ಶಾಂತಿ, ಸಹಬಾಳ್ವೆಯ ಬದುಕಿಗೆ ವಚನಗಳು ದಿವ್ಯ ಔಷಧ

Udgatane
ಆಲೂರು ಸಿದ್ದಾಪುರ ಮುರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಶರಣ ಸಾಹಿತ್ಯ ಸಂಸ್ಥಾಪನ ದಿನ ಕಾರ್ಯಕ್ರಮವನ್ನು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ ಉದ್ಘಾಟಿಸಿದರು. ಮೂರ್ತಿ, ಪ್ರಕಾಶ್, ವಿರೂಪಾಕ್ಷಯ್ಯ, ಬಸವರಾಜ್, ನಟರಾಜ್, ಪರಮೇಶ್ ಇತರರಿದ್ದರು.
Published on

ಶನಿವಾರಸಂತೆ: ಮನುಷ್ಯನ ಆರೋಗ್ಯ, ನೆಮ್ಮದಿ ಹಾಗೂ ಶಾಂತಿ ಸಹಬಾಳ್ವೆಯ ಬದುಕಿಗೆ ಶರಣರ ವಚನಗಳ ಅರಿವು ದಿವ್ಯ ಔಷಧ ಇದ್ದಂತೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ಆಲೂರು ಸಿದ್ದಾಪುರ ಮುರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಸುತ್ತೂರು ಮಹಾ ಸಂಸ್ಥಾನದ ಡಾ.ಶಿವರಾತ್ರೀಶ್ವರ ರಾಜೇಂದ್ರ ಸ್ವಾಮೀಜಿ ಅವರ 110ನೇ ಸಂಸ್ಮರಣೆ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮನುಷ್ಯನ ನೆಮ್ಮದಿಯುತ ಬದುಕಿಗೆ ಹನ್ನೆರಡನೇ ಶತಮಾನದ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯದ ಅಧ್ಯಯನ ಹಾಗೂ ಅರಿವು ಆಭರಣಗಳೇ ಹೊರತು ಹಣ ಅಥವಾ ಒಡವೆಗಳಲ್ಲ. ಹನ್ನೆರಡನೇ ಶತಮಾನದ ಸಮಾಜದಲ್ಲಿ ಮೇಲು-ಕೀಳು, ಬಡವ-ಬಲ್ಲಿದ ಎಂಬ ಗೊಡವೆಗಳ ವಿರುದ್ಧ ಸಮರ ಸಾರಿದ ಶರಣರು ಇವನಾರವ ಎನ್ನದೇ ಇವ ನಮ್ಮವ ಎಂದು ಎಲ್ಲರನ್ನೂ ಅಪ್ಪಿದರು.ಲೋಕದ ಡೊಂಕನ್ನು ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ಮನ ಹಾಗೂ ತನುವ ಸಂತೈಸಿಕೊಳ್ಳಿ ಎಂದು ವ್ಯಕ್ತಿತ್ವಕ್ಕೆ ಹೊಳಪು ನೀಡಿದರು. ಸಪ್ತಸೂತ್ರಗಳನ್ನು ಮನುಷ್ಯ ತನ್ನ ನಿಜ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಎಂತಹ ಸುಂದರ ಬದುಕು ಕಟ್ಟಬಹುದು ಎಂಬುದನ್ನು ವಚನದ ಸಾರಿ ಮುಖೇನ ಹೇಳಿದ ಬಗೆಗಳನ್ನು ಶ್ರೀಗಳು ವಿಶ್ಲೇಷಿಸಿದರು.

ಕೊಡಗು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷೆ ರುಬೀನಾ ಮಾತನಾಡಿ, ಶರಣರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳ ಮೂಲಕ ಸಮಾಜದಲ್ಲಿ ಬಿತ್ತುವ ಕೆಲಸವಾಗಬೇಕಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮನುಷ್ಯನ ನೆಮ್ಮದಿಯ ಬದುಕಿಗೆ ವಚನಗಳು ದೀವಿಗೆಗಳಾಗಿವೆ. ಇಂತಹ ಶರಣ ಸಾಹಿತ್ಯವನ್ನು ನಾಡಿನೆಲ್ಲೆಡೆ ಪಸರಿಸಲು ಶರಣ ಸಾಹಿತ್ಯ ಪರಿಷತ್ತು ಕಾರ್ಯೋನ್ಮುಖವಾಗಿದೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ನಾಡಿನ ಜನಸಮುದಾಯಕ್ಕೆ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅರೆ ಸರ್ಕಾರದ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುತ್ತೂರು ಸಂಸ್ಥಾನದ ಅಧೀನದಲ್ಲಿ ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳು, 5 ಸಾವಿರಕ್ಕೂ ಹೆಚ್ಚು ನೌಕರರು, ಲಕ್ಷೋಪಲಕ್ಷ ವಿದ್ಯಾರ್ಥಿಗಳಿದ್ದಾರೆ. ಹಾಗೆಯೇ ಆರೋಗ್ಯ ಕ್ಷೇತ್ರದಲ್ಲೂ ಮಂಚೂಣಿಯಲ್ಲಿದೆ. ಡಾ.ರಾಜೇಂದ್ರ ಸ್ಚಾಮೀಜಿ ಕಟ್ಟಿದ ಈ ಎಲ್ಲ ಸಂಸ್ಥೆಗಳನ್ನು ಈಗಿನ ಜಗದ್ಗುರು ಜನರ ಮನೆ ಬಾಗಿಲಿಗೆ ಕೊಂಡೊಯ್ದಿದ್ದಾರೆ ಎಂದರು.

ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್, ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಎಂ.ಬಿ. ಬಸವರಾಜು, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.ಪರಮೇಶ್, ಶಾಲೆಯ ಪೋಷಕ ಸಮಿತಿ ಪದಾಧಿಕಾರಿಗಳಾದ ಶಶಿಧರ್, ಬೀನಾ, ಜಗದೀಶ್, ಧರ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net