

ಬೆಂಗಳೂರು: ವಿವಿಧ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದ್ದು, ಅದನ್ನು ತೆಗೆಯಬೇಕೆಂದು ಸಚಿವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹೇರಿದ ಪ್ರಸಂಗ ಶನಿವಾರ ಸಂಪುಟ ಸಭೆಯಲ್ಲಿ ನಡೆದಿದೆ. ಇನ್ನೊಂದು ಬಾರಿ ಜಿಲ್ಲೆಗಳಿಂದ ವರದಿ ತರಿಸಿಕೊಂಡು, ತಜ್ಞರ ಜತೆ ಚರ್ಚೆ ಮಾಡಿ ವಾರಾಂತ್ಯ ಕರ್ಫ್ಯೂ ತೆಗೆಯುವ ಬಗ್ಗೆ ತೀರ್ವನಿಸಲು ನಿರ್ಧರಿಸಲಾಯಿತು. ಇನ್ನೊಂದೆರೆಡು ದಿನಗಳಲ್ಲೇ ಈ ಬಗ್ಗೆ ಸಿಎಂ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಸಾರ್ವಜನಿಕ ಗಣೇಶೋತ್ಸವ ಆಚರಣೆ ವಿಷಯ ಚರ್ಚೆಗೆ ಬಂದಿತ್ತು. ಕೋವಿಡ್ ಮಾರ್ಗಸೂಚಿ ಪ್ರಕಾರ, ಆಚರಣೆ ಹೇಗೆಂಬ ಪ್ರಶ್ನೆ ಎದುರಾಯಿತು. ಇನ್ನೂ ಕೆಲವು ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಇದೆ, ನೂರು ಜನ ಸೇರಬಾರದು ಎಂದು ಮಾರ್ಗಸೂಚಿ ಹೇಳುತ್ತದೆ. ಹೀಗಾಗಿ ಇಡೀ ರಾಜ್ಯಕ್ಕೆ ಒಂದು ಪಾಲಿಸಿ ಪ್ರಕಟಿಸಿಲು ತಜ್ಞರ ಸಮಿತಿ, ಡಿಸಿ-ಎಸ್ಪಿಗಳ ಜತೆ ಚರ್ಚೆ ಮಾಡಿ ತೀರ್ವನಿಸಲು ಸಂಪುಟ ಸಭೆ ಸಿಎಂಗೆ ಅಧಿಕಾರ ನೀಡಿತು. ರಾಜ್ಯದಲ್ಲಿ ಬಂಡವಾಳ ಹೂಡಿಕೆಗಾಗಿ ಸಮಾಲೋಚಕರು, ಚಿಂತಕ ಪಾಲುದಾರರಾಗಿ ಬೋಸ್ಟನ್ ಕನ್ಸೆಲ್ಟಿಂಗ್ ಗ್ರೂಪ್ ಇಂಡಿಯಾ ಸೇವೆ ನೀಡುತ್ತಿದ್ದು, ಅವರಿಗೆ ಮುಂದಿನ 12 ತಿಂಗಳ ಅವಧಿಗೆ ವರ್ಷಕ್ಕೆ 12 ಕೋಟಿಯಂತೆ ವಿಸ್ತರಣೆಗೆ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ.
ವೆಡ್ಡಿಂಗ್ ಶೂಟ್ ವಿವಾದಕ್ಕೆ ತೇಪೆ: ಮೈಸೂರು ಅರಮನೆ ಒಳಾಂಗಣದಲ್ಲಿ 2016ರಲ್ಲಿ ಮದುವೆ ಫೋಟೋ ಶೂಟ್ ಮಾಡಿದ್ದ ಪ್ರಕರಣ ಹಾಗೂ ಪೇಂಟಿಂಗ್ ಅವ್ಯವಹಾರ ವಿಚಾರ ಗಂಭೀರವಾದದ್ದಲ್ಲ ಎಂದು ಸಂಬಂಧಪಟ್ಟ ಅಧಿಕಾರಿಯನ್ನು ಸರ್ಕಾರ ರಕ್ಷಿಸಿದೆ. ಮೈಸೂರು ಅರಮನೆ ಗೋಡೆ ಮತ್ತು ಕಂಬಗಳಿಗೆ ಚಿನ್ನದ ಲೇಪನ ಕಾಮಗಾರಿ, ಆನೆಗಳಿಗೆ ನೆಲಹಾಸು ಹಾಕುವ ಕಾಮಗಾರಿಗಳಲ್ಲಿ ಕರ್ತವ್ಯಲೋಪ ಎಸಗಿರುತ್ತಾರೆಂಬ ಆರೋಪದ ಮೇಲೆ ಮೈಸೂರು ಅರಮನೆ ಆಡಳಿಯ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ವಿರುದ್ಧ ಉಪ ಲೋಕಾಯುಕ್ತರು ತನಿಖೆ ಮಾಡಿ ಕ್ರಮಕ್ಕೆ ಶಿಫಾರಸು ಮಾಡಿದ್ದರು. ಸಂಪುಟ ಸಭೆ ಈ ಶಿಫಾರಸನ್ನು ತಿರಸ್ಕರಿಸಿದೆ. ಪೇಂಟ್ ಬಿಡ್ ಮಾಡುವವರು ರಾಜ್ಯದಲ್ಲಿ ಇರಲಿಲ್ಲ, ಒಬ್ಬರೇ ಇದ್ದು ಅವರಿಂದ ಕೆಲಸ ಮಾಡಿಸಲಾಗಿದೆ. ಫ್ಲಾಶ್ ರಹಿತವಾಗಿ ಫೋಟೋ ತೆಗೆಯಲು ಅವಕಾಶ ಕೊಡಬಹುದೆಂದು ಆಡಳಿತ ಮಂಡಳಿ ಮುಂಚಿತವಾಗಿ ನಿರ್ಣಯಿಸಿತ್ತು. ಇದರನ್ವಯವೇ ಅನುಮತಿ ಕೊಟ್ಟಿದ್ದರಿಂದ ಅಧಿಕಾರಿಯನ್ನು ಹೊಣೆಗಾರರಾಗಿ ಮಾಡಬಾರದೆಂದು ಸಂಪುಟ ತೀರ್ವನಿಸಿತು. ಈ ಹಿಂದೆ ಮುಖ್ಯಮಂತ್ರಿ ಕಚೇರಿಯಲ್ಲಿದ್ದ ಐಎಎಸ್ ಅಧಿಕಾರಿಯೊಬ್ಬರ ಪುತ್ರನ ವೆಡ್ಡಿಂಗ್ ಫೋಟೋ ಅನ್ನು ಅರಮನೆ ಆವರಣದಲ್ಲಿ ಶೂಟ್ ಮಾಡಿದ್ದು ವಿವಾದವಾಗಿತ್ತು.
ಸಾರ್ವಜನಿಕ ಗಣೇಶೋತ್ಸವಕ್ಕೆ ವಿನಾಯಿತಿ ನೀಡಬೇಕು ಎಂಬ ಒತ್ತಾಯ, ಮನವಿಗೆ ಮುಖ್ಯಮಂತ್ರಿ ಸ್ಪಂದಿಸಿ, ಭಾನುವಾರ ಮಹತ್ವದ ಸಭೆ ನಿಗದಿಪಡಿಸಿದ್ದಾರೆ. ಈ ಬಾರಿ ಗಣೇಶೋತ್ಸವಕ್ಕೆ ಹೆಚ್ಚಿನ ವಿನಾಯಿತಿ ನೀಡುವ ಸಾಧ್ಯತೆಗಳಿವೆ.
| ಆರ್.ಅಶೋಕ್ ಸಚಿವ
ತೆರಿಗೆ ಇಳಿಕೆ ಇಲ್ಲ: ಇಂಧನ ಬೆಲೆ ಏರಿಕೆ ತಗ್ಗಿಸಲು ರಾಜ್ಯದ ಪಾಲಿನ ತೆರಿಗೆ ಇಳಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ತೆರಿಗೆ ಇಳಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ಶುಕ್ರವಾರ ವಷ್ಟೇ ಬೆಲೆ ಏರಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವ ಭೈರತಿ ಬಸವರಾಜು, ಇಂಧನದ ಮೇಲಿನ ತೆರಿಗೆ ಇಳಿಸುವ ಕುರಿತು ಸಂಪುಟಸ ಸಭೆಯಲ್ಲಿ ಚರ್ಚೆ ಮಾಡುತ್ತೇನೆಂದು ಬಿಜೆಪಿ ಕಚೇರಿಯಲ್ಲಿ ಹೇಳಿದ್ದರು.
ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿ ಶಾಸಕರಿಗೆ ನಿಗಮ ಮತ್ತು ಮಂಡಳಿಗಳಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಹಾಲಿ ಅಧ್ಯಕ್ಷರಿಂದ ರಾಜೀನಾಮೆ ಪಡೆದು ಪುನಾರಚನೆ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆ. ಹಾಲಿ ಅಧ್ಯಕ್ಷರಿಂದ ರಾಜೀನಾಮೆ ಪಡೆಯುವಂತೆ ಬಿಜೆಪಿ ವರಿಷ್ಠರಿಂದಲೇ ಸೂಚನೆ ರವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸಂಪುಟದಲ್ಲಿ 4 ಸಚಿವ ಸ್ಥಾನಗಳು ಮಾತ್ರ ಖಾಲಿ ಇದ್ದರೂ ಎರಡು ಡಜನ್ ಆಕಾಂಕ್ಷಿಗಳಿದ್ದಾರೆ. ಅದರಲ್ಲಿ ಕೆಲವರಿಗೆ ನಿಗಮ-ಮಂಡಳಿಗಳಲ್ಲಿ ಅವಕಾಶ ಕಲ್ಪಿಸುವ ಬಗ್ಗೆ ವರಿಷ್ಠರು ಉದ್ದೇಶಿಸಿದ್ದು, ಬೊಮ್ಮಾಯಿಗೆ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ಯಡಿಯೂರಪ್ಪ ಅಧಿಕಾರ ಅವಧಿಯಲ್ಲಿ ನಿಗಮ- ಮಂಡಳಿಗಳಿಗೆ ನೇಮಕ ಮಾಡಿದ ಸಂದರ್ಭದಲ್ಲಿಯೇ ಪಕ್ಷದಿಂದ ನೀಡಿದ್ದ ಪಟ್ಟಿಗೆ ಆದ್ಯತೆ ಸಿಕ್ಕಿಲ್ಲ ಎಂಬ ದೂರುಗಳಿದ್ದವು. ಪುನಾರಚನೆ ಮಾಡುವಂತೆಯೂ ಸೂಚನೆ ನೀಡಲಾಗಿತ್ತು. ಆದರೆ ರಾಜಕೀಯ ಏರಿಳಿತ ಇದ್ದುದರಿಂದ ಮುಂದುವರಿಸಲಾಯಿತು. ಇದೀಗ, ಎಲ್ಲ ನಿಗಮಗಳ ಅಧ್ಯಕ್ಷರು, ಉಪಾಧ್ಯಕ್ಷರಿಂದ ರಾಜೀನಾಮೆ ಪಡೆಯಲಾಗುತ್ತದೆ. ಈಗಾಗಲೆ ಕೆಲವು ಅಧ್ಯಕ್ಷರಿಗೆ ರಾಜೀನಾಮೆ ನೀಡುವಂತೆ ತಿಳಿಸಲಾಗಿದೆಯಂತೆ. ಈ ಬಾರಿ ಶಾಸಕರ ಜತೆಗೆ ಪಕ್ಷಕ್ಕೆ ಕೆಲಸ ಮಾಡಿರುವ ಕೆಲವು ಮುಖಂಡರಿಗೂ ಅವಕಾಶ ನೀಡಲಾಗುತ್ತದೆ. ನಿರ್ದೇಶಕರನ್ನು ಪೂರ್ಣ ಪ್ರಮಾಣದಲ್ಲಿ ಜಿಲ್ಲಾವಾರು ಕಾರ್ಯಕರ್ತರಿಗೆ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ. ವರಿಷ್ಠರ ನಿರ್ಧಾರ ನಿಗಮ-ಮಂಡಳಿಗಳ ಹಾಲಿ ಅಧ್ಯಕ್ಷರ ಆತಂಕಕ್ಕೂ ಕಾರಣವಾಗಿದೆ.