ಕರೊನಾ ಮೂರನೇ ಅಲೆಯನ್ನು ತಡೆಯಬಹುದಂತೆ!; ಅದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ...

Untitled-1
Published on

ನವದೆಹಲಿ: ಕರೊನಾ ಮೊದಲನೇ ಅಲೆ, ಎರಡನೇ ಅಲೆ ಆಯಿತು.. ಇನ್ನೇನು ಮೂರನೇ ಅಲೆ ಬಂದೇ ಬಿಡುತ್ತದೆ ಎನ್ನುತ್ತಿರುವಾಗ ಅದನ್ನು ತಡೆಯಬಹುದು ಎಂಬ ವಿಷಯವನ್ನು ಹೇಳಿದ್ದಾರೆ ಪರಿಣತರು. ಹಾಗಾದರೆ ಕರೊನಾ ಮೂರನೇ ಅಲೆಯನ್ನು ತಡೆಯಲು ಏನು ಮಾಡಬೇಕು ಎಂಬ ಕುರಿತು ಅವರು ಹೇಳಿರುವ ಅಂಶಗಳ ಕುರಿತ ಮಾಹಿತಿ ಇಲ್ಲಿದೆ.

ಏನೇ ಮಾಡಿದರೂ ಮುಂದಿನ ಆರರಿಂದ ಎಂಟು ವಾರಗಳಲ್ಲಿ ಕರೊನಾ ಮೂರನೇ ಅಲೆ ಭಾರತವನ್ನು ಪ್ರವೇಶಿಸುವುದು ಖಚಿತ ಎಂದು ಎಐಐಎಂಎಸ್​ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಈಗಾಗಲೇ ಮುನ್ನೆಚ್ಚರಿಕೆ ನೀಡಿದ್ದರ ಬೆನ್ನಿಗೇ ಇಂಥದ್ದೊಂದು ವಿಷಯ ಹೊರಬಿದ್ದಿರುವುದರಿಂದ ಜನರ ಆತಂಕ ಸ್ವಲ್ಪಮಟ್ಟಿಗೆ ಕಡಿಮೆಯಾದರೂ ಆದೀತು.

ಕರೊನಾ ಮೂರನೇ ಅಲೆ ಪ್ರವೇಶಿಸಲಿದೆ ಎಂಬ ಮಾತುಕತೆ ಎಲ್ಲೆಡೆ ನಡೆಯುತ್ತಿರುವ ನಡುವೆ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಹೇಳಿರುವ ವಿಚಾರವೊಂದು ಜನರಿಗೆ ಸ್ವಲ್ಪ ಸಮಾಧಾನ ನೀಡುವಂತಿದೆ. ಆದರೆ ಕರೊನಾ ಮೂರನೇ ಅಲೆಯನ್ನು ತಡೆಯುವುದು ಜನರ ಕೈಯಲ್ಲೇ ಇದೆ ಎಂಬುದನ್ನೂ ಅವರು ಒತ್ತಿ ಹೇಳಿದ್ದಾರೆ.

ಕರೊನಾ ಎರಡನೆ ಅಲೆಯೇ ಪ್ರವೇಶ ಮಾಡಿರದಂಥ ದೇಶಗಳೂ ಬಹಳಷ್ಟಿವೆ. ಹೀಗಿರುವಾಗ ನಾವು ಮೂರನೇ ಅಲೆಯನ್ನು ತಡೆಯುವುದು ಕಷ್ಟವೇನಲ್ಲ. ಎಲ್ಲರೂ ಲಸಿಕೆ ಹಾಕಿಸಿಕೊಂಡರೆ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಿದರೆ ಕರೊನಾ ಮೂರನೇ ಅಲೆ ಬರಲು ಹೇಗೆ ಸಾಧ್ಯ? ಎಂಬುದಾಗಿ ಪ್ರಶ್ನಿಸಿರುವ ಅವರು, ಈ ಮೂಲಕ ಕರೊನಾ ಮೂರನೇ ಅಲೆಯನ್ನು ತಡೆಯಬಹುದು ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net