Web Exclusive: ಮೇಲೂಮಲೈ ಕಣಿವೆ ದರೋಡೆ ಹಾಟ್​ಸ್ಪಾಟ್

21 hosuru darode
Published on

ಲಾರಿಗಳಲ್ಲಿನ 16 ಕೋಟಿ ರೂ. ಮೌಲ್ಯದ ಸರಕು ಲೂಟಿ *ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು ಗ್ರಾಮಾಂತರ/ ಹೊಸೂರು (ತಮಿಳುನಾಡು): ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಮೇಲೂಮಲೈ ಕಣಿವೆ ರಸ್ತೆ ದರೋಡೆಕೋರರ ಹಾಟ್​ಸ್ಪಾಟ್ ಆಗಿದೆ. ದರೋಡೆಕೋರರ ತಂಡಗಳು ಸಕ್ರಿಯವಾಗಿದ್ದು, ರಸ್ತೆಯಲ್ಲಿ ಸಂಚರಿಸುವ ಲಾರಿ ಅಡ್ಡಗಟ್ಟಿ ಮಾಲುಗಳನ್ನು ದೋಚುವ ಕೃತ್ಯ ಹೆಚ್ಚಾಗುತ್ತಿದೆ. ಇದರಿಂದಾಗಿ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ಲಾರಿ ಚಾಲಕರು ಹಿಂದೇಟು ಹಾಕುವಂತಾಗಿದೆ.

ಹೌದು. ಮಂಗಳವಾರ ಇಂಥಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಮೊಬೈಲ್ ಫೋನ್ ಸಾಗಿಸುತ್ತಿದ್ದ ಕಂಟೇನರ್ ಅಡ್ಡಗಟ್ಟಿ ಸಂಪೂರ್ಣ ಮಾಲನ್ನು ಲೂಟಿ ಮಾಡಲಾಗಿದೆ. ಜತೆಗೆ ಲಾರಿ ಚಾಲಕ ಹಾಗೂ ಸಹಾಯಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಮರಕ್ಕೆ ಕಟ್ಟಿ ಪರಾರಿಯಾಗಿದ್ದಾರೆ.

16 ಕೋಟಿ ರೂ. ಮೌಲ್ಯದ ಮೊಬೈಲ್ ದರೋಡೆ: ಚೆನ್ನೈನಿಂದ ಮುಂಬೈ ಕಡೆ ಕಂಟೇನರ್​ನಲ್ಲಿ ಸಾಗಿಸುತ್ತಿದ್ದ 16 ಕೋಟಿ ರೂ.ಮೌಲ್ಯದ ಮೊಬೈಲ್​ಗಳನ್ನು ದರೋಡೆಕೋರರು ಕೊಳ್ಳೆ ಹೊಡೆದಿದ್ದಾರೆ. ಪೂರ್ವ ನಿಯೋಜನೆಯಂತೆ ಕೃತ್ಯ ಎಸಗುತ್ತಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಎಲ್ಲಿಂದ ಲಾರಿ ಬರುತ್ತಿದೆ, ಲಾರಿಯಲ್ಲಿ ಯಾವ ಮಾಲು ಸಾಕಣೆಯಾಗುತ್ತಿದೆ, ಲಾರಿ ಎಲ್ಲಿಗೆ ಹೊರಡುತ್ತದೆ, ಎಷ್ಟೊತ್ತಿಗೆ ಮೇಲೂಮಲೈ ಕಣಿವೆ ಹತ್ತಿರ ಬರುತ್ತದೆ ಎಂಬುದನ್ನು ಪೂರ್ವ ನಿಯೋಜನೆಯಂತೆ ನೀಲಿನಕ್ಷೆ ತಯಾರಿಸಲಾಗುತ್ತಿದೆ. ಲಾರಿ ಅಡ್ಡಗಟ್ಟಿ ದರೋಡೆ ಮಾಡಿದ ಬಳಿಕ ಮತ್ತೊಂದು ಲಾರಿಯಲ್ಲಿ ಅದನ್ನು ಬೇರೆಡೆ ಸಾಗಿಸುವ ಕೃತ್ಯ ನಡೆಯುತ್ತಿದೆ, ಇದಕ್ಕಾಗಿಯೇ ಮತ್ತೊಂದು ಲಾರಿ ಮೂಲಕ ದರೋಡೆ ಮಾಡುವ ಲಾರಿಯನ್ನು ಹಿಂಬಾಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ನವರಾತ್ರಿ ಉತ್ಸವ: ದುರ್ಗಾ ಪೆಂಡಾಲ್​ಗೆ ನಿಯಮ ಸಡಿಲಿಸಿದ ಕೋರ್ಟ್​ಮರಕ್ಕೆ ಕಟ್ಟಿ ಹಲ್ಲೆ: ಸುಮಾರು 10 ಮಂದಿಯ ದರೋಡೆಕೋರರ ಗುಂಪು, ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮೇಲೂಮಲೈ ಕಣಿವೆಯಲ್ಲಿ ಲಾರಿ ಅಡ್ಡಿಗಟ್ಟಿದೆ. ಮಾರಕಾಸ್ತ್ರಗಳನ್ನು ತೋರಿಸಿ ಚಾಲಕ ಮತ್ತು ಸಹಾಯಕನ್ನು ಕೆಳಗೆಳಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಸಮೀಪದಲ್ಲಿನ ಮರವೊಂದಕ್ಕೆ ಇಬ್ಬರನ್ನು ಕಟ್ಟಿಹಾಕಿ ಕೂಗಾಡದಂತೆ ಬೆದರಿಕೆ ಹಾಕಿದ್ದಾರೆ. ನಂತರ ಹೊಸೂರು ಕಡೆಗೆ 10 ಕಿಮೀ ದೂರದ ಅಳಗುಬಾವಿ ಗ್ರಾಮ ಸಮೀಪಕ್ಕೆ ಲಾರಿ ಕೊಂಡೊಯ್ದು ಮತ್ತೊಂದು ಲಾರಿಗೆ ಸರಕು ತುಂಬಿಕೊಂಡು ಪರಾರಿಯಾಗಿದ್ದಾರೆ.

ರಾತ್ರಿ ಅದೇ ಮಾರ್ಗದಲ್ಲಿ ಬಂದ ಆಂಬುಲೆನ್ಸ್ ಚಾಲಕನೊಬ್ಬ ಚಾಲಕ ಹಾಗೂ ಸಹಾಯಕರಿಬ್ಬರೂ ಬೊಬ್ಬಿಡುತ್ತಿರುವ ದನಿ ಕೇಳಿಸಿಕೊಂಡು ಹತ್ತಿರ ಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಆಂಬುಲೆನ್ಸ್ ಚಾಲಕನೇ ಇಬ್ಬರನ್ನು ರಕ್ಷಿಸಿದ್ದು, ಪೊಲೀಸರ ಸಹಾಯದಿಂದ ಅವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಪೊಲೀಸರ ಸೇವೆ ಶ್ಲಾಘನೀಯ, ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಡಿಸಿ ಜಿ.ಜಗದೀಶ್ ಬಣ್ಣನೆಪೊಲೀಸರ ಕಾರ್ಯಾಚರಣೆ: ಈ ಬಗ್ಗೆ ಸೂಲಗಿರಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ದರೋಡೆಕೋರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಹೆದ್ದಾರಿಯಲ್ಲಿ ದರೋಡೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಕಾಬಂಧಿ ಹಾಕುವ ಮೂಲಕ ದರೋಡೆ ಪ್ರಕರಣ ನಿಯಂತ್ರಿಸಲು ಯೋಜನೆ ರೂಪಿಸಲಾಗಿದೆ. ಚಾಲಕರಿಂದ ದರೋಡೆಕೋರರ ಚಹರೆ ಮತ್ತಿತರ ವಿಷಯ ಕಲೆಹಾಕಿದ್ದು ಶೀಘ್ರದಲ್ಲೇ ದರೋಡೆಕೋರರನ್ನು ಬಂಧಿಸುವುದಾಗಿ ಸೂಲಗಿರಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಮ್ರ ದರೋಡೆ: ಕೆಲ ದಿನಗಳ ಹಿಂದಷ್ಟೆ ಚೆನ್ನೈನಿಂದ ಬೆಂಗಳೂರಿನ ಕಡೆಗೆ ತಾಮ್ರ ಕೊಂಡೊಯ್ಯುತ್ತಿದ್ದ ಲಾರಿಯನ್ನೂ ಮೇಲೂಮಲೈ ಸಮೀಪದ ಕಣಿವೆಯಲ್ಲಿ ತಡೆದು ದರೋಡೆಕೋರರ ಗುಂಪೊಂದು ದರೋಡೆ ಮಾಡಿತ್ತು. ಮತ್ತೊಂದು ಲಾರಿಯ ಮೂಲಕ ಲಾರಿಯಲ್ಲಿನ ಸರಕನ್ನು ಸಾಗಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೊಬೈಲ್​ಫೋನ್ ಕಳುವಿನ ಹಿಂದೆಯೂ ಇದೇ ತಂಡದ ಕೈವಾಡವಿರಬಹುದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ದರೋಡೆಕೋರರರು ಕೃತ್ಯ ಎಸಗಿದ ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಮೇಲೂಮಲೈ ಕಣಿವೆ ಸ್ಥಳದಲ್ಲಿ ಸೂಲಗಿರಿ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net