

Rashid Latif: ಪ್ರಸಕ್ತ ದುಬೈ ಮತ್ತು ಪಾಕಿಸ್ತಾನ ನೆಲದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಫೈನಲ್ ಹಂತವನ್ನು ತಲುಪಿವೆ. ಭಾನುವಾರ (ಮಾ.09) ಫೈನಲ್ ಪಂದ್ಯದ ನಂತರ ಚಾಂಪಿಯನ್ಸ್ ಟ್ರೋಫಿ ಮುಕ್ತಾಯಗೊಳ್ಳಲಿದೆ. ಹಲವು ವರ್ಷಗಳ ನಂತರ ಐಸಿಸಿ ಈವೆಂಟ್ನ ಆತಿಥ್ಯ ವಹಿಸಿಕೊಂಡಿದ್ದ ಪಾಕ್ಗೆ ಈ ಬಾರಿಯೂ ಭಾರೀ ಮುಖಭಂಗ ಉಂಟಾಯಿತು. ಸದ್ಯ ಇದೊಂದು ವಿಷಯ ಪಾಕ್ ಮಾಜಿ ಹಿರಿಯ ಆಟಗಾರರಲ್ಲಿ ದೊಡ್ಡ ಬಿರುಕು ಮೂಡಿಸಿದೆ.
ಆತಿಥೇಯರಾಗಿ ಚಾಂಪಿಯನ್ಸ್ ಟ್ರೋಫಿಗೆ ಲಗ್ಗೆಯಿಟ್ಟ ಪಾಕಿಸ್ತಾನ, ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿತು. ಈ ಮೂಲಕ ಟೂರ್ನಿಯಿಂದ ಬಹುಬೇಗನೇ ಹೊರಬಿದ್ದಿತು. ಇದೇ ತಂಡದಲ್ಲಿ ಒಡಕು ಮೂಡಲು ದೊಡ್ಡ ಕಾರಣವಾಗಿ ಬದಲಾಯಿತು. ಕ್ಯಾಪ್ಟನ್ ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕ್ ತಂಡಕ್ಕೆ ಚಳಿ ಬಿಡಿಸಿದ ಮಾಜಿ ಹಿರಿಯ ಕ್ರಿಕೆಟಿಗರಾದ ವಾಸಿಮ್ ಅಕ್ರಂ ಮತ್ತು ಮುಂತಾದವರು, ಪಿಸಿಬಿಗೆ ಹಲವು ಬದಲಾವಣೆ ತರುವಂತೆ ಪುಕ್ಕಟೆ ಸಲಹೆಗಳನ್ನು ನೀಡಿದರು. ಇದೇ ಈಗ ವಿವಾದಕ್ಕೆ ಕಾರಣವಾಗಿದೆ.
ದಿಗ್ಗಜ ಕ್ರಿಕೆಟಿಗರಾದ ವಾಸಿಮ್ ಅಕ್ರಂ ಮತ್ತು ವಾಖರ್ ಯೂನಿಸ್ ವಿರುದ್ಧ ತಿರುಗಿಬಿದ್ದಿರುವ ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ರಶೀದ್ ಲತೀಫ್, "ಪಾಕ್ ಮತ್ತೊಂದು ವಿಶ್ವಕಪ್ ಗೆಲ್ಲಲು 17 ವರ್ಷಗಳೇ ಬೇಕಾಯಿತು. ಏಕೆಂದರೆ, 90ರ ದಶಕದ ಆಟಗಾರರು ಪಾಕಿಸ್ತಾನ ಕ್ರಿಕೆಟ್ ಅನ್ನು ಇಂದಿಗೂ ಬಿಟ್ಟಿಲ್ಲ. ಪಿಸಿಬಿ ಮತ್ತು ತಂಡದದಲ್ಲಿ ಮಧ್ರಪ್ರವೇಶಿಸುವುದು ಇವರಿಗೆ ಅಭ್ಯಾಸವಾಗಿಬಿಟ್ಟಿದೆ. 90ರ ಆಟಗಾರರನ್ನು ನಿರ್ವಹಣೆಯಿಂದ ಮತ್ತು ತಂಡದಿಂದ ಆದಷ್ಟು ದೂರವಿಡಿ. ಆಗ ಮಾತ್ರ ಪಾಕ್ ಮುಂದಿನ ಪಂದ್ಯ, ಟೂರ್ನಿಗಳನ್ನು ಗೆಲ್ಲಲು ಸಾಧ್ಯ" ಎಂದಿದ್ದಾರೆ.
"ಕೆಲ ವ್ಯಕ್ತಿಗಳು ಅವರಿಗೆ (ಅಕ್ರಂ ಮತ್ತು ಯೂನಿಸ್) ಹಣವನ್ನು ನೀಡುತ್ತಾರೆ. ಈ ಹಣಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ" ಎಂದರು. "ನಾನು ಕೂಡ 90ರ ದಶಕದ ಕ್ರಿಕೆಟಿಗನೇ. ಹಿರಿಯ ಆಟಗಾರರು ಬಹಳ ಸಮಯದಿಂದ ಪಾಕಿಸ್ತಾನ ಕ್ರಿಕೆಟ್‌ಗೆ ಸೇವೆ ಸಲ್ಲಿಸಿದ್ದಾರೆ. ಈಗ ಅವರೆಲ್ಲರಿಗೂ ವಿಶ್ರಾಂತಿಯ ಸಮಯ" ಎನ್ನುತ ಪರೋಕ್ಷವಾಗಿ 'ದುಬೈ ಬಾಯ್ಸ್' ಎಂದು ಅಕ್ರಂ ಹಾಗೂ ಯೂನಿಸ್ ವಿರುದ್ಧ ಗುಡುಗಿದ್ದಾರೆ,(ಏಜೆನ್ಸೀಸ್).