ಅಡ್ಡ ನಿಂತಿದ್ದ ವ್ಯಕ್ತಿಯ ಬಳಿ ದಾರಿ ಬಿಡುವಂತೆ ಕೇಳಿ ಮುಂದೆ ಸಾಗಿದ ಆನೆ! ಮನಮುಟ್ಟುವ ವಿಡಿಯೋ ವೈರಲ್​ | Elephant

Elephant
Published on

Elephant : ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಸಾವಿರಾರು ವಿಡಿಯೋಗಳು ಪ್ರತಿನಿತ್ಯ ಹರಿದಾಡುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣಕ್ಕೆ ನೆಟ್ಟಿಗರ ಗಮನ ಸೆಳೆದು ಕ್ಷಣಾರ್ಧದಲ್ಲಿ ವೈರಲ್​ ಆಗಿಬಿಡುತ್ತವೆ. ಅಂಥದ್ದೇ ವಿಡಿಯೋವೊಂದು ಇದೀಗ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಆನೆ ನಮ್ಮ ಎದುರಿಗೆ ಬಂದರೆ ಸಾಕು ಒಂದು ಕ್ಷಣ ಭಯ ಬೀಳುತ್ತೇವೆ. ಇನ್ನು ಆನೆ ತನ್ನ ಹಾದಿಯಲ್ಲಿ ಸಾಗುವಾಗ ಬಹಳ ಗತ್ತಿನಿಂದ ಹೆಜ್ಜೆ ಹಾಕುತ್ತವೆ. ತನ್ನ ದಾರಿಯಲ್ಲಿ ಅಡ್ಡಲಾಗಿ ಸಿಗುವ ವಸ್ತುವಾಗಿರಲಿ ಅಥವಾ ಮನಷ್ಯನಾಗಿರಲಿ ತುಳಿದು ಅಥವಾ ಬದಿಗೆಸೆದು ಮುಂದೆ ಸಾಗುತ್ತವೆ. ಇದನ್ನು ಬಿಟ್ಟು ತನ್ನ ದಾರಿಯಲ್ಲಿ ಅಡ್ಡಲಾಗಿ ನಿಂತಿರುವ ಮನುಷ್ಯನ ಬಳಿ ದಾರಿ ಬಿಡು ಎಂದು ಆನೆ ಕೇಳಿರುವುದನ್ನು ಎಂದಾದರೂ ನೋಡಿದ್ದೀರಾ? ಕನಸಿನಲ್ಲೂ ಇದನ್ನು ನಂಬಲಾಗುವುದಿಲ್ಲ. ಆದರೆ, ಇಂಥದ್ದೊಂದು ಅಪರೂಪದ ಘಟನೆ ಇದೀಗ ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Nature is Amazing ಹೆಸರಿನ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ 23 ಸೆಕೆಂಡಿನ ಆನೆಯ ವಿಡಿಯೋ ಎಲ್ಲರ ಮನ ಸೆಳೆಯುತ್ತಿದೆ. ಆನೆಗಳಲ್ಲೂ ಸೌಜನ್ಯತೆ ಇದೆ ಎಂಬುದಕ್ಕೆ ಈ ವೈರಲ್​ ವಿಡಿಯೋ ಸಾಕ್ಷಿಯಾಗಿದೆ. ಈ ವಿಡಿಯೋ ನೋಡಿದರೆ ನೀವು ಫಿದಾ ಆಗದೇ ಇರಲಾರಿರಿ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎಂಬುದನ್ನು ನಾವೀಗ ತಿಳಿಯೋಣ.

ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮನೆಯ ಮುಂದಿನ ವಿಶಾಲ ಪ್ರದೇಶದಲ್ಲಿ ಏನೋ ನೋಡುತ್ತಾ ನಿಂತಿರುತ್ತಾನೆ. ಈ ವೇಳೆ ಆತನ ಹಿಂದೆ ಆನೆ ಬರುತ್ತಿರುವುದು ಕೂಡ ಅವನ ಅರಿವಿಗೆ ಬರುವುದಿಲ್ಲ. ನಿಧಾನವಾಗಿ ಸದ್ದು ಮಾಡದೇ ಬರುವ ಆನೆ, ವ್ಯಕ್ತಿಯ ಸಮೀಪ ಬರುತ್ತಿದ್ದಂತೆ ಅಡ್ಡ ನಿಂತಿರುವ ಆತನ ಮೇಲೆ ದಾಳಿ ಮಾಡುವ ರೀತಿ ಸೊಂಡಿಲು ಮೇಲಕ್ಕೆ ಎತ್ತಿಕೊಂಡು ಮುನ್ನುಗುತ್ತದೆ. ಆದರೆ, ಮರುಕ್ಷಣದಲ್ಲಿ ಸುಮ್ಮನಾಗುವ ಆನೆ, ತಾನು ಹಿಂದೆ ನಿಂತಿರುವುದಾಗಿ ಮತ್ತು ಮುಂದೆ ಹೋಗಲು ದಾರಿ ಬಿಡುವಂತೆ ಆ ವ್ಯಕ್ತಿಯನ್ನು ಕೇಳುತ್ತಿರುವುದಾಗಿ ವಿಡಿಯೋದಲ್ಲಿ ಗೋಚರವಾಗುತ್ತದೆ. ಆನೆಯನ್ನು ನೋಡಿದ ಕೂಡಲೇ ಶಾಕ್​ ಆಗುವ ವ್ಯಕ್ತಿ ಅಲ್ಲಿಂದ ಕಾಲ್ಕಿತ್ತು ಪಕ್ಕಕ್ಕೆ ಓಡಿ ಬರುತ್ತಾನೆ. ಬಳಿಕ ಆನೆ ಸಾವಧಾನವಾಗಿ ಮುಂದಕ್ಕೆ ಹೋಗುತ್ತದೆ. ಇದಿಷ್ಟು ದೃಶ್ಯ ವಿಡಿಯೋದಲ್ಲಿದೆ.

ಆನೆಯು ಆ ವ್ಯಕ್ತಿ ಸ್ವಲ್ಪವೂ ತೊಂದರೆ ಕೊಡುವುದಿಲ್ಲ. ಇದೀಗ ವಿಡಿಯೋ ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ. ಈ ವಿಡಿಯೋ ಕೇವಲ ಮನರಂಜನೆ ಮಾತ್ರವಲ್ಲದೆ ಪ್ರಾಣಿಗಳ ಅರಿವಿನ ಸಾಮರ್ಥ್ಯ ಮತ್ತು ಅವರ ಭಾವನಾತ್ಮಕ ಬುದ್ಧಿವಂತಿಕೆಯನ್ನು ತೋರಿಸುತ್ತದೆ. ಜೀವಿಗಳಲ್ಲೂ ಮಾನವೀಯತೆ ಇದೆ ಎಂಬುದನ್ನು ಈ ವಿಡಿಯೋ ಸಾರಿದೆ. ಅನೇಕರು ಆನೆಯ ಸೌಮ್ಯ ಸ್ವಭಾವವನ್ನು ಕೊಂಡಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net