ವಾರ ಭವಿಷ್ಯ: ಈ ರಾಶಿಯವರಿಗೆ ಏನೇ ಬರಲಿ, ಧೈರ್ಯ ಇರಲಿ

ವಿಜಯವಾಣಿ
Published on

ಮೇಷ: ರಾಶಿಯ ಅಧಿಪತಿ ಅಂಗಾರಕನು ಚಂದ್ರನ ಮನೆಯಲ್ಲಿ ಇರುವುದರಿಂದ ಚತುರ್ಥದಲ್ಲಿರುವ ಅವನು ಏನೂ ಕೊಡಲಾರದೆ ನಿಮ್ಮನ್ನು ಸತ್ತ್ವ ಪರೀಕ್ಷೆಗೆ ಸಿಲುಕಿಸುತ್ತಾನೆ. ಚಂದ್ರನು ವೃಷಭ ರಾಶಿಯಲ್ಲಿ ಬರುವುದರಿಂದ ದತ್ತ ಪೌರ್ಣಮಿಯಂದು ದತ್ತನನ್ನು ಪೂಜಿಸಿ. ನಿಮ್ಮ ತೊಳಲಾಟವನ್ನು ಗುರು ಸರಿಪಡಿಸುತ್ತಾನೆ. ಬ್ರಹ್ಮನು ಚಂದ್ರನಲ್ಲಿಯೂ, ಶಿವನು ದೂರ್ವಾಸನಲ್ಲಿಯೂ ಅನಸೂಯಾ ಪ್ರಾರ್ಥನೆಯಂತೆ ದತ್ತಾತ್ರೇಯ ಸ್ವರೂಪದಲ್ಲಿ ನಾರಾಯಣನಲ್ಲಿ ಲೀನವಾಗಿದ್ದಾರೆ. ಕುಲ ಗುರು ದರ್ಶನ ಅವಶ್ಯವಾಗಿರುತ್ತದೆ.

ವೃಷಭ: ಚತುರ್ದಶಿ, ಪೌರ್ಣಮಿ ಪರ್ವ ಕಾಲಗಳು. ಚಂದ್ರನು ವೃದ್ಧಿ ಪಥದಲ್ಲಿ ಇದ್ದು ಭಾನುವಾರದಂದು ಪೌರ್ಣಮಿ ಇದ್ದು ಸೂರ್ಯನ ಪಥವು ಧನುರ್​ರಾಶಿಗೆ ಬಂದು ಸೇರುತ್ತದೆ. ಕಾಲದ ಮಟ್ಟಿಗೆ ಯಾವ ದೋಷ ಬಾರದಿದ್ದರೂ ವೃಷಭದಲ್ಲಿ ಚಂದ್ರನು ಇರುವುದರಿಂದ ಪಾರ್ವತಿ ಸ್ವರೂಪವಾದ ಲಲಿತೆಯನ್ನು ಪೂಜಿಸಿ.

ಮಿಥುನ: ರಾಶ್ಯಾಧಿಪತಿ ಬುಧನು ವೃಶ್ಚಿಕದಲ್ಲಿ ಇದ್ದು ಸೂರ್ಯನು ಧನುರ್​ರಾಶಿಗೆ ಬರುವುದರಿಂದ ಆದಿತ್ಯ ಬುಧ ಯೋಗ ನಿಂತು ದ್ವಾದಶ ಗುರುವಿನ ಬಲ ಬೇಕಾದಲ್ಲಿ ಗುರುವಾಯೂರಿನ ಗುರುವಾಯುರಪ್ಪನನ್ನು ಪೂಜಿಸಿ. ಕಡಲೆ ಬೆಲ್ಲ ದಾನ ಮಾಡಿ.

ಕಟಕ: ಏಕಾದಶ ಸ್ಥಾನದಲ್ಲಿ ಯಾವುದೇ ಗ್ರಹ ಬಂದರೂ ಲಾಭ ಸಂತೋಷ ಉಂಟು ಮಾಡುತ್ತದೆ. ಏಕಾದಶ ಗುರು ನಿಮ್ಮ ದೈವತ್ವವನ್ನು ಹೆಚ್ಚು ಮಾಡಿ, ಭಕ್ತಿಯಿಂದ ಕೂಡಿಸಿ ಹರಸುತ್ತಾನೆ. ಬೇಡಿದ್ದನ್ನು ಕೊಡುವ ಗುರು ಇರುವಾಗ ಬೇಡದ್ದನ್ನು ಬೇಡದೆ ಎಲ್ಲರಿಗೂ ಬೇಕಾದ್ದನ್ನು ಪಡೆದುಕೊಳ್ಳಿರಿ.

ಸಿಂಹ: ಪಂಚಮದಲ್ಲಿ ಸೂರ್ಯನು ಬಂದು ನಿಮಗೆ ಬಲ ಕೊಡುತ್ತಾನೆ. ಆದರೂ ಪೂರ್ವ ಪುಣ್ಯದ ತಪೋಬಲದಿಂದ ಹಿಡಿದ ಕಾರ್ಯದಲ್ಲಿ ಯಶಸ್ಸನ್ನು, ಮಾಡುವ ಉದ್ಯೋಗದಲ್ಲಿ ಕೀರ್ತಿ, ತೃಪ್ತಿಕರ ಧನ ಕೊಡುವುದರಲ್ಲಿ ಸಂಶಯ ಇಲ್ಲ. ದೇವರು ಕೊಟ್ಟ ಕಣ್ಣನ್ನು ಕಾಪಾಡಿ ಕೊಳ್ಳಲು ವೈದ್ಯರ ಸಲಹೆ ಪಡೆಯಿರಿ. ಶುಭ ಫಲ ಪಡೆಯಲು ಸೂರ್ಯ ನಮಸ್ಕಾರ ಮಾಡಿ. ಗಣಪತಿ ಪೂಜೆ ತಪ್ಪಿಸಬೇಡಿ.

ಕನ್ಯಾ: ಕಾಲಾಟದ ಚೆಂಡನ್ನು ಕೇಳಿದ್ದೀರಾ...ಅದನ್ನು ನೀವು ಮುಟ್ಟಿದರೆ ಸಾಕು ಗೋಲ್ ಆಗಿ ಪರಿವರ್ತಿಸಿ ನಿಮ್ಮನ್ನು ವಿಜಯದ ಹಾದಿಯಲ್ಲಿ ಸಾಗಿಸುತ್ತದೆ. ನಿಂತ ನೀರನ್ನು ಕುಡಿಯಲಾಗುವುದಿಲ್ಲ. ಕೊಟ್ಟಿದ್ದನ್ನು ಇಟ್ಟು ಹೋಗುವ ಬದಲು ಧಾನ-ಧರ್ಮ ಮಾಡುವ ಬುದ್ಧಿ ಇರಲಿ. ಏಕೆಂದರೆ ಅದೇ ಕಾಲಿನ ಚೆಂಡು ಕಾಲಿಗೋ ಕೈಗೊ ಏಟು ಕೊಡಬಾರದು. ನಿರಂತರ ದೈವ ಪ್ರಾರ್ಥನೆ ಇರಲಿ.

ತುಲಾ: ಕಷ್ಟ ಕಾರ್ಪಣ್ಯ ಕಳೆದು ಪಂಚಮ ಶನಿ ಬಿಡುವ ಕಾಲ. ಶನಿ ಬಿಟ್ಟು ಹೊರಟನೆಂದರೆ ನಿಮ್ಮ ತಲೆಯಿಂದ ಕಾಲಿನವರೆಗೂ ಸರಿ ಮಾಡಿ ಗಾಣದ ಯಂತ್ರಕ್ಕೆ ಎಣ್ಣೆ ಸುರಿದಂತೆ ದೇಹ ಬುದ್ಧಿಗೆ ರಕ್ಷಣೆಯನ್ನು ಮಾಡಿಕೊಡುತ್ತಾನೆ. ಏನೇ ಬರಲಿ, ಧೈರ್ಯ ಇರಲಿ. ಭಗವಂತನೇ ಕಾಪಾಡುತ್ತಾನೆ.

ವೃಶ್ಚಿಕ: ಜೇಬಿನಲ್ಲಿ ದುಡ್ಡು ಇಟ್ಟುಕೊಂಡು ಬ್ಯಾಂಕ್ ಖಾತೆಯನ್ನು ಭದ್ರ ಮಾಡಿಕೊಂಡು ಧನವನ್ನು ಹುಡುಕಲಾಗುತ್ತದೆಯೇ? ಗುರುವಿನ ಕರುಣೆ ಅಪಾರವಾಗಿದ್ದು ಯಾವುದೋ ಗುರು ಸ್ವರೂಪವೊಂದು ನಿಮ್ಮ ಕಷ್ಟ ಕಾರ್ಪಣ್ಯ ಬಿಡಿಸಿ ಋಣ ಮುಕ್ತರನ್ನಾಗಿ ಮಾಡಿಸುತ್ತದೆ. ನಿಮ್ಮ ಬಾಳಿನಲ್ಲಿ ಸದಾ ನಗುವನ್ನು ತರುವ ಗುರುವನ್ನು ಗುರುತಿಸಿ. ಗುರುವಿನ ಮಾರ್ಗದಲ್ಲಿ ನಡೆಯಿರಿ.

ಧನಸ್ಸು: ಸೂರ್ಯ ನಾರಾಯಣನು ನಿಮ್ಮನ್ನು ಕರೆದು ಬೆಳಕನ್ನು ತೋರಿಸಿ ರಾಶಿಗೆ ಬರುವ ಸಮಯವಿದು. ಸೂರ್ಯ ಬಂದ ಕೂಡಲೇ ಮುಖ್ಯವಾಹಿನಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ಗಣ್ಯ ವ್ಯಕ್ತಿಗಳ ಸಂಪರ್ಕದಿಂದ ಒಳ್ಳೆಯ ಫಲ ದೊರೆಯುತ್ತದೆ. ಗುರು ಚರಿತ್ರೆ ಪಾರಾಯಣ ಮಾಡಲೇಬೇಕು. ತಂದೆಗಿಂತ ಗುರುವಿಲ್ಲ, ತಾಯಿಗಿಂತ ದೇವರಿಲ್ಲ.

ಮಕರ: ಈ ರಾಶಿಗೆ ನಮ್ಮ ಪರಂಪರೆಯಲ್ಲಿ ವಿಶೇಷ ಸ್ಥಾನ ಮಾನ ಇದೆ. ಉತ್ತರಾಯಣ ಬರುವುದು ಸೂರ್ಯನು ಮಕರ ರಾಶಿಯಲ್ಲಿ ಬಂದಾಗ. ದ್ವಾದಶಕ್ಕೆ ಸೂರ್ಯ ಬರುವುದರಿಂದ ಯಾರ ಮೇಲೂ ಅತಿಯಾದ ಕೋಪ ಬೇಡ. ಬಿಸಿಲಿನ ತಾಪ ಬೇಡ. ಆದಿತ್ಯ ಹೃದಯ ಪಾರಾಯಣ ಮಾಡಿ.

ಕುಂಭ: ಶನಿ ಸಂಚಾರದ ಅಂತ್ಯ ಆರಂಭ ಆಗಿದೆ, ಕುಂಭ ರಾಶಿಗೆ ವಿಶೇಷ ಸ್ಥಾನ ಮಾನ ಕೊಟ್ಟು ಕೈ ಹಿಡಿದು ನಡೆಸಿ ಖರ್ಚು ವೆಚ್ಚ ಭರಿಸಲು ಸಾಕಾಗುವಷ್ಟು ಧನ ಕೊಡುತ್ತಾನೆ. ಈ ಲಗ್ನದಲ್ಲಿ ಶನಿ ಇರುವುದರಿಂದ ವಿಷಯವನ್ನು ಹರಟಬಾರದು, ಹರಡಬಾರದು. ಹಠವನ್ನು ಬಿಟ್ಟು ಸ್ನೇಹದಿಂದ ನಡೆದರೆ ಮಾ.29ರ ನಂತರ ಏಳಿಗೆ ಆರಂಭವಾಗುತ್ತದೆ. ಪಾರ್ವತಿ ಪರಮೇಶ್ವರನನ್ನು ಪೂಜಿಸಿ.

ಮೀನ: ಕುಂಭದಲ್ಲಿ ಶನಿ ಇದ್ದಾನೆ. ಆತ್ಮನಿಂದನೆ ಒಳ್ಳೆಯದಲ್ಲ. ದೇವರನ್ನು ಕಾಣುವ ಅತ್ಮನು ಪರಮಾತ್ಮನ ಸ್ವರೂಪ ಎಂದೇ ಭಾವಿಸಬೇಕು. ಸ್ಥಿರವಾದ ಬುದ್ಧಿಯಿಂದ ದ್ವಾದಶ ಶನಿಯನ್ನು ಪೂಜಿಸಿ. ಬಿಲ್ವಾರ್ಚನೆ ಮಾಡಿ. ಇನ್ನು 3 ತಿಂಗಳು ಅವನ ಸನ್ನಿಧಿಗೆ ಕ್ಷೀರವನ್ನು ಕೊಡಿ. ಅದು ಅಮೃತ ಸಮಾನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net