

ಸಿಕ್ಕಿಂ: ಮೇಘಸ್ಫೋಟದಿಂದ ಸಿಕ್ಕಿಂನ ತೀಸ್ತಾ ನದಿಯಲ್ಲಿ ಉಂಟಾದ ದಿಢೀರ್ ಪ್ರವಾಹದಲ್ಲಿ ಸಿಲುಕಿ 23 ಸೇನಾ ಸಿಬ್ಬಂದಿ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಸೈನಿಕರ ಪತ್ತೆಗಾಗಿ ಬಹು ದೊಡ್ಡ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿರುವುದಾಗಿ ಸೇನೆ ತಿಳಿಸಿದೆ. ಇದೀಗ ಸಿಕ್ಕಿಂನಿಂದ ಪಶ್ಚಿಮ ಬಂಗಾಳಕ್ಕೆ ಸಂಪರ್ಕ ಕಪ್ಲಿಸುವ ರಸ್ತೆಯೂ ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿರುವ ಭಯಾನಕ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಕ್ಕಿಂನಲ್ಲಿ ಉಕ್ಕಿ ಹರಿಯುತ್ತಿರುವ ತೀಸ್ತಾ ನದಿಯಿಂದಾಗಿ ಸಿಂಗ್ತಮ್ ಕಾಲು ಸೇತುವೆ ಕುಸಿದಿದೆ. ಮೇಘಸ್ಫೋಟದಿಂದಾಗಿ ತೀಸ್ತಾ, ನೀರಿನ ಮಟ್ಟ ಹೆಚ್ಚಾದ ಕಾರಣ ಸಿಕ್ಕಿಂ ಆಡಳಿತವು ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿದೆ.
ಪಶ್ಚಿಮ ಬಂಗಾಳದ ಜಲ್ಪೈಗುರಿ ಆಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ನದಿಯ ಕೆಳಗಿನ ಜಲ ಪ್ರದೇಶದ ಬಳಿ ವಾಸವಿರುವ ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಿದೆ.
ತೀಸ್ತಾ ನದಿಯು ಬಾಂಗ್ಲಾದೇಶವನ್ನು ಪ್ರವೇಶಿಸುವ ಮೊದಲು ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಮೂಲಕ ಹರಿಯುತ್ತದೆ.
ಸಿಕ್ಕಿಂ ಸರ್ಕಾರ ಸ್ಥಳೀಯ ನಿವಾಸಿಗಳಿಗೆ ಹೈ ಅಲರ್ಟ್ ನೀಡಿದೆ.
ಇದರ ನಡುವೆ ಸ್ಥಳೀಯ ನಿವಾಸಿಗಳು ರೆಕಾರ್ಡ್ ಮಾಡಿ, ಹಂಚಿಕೊಂಡಿರುವ ವಿಡಿಯೋಗಳು ಪ್ರವಾಹದ ಭೀಕರೆತೆಯನ್ನ ತೋರಿಸಿದೆ.