ಟೀಮ್ ಇಂಡಿಯಾ ಹೆಡ್​ ಕೋಚ್​ಗೆ ಹೊಸ ಪಟ್ಟ! ಗೌತಿ ಕುರಿತು ಆ್ಯಂಡಿ ಫ್ಲವರ್​ ಗುಣಗಾನ

ವಿಜಯವಾಣಿ - 2024-07-30T103513.960
Published on

ನವದೆಹಲಿ: ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಆದ ಬಳಿಕ ಇತ್ತೀಚೆಗಷ್ಟೇ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಗೌತಮ್ ಗಂಭೀರ್​, ಶ್ರೀಲಂಕಾ ವಿರುದ್ಧದ ವೈಟ್ ಬಾಲ್ ಪಂದ್ಯಗಳು ಹಾಗೂ ಹಲವು ವಿಷಯಗಳ ಕುರಿತು ಮುಕ್ತವಾಗಿ ಹಂಚಿಕೊಂಡಿದ್ದರು. ಟಿ20 ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಗೆದ್ದ ನಂತರ ಭಾರತ ತಂಡದ ಹೆಡ್​ ಕೋಚ್ ಸ್ಥಾನಕ್ಕೆ ರಾಹುಲ್ ದ್ರಾವಿಡ್​ ನಿವೃತ್ತಿ ಘೋಷಿಸಿದರು. ದ್ರಾವಿಡ್​ ಬೆನ್ನಲ್ಲೇ ನೂತನ ಹೆಡ್​ ಕೋಚ್ ಸ್ಥಾನ ಅಲಂಕರಿಸಿದ ಗೌತಿ ಇದೀಗ ತಮ್ಮ ಮುಂದಾಳತ್ವದಲ್ಲಿ ಭಾರತ ತಂಡವನ್ನು ಗೆಲುವಿನೆಡೆಗೆ ಸಾಗಿಸುತ್ತಿದ್ದಾರೆ. ಇದೀಗ ಗಂಭೀರ್​ ಕುರಿತು ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ಕೋಚ್​ ಆ್ಯಂಡಿ ಫ್ಲವರ್​ ಮಾತನಾಡಿದ್ದು, ಭಾರೀ ಭರವಸೆ ವ್ಯಕ್ತಪಡಿಸಿದ್ದಾರೆ.

"ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್​ರನ್ನು ಸ್ಪೂರ್ತಿದಾಯಕ ನಾಯಕ ಎಂದು ಕರೆಯಲು ಇದು ಸರಿಯಾದ ಸಮಯ. ದಿಗ್ಗಜ ಬ್ಯಾಟ್ಸ್​ಮನ್ ಗಂಭೀರ್ ಅವರ ಪ್ರತಿಭೆ ಮತ್ತು ಕೌಶಲ್ಯಗಳು ಹೆಡ್ ಕೋಚ್ ಸ್ಥಾನಕ್ಕೆ ಮತ್ತಷ್ಟು ಪುಷ್ಟಿ ನೀಡಲಿದೆ. ಅವರ ಹೊಸ ಕೆಲಸದಲ್ಲಿನ ಯಶಸ್ಸಿಗೆ ಇದೆಲ್ಲವೂ ಸಹಕಾರಿಯಾಗಲಿದೆ. ಟೀಮ್ ಇಂಡಿಯಾವನ್ನು ಗೆಲುವಿನ ಹಾದಿಗೆ ಕೊಂಡೊಯ್ಯುವಲ್ಲಿ ಗೌತಿ ಪಾತ್ರ ಹೆಚ್ಚಿರುತ್ತದೆ" ಎಂಬುದರಲ್ಲಿ ಅನುಮಾನವೇ ಬೇಡ ಎಂದು ಹೇಳಿದ್ದಾರೆ.

"ಸಕ್ಸಸ್​ಫುಲ್​ ಹೆಡ್​ ಕೋಚ್​ಗೆ ಇರಬೇಕಾದ ಎಲ್ಲಾ ಲಕ್ಷಣಗಳು ಅವರಿಗಿದೆ. ಈ ಹಿಂದೆ ಯಾವ ತಂಡಕ್ಕೂ ಗೌತಿ ಕೋಚ್ ಆಗಿ ಕೆಲಸ ಮಾಡದೆ ಇರಬಹುದು. ಅದು ಇಲ್ಲಿ ಲೆಕ್ಕಕ್ಕಿಲ್ಲ. ತಮ್ಮ ಹುದ್ದೆಯಲ್ಲಿ ಅವರು ಯಶಸ್ಸು ಕಾಣುವುದಂತು ನಿಶ್ಚಿತ. ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರರ ಬಗ್ಗೆ ಗೌತಿಗೆ ಬಲವಾದ ಅಭಿಪ್ರಾಯಗಳಿವೆ. ಯಾರಿಂದ ಯಾವ ಪ್ರತಿಭೆ ಹೊರತೆಗಿಯಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಇದರ ಬಗ್ಗೆ ಗೌತಮ್​ ಸ್ಪಷ್ಟವಾಗಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಸ್ತುತ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಂಡಿರುವುದು ಸದ್ಯ ಕ್ರಿಕೆಟ್ ಪ್ರಿಯರ ಸಂತಸಕ್ಕೆ ಕಾರಣವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net