

ಶ್ರೀರಾಮನು ಯುದ್ಧದ ವಿಷಯವನ್ನು ಇನ್ನಷ್ಟು ವರ್ಣಿಸಬೇಕೆಂದು ಕೇಳಿಕೊಂಡಿದ್ದರಿಂದ ಶ್ರೀ ವಸಿಷ್ಠರು ಯುದ್ಧದ ಭೀಕರತೆಯನ್ನು ತಮ್ಮ ಮಾತಿನಿಂದಲೇ ಇನ್ನಷ್ಟು ವರ್ಣಿಸಿದರು. ಈಗ ಯುದ್ಧವನ್ನು ನೋಡುತ್ತಿರುವವರ ಮಾತುಗಳ ಮೂಲಕ ಯುದ್ಧದ ಭೀಕರತೆಯನ್ನು ವರ್ಣಿಸುತ್ತಿದ್ದಾರೆ. ಆ ಯುದ್ಧವನ್ನು ದೇವಗಂಧರ್ವಾದಿಗಳು ಆಕಾಶದಲ್ಲಿದ್ದುಕೊಂಡು ನೋಡುತ್ತಿದ್ದಾರೆ. ಲೀಲಾ ಮಹಾರಾಣಿಯು ಶ್ರೀದೇವಿಯೊಂದಿಗೆ ಸೂಕ್ಷ್ಮರೂಪದಿಂದ ಅಲ್ಲಿಂದಲೇ ನೋಡುತ್ತಿದ್ದಾಳೆ. ಅವಳಿಗೆ ತನ್ನ ಪತಿಯ ಬಗ್ಗೆ ಇನ್ನೂ ವ್ಯಾಮೋಹವಿದೆ. ಅವಳ ಪತಿಯಾದ ಪದ್ಮಮಹಾರಾಜನು ಈ ಹಿಂದೆ ತೀರಿಕೊಂಡಿದ್ದಾನೆ. ಅವನೇ ಈಗ ವಿದೂರಥನೆಂಬ ಚಕ್ರವರ್ತಿಯಾಗಿ ಹುಟ್ಟಿದ್ದಾನೆ. ಅವನೇ ಈ ಯುದ್ಧದ ಕೇಂದ್ರ ವ್ಯಕ್ತಿ. ಅವನ ಸಾಮಂತ ರಾಜರಲ್ಲಿ ಕೆಲವರು ಅವನ ಮೇಲೆ ಯುದ್ಧಕ್ಕೆ ಬಂದಿದ್ದರಿಂದ ಈ ಯುದ್ಧವು ನಡೆಯುತ್ತಿದೆ. ಅದಕ್ಕಾಗಿ ಯುದ್ಧವನ್ನು ನೋಡಬೇಕೆಂಬ ಕುತೂಹಲದಿಂದ ಲೀಲಾಮಹಾರಾಣಿಯು ಬಂದಿದ್ದಾಳೆ. ಆಗಸದಲ್ಲಿ ನೆರೆದಿರುವ ದೇವಗಂಧರ್ವರು ಹೇಳುತ್ತಿರುವ ಮಾತುಗಳನ್ನು ಶ್ರೀ ವಸಿಷ್ಠರು ಉಲ್ಲೇಖಿಸುತ್ತಾ ಶ್ರೀರಾಮನಿಗೆ ಉಪದೇಶವನ್ನು ಮುಂದುವರಿಸಿದ್ದಾರೆ.
‘ಶ್ರೀರಾಮ! ಯುದ್ಧದಲ್ಲಿ ಆಸಕ್ತಿಯಿಂದ ತೊಡಗಿರುವ ರಾಜರು, ಮಂತ್ರಿಗಳು, ಭಟರು ಮತ್ತು ಯುದ್ಧವನ್ನು ಆಕಾಶದಿಂದ ನೋಡುತ್ತಿರುವ ದೇವಗಂಧರ್ವಾದಿಗಳ ಮಾತುಗಳು ಕೇಳಿಬರುತ್ತಿದ್ದವು. - ಅಗೋ ನೋಡು! ಯುದ್ಧರಂಗವನ್ನು ನೋಡಿದರೆ ಚಲಿಸುತ್ತಿರುವ ಕಮಲಗಳಿರುವ ಸರೋವರದಂತೆ ಕಾಣುತ್ತದೆ ಅಥವಾ ಹಾರಾಡುತ್ತಿರುವ ಹಕ್ಕಿಗಳಿಂದ ತುಂಬಿ ಹೋಗಿರುವ ಆಕಾಶದಂತೆ ಕಾಣುತ್ತಿದೆ. ನಕ್ಷತ್ರಗಳಿಂದ ತುಂಬಿಕೊಂಡಿರುವ ಆಕಾಶದಂತೆ ಶೂರರ ತಲೆಗಳಿಂದ ಯುದ್ಧರಂಗವು ತುಂಬಿಕೊಂಡಿದೆ.’
‘ಒಬ್ಬ ಶಿಷ್ಯ ತನ್ನ ಗುರುವಿಗೆ ಕೇಳುತ್ತಿದ್ದಾನೆ ಪೂಜ್ಯರೇ! ಆಕಾಶವೆಲ್ಲ ಹೊಟ್ಟುಗಳಿಂದ ತುಂಬಿದಂತೆ ಕಾಣುತ್ತಿದೆಯಲ್ಲ, ಏಕೆ ಹೀಗೆ? ಅದಕ್ಕೆ ಗುರುವು ನೀಡಿದ ಉತ್ತರ - ಇದು ಹೊಟ್ಟು ಅಲ್ಲ, ವೀರರು ಯುದ್ಧರಂಗದಲ್ಲಿ ಮೋಡಗಳಂತೆ ಹರಿಬಿಟ್ಟ ಬಾಣಗಳ ಪ್ರವಾಹ. ಯುದ್ಧವು ಒಂದು ಯಜ್ಞವಿದ್ದಂತೆ. ಯುದ್ಧದ ಭೂಮಿಯಲ್ಲಿ ಇರುವ ಧೂಳಿನ ಕಣಗಳು ಎಷ್ಟು ಸಂಖ್ಯೆಯಲ್ಲಿ ರಕ್ತದಿಂದ ಒದ್ದೆಯಾಗುತ್ತವೆಯೋ ಅಷ್ಟು ಸಾವಿರ ವರ್ಷಗಳು ಭಟರು ಸ್ವರ್ಗಲೋಕದಲ್ಲಿ ವಾಸ ಮಾಡುತ್ತಾರೆ.’ ‘ಯುದ್ಧವನ್ನು ನೋಡುತ್ತಿರುವ ಒಬ್ಬ ಹಿರಿಯ ವ್ಯಕ್ತಿ ತನ್ನ ಜೊತೆಗಿರುವವರನ್ನು ಕುರಿತು ಹೇಳುತ್ತಿದ್ದಾನೆ, - ಹೆದರಬೇಡಿ! ಇವುಗಳು ಖಡ್ಗಗಳಲ್ಲ! ವೀರರನ್ನು ನೋಡಲು ಬಂದಿರುವ ವಿಜಯಲಕ್ಷ್ಮೀ ಅಥವಾ ಸ್ವರ್ಗಲಕ್ಷ್ಮೀ)ಯ, ನೀಲಿ ಬಣ್ಣದ ಉತ್ಪಲ ಪುಷ್ಪದ ದಳಗಳಂತೆ ಕಾಂತಿಯಿಂದ ಕೂಡಿರುವ, ಕಣ್ಣಿನ ನೋಟಗಳು!’
‘ಆಕಾಶದಲ್ಲಿ ನೆರೆದಿರುವ ದೇವತೆಗಳ ಪೈಕಿ ಒಬ್ಬ ದೇವತೆಯು ಹೇಳುತ್ತಿದ್ದಾನೆ, - ಈ ಯುದ್ಧವು ವೀರ ಮರಣವನ್ನಪ್ಪಿದವರನ್ನು ಆಲಿಂಗಿಸಲು ತವಕಿಸುತ್ತಿರುವ ದೇವತಾ ಸ್ತ್ರೀಯರ ನಿತಂಬಗಳಲ್ಲಿ ಧರಿಸಿರುವ ಮೇಖಲೆಗಳನ್ನು ಶಿಥಿಲಗೊಳಿಸುವುದಕ್ಕೆ ಪ್ರಯೋಗಿಸಿದ ಕುಸುಮಾಯುಧ(ಮನ್ಮಥನ ಬಾಣ)’ಒಬ್ಬ ವೀರ ಇನ್ನೊಬ್ಬ ವೀರನನ್ನು ಕುರಿತು ಹೇಳುತ್ತಿದ್ದಾನೆ, -ಸ್ವರ್ಗಲೋಕದ ನಂದನೋದ್ಯಾನದ ದೇವತೆಗಳು ಅಲ್ಲಿಗೆ ನಿನ್ನ ಆಗಮನವನ್ನು ನಿರೀಕ್ಷಿಸಿ ನರ್ತನ ಮಾಡುತ್ತಿದ್ದಾರೆ. (ನಂದನೋದ್ಯಾನದ ಮರಗಿಡಗಳು ನರ್ತಿಸುವಂತೆ ಕಾಣುತ್ತಿದೆ) ಆ ದೇವತೆಗಳ ಭುಜಲತೆಗಳು ನರ್ತಕಿಯ ಭುಜಗಳಂತೆ ಚಲಿಸುತ್ತಿವೆ. ಕೆಂಪು ಚಿಗುರುಗಳೆಂಬ ಕೈಗಳು ಆ ಭುಜದಲ್ಲಿ ಕಾಣುತ್ತಿವೆ. ಹೂವಿನ ಗೊಂಚಲುಗಳೆಂಬ ಕಣ್ಣುಗಳು ಮದವೇರಿದ ಕಣ್ಣುಗಳಂತೆ ಕಾಣುತ್ತಿವೆ. ಜೇನಿನಂತಹ ಪರಿಮಳವನ್ನು ಸೂಸುತ್ತಿವೆ. ಆ ದೇವತೆಗಳು ಮಧುರವಾದ ಆಲಾಪಗಳಿಂದ ಹಾಡುತ್ತಿರುವಂತೆ ಕಾಣುತ್ತಿದೆ. (ವೀರ ಮರಣ ವನ್ನಪ್ಪಿದರೆ ನಿನಗೆ ಸ್ವರ್ಗಲೋಕದಲ್ಲಿ ಸ್ವಾಗತದ ವೈಭವವು ಕಾದಿದೆ)’ ‘ಒಬ್ಬ ರಸಿಕ ತನ್ನ ಮಿತ್ರನಿಗೆ ಹೇಳುತ್ತಿದ್ದಾನೆ -ಗ್ರಾಮೀಣ ವನಿತೆ ತನ್ನ ಪತಿಯನ್ನು ತನ್ನ ಕಣ್ಣಿನ ವಿಲಾಸಗಳಿಂದ ಭೇಧಿಸುವಂತೆ (ವಿಚಲಿತಗೊಳಿಸುವಂತೆ) ಒಂದು ಸೇನೆ ಇನ್ನೊಂದು ಸೇನೆಯನ್ನು ಕಠಿಣವಾದ ಕುಠಾರಗಳಿಂದ ಭೇಧಿಸುತ್ತಿದೆ.’ ‘ಒಬ್ಬ ಸೈನಿಕನ ಮಗ ಅಳುತ್ತ ಹೇಳುತ್ತಿದ್ದಾನೆ -ಅಯ್ಯೋ! ಈ ಯುದ್ಧದಲ್ಲಿ ನಾನು ನನ್ನ ತಂದೆಯನ್ನು ಕಳೆದುಕೊಂಡೆ. ಸೂರ್ಯೋಪರಾಗದ ಕಾಲವು (ಸೂರ್ಯಗ್ರಹಣ) ರಾಹುವನ್ನು ಸೂರ್ಯನ ಬಳಿಗೆ ಎತ್ತಿಕೊಂಡು ಹೋಗುವಂತೆ , ನನ್ನ ತಂದೆಯ ತಲೆಯನ್ನು ವೈರಿ ಸೈನಿಕನೊಬ್ಬನ ಈಟಿಯು ಎತ್ತಿ ಹಾರಿಸಿಕೊಂಡು ಹೋಯಿತು. ಹೊಳೆಯುತ್ತಿರುವ ಕುಂಡಲವನ್ನು ಧರಿಸಿರುವ ಈ ತಲೆಯನ್ನು ಮುಂಡದಿಂದ ಬೇರ್ಪಡಿಸಿ ಹಾರಿಸಿಕೊಂಡು ಹೋದ ರೀತಿಯನ್ನು ನಾನು ಹೇಗೆ ಮರೆಯಲಿ? (ಸಮುದ್ರ ಮಥನದ ಕಾಲದಲ್ಲಿ ಅಮೃತವನ್ನು ಕದ್ದೊಯ್ಯಲು ಬಂದ ರಾಕ್ಷಸನನ್ನು ಮಹಾವಿಷ್ಣುವು ತನ್ನ ಚಕ್ರಾಯುಧದಿಂದ ಸಂಹರಿಸಿದನು. ಆ ರಾಕ್ಷಸನ ರುಂಡವು ಮುಂಡದಿಂದ ಬೇರ್ಪಟ್ಟಿದ್ದರಿಂದ ತಲೆಯ ಭಾಗವು ರಾಹು ಎನಿಸಿಕೊಂಡಿತು. ಮುಂಡದ ಭಾಗವು ಕೇತು ಎನಿಸಿಕೊಂಡಿತು. ಇಲ್ಲಿ ಸೈನಿಕನ ಮಗನು ಚಕ್ರಾಯುಧವು ರಾಹು ಎಂಬ ತಲೆಯನ್ನು ಹಾರಿಸಿಕೊಂಡು ಹೋದ ದೃಶ್ಯವನ್ನು ನೆನಪಿಸಿಕೊಳ್ಳುತ್ತಿದ್ದಾನೆ.)’
‘ಒಬ್ಬ ಹೇಡಿಯಾದ ಸೈನಿಕನು ಇನ್ನೊಬ್ಬ ಹೇಡಿ ಸೈನಿಕನಿಗೆ ಹೇಳುತ್ತಿದ್ದಾನೆ - ಮಿತ್ರ, ನನಗೆ ತುಂಬ ಭಯವಾಗುತ್ತಿದೆ. ಯಮನಂತೆ ಕಾಣುತ್ತಿರುವ ಯೋಧನೊಬ್ಬ ದಕ್ಷಿಣದ ದಿಕ್ತಟದಿಂದ ಎದ್ದು ಬರುತ್ತಿರುವಂತೆ ಕಾಣುತ್ತಿದೆ. ಆತನು ಆಪಾದತಲದಷ್ಟು ದೀರ್ಘವಾದ ಸರಪಳಿಗೆ ಎರಡು ದೊಡ್ಡ ದೊಡ್ಡ ಕಲ್ಲುಗಳನ್ನು ಕಟ್ಟಿ ಅದನ್ನು ಚಕ್ರದಂತೆ ತಿರುಗಿಸುತ್ತಲೂ ಇದ್ದಾನೆ. ‘ಚಿತ್ರದಂಡ’ ಎಂಬ ಈ ಚಕ್ರೋಪಲಯಂತ್ರವನ್ನು ತನ್ನ ಎತ್ತಿದ ಭುಜಗಳಿಂದ ವೇಗವಾಗಿ ತಿರುಗಿಸುತ್ತ ಇದ್ದಾನೆ. ಬೃಹದ್ಗಾತ್ರದ ಈ ಯೋಧನ ಚಕ್ರೋಪಲಯಂತ್ರದಿಂದ ಎಸೆಯಲ್ಪಟ್ಟ ದೊಡ್ಡ ಕಲ್ಲುಗಳು
ಸೇನೆಯ ಮೇಲೆ ಬಿದ್ದರೆ ಸೈನಿಕರು ಪುಡಿಪುಡಿಯಾಗುತ್ತಾರೆ. ಎಲ್ಲಕಡೆ ಸೇನೆಯನ್ನು ತನ್ನ ಚಕ್ರೋಪಲ ಯಂತ್ರದಿಂದ ಸಂಹರಿಸುತ್ತಾ ಈ ಕಡೆಯೇ ಆತ ಬರುತ್ತಿದ್ದಾನೆ. ಆದ್ದರಿಂದ ಮಿತ್ರ! ನಾವು ಯುದ್ಧರಂಗದಿಂದ ಮರಳಿ ಹೋಗಿಬಿಡೋಣ.’