ವರ್ಷ ಶನಿ-ಗುರು-ರಾಹು-ಕೇತು-ಶುಕ್ರರು ತಮ್ಮ ಸ್ಥಾನಗಳನ್ನು ಬದಲಾಯಿಸುತ್ತಾರೆ. ರಾಷ್ಟ್ರದ ನಕ್ಷೆಯಲ್ಲಿ ಬದಲಾವಣೆಯಾಗಲಿದೆ. ಮನುಷ್ಯ ಮಾತ್ರರಾದ ನಾವು ನಮ್ಮ ರಾಶಿ ನಕ್ಷತ್ರಗಳು, ಗ್ರಹಗಳನ್ನು ಅರಿತುಕೊಂಡು ನಡೆದರೆ ಸಾರ್ಥಕವಾದ ಜೀವನವನ್ನು ಸುಖವಾಗಿಸಿಕೊಳ್ಳಬಹುದು. ಷಣ್ಮುಖನನ್ನು ಪ್ರಾರ್ಥಿಸಿ.
ವೃಷಭ: ಈ ರಾಶಿಯವರಿಗೆ ಲಗ್ನದಲ್ಲಿ ಗುರುವಿದ್ದು, ಏಕಾದಶದಲ್ಲಿ ಶುಕ್ರ-ರಾಹು ಜೊತೆಯಲ್ಲಿಯೇ ಇದ್ದಾರೆ. ಇನ್ನೇನು ಶನಿಯು ಗುರು ಮನೆಗೆ ಏಕಾದಶಕ್ಕೆ ಬರುತ್ತಾನೆ. 15 ದಿನಗಳು ಮಾತ್ರ ನೂತನ ಸಂವತ್ಸರಕ್ಕೆ ಬಾಕಿ ಇರುವುದರಿಂದ, ಧರ್ವರ್ಥ ಕಾಮ್ಯ ಮೋಕ್ಷ ಸಿದ್ಯರ್ಥಂ ಧರ್ಮ ಮಾಡಿ, ಅರ್ಥವನ್ನು ಗಳಿಸಿ, ಜೀವನವನ್ನು ಸರಿ ಮಾಡಿಕೊಳ್ಳಿ. ಆರೋಗ್ಯವನ್ನು ಕಾಪಾಡಿಕೊಳ್ಳಿ.
ಮಿಥುನ: ದ್ವಾದಶದಲ್ಲಿ ಗುರುವಿದ್ದು, ಎಲ್ಲರೂ ಶತ್ರುಗಳಾಗಿ ಕಾಣುವರು. ಮನುಷ್ಯನ ಗ್ರಹಚಾರ ಚೆನ್ನಾಗಿಲ್ಲದಿದ್ದಾಗ, ಎಲ್ಲರೂ ದುಷ್ಟರಂತೆಯೇ ಕಾಣುತ್ತಾರೆ. ಜನ್ಮಕ್ಕೆ ಗುರು ಬಂದು ಆತ್ಮಶೋಧನೆ, ಆತ್ಮಾವಲೋಕನ ಮಾಡಿಕೊಳ್ಳಿ. 9ರ ಶನಿಯು ದಶಮಕ್ಕೆ ಬರುತ್ತಾನೆ. ಎಲ್ಲ ವ್ಯವಹಾರದಲ್ಲೂ ಗಹನವಾದ ವಿಚಾರಗಳಲ್ಲೂ ಎಚ್ಚರವಾಗಿ ಮುಂದೆ ಸಾಗಿರಿ. ಎಲ್ಲ ಪಾಪಗಳ ಪರಿಹಾರಕ್ಕೆ ಗಾಯತ್ರಿ ಜಪ, ಸಾಧ್ಯವಾದಲ್ಲಿ ಸಹಸ್ರ ಗಾಯತ್ರಿ ಹೋಮವನ್ನು ಮಾಡುವುದು ಉತ್ತಮ.
ಕಟಕ: ಈ ರಾಶಿಯವರಿಗೆ ಶನಿಯು 9ನೇ ಮನೆಗೆ ಬರುತ್ತಾನೆ. ನಿಮಗೆ ಭಾಗ್ಯೋದಯವಾಗುವ ಸಮಯ. ಗುರುವು ದ್ವಾದಶಕ್ಕೆ ಬಂದರೂ ಶನಿ ಬಲವಿದ್ದು, ಮಹಾದೇವರೇ ನಿಮ್ಮನ್ನು ಕಾಪಾಡುತ್ತಾನೆ. ಬಲ, ಬುದ್ಧಿ, ಸುಖವಾದ ಬಾಳನ್ನು ಕಂಡುಕೊಳ್ಳಿ. ಶನಿಯು ಗುರುವಿನ ಮನೆಯಲ್ಲಿ ಇದ್ದಾನೆ. ಸ್ಥಿರವಾದ ಆರೋಗ್ಯ, ಆನಂದಕ್ಕೆ ಯಾವ ಚಿಂತೆಯೂ ಬೇಡ.
ಸಿಂಹ: ಸಪ್ತಮ ಶನಿಯು ಮಾ. 29ರಿಂದ ಮುಂದೆ ಜರುಗಿ, ಗುರುವು ದಶಮುಖದಲ್ಲೇ ಇದ್ದಾನೆ. ಅಷ್ಟಮ ಶನಿಯ ಕಾಲದಲ್ಲಿ ಈಶ್ವರನ ಪೂಜೆಯನ್ನು ಕಡ್ಡಾಯವಾಗಿ ಮಾಡಬೇಕು. ಈಶ್ವರನಿಗೆ ರುದ್ರಾಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆ ಮಾಡಿದರೆ, ಯಾವ ಗ್ರಹಗಳೂ ಏನೂ ಮಾಡಲಾರವು, ಶುಭವನ್ನು ಕೊಟ್ಟು, ಶುಭ್ರವಾದ ಮನಸ್ಸು ಕೊಡುತ್ತಾನೆ.
ಕನ್ಯಾ: ಮಾ. 29ರಿಂದ ಶನಿ ಪಲ್ಲಟವಾಗುತ್ತಾನೆ. ಶನಿ 6ನೇ ಮನೆಯಿಂದ ಸಪ್ತಮಕ್ಕೆ ಬರುತ್ತಾನೆ. ಅಧರ್ಮ, ಸುಳ್ಳು, ವಂಚನೆ ಯಾವುದನ್ನು ಮಾಡಬಾರದೋ ಅದನ್ನು ಮಾಡಿ ನಿಮ್ಮ ಪಾಪವನ್ನು ಹೆಚ್ಚಿಸಿಕೊಳ್ಳಬಾರದು. ಆದರೆ ಗುರುವು ನವಮದಲ್ಲಿ ಇನ್ನಷ್ಟು ಕಾಲ ಇದ್ದು ನಿಮ್ಮನ್ನು ಕಾಪಾಡುತ್ತಾನೆ. ಮುಂದೆ ಸಪ್ತಮಕ್ಕೆ ಶನಿ, ದಶಮಕ್ಕೆ ಗುರು ಬಂದಾಗ ಆರೋಗ್ಯವನ್ನು ಸೂಕ್ಷ ್ಮಾಗಿ ಕಾಪಾಡಿಕೊಳ್ಳುವುದು ನಿಮ್ಮ ಆದ್ಯ ಕರ್ತವ್ಯ ಆಗಿರಲಿ. ಲಕ್ಷ್ಮೀ ವೆಂಕಟೇಶ್ವರನನ್ನು ಪೂಜಿಸಿ.
ತುಲಾ: ಎಂದರೋ ಮಹಾನುಭಾವಲು ಅಂದರಿಕೀ ವಂದನಮುಲು ಎಂದು ಗೋವಿಂದನ ಸ್ತುತಿಯನ್ನು ತ್ಯಾಗರಾಜರು ಹಾಡಿದ್ದಾರೆ. ತ್ಯಾಗರಾಜರು ಈಶ್ವರನ ಸ್ವರೂಪ. ಶಿವ, ನಿಮ್ಮ ಜೀವನವನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಾನೆ. ಎಷ್ಟು ಸಾಧ್ಯವೋ ಅಷ್ಟು ಶಿವ ಚಿಂತನೆ ಮಾಡಿ. ಶಿವನನ್ನು ಪೂಜಿಸಿ, ದ್ವಾದಶ ಜ್ಯೋರ್ತಿಲಿಂಗಗಳಿಗೆ ಹೋಗಿ ಪೂಜೆ ಮಾಡಿ ಬನ್ನಿ. ಆನಂದವಾಗಲಿ, ಸಂಪಾದನೆ, ಅದೃಷ್ಟವಾಗಲಿ ಯಾವುದೂ ಕಡಿಮೆಯಾಗುವುದಿಲ್ಲ.
ವೃಶ್ಚಿಕ: ಗುರುವು ಅಷ್ಟಮಕ್ಕೆ, ಶನಿಯು ಪಂಚಮಕ್ಕೆ ಬಂದಾಗ, ನೀವು ಮಾಡಬೇಕಾದ ಕೆಲಸಗಳು ಬಹಳಷ್ಟಿದ್ದು ಅದು ಮುಂದುವರೆಯಲು ಏಕೈಕ ದಾರಿ ಸುಬ್ರಹ್ಮಣ್ಯ ದೇವರನ್ನು ಪೂಜಿಸುವುದು. ಷಷ್ಠಿ ವ್ರತವನ್ನು ಮಾಡಬೇಕು. ನೀವು ಕೈಗೊಳ್ಳುವ ಕೆಲಸಗಳು ಪೂರ್ಣವಾಗುತ್ತವೆ. ವ್ಯವಹಾರ ಹಾಗೂ ಆರೋಗ್ಯದ ಬಗ್ಗೆ ಗಮನವಿರಲಿ.
ಧನಸ್ಸು: ಸಪ್ತಮಕ್ಕೆ ಗುರು ಬರುವವರೆಗೂ ನಿಧಾನವಾಗಿ ನಡೆಯಿರಿ. ನಡಿ ಎಂದರೆ ಓಡಬಾರದು. ಓಡು ಎಂದರೆ ನಾನೇ ಸ್ಪರ್ಧೆಯಲ್ಲಿ ಗೆಲ್ಲಬೇಕು ಎಂದಿರಬಾರದು. ಮನುಷ್ಯನು ಜೀವನದಲ್ಲಿ ಸದ್ಬುದ್ಧಿಯನ್ನು ಇರಿಸಿಕೊಂಡು ನಡೆದರೆ ಏನನ್ನೂ ಗೆಲ್ಲಬಹುದು. ಸಪ್ತಮಕ್ಕೆ ಗುರು ಬಂದ ನಂತರ ಇಷ್ಟಾರ್ಥಗಳು ಈಡೇರುತ್ತವೆ.
ಮಕರ:ಶನಿ ಬದಲಾವಣೆ, ನೂತನ ಸಂವತ್ಸರಕ್ಕೆ ಕೇವಲ 21 ದಿನಗಳು ಮಾತ್ರ ಬಾಕಿ ಇದೆ. ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ದತ್ತಾತ್ರೇಯ ಗುರು ಚರಿತ್ರೆಯನ್ನು ಪಾರಾಯಣ ಮಾಡಿ. ನವಚಂಡಿಕಾ ಪಾರಾಯಣ ಮಾಡಿಸಿ, ಮುಂದಿನ ದಿನಗಳಲ್ಲಿ ಶನಿ ಬಲವೂ ಬರುವುದರಿಂದ, ದೈವಬಲ ಗಟ್ಟಿಯಾಗಿ ಸ್ಥಿರವಾದ ಧನವನ್ನು ಸಂಪಾದಿಸಬಹುದು. ಎಲ್ಲ ವಿಷಯ, ವಿಚಾರಗಳಲ್ಲಿ ನಿಮಗೆ ಶುಭವಿರುತ್ತದೆ.
ಕುಂಭ: ಸ್ವಕ್ಷೇತ್ರ ಕುಂಭದಿಂದ ಮೀನ ರಾಶಿಗೆ ಹೊರಟು ರಾಶಿಯಿರದ ದ್ವಿತೀಯಕ್ಕೆ ಶನಿ ಬರುತ್ತಾನೆ. ಶುಭಾಶುಭ ಫಲಗಳು ಶೇ. 50 ನಡೆದರೆ, ಇನ್ನು 50 ಭಾಗದಲ್ಲಿ ನೀವು ಪೂರ್ಣ ಫಲವನ್ನು ಅನುಭವಿಸಬೇಕಾದಲ್ಲಿ ನಿತ್ಯವೂ ತಪ್ಪದೇ ಪುರುಷ ಸೂಕ್ತ ಪಾರಾಯಣ ಮಾಡಿಸಿ/ ಮಾಡಿರಿ, ನೀಳಾದೇವಿ ಅಷ್ಟಕ ಓದಿರಿ. ಹೆಚ್ಚಿನ ಗ್ರಹಾನುಕೂಲವು, ಮನಸ್ಸಿಗೆ ಕಾಂತಿಯು, ನೆಂಟರಿಷ್ಟರೊಂದಿಗೆ ಒಳ್ಳೆಯ ಬಾಂಧವ್ಯವು ಏರ್ಪಡುತ್ತದೆ.
ಮೀನ: ರಾಷ್ಟ್ರಪತಿ ಭವನದಲ್ಲಿ ನ್ಯಾಯ ದಂಡವನ್ನು ಸ್ಥಾಪಿಸಿದ್ದು, ಎಲ್ಲರೂ ಅದಕ್ಕೆ ಕೈ ಮುಗಿದು ಒಳ ನಡೆಯುತ್ತಾರೆ. ಮನುಷ್ಯನಿಗೆ ಆತ್ಮ-ಪರಮಾತ್ಮನ ಅನು ಸಂಧಾನವಿರಬೇಕು. ಶನಿಯು ಲಗ್ನದಲ್ಲಿ ಬರುವುದರಿಂದ, ದೇವರ ಸಾನ್ನಿಧ್ಯದಲ್ಲಿ ಇದ್ದು ಮುಂದೆ ಹೋಗುವ ಕಾಲ. ನಿಮ್ಮ ಕಾಲುಗಳು ದೇವ ಮಂದಿರಕ್ಕೆ ಹೋಗಲಿ, ಕೈ ದೈವಕ್ಕೆ ಮುಗಿದಿರಲಿ. ಕಣ್ಣುಗಳು ದೇವರನ್ನೇ ನೋಡಲಿ. ಒಡನಾಟ ದೈವಭಕ್ತರೊಂದಿಗೆ ಇರಲಿ. ಪರಮಾತ್ಮ ನಿಮ್ಮನ್ನು ರಕ್ಷಿಸುತ್ತಾನೆ. ಯೋಚನೆ ಬೇಕಿಲ್ಲ. ಆಲೋಚನೆಗಳು ಒಳ್ಳೆಯದೇ ಇರಲಿ.