Vikram-32 bit Chip: ಪ್ರಧಾನಿ ನರೇಂದ್ರ ಮೋದಿಗೆ ಮೊದಲ ಸ್ವದೇಶಿ ನಿರ್ಮಿತ ಚಿಪ್​​ ಪ್ರದಾನ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್​​, ಚಿಪ್​​ನ ವಿಶೇಷತೆ ಏನು..?

Vikram-32 bit chip presented to PM Modi
Published on

Vikram-32 bit Chip: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಕ್ರಮ್ -32 ಬಿಟ್ ಪ್ರೊಸೆಸರ್ ಚಿಪ್​​ನ್ನು ಮಂಗಳವಾರ ದೆಹಲಿಯಲ್ಲಿ ನಡೆದ ಸೆಮಿಕಾನ್ ಇಂಡಿಯಾ 2025 ಕಾರ್ಯಕ್ರಮದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಕೆಲವು ವರ್ಷಗಳ ಹಿಂದೆ, ಪ್ರಧಾನ ಮಂತ್ರಿಗಳ ದೂರದೃಷ್ಟಿಯ ದೃಷ್ಟಿಕೋನದಿಂದ ನಾವು ಭಾರತ ಸೆಮಿಕಂಡಕ್ಟರ್ ಮಿಷನ್ ಅನ್ನು ಪ್ರಾರಂಭಿಸಿದ್ದು, 3.5 ವರ್ಷಗಳ ಅಲ್ಪಾವಧಿಯಲ್ಲಿ, ಜಗತ್ತು ಭಾರತವನ್ನು ವಿಶ್ವಾಸದಿಂದ ಕಾಣುವಂತೆ ಮಾಡಿದ್ದೇವೆ. ಇಂದು, ಐದು ಸೆಮಿಕಂಡಕ್ಟರ್ ಘಟಕಗಳ ನಿರ್ಮಾಣವು ಅಂತ್ಯಂತ ವೇಗದಲ್ಲಿ ನಡೆಯುತ್ತಿದ್ದು, ನಾವು ಮೊದಲ ಮೇಡ್ ಇನ್ ಇಂಡಿಯಾ ಚಿಪ್ ಅನ್ನು ಪ್ರಧಾನಿ ಮೋದಿಗೆ ಪ್ರಸ್ತುತಪಡಿಸಿದ್ದೇವೆ ಎಂದರು.

ನಾವು ಅಭೂತಪೂರ್ವ ಕಾಲದಲ್ಲಿ ಬದುಕುತ್ತಿದ್ದು, ಜಾಗತಿಕ ನೀತಿ ಭಾರಿ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಈ ಪ್ರಕ್ಷುಬ್ಧ ಕಾಲದಲ್ಲಿ, ಭಾರತವು ಸ್ಥಿರತೆ ಮತ್ತು ಬೆಳವಣಿಗೆಯ ದೀಪಸ್ತಂಭವಾಗಿ ನಿಂತಿದೆ. ನಮ್ಮ ನೀತಿಗಳು ಸ್ಥಿರವಾಗಿದ್ದು, ನೀವು ಭಾರತಕ್ಕೆ ಬರಬೇಕು ಎಂದು ಬೇರೆ ಬೇರೆ ದೇಶದವರನ್ನು ಆಹ್ವಾನಿಸಿದರು.

ಮೇಡ್ ಇನ್ ಇಂಡಿಯಾ' ಚಿಪ್ ವಿಕ್ರಮ್ 32-ಬಿಟ್ ಪ್ರೊಸೆಸರ್ ಎಂದರೇನು?

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೆಮಿಕಂಡಕ್ಟರ್ ಲ್ಯಾಬ್ ಅಭಿವೃದ್ಧಿಪಡಿಸಿದ ವಿಕ್ರಮ್, ಭಾರತದ ಮೊದಲ ಸಂಪೂರ್ಣ ಸ್ಥಳೀಯ 32-ಬಿಟ್ ಮೈಕ್ರೋಪ್ರೊಸೆಸರ್ ಆಗಿದ್ದು, ಕಠಿಣ ಉಡಾವಣಾ ವಾಹನ ಪರಿಸ್ಥಿತಿಗಳಲ್ಲಿ ಬಳಸಲು ಅರ್ಹತೆ ಪಡೆದಿದೆ. ಪಂಜಾಬ್‌ನ ಮೊಹಾಲಿಯಲ್ಲಿರುವ ಸೆಮಿಕಂಡಕ್ಟರ್ ಹಬ್‌ನಲ್ಲಿ ಚಿಪ್‌ಗಳ ತಯಾರಿಕೆ ಮತ್ತು ಪ್ಯಾಕೇಜಿಂಗ್ ಮಾಡಲಾಗಿದೆ.

ಗುಜರಾತ್‌ನ ಸನಂದ್‌ನಲ್ಲಿರುವ ಹೊರಗುತ್ತಿಗೆ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ (OSAT) ಪೈಲಟ್ ಸೌಲಭ್ಯದಿಂದ ಸೆಮಿಕಂಡಕ್ಟರ್ ಕಂಪನಿ CG-Semi ಭಾರತದಲ್ಲಿ ತಯಾರಿಸಲಾದ ಮೊದಲ ಚಿಪ್ ಅನ್ನು ಹೊರತರುವ ನಿರೀಕ್ಷೆಯಿದೆ.ಕೇಂದ್ರ ಸರ್ಕಾರ 2023ರಲ್ಲಿ ಸನಂದ್‌ನಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸುವ ಮೊದಲ ಪ್ರಸ್ತಾವನೆಯನ್ನು ಅನುಮೋದಿಸಿತ್ತು.

ಡಿಸೈನ್ ಲಿಂಕ್ಡ್ ಇನ್ಸೆಂಟಿವ್ (DLI) ಯೋಜನೆಯ ಮೂಲಕ, ನವೋದ್ಯಮಗಳು ಮತ್ತು ನಾವೀನ್ಯಕಾರರನ್ನು ಬೆಂಬಲಿಸಲು 23 ಚಿಪ್ ವಿನ್ಯಾಸ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ವರ್ವೆಸೆಮಿ ಮೈಕ್ರೋಎಲೆಕ್ಟ್ರಾನಿಕ್ಸ್ ನಂತಹ ಕಂಪನಿಗಳು ರಕ್ಷಣಾ, ಏರೋಸ್ಪೇಸ್, ​​ಎಲೆಕ್ಟ್ರಿಕ್ ವಾಹನಗಳು ಮತ್ತು ಇಂಧನ ವ್ಯವಸ್ಥೆಗಳಿಗಾಗಿ ಸುಧಾರಿತ ಚಿಪ್‌ಗಳನ್ನು ರಚಿಸುತ್ತಿವೆ, ಭಾರತವು ಇನ್ನು ಮುಂದೆ ಕೇವಲ ಗ್ರಾಹಕರಾಗದೆ, ಅವುಗಳ ಸೃಷ್ಠಿಯನ್ನು ಸಹ ಮಾಡುತ್ತದೆ ಎನ್ನುವುದು ಇದರಿಂದ ಸ್ಪಷ್ಟ.

ಭಾರತ ಸರ್ಕಾರವು 2021 ರಲ್ಲಿ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM) ಅನ್ನು ಪ್ರಾರಂಭಿಸಿತು. ಆ ಮಿಷನ್ ಕೇವಲ ಮೂರುವರೆ ವರ್ಷಗಳಲ್ಲಿ ಫಲ ನೀಡಿದ್ದು, ಸರ್ಕಾರವು ಆರು ರಾಜ್ಯಗಳಲ್ಲಿ 1.60 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಹೂಡಿಕೆಯೊಂದಿಗೆ 10 ಸೆಮಿಕಂಡಕ್ಟರ್ ಉತ್ಪಾದನಾ ಯೋಜನೆಗಳನ್ನು ಅನುಮೋದಿಸಿದೆ : ಗುಜರಾತ್ , ಅಸ್ಸಾಂ , ಉತ್ತರ ಪ್ರದೇಶ , ಪಂಜಾಬ್ , ಒಡಿಶಾ ಮತ್ತು ಆಂಧ್ರಪ್ರದೇಶ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net