ವಯನಾಡು ಭೂಕುಸಿತ: ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿಯೂ ಇದೇ ಸಮಸ್ಯೆ ಸೃಷ್ಟಿಯಾಗಿದೆ: ಎಚ್​.ಡಿ. ಕುಮಾರಸ್ವಾಮಿ

ವಿಜಯವಾಣಿ - 2024-07-30T113434.081
Published on

ಬೆಂಗಳೂರು: ನಿರಂತರವಾಗಿ ಸುರಿದ ಮಳೆಗೆ ಕೇರಳದ ವಯನಾಡಿನಲ್ಲಿ ಭೂಕುಸಿತ ಉಂಟಾಗಿದ್ದು, ಮಣ್ಣಿನಡಿಯಲ್ಲಿ ಸಿಲುಕಿ 41 ಮಂದಿ ಮೃತಪಟ್ಟಿದ್ದಾರೆ. ಘಟನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಕೇರಳದ ವಯನಾಡು ಬಳಿ ಉಂಟಾಗಿರುವ ಭೀಕರ ಭೂಕುಸಿತದಿಂದ ಅನೇಕರು ಧಾರುಣ ಸಾವನ್ನಪ್ಪಿರುವ ಘಟನೆ ನನಗೆ ತೀವ್ರ ಆಘಾತ ಉಂಟು ಮಾಡಿದೆ. ಇನ್ನು ಅನೇಕರು ಮಣ್ಣಿನಡಿಯಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ ಎಂದರು.

"ಪ್ರಧಾನಿ ನರೇಂದ್ರ ಮೋದಿ ಅವರು ತುರ್ತಾಗಿ ಸ್ಪಂದಿಸಿದ್ದು, ಕೇರಳದ ಮುಖ್ಯಮಂತ್ರಿಗಳ ಜತೆ ಮಾತನಾಡಿ, ರಕ್ಷಣಾ ಕಾರ್ಯಗಳಿಗೆ ಸಕಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಮಾನ್ಯ ಪ್ರಧಾನಿಗಳನ್ನು ನಾನು ಅಭಿನಂದಿಸುತ್ತೇನೆ. ದುರಂತದಲ್ಲಿ ಸಾವನ್ನಪ್ಪಿದವರಿಗೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಎಲ್ಲಾ ಕುಟುಂಬಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಸಂತಾಪ ಸೂಚಿಸಿದರು.

"ಕೇರಳ ಸೇರಿ ದೇಶದೆಲ್ಲೆಡೆ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ, ನೆರೆ ಉಂಟಾಗಿದೆ. ಕರ್ನಾಟಕದಲ್ಲಿಯೂ ಅನೇಕ ಜಿಲ್ಲೆಗಳಲ್ಲಿ ಇದೇ ಸಮಸ್ಯೆ ಸೃಷ್ಟಿಯಾಗಿದೆ. ಈ ಬಗ್ಗೆ ಸಾರ್ವಜನಿಕರು ಬಹಳ ಎಚ್ಚರಿಕೆ ವಹಿಸಬೇಕು ಹಾಗೂ ರಾಜ್ಯ ಸರಕಾರವೂ 24X7 ರಕ್ಷಣಾ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟು, ಅಪಾಯವಿರುವ ಸ್ಥಳಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸಬೇಕು" ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net