ಊಟದ ಬಳಿಕ ಬಿಲ್​​ ಕೇಳಿದ್ದಕ್ಕೆ ಈ ನೀಚರು ಮಾಡಿದೆಂಥಾ ಕೃತ್ಯ; ವೈರಲ್​ ವಿಡಿಯೋದಲ್ಲೇನಿದೆ ನೀವೇ ನೋಡಿ..

Untitled-design-1-1-1
Published on

ಮುಂಬೈ: ರಸ್ತೆ ಬದಿಯ ಹೋಟೆಲ್​ನಲ್ಲಿ ಊಟ ಮಾಡಿದ ಬಳಿಕ ಬಿಲ್​​​ ಕೇಳಿದ ಉದ್ಯೋಗಿಯನ್ನು ಕಾರಿನೊಂದಿಗೆ ಕಿಲೋಮೀಟರ್​​ಗಳು ಎಳೆದೊಯ್ದಿರುವ ಅಮಾನುಷ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮೂವರು ಪುರುಷರು ಊಟ  ಮಾಡಲು ಹೈವೆ ಬಳಿಯ ಹೋಟೆಲ್​ ಬಳಿ ಕಾರು ನಿಲ್ಲಿಸಿದ್ದಾರೆ. ಊಟ ಮಾಡಿದ ನಂತರ ಗ್ರಾಹಕರಿಗೆ ಹಣ ಪಾವತಿಸಲು ಸಹಾಯವಾಗಲೆಂದು ಸ್ಕ್ಯಾನರ್​ ತರಲು ಹೋಗಿದ್ದಾರೆ. ಅಷ್ಟರಲ್ಲಾಗಲೆ ಒಬ್ಬ ವ್ಯಕ್ತಿ ಹಿಂಬದಿ ಡೋರ್ ತೆಗೆದು ಕಾರಿನೊಳಗೆ ಕುಳಿತುಕೊಳ್ಳುತ್ತಾನೆ. ಕಾರು ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸಿದ ತಕ್ಷಣ ಅಲ್ಲೇ ಇದ್ದ ಹೋಟೆಲ್ ಸಿಬ್ಬಂದಿ ಮುಂಭಾಗದ ಡೋರ್​ ತೆಗೆದು ಗ್ರಾಹಕರಿಗೆ ಹಣ ಪಾವತಿಸುವಂತೆ ಕೇಳುತ್ತಾನೆ. ಆದರೆ ಕಾರಿನಲ್ಲಿದ್ದ ಬಿಲ್​ ಪಾವತಿಸುವ ಬದಲು ವೇಟರ್​ನನ್ನು ಚಲಿಸುತ್ತಿರುವ ಕಾರಿನ ಜತೆಗೆ ಎಳೆದೊಯ್ಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ವೇಟರ್​ನನ್ನು ಎಳೆದೊಯ್ಯುವುದನ್ನು ಕಂಡ ಹೋಟೆಲ್​​​ ಮತ್ತೊಬ್ಬ ಸಿಬ್ಬಂದಿ ಹಿಂದಿನಿಂದ ಬಂದು ಕಾರನ್ನು ತಡೆಯಲು ಪ್ರಯತ್ನಿಸಿದ್ದಾನೆ. ಆಗಲೂ ನಿಲ್ಲಿಸದಿದ್ದಾಗ ಕಲ್ಲನ್ನು ಎಸೆದಿದ್ದಾನೆ. ಬಳಿಕ ಅಲ್ಲೇ ಸ್ಥಳದಲ್ಲಿದ್ದ ಯುವಕರಲ್ಲಿ ಒಬ್ಬರು ಬೈಕ್​ ತೆಗೆದುಕೊಂಡು ಅವರನ್ನು ಹಿಂಬಾಲಿಸಲು ಹೋಗುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು.

ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ಎಳೆದೊಯ್ದ ವೇಟರ್​ನನ್ನು ರಾತ್ರಿ ಪೂರ್ತಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದರು. ಅಲ್ಲದೆ, ಆತನ ಬಳಿಯಿದ್ದ 11,500 ರೂಪಾಯಿಯನ್ನು ದೋಚಿದ್ದಾರೆ. ಜನರ ಓಡಾಟ ಕಡಿಮೆ ಇರುವ ಜಾಗದಲ್ಲಿ ಕಾರನ್ನು ನಿಲ್ಲಿಸಿ ವೇಟರ್​​ಗೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿಯೆಲ್ಲ ಆ ವ್ಯಕ್ತಿ ಕಣ್ಣಿಗೆ ಬಟ್ಟೆ ಕಟ್ಟಿ ಕಾರಿನಲ್ಲೇ ಕೂರಿಸಿದ್ದಾರೆ ಮರುದಿನ ಬೆಳಗ್ಗೆ ಬಿಟ್ಟಿದ್ದಾರೆ. ದಿಂಡ್ರುಡ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಹೇಳಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net