ಬಿಸಿಲೇ ಕಪ್ಪಗಿದೆಯೆಂದು ಭಾಸವಾಗುವಂತೆ ಹೊಳೆವ ಆಯುಧಗಳು!

WhatsApp-Image-2024-03-31-at-10.31.54-PM
Published on

| ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ, (ಸ್ವರ್ಣವಲ್ಲೀ ಮಹಾಸಂಸ್ಥಾನ, ಸೋಂದಾ, ಶಿರಸಿ)

ಶ್ರೀ ವಸಿಷ್ಠರು ಶ್ರೀರಾಮನಿಗೆ ಹೇಳುತ್ತಿರುವ ಮಂಡಪೊಪಾಖ್ಯಾನ ಮತ್ತೊಂದು ಯುದ್ಧದ ಸನ್ನಿವೇಶದವರೆಗೆ ಬಂದಿದೆ. ಹಿಂದೆ ಲೀಲಾ ಮಹಾರಾಣಿಯ ಪತಿಯಾಗಿದ್ದ ಪದ್ಮಮಹಾರಾಜನು ಯುದ್ಧದಲ್ಲಿ ಮಡಿದಿದ್ದರಿಂದಲೇ ಮಂಡಪೊಪಾಖ್ಯಾನ ಮುಂದು ವರಿದುಕೊಂಡು ಬಂದಿದೆ. ಈಗ ಪದ್ಮಮಹಾರಾಜರ ಮುಂದಿನ ಜನ್ಮದ ಘಟನೆಗಳು ನಡೆಯುತ್ತಿದ್ದು ಅಲ್ಲಿಯೂ ಯುದ್ಧ ಸಂಘಟಿಸಿದೆ. ಕೆಲವರು ಸಾಮಂತ ರಾಜರೇ ಸಾಮ್ರಾಟನ ಮೇಲೆ ಯುದ್ಧ ಸಾರಿದ್ದಾರೆ.

ಈಗಾಗಲೇ ವರ್ಣಿಸಿದಂತೆ ಬೇರೆ ಬೇರೆ ವ್ಯೂಹಗಳಿಂದ ಪೆಟ್ಟು ತಿಂದು ಹೊರಗೆ ಬರುತ್ತಿರುವ ಸೈನಿಕರ ಉಚ್ಚ ಸ್ತರದ ಆಕ್ರಂದನ ಅಲ್ಲಿ ಕೇಳಿಬರುತ್ತಿದೆ. ಮುದ್ಗರ (ಒನಕೆಯಂತಹ ಆಯುಧ) ಗಳನ್ನು ಕೈಯಲ್ಲಿ ಎತ್ತಿಹಿಡಿದು ಬೀಸುತ್ತಿರುವುದನ್ನು ನೋಡಿದರೆ ಆ ಮುದ್ಗರಗಳ ಸಮೂಹಗಳಿಗೆ ಉನ್ಮತ್ತತೆ ಬಂದಿದೆಯೇನೋ ಅನ್ನಿಸುವಂತಿದೆ. ಕೆಲವು ಆಯುಧ (ಬಾಣ) ಗಳಿಂದ ಕಪ್ಪು ಬಣ್ಣದ ಕಿರಣಗಳಂತಹ ಹೊಗೆ ಹೊರಬರುತ್ತಿದೆ. ಆ ಹೊಗೆಯಿಂದ ನಿರ್ವಣವಾದ ಮೋಡಗಳಿಂದ ಸೂರ್ಯನು ಮುಚ್ಚಿಹೋಗಿ ಕಾಣಿಸದಂತಾಗಿದ್ದಾನೆ ಇತ್ಯಾದಿ ಅಂಶಗಳೂ ಸೇರಿ ಯುದ್ಧ ರಂಗದಲ್ಲಿ ಎರಡೂ ಪಕ್ಷಗಳ ಸೇನೆಗಳು ಸನ್ನದ್ಧ್ಧಾಗಿ ನಿಂತಿರುವುದನ್ನು ಸುದೀರ್ಘವಾಗಿ ಹಿಂದೆ ವರ್ಣಿಸಲಾಗಿದೆ.

ಈಗ ಯುದ್ಧ ಪ್ರಾರಂಭವಾಗಿದೆ. ಈ ದೃಶ್ಯವನ್ನು ಲೀಲಾಮಹಾರಾಣಿ ಶ್ರೀದೇವಿಯ ಜೊತೆಯಲ್ಲಿ ಸೂಕ್ಷ್ಮರೂಪದಿಂದ ಆಕಾಶದಲ್ಲಿ ನಿಂತು ನೋಡುತ್ತಿದ್ದಾಳೆ. ಶ್ರೀ ವಸಿಷ್ಠರ ಕಾವ್ಯಶೈಲಿಯ ಯುದ್ಧವರ್ಣನೆ ಮುಂದುವರಿದು ಇನ್ನು ಸ್ವಲ್ಪದರಲ್ಲಿಯೇ ಮುಗಿಯಲಿಕ್ಕಿದೆ.

ಶ್ರೀ ವಸಿಷ್ಠರು ಹೇಳಿದರು: ‘‘ಶ್ರೀರಾಮ!

ಆ ಸೇನೆಗಳು ಎಷ್ಟು ಭಯಂಕರವಾಗಿದೆ

ಯೆಂದರೆ ಪಾತಾಲಕುಹರದಿಂದ ಕ್ಷೋಭೆ

ಗೊಂಡು ಮೇಲೆದ್ದು ಬಂದ ಘೊರಾಂಧ

ಕಾರವೋ! ಲೋಕಾಲೋಕಪರ್ವತವೇ ಉನ್ಮಾದದಿಂದ ನರ್ತಿಸುತ್ತ ಚಲಿಸುತ್ತಿರುವ ತನ್ನ ಸಾನುಪ್ರದೇಶದೊಂದಿಗೆ ಎದುರಿಗೆ ಬಂದು ನಿಂತಿದೆಯೋ! ಮಹಾನರಕಗಳ ಸಮೂಹವೇ ಭೂಮಿಗೆ ಬಂದು ಎದ್ದು ನಿಂತಿದೆಯೋ ! ಎಂಬಂತಿತ್ತು ಆ ದೃಶ್ಯ.’

‘‘ಒಟ್ಟಾರೆ ಹೇಳಬೇಕೆಂದರೆ ಅಗಾಧವಾದ ಇಡೀ ಭುವನಕೋಶವನ್ನು ಶೀಘ್ರದಲ್ಲಿಯೇ ಮಹಾಸಮುದ್ರವನ್ನಾಗಿ ಮಾಡಲು ತೊಡಗಿರುವ ಅನಂತ ಪ್ರವಾಹವೇ ಅಲ್ಲಿ ಹರಿದಿದೆ. ಆ ಪ್ರವಾಹಕ್ಕೆ ನೀರು ಮೂಡಿಸಲು ಝುಳಪಿಸಲ್ಪಡುತ್ತಿರುವ ಕುಂತ, ಮುಸಲ, ಖಡ್ಗ, ಪರಶ್ವಧ ಮುಂತಾದ ಆಯುಧಗಳೆಂಬ ಮೋಡಗಳು ಅಲ್ಲಿ ತುಂಬಿವೆ. ಆ ಆಯುಧಗಳು ಹಗಲಿನ ಬಿಸಿಲನ್ನೇ ಕಪ್ಪಗಿದೆಯೋ ಎಂಬಂತೆ ಮಾಡಬಲ್ಲಷ್ಟು ಹೊಳೆಯುತ್ತಿವೆ. ಅಂತಹ ಸೇನಾ ಪ್ರವಾಹವನ್ನು ಲೀಲಾ ಮಹಾರಾಣಿಯು ಶ್ರೀದೇವಿಯೊಡನೆ ಆಕಾಶದಲ್ಲಿ ನಿಂತು ನೋಡಿದಳು.’

(ಇಲ್ಲಿಗೆ 32 ನೇ ಸರ್ಗ ಮುಗಿಯುತ್ತದೆ)

ಶ್ರೀರಾಮನು ಹೇಳಿದನು: ‘‘ಪೂಜ್ಯರೇ !

ನೀವು ಹೇಳುತ್ತಿರುವ ಯುದ್ಧದ ಬಗ್ಗೆ ಸಂಕ್ಷೇಪ

ದಲ್ಲಿ ಸ್ವಲ್ಪ ಹೇಳಿರಿ. ಯಾಕೆಂದರೆ ಕೇಳುತ್ತಿ

ರುವ ನನಗೆ ಶ್ರವಣೇಂದ್ರಿಯಕ್ಕೆ ನಿಮ್ಮ ಮಾತು

ಗಳಿಂದ ಒಂದು ರೀತಿಯ ಆಹ್ಲಾ

ದದ ಅನುಭವವಾಗುತ್ತಿದೆ ಅದಕ್ಕೆ

ಕಾರಣವೇನೆಂದರೆ ಯುದ್ಧದ

ಕಥೆ, ತತ್ತೊ್ವೕಪದೇಶ ವನ್ನು ಕೇಳಲು ಪುರೋಧವನ್ನುಂಟು ಮಾಡುವ ಆಲಸ್ಯವನ್ನು ಪರಿಹರಿಸುತ್ತದೆ.’ ಶ್ರೀವಸಿಷ್ಠರು ಉತ್ತರಿಸಿದರು: ‘‘ಶ್ರೀರಾಮ! ಇಷ್ಟುಹೊತ್ತಿನವರೆಗೆ ಆಕಾಶದಲ್ಲಿ ನಿಂತಿದ್ದ ಆ ಇಬ್ಬರು ದೇವಿಯರು (ಜ್ಞಾನದೇವಿ ಮತ್ತು ಲೀಲಾಮಹಾರಾಣಿ) ಆ ಯುದ್ಧವನ್ನು ನೋಡಲು ಆಕಾಶದಲ್ಲಿಯೇ ತಮ್ಮ ಸತ್ಯ ಸಂಕಲ್ಪ ಶಕ್ತಿಯಿಂದ ಕಲ್ಪಿಸಲ್ಪಟ್ಟ ಸುಂದರವಾದ ಮತ್ತು ಸ್ಥಿರವಾದ ವಿಮಾನಗಳನ್ನು ಏರಿ ಕುಳಿತರು. ಇದೇ ಸಂದರ್ಭದಲ್ಲಿಯೇ ಅತಿ ಸಮೀಪ ಬಂದಿರುವ ಸೇನೆಗಳ ಮಧ್ಯದಲ್ಲಿ ಒಂದು ಘಟನೆ ನಡೆಯಿತು. ಈ ಘಟನೆಯಿಂದಲೇ ಯುದ್ಧ ನಿಜವಾಗಿ ಪ್ರಾರಂಭವಾಯಿತು. ಅದೇನೆಂದರೆ ವಿರುದ್ಧ ಪಕ್ಷದ ಸೇನೆಯಿಂದ ಪ್ರಳಯಸಮುದ್ರದ ತೆರೆಯಂತೆ ಹಾರಿ ಬಂದ ನಿರ್ಭೀತನಾದ ಭಟನೋರ್ವನು ಲೀಲಾ ಮಹಾರಾಣಿಯ ಪತಿಯಾದ ವಿಧೂರಥನ (ಲೀಲಾ ಮಹಾರಾಣಿಯ ಪತಿ ಪದ್ಮಮಹಾರಾಜ. ಅವನು ಮರಣ ಹೊಂದಿ ಮುಂದಿನ ಜನ್ಮದಲ್ಲಿ ಈಗ ವಿಧೂರಥನಾಗಿ ಹುಟ್ಟಿ ಮಹಾರಾಜನಾಗಿದ್ದಾನೆ) ಮೇಲೆ ಆಕ್ರಮಣ ಮಾಡಲು ಬಂದನು. ಇದನ್ನು ಸಹಿಸಲಾಗದ ವಿಧೂರಥ ಆ ಭಟನ ಮೇಲೆ ಮುದ್ಗರ ಎಂಬ ಆಯುಧವನ್ನು ಪ್ರಯೋಗಿಸಿದನು. ಪರ್ವತದ ಸಾನುವಿನ ಮೇಲೆ ಶಿಲೆಯ ಪ್ರಹಾರವನ್ನು ಮಾಡುವಂತೆ ಆ ಭಟನ ಎದೆಯ ಮೇಲೆ ಮುದ್ಗರ ಪ್ರಹಾರವನ್ನು ಮಾಡಿದನು.’

ರಾಜನ ಈ ಪ್ರವೃತ್ತಿಯ ಪ್ರದರ್ಶನವಾದ ತಕ್ಷಣವೇ ತೀವ್ರಯುದ್ಧ ಪ್ರಾರಂಭವಾಯಿತು. ಪ್ರಲಯಕಾಲದ ಸಮುದ್ರವೇಗದಿಂದ ಎರಡೂ ಸೇನೆಗಳ ಸೈನಿಕರು ತಮ್ಮ ತಮ್ಮ ಶಸ್ತ್ರಗಳ ಪ್ರಹಾರವನ್ನು ಪ್ರಾರಂಭಿಸಿದರು. ಬೆಂಕಿಯಂತಿರುವ ಅವನ ಶಸ್ತ್ರಗಳಿಗೆ ವಿದ್ಯುತ್ತಿನಂತಹ ಪ್ರಭೆಯಿದೆ. ಹಾಗಾಗಿ ಶಸ್ತ್ರಗಳ ಪ್ರಹಾರವು ಅಗ್ನಿಯನ್ನು ಮತ್ತು ವಿದ್ಯುತ್(ಮಿಂಚು)ಅನ್ನು ಚೆಲ್ಲುತ್ತಿರುವಂತೆ ಕಾಣುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net