

ಮಂಡ್ಯ: ಕಾವೇರಿ ಚಳವಳಿಯ ಹೆಗ್ಗುರುತಾಗಿ ಮಾಜಿ ಸಂಸದ ಡಾ.ಜಿ.ಮಾದೇಗೌಡರ ನೇತೃತ್ವದಲ್ಲಿ ರಚನೆಗೊಂಡಿದ್ದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ 33 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಪುನರ್ರಚನೆಗೊಂಡಿದೆ. ಅಂತೆಯೇ ಸಮಿತಿಯ ನೂತನ ಅಧ್ಯಕ್ಷರಾಗಿ ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಆಯ್ಕೆಗೊಂಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಚರ್ಚೆ ನಂತರ ಪದಾಧಿಕಾರಿಗಳನ್ನು ಆಯ್ಕೆ ೋಷಣೆ ಮಾಡಲಾಯಿತು. ಹಿರಿಯ ಉಪಾಧ್ಯಕ್ಷರಾಗಿ ಕೆ.ಬೋರಯ್ಯ, ಡಾ.ಬಿ.ಶಿವಲಿಂಗಯ್ಯ, ಎಂ.ಬಿ.ಬೋರೇಗೌಡ, ಉಪಾಧ್ಯಕ್ಷರಾಗಿ ಎಸ್.ಕೆಂಪೇಗೌಡ, ಕೆ.ಎನ್.ಗುರುಪ್ರಸಾದ್, ಎಚ್.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಸುನಂದಾ ಜಯರಾಮು, ಸಂಘಟನಾ ಕಾರ್ಯದರ್ಶಿಯಾಗಿ ಎಚ್.ಸಿ.ಮಂಜುನಾಥ್, ಎಸ್.ನಾರಾಯಣ್, ಟಿ.ಎಸ್.ವೆಂಕಟೇಶ್, ಎಸ್.ಮಂಜೇಶ್ಗೌಡ, ಎಸ್.ಕೃಷ್ಣ, ಎಸ್.ಎಂ.ವೇಣುಗೋಪಾಲ್, ಎಂ.ಬಿ.ನಾಗಣ್ಣಗೌಡ, ಎಚ್.ಜಿ.ಪ್ರಭುಲಿಂಗು, ಎಂ.ವಿ.ಕೃಷ್ಣ, ಖಜಾಂಚಿಯಾಗಿ ಮುದ್ದೇಗೌಡ, ಸದಸ್ಯರಾಗಿ ಅಂಬುಜಮ್ಮ, ಎಂ.ಎನ್.ಮಹೇಶ್ಕುಮಾರ್, ಸಿ.ಮಂಜುನಾಥ್, ಸಿ.ಟಿ.ಮಂಜುನಾಥ್, ಎಲ್.ಸುರೇಶ್ ನೇಮಕಗೊಂಡಿದ್ದಾರೆ. ಇವರ ಜತೆಗೆ ಖಾಯಂ ಸದಸ್ಯರಾಗಿ ಜಿಲ್ಲೆಯ ಹಾಲಿ ಮತ್ತು ಮಾಜಿ ಸಂಸತ್ ಸದಸ್ಯರು, ವಿಧಾನಪರಿಷತ್ ಸದಸ್ಯರು, ಜಿಲ್ಲೆಯ ರಾಜಕೀಯ ಪಕ್ಷಗಳ ಹಾಲಿ ಜಿಲ್ಲಾಧ್ಯಕ್ಷ, ಪ್ರಗತಿಪರ ಹೋರಾಟ ಸಂಘಟನೆಗಳ ಅಧ್ಯಕ್ಷರು ಇರಲಿದ್ದಾರೆ.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ, ಹಿಂದಿನ ಸಮಿತಿಯ ಬ್ಯಾಂಕ್ ಖಾತೆಯಲ್ಲಿ 4,16,000 ರೂ ಇದೆ. 2024ರ ಮಾ.3ರವರೆಗೆ ಹಣಕಾಸು ವ್ಯವಹಾರ ನಡೆಸಲಾಗಿದೆ. ಆ ಹಣವನ್ನು ನೂತನವಾಗಿ ರಚನೆಗೊಂಡಿರುವ ಸಮಿತಿಯ ಖಾತೆಗೆ ವರ್ಗಾಯಿಸಿಕೊಂಡು ಮುಂದುವರೆಸಿಕೊಂಡು ಹೋಗಲಾಗುವುದು. ಹಳೆಯ ಸಮಿತಿ ರದ್ದುಗೊಂಡಿರುವುದರಿಂದ ಇನ್ನು ಮುಂದೆ ರೈತಪರ ಹೋರಾಟಗಳೆಲ್ಲವೂ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲೇ ಮುನ್ನಡೆಯಲಿದೆ. ಹಳೆಯ ಸಮಿತಿಯಲ್ಲಿದ್ದವರು ಬಹುತೇಕರು ಮರಣ ಹೊಂದಿದ್ದಾರೆ. ಇನ್ನು ಕೆಲವರು ಅನಾರೋಗ್ಯದ ದೃಷ್ಟಿಯಿಂದ ಸಮಿತಿಯ ಕಾರ್ಯಚಟುವಟಿಕೆಯಿಂದ ದೂರ ಉಳಿದಿದ್ದಾರೆ. ಆದರೂ ಅವರನ್ನು ಸಂಪೂರ್ಣವಾಗಿ ನಾವು ದೂರ ಸರಿಸಿಲ್ಲ. ಅವರ ಸಲಹೆ-ಮಾರ್ಗದರ್ಶನವನ್ನೂ ಪಡೆಯುವುದಾಗಿ ಹೇಳಿದರು.
ಮುಂದಿನ ದಿನಗಳಲ್ಲಿ ಸಮಿತಿ ವತಿಯಿಂದ ಬೆಂಗಳೂರಿಗೆ ಆರನೇ ಹಂತದಲ್ಲಿ ನೀಡಲು ರೂಪಿಸಿರುವ ಯೋಜನೆಯನ್ನು ತಕ್ಷಣವೇ ಕೈಬಿಡುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಲಾಗುವುದು. ಇದರಿಂದ ಕಾವೇರಿ ಕೊಳ್ಳ ಭಾಗದ ರೈತರು ಮತ್ತು ಕೃಷಿ ಚಟುವಟಿಕೆಗೆ ತುಂಬಲಾಗದ ನಷ್ಟ ಉಂಟಾಗಲಿದೆ. ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಜವಾಬ್ದಾರಿ ಹೊತ್ತು ಜಿಲ್ಲೆಯ ಶಾಸಕರನ್ನೊಳಗೊಂಡಂತೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಈ ನಿರ್ಧಾರವನ್ನು ರದ್ದುಗೊಳಿಸುವಂತೆ ಆಗ್ರಹಿಸುವುದಾಗಿ ತಿಳಿಸಿದರು.
ಹೇಮಾವತಿ ಮತ್ತು ಇತರೆ ಅಣೆಕಟ್ಟುಗಳಿಂದ ಕೂಡ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆಯನ್ನು ಸರ್ಕಾರ ಕೈಬಿಡಬೇಕು. ಕೆಆರ್ಎಸ್ ಅಣೆಕಟ್ಟೆಗೆ ಈಗಾಗಲೇ 94 ವರ್ಷ ಪೂರೈಸಿರುವುದರಿಂದ ಅದರ ಭದ್ರತೆಗೆ ಸರ್ಕಾರ ಜವಾಬ್ದಾರಿ ನಿರ್ವಹಿಸಿ ಸಮಾನಾಂತರ ಅಣೆಕಟ್ಟೆ ನಿರ್ಮಾಣದ ಯೋಜನೆಯನ್ನು ರೂಪಿಸುವಂತೆ ಸರ್ಕಾರ ಸಮಿತಿಯನ್ನು ಒತ್ತಾಯಿಸಲಿದೆ. ಮೈಶುಗರ್ ಕಾರ್ಖಾನೆ ಪ್ರಸ್ತುತ ಕಬ್ಬು ನುರಿಸಲಾರಂಭಿಸಿದ್ದು, ಕಂಪನಿಯೊಳಗೆ ಆಡಳಿತ ವೈಖರಿ, ಅಧಿಕಾರಿಗಳ ಬೇಜವಾಬ್ದಾರಿ ಕುರಿತು ಶಾಸಕರು, ಸಚಿವರು, ಜಿಲ್ಲಾಧಿಕಾರಿ ಗಮನಕ್ಕೆ ಹಲವಾರು ಬಾರಿ ತರಲಾಗಿದೆ. ಆದರೂ ಕಬ್ಬು ಬೆಳೆಗಾರರು, ಪ್ರಗತಿಪರ ಸಂಘಟನೆಗಳ ಸಮಿತಿಯ ಸಭೆಯನ್ನು ಕರೆಯದಿರುವುದು ಖಂಡನೀಯ. ಇದರ ಬಗ್ಗೆ ಜಿಲ್ಲಾಧಿಕಾರಿ ಕೂಡಲೇ ಸಚಿವರು, ಶಾಸಕರು, ಕಾರ್ಖಾನೆ ಆಡಳಿತ ಮಂಡಳಿ ಸಭೆ ಕರೆಯುವಂತೆ ಒತ್ತಾಯಿಸಿದರು.
ನೂತನ ಅಧ್ಯಕ್ಷ ಜಿ.ಬಿ.ಶಿವಕುಮಾರ್, ಪ್ರೊ.ಬಿ.ಶಿವಲಿಂಗಯ್ಯ, ಕೆ.ಬೋರಯ್ಯ, ಕೆ.ಚಂದ್ರಶೇಖರ್, ಎಸ್.ಕೃಷ್ಣ, ಎಸ್.ಎಂ.ವೇಣುಗೋಪಾಲ್, ನಾರಾಯಣ್, ಎಂ.ಬಿ.ನಾಗಣ್ಣಗೌಡ, ಮುದ್ದೇಗೌಡ ಇತರರಿದ್ದರು.