

Ranya Rao: ಮಾ.03ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ನಟಿ ರನ್ಯಾ ರಾವ್ ಅವರಿಂದ 14.56 ಕೋಟಿ ರೂ. ಮೌಲ್ಯದ 14 ಕೆಜಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡ ಪೊಲೀಸರು, ಕೆಲವೇ ಕ್ಷಣದಲ್ಲಿ ನಟಿಯನ್ನು ಬಂಧಿಸಿ, ತನಿಖೆಗೆ ಒಳಪಡಿಸಿದರು. ಒಂದೇ ವರ್ಷದಲ್ಲಿ 27 ಬಾರಿ ದುಬೈಗೆ ಭೇಟಿ ನೀಡಿದ್ದ ಈ ಚೆಲುವೆ, 14.2 ಕೆಜಿ ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ಸಾಗಿಸುವಾಗ ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಗಳ ಕಣ್ತಪ್ಪಿಸಿ ಇಷ್ಟೊಂದು ಚಿನ್ನವನ್ನು ಹೇಗೆ ಸಾಗಿಸುತ್ತಿದ್ದರು? ಇಂಥಾ ಕೆಲಸಕ್ಕೆ ‘ಮಾಣಿಕ್ಯ’ ನಟಿ ಕೈಹಾಕಿದ್ದೇಕೆ? ಎಂಬ ಗೊಂದಲ ಹಲವರಲ್ಲಿ ಮೂಡಿದೆ. ಸದ್ಯ ಇದಕ್ಕೆ ಉತ್ತರ ಹುಡುಕುತ್ತಿರುವ ಖಾಕಿ ಪಡೆ, ಪಾತ್ರಧಾರಿ ಹಿಂದಿರುವ ಸೂತ್ರಧಾರಿಗಾಗಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ತನ್ನ ಸೊಂಟದಲ್ಲಿ ಅಡಗಿಸಿಕೊಂಡಿದ್ದ 12.86 ಕೋಟಿ ರೂ. ಮೌಲ್ಯದ 14.2 ಕೆಜಿ ಮೌಲ್ಯದ ಚಿನ್ನದ ಬಿಸ್ಕೆಟ್ ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು, ನಟಿಯನ್ನು ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಪ್ರಸ್ತುತ ತನಿಖೆಯಲ್ಲಿರುವ ಪ್ರಕರಣಕ್ಕೆ ಸಿಬಿಐ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದು, ನಟಿಯ ಹಿಂದೆ ಯಾರೆಲ್ಲಾ ಇದ್ದಾರೆ? ಪಾತ್ರಧಾರಿ ಹಿಂದಿರುವ ಸೂತ್ರಧಾರಿ ಯಾರೆಂಬುದನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಇಂದಿನಿಂದ ಕೇಸ್ ಕೈಗೆತ್ತಿಕೊಂಡಿರುವ ಸಿಬಿಐ, ಏನ್ನೆಲ್ಲ ವಿಚಾರಗಳನ್ನು ಎಳೆ ಎಳೆಯಾಗಿ ಹೊರತರಲಿದೆ ಎಂಬುದೇ ಕುತೂಹಲ.
ಕರ್ನಾಟಕದ ಹಿರಿಯ ಡಿಜಿಪಿ ಐಪಿಎಸ್ ಅಧಿಕಾರಿಯ ಮಲಮಗಳಾದ ರನ್ಯಾ ರಾವ್ ಪ್ರಕರಣ ಸದ್ಯ ಮತ್ತಷ್ಟು ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಚಿನ್ನ ಕಳ್ಳಸಾಗಣೆ ಮಾಡುವ ಉದ್ದೇಶವೇನು? ನಿರಂತರವಾಗಿ ಬೆಂಗಳೂರು ಮತ್ತು ದುಬೈ ಸೇರಿದಂತೆ ಇನ್ನಿತರ ದೇಶಗಳಿಗೆ ಹಾರಾಡಿದ್ದೇಕೆ? ಪ್ರತಿಬಾರಿಯ ಪ್ರಯಾಣದಲ್ಲಿ ಒಂದೇ ಉಡುಪು ಧರಿಸಲು ಐಡಿಯಾ ಕೊಟ್ಟವರಾರು? ಇದರಲ್ಲಿ ರಾಜಕಾರಣಿಗಳು? ದೊಡ್ಡವರ ಪಾತ್ರವಿದೆಯೇ ಎಂಬುದನ್ನು ಡಿಆರ್ಐ ಜತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವ ಸಿಬಿಐ ಇದೀಗ ತನ್ನ ತನಿಖೆಯಲ್ಲಿ ಬಯಲು ಮಾಡಲು ಮುಂದಾಗಿದೆ.
ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ಸಂಗ್ರಹಿಸಲು ಈಗಾಗಲೇ ಎರಡು ಸಿಬಿಐ ತಂಡಗಳು ಮುಂಬೈ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳನ್ನು ತಲುಪಿವೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).