

ಕ್ಯಾಲಿಫೋರ್ನಿಯಾ : ಹಾಲಿವುಡ್ ತಾರೆ ಆ್ಯಂಜಲೀನಾ ಜೋಲಿ ಅವರು ಹೊಸದಾಗಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿರುವುದು ಅವಿಸ್ಮರಣೀಯವಾದ ರೀತಿಯಲ್ಲಿ. ಏಕೆ ಗೊತ್ತೆ ? 18 ನಿಮಿಷಗಳವರೆಗೆ ಜೇನುಹುಳಗಳೊಂದಿಗೆ ಇದ್ದು, ವಿಡಿಯೋ ಮತ್ತು ಫೋಟೋಗಳನ್ನು ಆಕೆ ತೆಗೆಸಿಕೊಂಡಿದ್ದಾರೆ! ಅಷ್ಟಕ್ಕೂ ಇದು ಯಾವುದೇ ಸಿನಿಮಾ ಶೂಟಿಂಗ್ ಅಲ್ಲ. 'ವಿಶ್ವ ಜೇನುಹುಳಗಳ ದಿನ'ವಾದ ಮೇ 20 ರಂದು ಜೇನುಹುಳಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂಬ ಸಂದೇಶ ನೀಡಲು ಮಾಡಿದ ಫೋಟೋಶೂಟ್.
ಜೇನುಹುಳಗಳು ಭೂಮಿಯ ಪರಿಸರದಲ್ಲಿ ಪ್ರಮುಖ ಜೀವಿಗಳು. ಗಿಡಮರಗಳ ವಂಶವೃದ್ಧಿಯಲ್ಲಿ ಅವು ವಹಿಸುವ ಪಾತ್ರ ದೊಡ್ಡದು. ಆದರೆ, ಜೇನು ಕಂಡರೆ ಎಲ್ಲಿ ಕಚ್ಚಿಬಿಡುತ್ತದೋ ಎಂದು ಹೆದರುವುದೇ ಸರ್ವೇ ಸಾಮಾನ್ಯವಾದ ಪ್ರತಿಕ್ರಿಯೆಯಾಗಿರುತ್ತದೆ. ಅಂತಹುದರಲ್ಲಿ ನೂರಾರು ಜೇನುಹುಳಗಳ ನಡುವೆ ಬಿಳಿಯ ಬಣ್ಣದ ಉಡುಗೆ ತೊಟ್ಟು ಪೋಸ್ ನೀಡಿದ್ದಾರೆ ಜೋಲಿ. ಅನೇಕ ಜೇನುಹುಳಗಳು ತಮ್ಮ ಮುಖ ಮತ್ತು ಮೈಮೇಲೆ ಹರಿದಾಡುತ್ತಿದ್ದರೂ ನಗುಮುಖದೊಂದಿಗೆ ನಿಂತಿರುವ ಅವರ ಸಾಹಸವನ್ನು ಮೆಚ್ಚಲೇಬೇಕು.
ಆ್ಯಂಜಲೀನಾ ಜೋಲೀ ಅವರು ಯುನೆಸ್ಕೊ ಮತ್ತು ಗುಯೆರ್ಲೈನ್ನೊಂದಿಗೆ "ವುಮೆನ್ ಫಾರ್ ಬೀಸ್"ಎಂಬ ಯೋಜನೆಯಡಿ ಸ್ವಯಂಸೇವಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಯಡಿ 2,500 ಜೇನುಗೂಡುಗಳನ್ನು ಕಟ್ಟಿಸಿ, 2025 ರ ವೇಳೆಗೆ 125 ಮಿಲಿಯನ್ ಜೇನುಹುಳಗಳನ್ನು ರೀಸ್ಟಾಕ್ ಮಾಡಬೇಕೆಂಬ ಗುರಿ ಇದೆ, 50 ಮಹಿಳೆಯರಿಗೆ ಬೀಕೀಪರ್ ತರಬೇತಿ ನೀಡಿ ಬೆಂಬಲಿಸುವ ಉದ್ದೇಶ ಕೂಡ ಇದೆ. ಈ ಆಶಯಕ್ಕೆ ಪ್ರಚಾರ ನೀಡಲು ನ್ಯಾಷನಲ್ ಜಿಯಾಗ್ರಾಫಿಕ್ನ ಸಹಯೋಗದೊಂದಿಗೆ ಜೋಲಿ, ಜೇನುಹುಳಗಳಿಂದ ಆವೃತವಾದ ತಮ್ಮದೊಂದು ಪೋರ್ಟ್ರೈಟ್ ಮಾಡಬೇಕೆಂದು ತೀರ್ಮಾನಿಸಿದರು ಎನ್ನಲಾಗಿದೆ.
"ಜೇನುಹುಳಗಳು ಆಕರ್ಷಿತರಾಗಬೇಕು. ಆದರೆ ಗುಂಪುಗಟ್ಟಬಾರದು. ಆ ರೀತಿಯಾದ ಫೆರೊಮೋನ್ ಎಂಬ ದ್ರವವನ್ನು ಆ್ಯಂಜಲೀನಾ ಅವರ ಬಟ್ಟೆ, ಮುಖ, ಮೈಗಳ ಮೇಲೆ ಹಚ್ಚಲಾಗಿತ್ತು. ಅವರನ್ನು ಬಿಟ್ಟು ಸೆಟ್ನಲ್ಲಿದ್ದ ಬೇರೆಲ್ಲರೂ ಸಂರಕ್ಷಕ ಸೂಟ್ಗಳನ್ನು ತೊಟ್ಟಿದ್ದೆವು. ಸ್ಟುಡಿಯೋದಲ್ಲಿ ಸಾಧ್ಯವಾದಷ್ಟು ನಿಶ್ಶಬ್ದತೆ ಮತ್ತು ಕತ್ತಲು ಇರುವಹಾಗೆ ಮಾಡಿದ್ದೆವು" ಎಂದು ಛಾಯಾಗ್ರಾಹಕ ಮತ್ತು ಖುದ್ದು ಜೇನುಹುಳ ಸಾಗಣೆಕಾರರಾದ ಡ್ಯಾನ್ ವಿಂಟರ್ಸ್ ವಿವರಿಸಿದ್ದಾರೆ. ಅಂದಹಾಗೆ ಜೋಲಿ ಅವರೊಂದಿಗೆ ಚಿತ್ರದಲ್ಲಿ ಕಾಣಿಸಿಕೊಂಡಿರುವ ಜೇನುಹುಳಗಳು ಕೊನ್ರಾಡ್ ಬೌಫರ್ಡ್ ಎಂಬ ಮಾಸ್ಟರ್ ಬೀಕೀಪರ್ಗೆ ಸೇರಿದ್ದವು ಎನ್ನಲಾಗಿದೆ. (ಏಜೆನ್ಸೀಸ್)