Hunger Strike | ಮರಾಠ ಮೀಸಲಾತಿ ಪ್ರತಿಭಟನೆ; ಬೇಡಿಕೆ ಈಡೇರಿಕೆಗೆ ಸರ್ಕಾರದ ನಿರ್ಧಾರ, ನಮ್ಮದೇ ಗೆಲುವು ಎಂದ ಮನೋಜ್ ಜರಂಗೆ!

Manoj Jarange Hunger Strike
Published on

Hunger Strike: ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಐದು ದಿನಗಳಿಂದ ಮರಾಠಾ ಕಾರ್ಯಕರ್ತ ಮನೋಜ್ ಜರಂಗೆ ನಡೆಸಿದ್ದ ಉಪವಾಸ ಸತ್ಯಾಗ್ರಹವನ್ನು ಮಹಾರಾಷ್ಟ್ರ ಸರ್ಕಾರದೊಂದಿಗಿನ ಮಾತುಕತೆಯ ಬಳಿಕ ಹಿಂಪಡೆಯಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಮುಂಬೈನ ಆಜಾದ್ ಮೈದಾನದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕಾರ್ಯಕರ್ತ ಮನೋಜ್ ಜರಂಗೇ-ಪಾಟೀಲ್ ಮತ್ತು ಅವರ ಬೆಂಬಲಿಗರು ಸತ್ಯಾಗ್ರಹ ನಡೆಸುತ್ತಿದ್ದರು.

ಇಡೀ ಸಮುದಾಯವನ್ನು ಒಬಿಸಿ ಎಂದು ವರ್ಗೀಕರಿಸಿ ನಂತರ ಮೀಸಲಾತಿಯಿಂದ ಪ್ರಯೋಜನ ಸಿಗುವಂತೆ ಮಾಡಲು, ಎಲ್ಲಾ ಮರಾಠರಿಗೆ ಕುನ್ಬಿ ಪ್ರಮಾಣಪತ್ರಗಳನ್ನು ಸರ್ಕಾರ ನೀಡಬೇಕೆಂದು ಜರಂಗೇ-ಪಾಟೀಲ್ ಒತ್ತಾಯಿಸುತ್ತಿದ್ದರು.(ಕುನ್ಬಿಗಳು ಮರಾಠರ ರೈತ ಉಪಜಾತಿ)

ಹಿರಿಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ನೇತೃತ್ವದ ಸರ್ಕಾರಿ ನಿಯೋಗವು ಮೀಸಲಾತಿ ವಿಷಯದ ಕುರಿತು ಮುಂದಿನ ದಾರಿಯ ಕುರಿತು ಚರ್ಚಿಸಿತು. ಮರಾಠಾ ಕೋಟಾ ಕುರಿತ ಸಂಪುಟ ಉಪಸಮಿತಿಯ ನೇತೃತ್ವ ವಹಿಸಿರುವ ವಿಖೆ ಪಾಟೀಲ್, ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದ್ದು, ಸಭೆಯಲ್ಲಿ ಜರಂಗೇ ಪಾಟೀಲ್ ಅವರಿಗೆ ತಿಳಿಸಲಾಗಿದೆ ಎಂದು ವರದಿಯಾಗಿದೆ.

ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಒಂದು ವಾರದೊಳಗೆ ಪರಿಹಾರ ಮತ್ತು ಸರ್ಕಾರಿ ಉದ್ಯೋಗಗಳನ್ನು ನೀಡುವುದಾಗಿಯೂ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ನೇತೃತ್ವದ ಸಂಪುಟ ಉಪಸಮಿತಿಯ ಸಭೆ ಬಳಿಕ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಜರಂಗೆ, ನಾವು ಗೆದ್ದಿದ್ದೇವೆ ಎಂದರು.ಸೆಪ್ಟೆಂಬರ್ ಅಂತ್ಯದ ವೇಳೆಗೆ ಪ್ರತಿಭಟನಾಕಾರರ ವಿರುದ್ಧದ ಹೂಡಿದ್ದ ಪ್ರಕರಣಗಳನ್ನು ಹಿಂಪಡೆಯುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ಜರಂಗೆ ತಿಳಿಸಿದರು. ಮರಾಠಾ ಕೋಟಾ ಬೇಡಿಕೆಗಳ ಕುರಿತು ಮಹಾರಾಷ್ಟ್ರ ಸರ್ಕಾರವು ಅಧಿಕೃತ ನಿರ್ಣಯಗಳನ್ನು ಹೊರಡಿಸಿದರೆ ಇಂದು ರಾತ್ರಿ 9 ಗಂಟೆಯೊಳಗೆ ಮುಂಬೈನಿಂದ ಹೊರಡುತ್ತೇವೆ ಎಂದು ಜರಂಗೆ ಹೇಳಿದರು.

ಹೈಕೋರ್ಟ್​​ ಎಚ್ಚರಿಕೆ

ಮರಾಠಾ ಕಾರ್ಯಕರ್ತ ಮನೋಜ್ ಜರಂಗೆ ಮತ್ತು ಅವರ ಬೆಂಬಲಿಗರು ಆಜಾದ್ ಮೈದಾನವನ್ನು ತೆರವುಗೊಳಿಸದಿದ್ದರೆ, ಅದರ ವೆಚ್ಚ ಭರಿಸುವುದರೊಂದಿಗೆ ಮತ್ತು ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಎಚ್ಚರಿಸಿತ್ತು. ಮಧ್ಯಾಹ್ನ 3 ಗಂಟೆಯೊಳಗೆ ಸಹಜ ಸ್ಥಿತಿಗೆ ಮರಳಬೇಕೆಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಆರತಿ ಸಾಥೆ ಅವರಿದ್ದ ಪೀಠ ತಿಳಿಸಿತ್ತು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net