ಯೋಗ್ಯರ ಆಯ್ಕೆಗೆ ಮತದಾನ ಅಸ್ತ್ರ

voters day
ಚಿಕ್ಕಮಗಳೂರಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಪುಷ್ಪಾಂಜಲಿ ಉದ್ಘಾಟಿಸಿದರು. ಮೀನಾ ನಾಗರಾಜ್, ಡಾ. ಬಿ.ಗೋಪಾಲಕೃಷ್ಣ, ದಲ್ಜಿತ್‌ಕುಮಾರ್, ಸುಮಂತ್ ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಇಂತಹ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ತರವಾದುದು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಪುಷ್ಪಾಂಜಲಿ ತಿಳಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಗುರುವಾರ ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮತದಾನ ಪ್ರತಿಯೊಬ್ಬರ ಪ್ರಮುಖ ಹಕ್ಕು. ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ ಪ್ರಜೆಗಳ ಆಶೋತ್ತರಗಳಂತೆಯೇ ನಡೆಯಬೇಕೆಂಬುದು ಸಂವಿಧಾನದ ನಿಯಮ. ತಮ್ಮ ಒಳಿತು ಬಯಸುವ ಜನನಾಯಕನನ್ನು ಆಯ್ಕೆ ಮಾಡಲು ಮತದಾನ ಪ್ರಕ್ರಿಯೆ ನಡೆಯುತ್ತದೆ. ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿ ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶ ಎಂದರು.
ರಾಷ್ಟ್ರೀಯ ಮತದಾರರ ದಿನವನ್ನು 2011ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಅಂದಿನ ರಾಷ್ಟ್ರಪತಿ ಪ್ರತಿಭಾದೇವಿ ಪಾಟೀಲ್ ಅವರು ಭಾರತದ ಚುನಾವಣಾ ಆಯೋಗದ 61ನೇ ಸಂಸ್ಥಾಪನಾ ದಿನದಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿದರು ಎಂದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, 18 ವರ್ಷ ಪೂರೈಸಿದ ಪ್ರತಿಯೊಬ್ಬರೂ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಕ್ರಮ ವಹಿಸಲಾಗಿದೆ. ಪಟ್ಟಿಯಲ್ಲಿ ಹೆಸರು ಇಲ್ಲದವರು ತಾಲೂಕು ಕಚೇರಿ, ತಮ್ಮ ವ್ಯಾಪ್ತಿಯ ಮತಗಟ್ಟೆಯ ಬಿಎಲ್‌ಒಗಳನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಮಾತನಾಡಿ, ಜಿಡಿಪಿಯಲ್ಲಿ ಇಡೀ ವಿಶ್ವದಲ್ಲಿ 3ನೇ ಸ್ಥಾನ ಹೊಂದಿರುವ ರಾಷ್ಟ್ರ ನಮ್ಮದು. ಶಾಂತಿ, ಸಮೃದ್ಧಿ, ಸುವ್ಯವಸ್ಥೆ ನಮ್ಮ ದೇಶದಲ್ಲಿ ಮನೆ ಮಾಡಿದೆ. ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ. ಮತದಾನ ನಮ್ಮ ಹಕ್ಕಾಗಿದ್ದು, ಪ್ರತಿಯೊಬ್ಬರು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿ ಎಂದು ಸಲಹೆ ನೀಡಿದರು.
ಯುವ ಮತದಾರರನ್ನು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಾಗೂ ಮತದಾನದ ಪ್ರಮಾಣ ಹೆಚ್ಚಿಸುವ ದೃಷ್ಟಿಯಿಂದ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದೆ. ಈ ಮೂಲಕ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲಾಗುತ್ತಿದೆ. ಭಾರತಕ್ಕೆ ಸ್ವಾತಂತ್ರೃ ಬಂದ ಸಂದರ್ಭ ಬೇರೆ ರಾಷ್ಟ್ರಗಳಿಗೂ ಸ್ವಾತಂತ್ರೃ ಬಂದಿತ್ತು. ಆದರೆ ಆರ್ಥಿಕ, ರಾಜಕೀಯ, ಆಡಳಿತ ಪರಿಸ್ಥಿತಿಗಳನ್ನು ಅವಲೋಕಿಸಿದಾಗ ಆ ಎಲ್ಲ ದೇಶಗಳು ಭಾರತಕ್ಕಿಂತ ತುಂಬ ಹಿಂದುಳಿದಿವೆ ಎಂದರು.
ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಭಾಷಣ, ಪ್ರಬಂಧ ಹಾಗೂ ಕಿರುಚಿತ್ರ, ಭಿತ್ತಿಪತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಸ್.ಸೋಮ, ಎಸಿ ದಲ್ಜಿತ್‌ಕುಮಾರ್, ತಹಸೀಲ್ದಾರ್ ಸುಮಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net