Web Exclusive: ಶಿರಾ ಕೋಟೆಯಲ್ಲಿ ‘ಕುಂಚಿಟಿಗರ’ ಕದನ; ಜೆಡಿಎಸ್ ಅಸ್ತಿತ್ವಕ್ಕೆ ಭಾವನಾತ್ಮಕ ಬಲ

VV Exclusive
Published on

| ಜಗನ್ನಾಥ್ ಕಾಳೇನಹಳ್ಳಿ ತುಮಕೂರು

ಶಿರಾ ಉಪಸಮರ ರಣಾಂಗಣದಲ್ಲಿ ಕುಂಚಿಟಿಗರ ‘ಕದನ’ ಕುತೂಹಲ ಹುಟ್ಟಿಸಿದೆ. ಶಾಸಕ ಬಿ.ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಕ್ಷೇತ್ರ ಹಾಗೂ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ‘ಭಾವನಾತ್ಮಕ’ ಅಸ್ತ್ರ ಪ್ರಯೋಗಿಸಿರುವ ಜೆಡಿಎಸ್ ಮುಂದೆ ಕಾಂಗ್ರೆಸ್ ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ. ಇನ್ನು ಕೃಷ್ಣಾಕೊಳ್ಳ ದಾಟಲು ಬಿಜೆಪಿ ಹೊಸ ಅಂಬಿಗನಿಗೆ ಮಣೆಹಾಕಿರುವುದರಿಂದ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಪ್ರಮುಖ ಪಕ್ಷಗಳ ಮೂವರೂ ಕುಂಚಿಟಿಗ ಸಮುದಾಯದವರು ಎಂಬುದು ವಿಶೇಷ.

ಪ್ರತಿ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್-ಜೆಡಿಎಸ್ ನಡುವೆಯೇ ನೇರ ಹಣಾಹಣಿ ಇದ್ದ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಅಲೆ ಎಬ್ಬಿಸಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಶಿರಾ ಕ್ಷೇತ್ರವು ಲೋಕಸಭೆ ಚುನಾವಣೆಯಲ್ಲಿ ಕಳೆದ 3 ಬಾರಿ ಬಿಜೆಪಿಗೆ ಮುನ್ನಡೆ ನೀಡಿದೆಯಾದರೂ, ವಿಧಾನಸಭೆ, ಸ್ಥಳೀಯ ಚುನಾವಣೆಗಳಲ್ಲಿ ಕಮಲ ಅರಳಲು ಅವಕಾಶ ಮಾಡಿಕೊಟ್ಟಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಸರ್ಕಾರ ಇರುವುದರಿಂದ ಎಲ್ಲ ಸಂಪನ್ಮೂಲ, ಶಕ್ತಿ ಬಳಸಿಕೊಂಡು ಕೇಸರಿ ಬಾವುಟ ಹಾರಿಸಲು ಬಿಜೆಪಿ ಕೂಡ ಶತಾಯಗತಾಯ ಹೋರಾಟ ನಡೆಸಿದೆ.

2008, 2013ರ ಸತತ ಚುನಾವಣೆಗಳಲ್ಲಿ ಸೋತಿದ್ದ ಬಿ.ಸತ್ಯನಾರಾಯಣ ಅವರು 2018ರಲ್ಲಿ ಇದು ನನ್ನ ಕೊನೆ ಚುನಾವಣೆ ಎನ್ನುವ ಮೂಲಕ ಅನುಕಂಪ ಗಿಟ್ಟಿಸಿಕೊಂಡು ಜಯಭೇರಿ ಬಾರಿಸಿದ್ದರು. ಜಿಲ್ಲಾ ಕಾಂಗ್ರೆಸ್​ನೊಳಗಿನ ಆಂತರಿಕ ಕಚ್ಚಾಟದಿಂದಾಗಿ ಕಳೆದ ಚುನಾವಣೆಯಲ್ಲಿ ಜಯಚಂದ್ರ ಶರಣಾಗುವಂತಾಯಿತು. ರಾಜಕೀಯ ರಂಗಕ್ಕೆ ಪ್ರವೇಶಿಸಲು ಸಮಾಜ ಸೇವೆಯನ್ನು ಚಿಮ್ಮು ಹಲಗೆ ಮಾಡಿಕೊಂಡಿದ್ದ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಪುತ್ರ ಡಾ.ಸಿ.ಎಂ.ರಾಜೇಶ್​ಗೌಡ ಮೂರೂ ಪಕ್ಷಗಳ ಬಾಗಿಲು ತಟ್ಟಿ ಅಂತಿಮವಾಗಿ ‘ಕಮಲ’ ಮುಡಿದಿರುವುದರಿಂದ ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿದ್ದ ಬಿಜೆಪಿಗೆ ಶಿರಾಕೋಟೆಗೆ ಲಗ್ಗೆಯಿಡಲು ಹೊಸ ಸೇನಾನಿ ಸಿಕ್ಕಂತಾಗಿದೆ. ಹಾಗಾಗಿ, ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಕಾಂಗ್ರೆಸ್​ನಲ್ಲಿ ಒಗ್ಗಟ್ಟಿನ ಮಂತ್ರ

ಕಳೆದ ಚುನಾವಣೆಯಲ್ಲಿ ಜಿಲ್ಲಾ ಕಾಂಗ್ರೆಸ್​ನಲ್ಲಿ ನಾಯಕರ ಮುನಿಸು ಪಕ್ಷಕ್ಕೆ ದೊಡ್ಡ ಹೊಡೆತ ನೀಡಿತ್ತು. ಉಪಚುನಾವಣೆ ನೆಪವಾಗಿಸಿಕೊಂಡು ಕಾಂಗ್ರೆಸ್ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ವೈಮನಸ್ಸುಗಳನ್ನು ಮರೆತು ಒಂದಾಗಿದ್ದಾರೆ. ಜಯಚಂದ್ರ ಬಗ್ಗೆ ಅಸಮಾಧಾನಗೊಂಡಿದ್ದ ರಾಜಣ್ಣ ಎಲ್ಲವನ್ನೂ ಮರೆತು ಭವಿಷ್ಯದ ದೃಷ್ಟಿಯಿಂದ ಒಗ್ಗೂಡಿರುವುದು ಕಾಂಗ್ರೆಸ್ ಮತಬ್ಯಾಂಕ್ ಗಟ್ಟಿಗೊಳಿಸಿದೆ.

ಭಾವನಾತ್ಮಕ ಅಸ್ತ್ರ

ಶಿರಾ ಜೆಡಿಎಸ್ ಭಧ್ರಕೋಟೆಗಳಲ್ಲೊಂದು. ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಕ್ಷೇತ್ರವನ್ನು ಉಳಿಸಿಕೊಳ್ಳುವದರ ಜತೆಗೆ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದಾರೆ. ಪಕ್ಷಾಂತರದ ಹೊರತಾಗಿಯೂ ‘ಅನುಕಂಪ’ ಕೈಹಿಡಿಯಲಿದೆ ಎಂಬುದು ವರಿಷ್ಠರ ಲೆಕ್ಕಾಚಾರ.

ಹೊಸ ಅಂಬಿಗ

ಕೃಷ್ಣಾಕೊಳ್ಳ ಭಾಗವಾದ ಶಿರಾ, ಮಧುಗಿರಿ, ಕೊರಟಗೆರೆ ಹಾಗೂ ಪಾವಗಡದಲ್ಲಿ ಬಿಜೆಪಿ ಖಾತೆ ತೆರೆಯಲು ಆಗಿಲ್ಲ. ಹಾಗಾಗಿ, ಶಿರಾ ಉಪಸಮರ ಬಳಸಿಕೊಂಡು ಕೃಷ್ಣಾಕೊಳ್ಳ ಭಾಗವನ್ನು ದಾಟಲು ಚುನಾವಣೆ ಘೊಷಣೆಗೂ ಮುನ್ನವೇ ಬಿಜೆಪಿ ಬೂತ್​ವುಟ್ಟದ ಸಭೆ ಆರಂಭಿಸಿ ಸಂಘಟನೆ ಬಲಪಡಿಸಿಕೊಳ್ಳುವದರ ಜತೆಗೆ ‘ಹಿಂದುತ್ವ’ ಅಜೆಂಡಾ ಕೂಡ ಪ್ರಯೋಗಿಸಿದೆ. ಕ್ಷೇತ್ರದ ನಿರ್ಣಾಯಕ ಮತಗಳೆನಿಸಿರುವ ಕಾಡುಗೊಲ್ಲರ ಮತ ಸೆಳೆಯಲು ಕಾಡುಗೊಲ್ಲರ ಅಭಿವೃದ್ಧಿ ನಿಗಮ ಘೊಷಣೆ ಮಾಡಿರುವುದು ಬಿಜೆಪಿಗೆ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೊ ನೋಡಬೇಕಿದೆ. 

ಕುಂಚಿಟಿಗರ ಸಾಮ್ರಾಜ್ಯ

ಕ್ಷೇತ್ರದಲ್ಲಿ ಕುಂಚಿಟಿಗರದ್ದೇ ಪ್ರಾಬಲ್ಯ. ನಂತರದ ಸ್ಥಾನದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳಿವೆ. ಗೊಲ್ಲರು ನಿರ್ಣಾಯಕ ಸಂಖ್ಯೆಯಷ್ಟಿದ್ದಾರೆ. ಕುರುಬರು, ಮುಸ್ಲಿಮರು ಸರಿಸಮನಾಗಿದ್ದಾರೆ. ಹಾಗಾಗಿ, ಮೂರು ಪ್ರಮುಖ ರಾಜಕೀಯ ಪಕ್ಷಗಳು ಕುಂಚಿಟಿಗ ಸಮುದಾಯದ ಅಭ್ಯರ್ಥಿಗಳಿಗೇ ಮಣೆಹಾಕಿದ್ದಾರೆ. ಕುಂಚಿಟಿಗ ಸಮುದಾಯದಲ್ಲಿ 48 ಬೆಡಗು ಇದ್ದು ಅಮ್ಮಾಜಮ್ಮ ಅಲ್ಪೆನವರು ಬೆಡಗು. ಜಯಚಂದ್ರ ಅವರದ್ದು ಕೋಡಿಹಳ್ಳಿ ಜಾನಕಲ್ ಬೆಡಗು. ರಾಜೇಶ್​ಗೌಡ ಬೆಳ್ಳೆನವರು ಬೆಡಗುನವರು. 

ಟಿ.ಬಿ.ಜಯಚಂದ್ರ

ಹಿರಿಯ ಕಾಂಗ್ರೆಸ್ಸಿಗ, ಮಾಜಿ ಸಚಿವ ಜಯಚಂದ್ರ ಪಾಲಿಗೆ ಬೈಎಲೆಕ್ಷನ್ ಅಳಿವು ಉಳಿವಿನ ಪ್ರಶ್ನೆಯಾಗಿದೆ. 1978ರಲ್ಲಿ ಕಳ್ಳಂಬೆಳ್ಳ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಕ್ತಿಸೌಧ ಪ್ರವೇಶಿಸಿದಾಗ ಜಯಚಂದ್ರಗೆ 29 ವರ್ಷ. 1989, 1994, 1999ರಲ್ಲಿ ಅದೇ ಕ್ಷೇತ್ರದಲ್ಲಿ ಮರು ಆಯ್ಕೆಯಾಗಿದ್ದರು. ಕ್ಷೇತ್ರ ಮರುವಿಂಗಡಣೆ ಬಳಿಕ ಅಸ್ತಿತ್ವ ಕಳೆದುಕೊಂಡ ಕಳ್ಳಂಬೆಳ್ಳ ಕ್ಷೇತ್ರದಿಂದ ಶಿರಾಕ್ಕೆ ವಲಸೆ ಬಂದ ಜಯಚಂದ್ರರನ್ನು 2008, 2013ರ ಚುನಾವಣೆಯಲ್ಲಿ ಜನತೆ ‘ಕೈ’ ಹಿಡಿದರು. 2018ರಲ್ಲಿ ಸೋತಿದ್ದ ಟಿಬಿಜೆಗೆ ಉಪಚುನಾವಣೆ ಮತ್ತೊಂದು ಅವಕಾಶ ಕಲ್ಪಿಸಿದೆ. 

ಅಮ್ಮಾಜಮ್ಮ

ಬಿ.ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮಗೆ ರಾಜಕೀಯ ಆಸಕ್ತಿ ಕ್ಷೇತ್ರವಲ್ಲ. ಸತ್ಯಣ್ಣ ಅವರ ನೆರಳಲ್ಲೇ ಬೆಳೆದುಬಂದಿರುವ ಅಮ್ಮಾಜಮ್ಮ ಎಂದಿಗೂ ರಾಜಕೀಯ ಸಭೆ-ಸಮಾರಂಭಗಳಲ್ಲಿ ಕಾಣಿಸಿಕೊಂಡವರಲ್ಲ. ಪತಿ ನಾಮಬಲದ ಮೇಲೆ ಕಣಕ್ಕಿಳಿದಿರುವ ಅಮ್ಮಾಜಮ್ಮಗೆ ಜೆಡಿಎಸ್ ಭದ್ರನೆಲೆಯಲ್ಲಿ ಕಾರ್ಯಕರ್ತರೇ ಶಕ್ತಿ. ಕರೊನಾ ಸೋಂಕಿಗೆ ತುತ್ತಾಗಿರುವ ಅಮ್ಮಾಜಮ್ಮ ಚೇತರಿಸಿಕೊಳ್ಳುತ್ತಿದ್ದು ಈಗ ಕಾರ್ಯಕರ್ತರೇ ಚುನಾವಣೆ ನಡೆಸುವಂತಾಗಿದೆ. ಅನುಕಂಪ, ಸತ್ಯಣ್ಣನ ಹೆಸರು ಅಮ್ಮಾಜಮ್ಮಗೆ ಶ್ರೀರಕ್ಷೆ.

ಡಾ.ಸಿ.ಎಂ.ರಾಜೇಶ್​ಗೌಡ

ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಅವರ ಪುತ್ರ ಡಾ.ಸಿ.ಎಂ.ರಾಜೇಶ್​ಗೌಡ ವೈದ್ಯರಾಗಿದ್ದು ರಾಜಕೀಯರಂಗಕ್ಕೆ ಪ್ರವೇಶಿಸಲು ಕಳೆದ 2 ವರ್ಷಗಳಿಂದ ನಿರಂತರವಾಗಿ ಕ್ಷೇತ್ರದಲ್ಲಿ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಮೂರು ಪಕ್ಷಗಳಲ್ಲೂ ಟಿಕೆಟ್ ಬಯಸಿದ್ದರು. ಅಂತಿಮವಾಗಿ ಬಿಜೆಪಿ ಟಿಕೆಟ್ ಪಡೆದಿದ್ದು ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಸ್.ಆರ್.ಗೌಡ, ಬಿ.ಕೆ.ಮಂಜುನಾಥ್ ಅವರನ್ನು ಒಟ್ಟಿಗಿಟ್ಟುಕೊಂಡು ಚುನಾವಣೆ ಎದುರಿಸಬೇಕಿದೆ. ಆಡಳಿತಾರೂಢ ಸರ್ಕಾರದ ಬೆಂಬಲದೊಂದಿಗೆ ಕೇಸರಿ ಬಾವುಟ ಹಾರಿಸಲು ಸಜ್ಜಾಗಿದ್ದಾರೆ. 

ಶಿರಾ ಕ್ಷೇತ್ರ
  • ಒಟ್ಟು ಮತದಾರರು: 215694
  • ಪುರುಷರು: 110265
  • ಮಹಿಳೆಯರು: 105419
  • ಇತರೆ: 20
 ಜಾತಿವಾರು ಲೆಕ್ಕಾಚಾರ (ಅಂದಾಜು)
  • ಕುಂಚಿಟಿಗ/ಒಕ್ಕಲಿಗ- 60000
  • ಪರಿಶಿಷ್ಟ ಜಾತಿ: 50000
  • ಗೊಲ್ಲರು: 28000
  • ಕುರುಬರು: 12000
  • ಪರಿಶಿಷ್ಟ ಪಂಗಡ: 15000
  • ಲಿಂಗಾಯತ-5000
  • ಮುಸ್ಲಿಂ: 22000
  • ಬಲಿಜಿಗ: 6000
  • ಇತರೆ: 13000

 2018

  1.  ಬಿ.ಸತ್ಯನಾರಾಯಣ- ಜೆಡಿಎಸ್- 74338
  2. ಟಿ.ಬಿ.ಜಯಚಂದ್ರ -ಕಾಂಗ್ರೆಸ್- 63973
  3. ಎಸ್.ಆರ್.ಗೌಡ- ಬಿಜೆಪಿ -16959
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net