

ದೇಶದ ಮೊದಲ ಪ್ರಧಾನಮಂತ್ರಿ ಜವಾಹರ ಲಾಲ್ ನೆಹರು ಅವರು ‘ಜಲಾಶಯಗಳು ಆಧುನಿಕ ಭಾರತದ ದೇವಾಲಯಗಳು’ ಎಂದು ಕರೆದರು. ಅದಕ್ಕೆ ಅನ್ವರ್ಥವಾಗುವ ರೀತಿಯಲ್ಲಿ ಕರ್ನಾಟಕದ ಅಣೆಕಟ್ಟೆಗಳು ನಾಡಿನ ಜನರ ಏಳಿಗೆ, ರಾಜ್ಯದ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡಿವೆ. ‘ಜಲ’ ಬಹು ಆಯಾಮದ ‘ಆಶಯ’ಗಳಾಗಿ ಹೊರಹೊಮ್ಮಿವೆ. ಕೃಷ್ಣಾ ಹಾಗೂ ಕಾವೇರಿ ಕಣಿವೆ, ಬಯಲುಸೀಮೆಯ ಪೆನ್ನಾರ್, ಪಶ್ಚಿಮಘಟ್ಟದ ವಾಹಿನಿಗಳು ಮಹತ್ವದ ಜಲಧಾರೆಗಳು. ಭಾರಿ, ಮಧ್ಯಮ ಹಾಗೂ ಸಣ್ಣ ಗಾತ್ರದವು ಸೇರಿ 252 ಅಣೆಕಟ್ಟೆಗಳು ರಾಜ್ಯದಲ್ಲಿವೆ.
ಈ ಪೈಕಿ ಆಲಮಟ್ಟಿ, ತುಂಗಭದ್ರಾ, ಕೃಷ್ಣರಾಜಸಾಗರ, ಲಿಂಗನಮಕ್ಕಿ, ಮಾಣಿ, ಸೂಪಾ, ವರಾಹಿ, ಕದ್ರಾ, ಕೊಡಸಳ್ಳಿ, ಭದ್ರಾ, ತುಂಗಾ ಮೇಲ್ದಂಡೆ, ಹೇಮಾವತಿ, ಹಾರಂಗಿ, ವಾಣಿ ವಿಲಾಸ ಸಾಗರ, ಬಸವಸಾಗರ (ನಾರಾಯಣಪುರ), ಕಾರಂಜಾ, ಕಬಿನಿ, ರೇಣುಕಾ ಸಾಗರ, ಚಕ್ರ, ನವಿಲುತೀರ್ಥ ಅಣೆಕಟ್ಟೆಗಳು ರಾಜ್ಯವನ್ನು ಪ್ರಗತಿಪಥದತ್ತ ಮುನ್ನ ಡೆಸಿವೆ. ಕುಡಿಯುವ ನೀರು, ನೀರಾವರಿ ಪ್ರದೇಶ ಸೃಜನೆ, ವಿದ್ಯುತ್ ಉತ್ಪಾದನೆ ಸೇರಿ ಒಟ್ಟಾರೆ ಪ್ರಗತಿಚಕ್ರದ ಅವಿಭಾಜ್ಯ ಅಂಗವಾಗಿವೆ. ಭಾರಿ, ಮಧ್ಯಮಗಾತ್ರದ ನೀರಾವರಿ ಯೋಜನೆಗಳು, ಕಿರು ಅಣೆಕಟ್ಟೆಗಳ ಹೊರತಾಗಿ ಬ್ಯಾರೇಜ್, ಏತ ನೀರಾವರಿ, ಕೆರೆ-ಕುಂಟೆ, ತೆರೆದ ಬಾವಿ, ಕೊಳವೆ ಬಾವಿಗಳು ನೀರಾವರಿ ಪ್ರದೇಶ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸಿವೆ.
ಕುಡಿಯುವ ನೀರು ಪೂರೈಕೆ, ನೀರಾವರಿ ಸೌಲಭ್ಯ ಒಂದು ತೂಕವಾದರೆ, ವಿದ್ಯುತ್ ಉತ್ಪಾದನೆಯೇ ಮತ್ತೊಂದು ತೂಕವಾಗಿದೆ. ರಾಜ್ಯದ ಸ್ಥಾಪಿತ ಜಲ ಮತ್ತು ಶಾಖೋತ್ಪನ್ನ ಮೂಲದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 11,706 ಮೆಗಾ ವಾಟ್ಗಳಾಗಿವೆ. ಈ ಪೈಕಿ ಜಲಾಶಯಗಳ ನೀರು ಬಳಸಿ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ 3,700 ಮೆಗಾ ವಾಟ್ಗಳಾಗಿದೆ. ಶಾಖೋತ್ಪನ್ನ, ಸೌರ, ಪವನ ಮತ್ತಿತರ ಮೂಲದ ವಿದ್ಯುತ್ ಉತ್ಪಾದನಾ ವೆಚ್ಚ ಪ್ರತಿ ಯೂನಿಟ್ಗೆ ಸರಾಸರಿ ಐದು ರೂ.ಗಳಿದೆ. ಆದರೆ ಜಲಮೂಲದ ವಿದ್ಯುತ್ ಉತ್ಪಾದನಾ ವೆಚ್ಚ ತುಂಬ ಕಡಿಮೆ. ಹಾಗಾಗಿ, ಅಣೆಕಟ್ಟೆಗಳು ವಿದ್ಯುತ್ ವಲಯಕ್ಕೆ ವರದಾನವಾಗಿವೆ. ಶರಾವತಿ ಕೇಂದ್ರ ವಿದ್ಯುತ್ ದರ ಯೂನಿಟ್ಗೆ 71 ಪೈಸೆ, ಕಾಳಿ 92 ಪೈಸೆ, ಮಹಾತ್ಮಗಾಂಧಿ ಜಲ ವಿದ್ಯುತ್ 1.12 ರೂ., ವರಾಹಿ- 1.92 ರೂ. ಮತ್ತು ಗೇರುಸೊಪ್ಪ- 2.07 ರೂ. ದರದಲ್ಲಿ ಸಿಗುತ್ತದೆ.
ರಾಜ್ಯದಲ್ಲಿ ಒಟ್ಟು 100 ಲಕ್ಷ ಹೆಕ್ಟೇರ್ (ಒಂದು ಕೋಟಿ ಎಕರೆ) ಸಾಗುವಳಿ ಜಮೀನಿದೆ. ಇದರಲ್ಲಿ ಕಳೆದ ಆರ್ಥಿಕ ವರ್ಷಾಂತ್ಯದ (2024ರ ಮಾರ್ಚ್)ವರೆಗೆ 40.66 ಲಕ್ಷ ಹೆಕ್ಟೇರ್ ಕೃಷಿ ಜಮೀನಿಗೆ ನೀರುಣಿಸಲು ಸಾಧ್ಯವಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಬಳಿ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ವಾಣಿ ವಿಲಾಸ ಸಾಗರ ರಾಜ್ಯದ ಮೊದಲ ಅಣೆಕಟ್ಟೆ. ಮೈಸೂರು ಮಹಾರಾಜರು 1907ರಲ್ಲಿ 30 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಡ್ಯಾಂ ಕಟ್ಟಿಸಿದ್ದಾರೆ. ಚಿತ್ರದುರ್ಗ, ಹಿರಿಯೂರು, ಹೊಸದುರ್ಗ ಮತ್ತು ಚಳ್ಳಕೆರೆ ತಾಲೂಕುಗಳಿಗೆ ಕುಡಿಯುವ ನೀರಿಗೆ ಆಸರೆ, 24,710 ಎಕರೆ ಜಮೀನಿಗೆ ನೀರುಣಿಸುತ್ತಿದೆ. ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಣೆಕಟ್ಟೆ ನಿರ್ವಣಕ್ಕೆ 1966ರಲ್ಲಿ ಅಂದಿನ ಪ್ರಧಾನಿ ಲಾಲ್ ಬಹದೂರ್ ಶಾಸ್ತ್ರಿ ಅಡಿಗಲ್ಲು ಹಾಕಿದ್ದರು. 130 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಈ ಅಣೆಕಟ್ಟೆ ನಿರ್ಮಾಣ ಪೂರ್ಣಗೊಳ್ಳಲು 33 ವರ್ಷಗಳೇ ಹಿಡಿದವು!
ಕೃಷ್ಣಾ, ಕಾವೇರಿ ಕಣಿವೆಗಳ ನದಿ ಮತ್ತು ತೊರೆಗಳು ಭತ್ತ, ರಾಗಿ, ಜೋಳ, ಸಜ್ಜೆ ಮತ್ತಿತರ ಆಹಾರಧಾನ್ಯಗಳು, ಕಬ್ಬು, ಹತ್ತಿ, ಶೇಂಗಾ, ಮೆಣಸಿನಕಾಯಿ, ಸೂರ್ಯಕಾಂತಿ ಮುಂತಾದ ವಾಣಿಜ್ಯ ಬೆಳೆಗಳು, ತರಕಾರಿ, ಹಣ್ಣುಗಳನ್ನು ಬೆಳೆಯುವ ಕಣಜಗಳನ್ನು ನೆಲೆಗೊಳಿಸಿವೆ. ಕಾಲಕಾಲಕ್ಕೆ ಅಣೆಕಟ್ಟೆಗಳ ಪುನಃಶ್ಚೇತನ, ಸಮರ್ಪಕ ನಿರ್ವಹಣೆಗೆ ಗಮನಹರಿಸಲಾಗಿದೆ. ವಿಶ್ವಬ್ಯಾಂಕ್ ನೆರವಿನಡಿ ಕಳೆದ ವರ್ಷ 541 ಕೋಟಿ ರೂ. ವೆಚ್ಚದಲ್ಲಿ 21 ಅಣೆಕಟ್ಟೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಚಾಲ್ತಿ ವರ್ಷ 1500 ಕೋಟಿ ರೂ. ವೆಚ್ಚದಲ್ಲಿ 58 ಹಾಗೂ 314.22 ಕೋಟಿ ರೂ. ವೆಚ್ಚದಲ್ಲಿ ಎಂಟು ಅಣೆಕಟ್ಟೆಗಳ ಪುನಃಶ್ಚೇತನ ಕೈಗೆತ್ತಿಕೊಳ್ಳಲಾಗಿದೆ.
ಅಚ್ಚುಕಟ್ಟು ಪ್ರದೇಶದ ಸಮಗ್ರ ಅಭಿವೃದ್ಧಿಗೆ ಆರು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಿಗಳು, ನಾಲ್ಕು ವಿಶೇಷ ಉದ್ದೇಶಿತ ವಾಹಿನಿಗಳಾದ ಕೃಷ್ಣಾಭಾಗ್ಯ ಜಲನಿಗಮ, ಕಾವೇರಿ ನೀರಾವರಿ ನಿಗಮ, ಕರ್ನಾಟಕ ನೀರಾವರಿ ನಿಗಮ, ನೀರಾವರಿ ಯೋಜನಾ ವಲಯ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮ ಕಾರ್ಯನಿರ್ವಹಿಸುತ್ತಿವೆ. ಸಮಗ್ರ ಜಲಸಂಪನ್ಮೂಲ ನಿರ್ವಹಣೆಗೆ ನೈಪುಣ್ಯ ಕೇಂದ್ರವನ್ನು 2014ರಲ್ಲಿ ಸ್ಥಾಪಿಸಲಾಗಿದೆ.