ನಮ್ಮ ನಮ್ಮಲ್ಲಿ: ಕಾಯುತ್ತ ಕುಳಿತವನಿಗೆ ಕುರುಡುಗತ್ತಲ ಅಮೃತಕ್ಷಣ!

Edit-1
Published on

ಏನೂ ಮಾಡದೆ ಒಂದಿಡೀ ದಿನ ಮನೆಯಲ್ಲೇ ಇರುತ್ತೇವೆ. ಯಾರೊಂದಿಗೋ ಹರಟೆ: ಗಂಟೆಗಳು ಉರುಳಿದ್ದೇ ಗೊತ್ತಾಗಿರುವುದಿಲ್ಲ. ಆದರೆ ಯಾರಿಗಾದರೂ, ಯಾವುದಕ್ಕಾಗಿಯಾದರೂ ಕಾಯ್ದು ನೋಡಿ? ಸಮಯದ ಕಿಮ್ಮತ್ತಿಗಿಂತ, ನಿಮ್ಮ ಸಂಯಮದ ಮಿತಿ ಎಷ್ಟು ಅಂತ ಸ್ಪಷ್ಟವಾಗಿ ಗೊತ್ತಾಗುತ್ತದೆ. ‘ನಿರೀಕ್ಷೆ’ಯ ಬಗ್ಗೆ ಬಹುಶಃ ನನಗಿಂತ ಹೆಚ್ಚು ಅನುಭವಿಗಳು ಮತ್ತೊಬ್ಬರಿರಲಾರರು. ಉಬ್ಬಸದ ರೋಗಿಯೊಬ್ಬ ಯಾವಾಗ ಬೆಳಕು ಹರಿದು ಸೂರ್ಯನ ಕಿರಣ ಕಂಡೇನು ಅಂತ ರಾತ್ರಿಯಿಡೀ ಅರೆಬೋರಲಾಗಿ ಕಾಯುತ್ತಾನಲ್ಲ? ಹಾಗೆ ಹದಿನಾರು ವರ್ಷ ಕಾದಿದ್ದೇನೆ, ಈ ಬದುಕಿನ ತಮಸ್ಸು ಕಳೆದು ಬೆಳಕು ಹರಿದೀತಾ ಅಂತ.

ನಿರೀಕ್ಷೆಯ ಚಡಪಡಿಕೆಯೇ ಅಂಥದ್ದು. ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುವ ಯುವಕ, ಇಷ್ಟು ಚೆನ್ನಾಗಿರುವ-ಚೆನ್ನಾಗಿ ನಟಿಸುವ ತನಗೆ ಒಂದೇ ಒಂದು ಸಿನೆಮಾದಲ್ಲಿ ಛಾನ್ಸು ಸಿಗಬಾರದಾ ಅಂದುಕೊಳ್ಳುತ್ತಾನೆ. ಬೀದಿ ಬೀದಿ ಅಲೆಯುತ್ತಾನೆ. ಸ್ಟುಡಿಯೋದ ಬಾಗಿಲಲ್ಲಿ ನಿಂತು ಕಾಯುತ್ತಾನೆ. ತನಗೆ ಗೊತ್ತಿರುವುದು, ತಾನು ಕಲಿತಿರುವುದು ಎಲ್ಲವನ್ನೂ ಯಾರಾದರೊಬ್ಬರಿಗೆ ಹೇಳಿಕೊಳ್ಳಬೇಕೆಂದು ಕಾತರಿಸುತ್ತಾನೆ. ಅವನದು ಒಂದೇ ಒಂದು ಛಾನ್ಸಿನ ನಿರೀಕ್ಷೆ. ಅದು ಸಿಕ್ಕುವ ತನಕ ಕುರುಡುಗತ್ತಲು. ಸಿಕ್ಕಿಬಿಟ್ಟರೆ, ಅದೇ ಅಮೃತಕ್ಷಣ.

ಆದರೆ ಕಾಯುವ ದಿನಗಳಲ್ಲಿ ಅವನು ಏನು ಮಾಡಬೇಕು? ನಿಜ ಹೇಳಬೇಕೆಂದರೆ, ಏನೂ ಮಾಡಲಾರ! ಏನು ಮಾಡಲಿಕ್ಕೆ ಹೋದರೂ ಮತ್ತೆ ಮತ್ತೆ ಮನಸು ಸ್ಟುಡಿಯೋದ ಬಾಗಿಲಿಗೇ ಒಯ್ದು ನಿಲ್ಲುವಂತೆ ಮಾಡುತ್ತದೆ. ಅವನು ಕೆಲಸಕ್ಕೆ ಹೋಗಲಾರ. ಮನೆಯಲ್ಲಿ ಪರಾವಲಂಬಿ. ಸಣ್ಣ ಖರ್ಚಿಗೂ ಅಂಗಲಾಚಬೇಕು. ಅವಮಾನಗಳು ಒಂದಾದ ಮೇಲೊಂದರಂತೆ ಆಗುತ್ತಿರುತ್ತವೆ. ‘ಇನ್ನು ಇದು ಆಸೆಯಿಟ್ಟುಕೊಂಡು ಪ್ರಯೋಜನವಿಲ್ಲ’ ಅಂತ ಅನ್ನಿಸಿದ ಕ್ಷಣ ಮನಸು ಮಗುಚಿ ಬೀಳುತ್ತದೆ. ಆದರೆ ಯಾವತ್ತೋ ಒಂದು ದಿನ ದೇವರು(?) ಕಣ್ತೆರೆದು ತಾನು ನಟನಾಗಲಾರೆನಾ ಎಂಬ ಆಸೆ, ಹೋಪು ಅವನನ್ನು ಮತ್ತೆ ಸ್ಟುಡಿಯೋ ಕಡೆಗೆ ಹೊರಡುವಂತೆ ಮಾಡುತ್ತದೆ.

ಕೆಲವು ಸಲ ನಿರೀಕ್ಷೆಗಳಲ್ಲೇ ಬದುಕು ಕಳೆದು ಹೋಗುತ್ತದೆ: ಪ್ರೇಯಸಿಯ ನಿರೀಕ್ಷೆಯಲ್ಲಿ ಸುಮ್ಮನೆ ಒಂದು ಸಾಯಂಕಾಲ ಕಳೆದುಹೋದಂತೆ! ನಾನು ಬರೆಯಲು ಹೊರಟದ್ದೇ ಅದರ ಬಗ್ಗೆ. ಹದಿನಾರು ವರ್ಷ ‘ಇವತ್ತಲ್ಲ ನಾಳೆ ಏನೋ ಘಟಿಸುತ್ತದೆ’ ಅಂದುಕೊಂಡು ಕಾಲೆಳೆಯುತ್ತ ಬದುಕಿದೆನಲ್ಲ? ನಿಜ ಹೇಳಬೇಕೆಂದರೆ, ಏನು ಘಟಿಸುತ್ತದೆ ಎಂಬುದರ ಸ್ಪಷ್ಟ ಕಲ್ಪನೆಯೇ ನನಗೆ ಇರಲಿಲ್ಲ. ಏನು ಘಟಿಸಬೇಕು ಎಂಬುದೂ ನಿಚ್ಚಳವಿರಲಿಲ್ಲ. ಒಟ್ಟಿನಲ್ಲಿ ಈ ಬದುಕು ಇವತ್ತಿನ ಪಾತಳಿಯಿಂದ ನನ್ನನ್ನು ಎತ್ತಿ ಎಲ್ಲೋ ಇಡುತ್ತದೆ, ಅಷ್ಟೆ ಅನ್ನಿಸುತ್ತಿದ್ದುದು. ಆದರೆ ಹದಿನಾರು ವರ್ಷಗಳನ್ನು ನಾನು ಫಿಜೂಲಾಗಿ ಕಳೆಯಲಿಲ್ಲ. ಹೀಗೆ ಪತ್ರಿಕೋದ್ಯಮಿಯೇ ಆಗುತ್ತೇನೆ ಅಂತ ಅಂದುಕೊಂಡಿರದಿದ್ದರೂ, ಅವಿಷ್ಟು ವರ್ಷಗಳಲ್ಲಿ ಕೈಗೆ ಸಿಕ್ಕಿದ್ದನ್ನು ಓದುತ್ತ ಹೋದೆ. ಅನಿಸಿದ್ದನ್ನು ಬರೆಯುತ್ತಿದ್ದೆ. ಒಂದು ಹಂತದಲ್ಲಿ ಕತೆ, ಕಾದಂಬರಿಗಳನ್ನು ಇನ್ನು ಓದಕೂಡದು. ಅವರಿವರು ಬರೆದುದನ್ನೇ ಓದುತ್ತ ಕೂತರೆ, ನಾನು ಬರೆಯುವುದು ಯಾವಾಗ? ಹಾಗನ್ನಿಸಿದ ಮೇಲೆ ತುಂಬ ವ್ಯವಸ್ಥಿತವಾಗಿ ್ಞಟ್ಞ ್ಛ್ಚಜಿಟ್ಞ ಓದತೊಡಗಿದೆ. ಮೆಡಿಸಿನ್ ಓದಿದೆ, ಸೈಕಿಯಾಟ್ರಿ ತಿಳಿದುಕೊಂಡೆ, ತಂತ್ರ ಅಭ್ಯಸಿಸಿದೆ, ಇತಿಹಾಸ ತಿರುವಿ ಹಾಕಿದೆ. ಅದೆಲ್ಲ ತಿಳಿವಳಿಕೆ ಈಗ ಕೆಲಸಕ್ಕೆ ಬರುತ್ತಿದೆ.

ಇದನ್ನೇಕೆ ಹೇಳಿದೆ ಅಂದರೆ, ಏನೋ ಘಟಿಸುತ್ತದೆ ಅಂತ ದಾರಿ ಕಾಯುತ್ತ ಕೂಡುವ ಬದಲಿಗೆ, ಘಟಿಸುವುದೇನಿದೆಯೋ-ಅದು ಘಟಿಸಿದಾಗ ಘಟಿಸಲಿ ಅಂತ ನಿರ್ಧರಿಸಿ ನಾವು ಬಾಗಿಲು ಹಿಡಿದುಕೊಂಡು ಕುಳಿತು ಬಿಡಬೇಕು. ಒಳಗೇ ಸದ್ದಾಗದೆ ಸಾಮು ಮಾಡಬೇಕು. ನಿರೀಕ್ಷೆಯ ಕ್ಷಣಗಳು, ದಿನಗಳು, ವರ್ಷಗಳು ವೇಸ್ಟ್ ಆಗದಂತೆ ನೋಡಿಕೊಳ್ಳಬೇಕು. ಬಸುರಿಯನ್ನು ನೋಡಿ: ಕುಲಾವಿ ಹೊಲೆಯುತ್ತಿರುತ್ತಾಳೆ. ಕುಲಾವಿಯಾದ ಮೇಲೆ ಕಾಲುಚೀಲ. ಅದಾದ ಮೇಲೆ ಸ್ವೆಟರು. ಆಮೇಲೆ ಕೌದಿ. ಮಗರಾಯ ಅದ್ಯಾವತ್ತು ಧರೆಗೆ ಕಾಲಿಡುತ್ತಾನೋ? ಅದು ಕಣ್ಣಳತೆಗೆ ಸಿಕ್ಕದ ಅಮೃತಕ್ಷಣ. ಆದರೆ ವೃಥಾ ಕಾಲವನ್ನು ಆಕೆ ಸರಿದು ಹೋಗಲು ಬಿಡುವುದಿಲ್ಲ. ನಾವಾದರೂ ಅಷ್ಟೆ: ಕುಲಾವಿಯಿಂದ ಕೌದಿಯ ತನಕ ಏನನ್ನಾದರೂ ಸರಿ, ನೇಯುತ್ತಲೇ ಇರಬೇಕು.

ಎದುರಿಗೆ ಹಾಸಿಗೆಯ ಮೇಲೆ ತೀರ ಹತ್ತಿರದವರೊಬ್ಬರು ಸಾಯುತ್ತ ಮಲಗಿದ್ದರೆ, ಆಗ ಕಾಲ ಸರಿಯುವುದಿಲ್ಲ. ಏನನ್ನೂ ಮಾಡಲಾಗುವುದಿಲ್ಲ. ಕಾಮಾತುರದಲ್ಲಿದ್ದಾಗ ಕೂಡ ಅಷ್ಟೆ: ಬೇರೇನನ್ನೂ ಮಾಡಲಾಗುವುದಿಲ್ಲ. ಇವೆರಡು ಸ್ಥಿತಿಗಳನ್ನು ಬಿಟ್ಟರೆ, ಅದೆಂಥ ನಿರೀಕ್ಷೆಯೇ ಇರಲಿ; ಅದರ ಪಾಡಿಗದನ್ನು ಸಂಭವಿಸಲು ಬಿಟ್ಟು ನಾವು ಬೇರೇನನ್ನಾದರೂ ಮಾಡಿಕೊಳ್ಳುತ್ತಿರಬಹುದು. ಅದು ಬುದ್ಧಿವಂತ ಮನುಷ್ಯನೊಬ್ಬನಿಗಿರುವ ಟ್ಟಟಡಜಿಠಜಿಟ್ಞ. ‘ಇದೊಂದು ವರ್ಷ ಕಳೆದುಬಿಟ್ಟರೆ ಆಮೇಲೆ ತುಂಬ ಒಳ್ಳೆಯದಾಗುತ್ತದಂತೆ’ ಅಂದುಕೊಂಡು ಈ ವರ್ಷವನ್ನಿಡೀ ವೃಥಾ ಕಳೆಯುವವನು ದಡ್ಡ. ನಾಳೆ ಮದುವೆ ಅಂತ ಆದ ಮೇಲೆ ಗಂಡನ ಮನೆಯವರು ಕೆಲಸಕ್ಕೆಲ್ಲಿ ಕಳಿಸ್ತಾರೆ ಅಂದುಕೊಂಡು ಇವತ್ತು ನೌಕರಿ ಮಾಡಲೇಬಾರದು ಅಂತ ತೀರ್ವನಿಸಿದ ದಿನ ‘ಗಂಟೆಗಟ್ಟಲೆ ಓದಿ ಕೆಎಎಸ್ ಪರೀಕ್ಷೆ ಬರೆದು, ಕಷ್ಟಪಟ್ಟು ನೌಕರಿಗೆ ಸೇರಿದ್ದೆಲ್ಲ ವೇಸ್ಟಾಯಿತು’ ಅನ್ನಿಸಬಹುದು. ಆದರೆ ಕೆಎಎಸ್ ಮಾಡಿಕೊಂಡಿದ್ದೆ ಎಂಬ ಹೆಮ್ಮೆ ಮತ್ತು ಸಂತೋಷವನ್ನು ಯಾವ ಗಂಡನ ಮನೆಯವರೂ ನಾಶಮಾಡಲಾರರು.

ಬಸ್ಟಾ್ಯಂಡು, ರೇಲ್ವೆ ಸ್ಟೇಷನ್ನು, ಏರ್​ಪೋರ್ಟು, ಆಸ್ಪತ್ರೆ ಮುಂತಾದೆಡೆಗಳಲ್ಲಿ ಘೊರವಾಗಿ ಕಾಯುತ್ತ ಶತಪಥ ಹಾಕುತ್ತಿರುತ್ತೇವೆ. ಏನೂ ತೋಚದೆ ಯಾರಿಗೋ ಫೋನ್ ಮಾಡುತ್ತಿರುತ್ತೇವೆ. ಬೆಳ್ಳಂಬೆಳಗ್ಗೆ ಎದ್ದು, ಏನೂ ಮಾಡದೆ ಸುಮ್ಮನೆ ಕುಳಿತಿರುತ್ತೇವೆ. ಅಂಥ ಸಂದರ್ಭದಲ್ಲೆಲ್ಲ ಓದಲಿಕ್ಕಷ್ಟು ಸಾಮಗ್ರಿ ಇಟ್ಟುಕೊಳ್ಳಿ.

ಈ ಬದುಕು ಪ್ರತಿಯೊಬ್ಬರನ್ನೂ ನಿರೀಕ್ಷೆಗೆ ಹಚ್ಚುತ್ತದೆ. ಕಡೆಗೆ ಸಾವು ಕೂಡ ಒಂದು ನಿರೀಕ್ಷೆಯೇ: ಕುಲಾವಿ ನೇಯುವ ಗರ್ಭಿಣಿಗೆ ಹೆರುವ, ಹುಟ್ಟಿಸುವ ನಿರೀಕ್ಷೆಯಿದ್ದಂತೆ ತೀರ ಪರಿಶೀಲಿಸಿ ನೋಡಿದರೆ ಯಾವ ನಿರೀಕ್ಷೆಯೂ ಅಸಹನೀಯವಾದುದಲ್ಲ. ನಿರೀಕ್ಷೆ ಮುಗಿದ ಮೇಲೆ ಅದರ ನೆನಪು ಕೂಡ ಇರುವುದಿಲ್ಲ. ಆದರೆ ಪ್ರತಿ ನಿರೀಕ್ಷೆಯನ್ನೂ ನಮ್ಮ ಲಾಭಕ್ಕೆ ಬಳಸಿಕೊಳ್ಳುವವರು ಬುದ್ಧಿವಂತರು. ಅವರ ಸಂಖ್ಯೆ ಹೆಚ್ಚಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net