VIDEO| ಯುವತಿಯನ್ನ ಕೂಡಿಹಾಕಿ, ಹಿಂಸೆ ಕೊಟ್ಟವನ ಮನೆ ಉಡೀಸ್​ ಮಾಡಿದ ಸರ್ಕಾರ; ನಮ್ಮಲಿ ಯಾವಾಗೆಂದ ನೆಟ್ಟಿಗರು

Ayaan Pathan
Published on

ಭೋಪಾಲ್​: ಆಸ್ತಿ ವಿವಾದದ ವಿಚಾರವಾಗಿ ಯುವತಿಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಖಾಸಗಿ ಅಂಗಕ್ಕೆ ಖಾರದಪುಡಿ ಹಾಕಿ ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರವು ಆರೋಪಿ ಅಯಾನ್​ ಪಠಾಣ್​ ಮನೆಯನ್ನು ಬುಲ್ಡೋಜರ್​ನಿಂದ ನೆಲಸಮಗೊಳಿಸಿದೆ.

ಆರೋಪಿ ಅಯಾನ್​ ಪಠಾಣ್​ ಮನೆಯು ನಕಲಿ ದಾಖಲೆಗಳನ್ನು ಸೃಜಿಸಿ ರಸ್ತೆಯ ಮೇಲೆ ನಿರ್ಮಿಸಲಾಗಿತ್ತು ಎಂದು ಆರೋಪಿಸಿದ ಅಧಿಕಾರಿಗಳು ಆತ ವಾಸವಿದ್ದ ಮನೆಯನ್ನು ನೆಲಸಮಗೊಳಿಸಿದ್ದಾರೆ. ಬುಲ್ಡೋಜರ್​ನಿಂದ ಮನೆ ನೆಲಸಮಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಕರ್ನಾಟಕದಲ್ಲಿ ಈ ಕ್ರಮ ಯಾವಾಗ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಆರೋಪಿ ಅಯಾನ್​ ಪಠಾಣ್​ ಹಾಗು ಯುವತಿ ನೆರೆಹೊರೆಯವರಾಗಿದ್ದು, ಹಲವು ವರ್ಷಗಳಿಂದ ಎರಡು ಕುಟುಂಬಗಳ ನಡುವೆ ಆಸ್ತಿ ವಿಚಾರವಾಗಿ ಗಲಾಟೆ ನಡೆಯುತ್ತಿದೆ. ಇದನ್ನು ಅರಿತ ಆರೋಪಿ ಅಯಾನ್​ ಯುವತಿಯನ್ನು ತನ್ನ ಪ್ರೇಮದ ಜಾಲಕ್ಕೆ ಬೀಳಿಸಿ ಆಕೆಯ ತಾಯಿಯ ಹೆಸರಿನಲ್ಲಿರುವ ಆಸ್ತಿಯನ್ನು ಲಪಟಾಯಿಸಲು ಮುಂದಾಗಿದ್ದ.

ಆರೋಪಿಯ ಸಂಚು ಅರಿತ ಯುವತಿ  ಆತನಿಗೆ ವಿರೋಧ ವ್ಯಕ್ತಪಡಿಸಿದಳು. ಆಗ ಆತ ಯುವತಿಯನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಒಂದು ತಿಂಗಳ ಕಾಲ ಅತ್ಯಾಚಾರ ಎಸಗಿದ್ದಾನೆ. ಆಕೆಯ ಕೂಗಾಟ ಹೆಚ್ಚಾದಾಗ ಈ ಸದ್ದು ನೆರೆ ಹೊರೆಯವರಿಗೆ ಕೇಳಿಸಬಾರದೆಂದು ಯುವತಿಯ ಬಾಯಿಗೆ ಮೆಣಸಿನ ಪುಡಿ ಸುರಿದು ಆಕೆಯ ತುಟಿಗೆ ಫೆವಿಕ್ವಿಕ್ ಹಚ್ಚಿ ಬಾಯಿ ಮುಚ್ಚಿದ್ದಾನೆ.

ಯುವತಿಯನ್ನು ಕೂಡಿ ಹಾಕಲಾಗಿದೆ ಎಂದು ವಿಚಾರ ತಿಳಿದ ಪೊಲೀಸರು ಆರೋಪಿ ಮನೆ ಮೇಲೆ ದಾಳಿ ನಡೆಸಿ ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ರಾಷ್ಟ್ರವ್ಯಾಪಿ ಸದ್ದು ಮಾಡಿದ್ದು, ತೀವ್ರತೆಯನ್ನು ಅರಿತ ಗುನಾ ಜಿಲ್ಲಾಡಳಿತ ನೋಟಿಸ್​ ನೀಡಿ ಆರೋಪಿಯ ಮನೆಯನ್ನು ಬುಲ್ಡೋಜರ್ ಮೂಲಕ ಕೆಡವಿದೆ.

ಇತ್ತ ಈ ಸುದ್ದಿ ವೈರಲ್​ ಆಗುತ್ತಿದ್ದಂತೆ ಹಲವರು ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಆರೋಪಿ ಫಯಾಜ್​ ಮನೆಯನ್ನು ಬುಲ್ಡೋಜರ್​ ಮೂಲಕ ಧ್ವಂಸ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ನ್ಯಾಯ ಎಲ್ಲರಿಗೂ ಒಂದೇ ಆಗಿದ್ದು, ಕರ್ನಾಟಕ ಸರ್ಕಾರ ಕೂಡಲೇ ಈ ಕ್ರಮವನ್ನು ಜಾರಿಗೆ ತರುವಂತೆ ನೆಟ್ಟಿಗರು, ಸಂಘ-ಸಂಸ್ಥೆಗಳು ಆಗ್ರಹಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net