

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಮತದಾನಕ್ಕೆ ಮೂರು ದಿನ ಬಾಕಿ ಉಳಿದಿದ್ದು, ಆಡಳಿತ ಪಕ್ಷ ಬಿಜೆಪಿ ‘ಸುರಕ್ಷಿತ’ ವಿಧಾನಕ್ಕೆ ಮೊರೆ ಹೋಗಿದೆ. ವರಿಷ್ಠರ ಸೂಚನೆಯಂತೆ ಪಕ್ಷದ ಮೊದಲ ಅಭ್ಯರ್ಥಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಗೆ ಗೆಲುವಿಗೆ ನಿಗದಿಗಿಂತ ಒಂದು ಹೆಚ್ಚು ಮತ ಅಂದರೆ 46 ಮೊದಲ ಪ್ರಾಶಸ್ಱದ ಮತ ಹಾಕಿಸಲು ತೀರ್ವನಿಸಿದೆ.
ತಾಂತ್ರಿಕ ತೊಡಕು ಉಂಟಾಗಬಾರದು ಎಂಬ ಕಾರಣಕ್ಕೆ ನಿರ್ಮಲಾ ಸೀತಾರಾಮನ್ಗೆ ಒಂದು ಹೆಚ್ಚು ಮತ ಹಾಕಲಿದೆ. ಇದು, ಎರಡನೇ ಪ್ರಾಶಸ್ಱ ಮತಮೌಲ್ಯ ಹೆಚ್ಚಳಕ್ಕೆ ನೆರವಾಗಲಿದೆ ಎಂಬುದು ಕಮಲಪಡೆಯ ಲೆಕ್ಕಾಚಾರವಾಗಿದೆ. ಮೊದಲ ಪ್ರಾಶಸ್ಱದ ಮತಗಳು ಹೆಚ್ಚಿದಷ್ಟು ಎರಡನೇ ಪ್ರಾಶಸ್ಱ ಮತ ಮೌಲ್ಯ ವೃದ್ಧಿಸಲಿದೆ. ಇದನ್ನು ಗಣನೆಗೆ ತೆಗೆದುಕೊಂಡು ನಿರ್ಮಲಾ ಸೀತಾರಾಮನ್ಗೆ 46, ಎರಡನೇ ಅಭ್ಯರ್ಥಿ ಜಗ್ಗೇಶ್ಗೆ 45 ಮತ್ತು ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ಗೆ 31 ಮತಗಳನ್ನು ವಿಂಗಡಿಸಲಾಗಿದೆ.
ಹಿಡಿತದಲ್ಲಿಡುವ ಕಸರತ್ತು: ಸಾಕಷ್ಟು ಮುಂಚಿತವಾಗಿ ಅಭ್ಯರ್ಥಿವಾರು ಮತಗಳ ವಿಂಗಡಣೆ ಜತೆಗೆ ಯಾರ್ಯಾರಿಗೆ ಯಾವ ಶಾಸಕರು ಮತ ಹಾಕಬೇಕು ಎಂಬ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಪಕ್ಷದ ಎಲ್ಲ ಶಾಸಕರನ್ನು ಹಿಡಿದಲ್ಲಿಡುವ ಕಸರತ್ತು ಈ ಕ್ರಮದ ಹಿಂದಿದೆ. ಅಲ್ಲದೆ, ಚುನಾವಣೆಗೆ ವ್ಯವಸ್ಥಿತ ಸಿದ್ಧತೆ ಕುರಿತು ವರಿಷ್ಠರಿಗೆ ಮಾಹಿತಿ ನೀಡಲೆಂದು ಪೂರ್ವತಯಾರಿ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ತೀವ್ರ ನಿಗಾ: ಹೆಚ್ಚುವರಿ ಮತಗಳ ಹಾಗೂ ಎರಡನೇ ಪ್ರಾಶಸ್ಱ ಮತಗಳನ್ನು ಒಟ್ಟುಗೂಡಿಸಿದರೆ ಲೆಹರ್ ಸಿಂಗ್ ಗೆಲುವು ನಿರಾಯಾಸವಾಗಿದ್ದರೂ ತಂತ್ರಕ್ಕೆ ಪ್ರತಿತಂತ್ರ ಹೂಡಲು ಬಿಜೆಪಿ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ನಡೆಯ ಮೇಲೆ ತೀವ್ರನಿಗಾವಹಿಸಿದೆ. ಆಯಾ ಪಕ್ಷಗಳು ತಮ್ಮ ಪಾಲಿನ ಮತಗಳನ್ನು ಚಲಾಯಿಸಿಕೊಂಡರೆ ಸಮಸ್ಯೆಯೇನಿಲ್ಲ. ಮೂರನೇ ಅಭ್ಯರ್ಥಿ ಗೆಲುವಿಗೆ ತಡೆಯೊಡ್ಡಲಿರುವ ‘ಅಡ್ಡ’ಮತದಾನದ ತೊಡಕು ನಿವಾರಣೆಗೆ ಪ್ರಯತ್ನಿಸಬೇಕಾಗುತ್ತದೆ. ನಮಗಿರುವ ಬಲದ ಪ್ರಕಾರ ಬೇರೆ ಪಕ್ಷದ ಶಾಸಕರನ್ನು ಸೆಳೆಯುವ ಅಗತ್ಯವಿಲ್ಲ. ಅಡ್ಡಮತದಾನದ ಅನಿರ್ವಾಯತೆ ಇಲ್ಲವಾದರೂ ಪ್ರತಿಪಕ್ಷಗಳ ಹೂಡಲಿರುವ ರಣತಂತ್ರದತ್ತ ಗಮನ ಕೇಂದ್ರೀಕರಿಸಿದ್ದೇವೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು.
ರಾಜ್ಯಸಭೆ ಚುನಾವಣೆಯಲ್ಲಿ ಪ್ರತಿಬಾರಿ ಬದಲಾವಣೆಗಳಾಗಿವೆ. ಕಳೆದ ಬಾರಿ ಏಳು ಜನ ಶಾಸಕರು ಸ್ವಪಕ್ಷದ ಅಭ್ಯರ್ಥಿ ವಿರುದ್ಧ ಬಂಡಾಯ ಸಾರಿದ್ದರು. ಯಾವುದೇ ಪಕ್ಷಕ್ಕೆ ಸೇರದ ಉದ್ಯಮಿ ಗೆದ್ದದ್ದಿದೆ. ಈ ಬಾರಿಯೂ ಅಂಥ ಬದಲಾವಣೆ ಸಾಧ್ಯವಿದ್ದು, ಪಕ್ಷದ ಮೂವರು ಆಯ್ಕೆಯಾಗುವ ವಿಶ್ವಾಸವಿದೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ. ರಾಜ್ಯಸಭೆಯ ಮೂರು ಸ್ಥಾನಗಳನ್ನು ಬಿಜೆಪಿ ಗೆಲ್ಲುವುದು ನೂರಕ್ಕೆ ನೂರು ಖಚಿತ. ಯಾರು ಏನೇ ಹೇಳಿಕೆ ನೀಡಿದರೂ ಪಕ್ಷ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹೆಚ್ಚುವರಿ ಮತಗಳ ಜತೆಗೆ ಎರಡನೇ ಪ್ರಾಶಸ್ಱದ ಮತಗಳು ನೆರವಾಗಲಿವೆ. ಪ್ರತಿಪಕ್ಷಗಳ ಹೇಳಿಕೆಗಳಿಗೆ ಫಲಿತಾಂಶವೇ ಉತ್ತರ ನೀಡಲಿದೆ. | ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ
ಮೈಸೂರು: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು ಎಂಬ ಉದ್ದೇಶ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇದ್ದರೆ ಜೆಡಿಎಸ್ ಅಭ್ಯರ್ಥಿಯನ್ನು ನಿವೃತ್ತಿಗೊಳಿಸಿ ಕಾಂಗ್ರೆಸ್ಗೆ ಬೆಂಬಲ ಸೂಚಿಸಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು. ಈ ಹಿಂದೆ ದೇವೇಗೌಡರು ರಾಜ್ಯಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾಗ ನಾವು ಅಭ್ಯರ್ಥಿ ಹಾಕಿರಲಿಲ್ಲ. ಅಂತೆಯೆ, ಜೆಡಿಎಸ್ನ 37 ಶಾಸಕರಿದ್ದರೂ ನಾವು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲಿಲ್ಲವೇ? ಬಿಜೆಪಿ ಅಧಿಕಾರಕ್ಕೆ ಬರಬಾರದೆಂದು ಹೀಗೆ ಮಾಡಿದ್ದೆವು. ಕಾಂಗ್ರೆಸ್ ಬೆಂಬಲಿಸದೇ ಹೋಗಿದ್ದರೆ ದೇವೇಗೌಡರು ಪ್ರಧಾನಿಯಾಗುತ್ತಿದ್ದರೇ ಎಂದು ಪ್ರಶ್ನಿಸಿದರು. ಪ್ರಸ್ತುತ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಆತ್ಮಸಾಕ್ಷಿ ಮತಗಳು ಕಾಂಗ್ರೆಸ್ಗೆ ದೊರೆಯಲಿದ್ದು, ನಮ್ಮ ಪಕ್ಷದ ಇಬ್ಬರೂ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಶಾಸಕರನ್ನು ಸಿದ್ದರಾಮಯ್ಯ ಬಿಜೆಪಿಗೆ ಕಳಿಸಿದ್ದಕ್ಕೆ ಮೈತ್ರಿ ಸರ್ಕಾರ ಬಿದ್ದೋಯ್ತು ಎನ್ನುತ್ತಿದ್ದ ಕುಮಾರಸ್ವಾಮಿ, ಈಗ ಸರ್ಕಾರ ಬಿದ್ದೋಗಲಿ ಎಂದೇ ವಿದೇಶಕ್ಕೆ ಹೋಗಿದ್ದೆ ಎನ್ನುತ್ತಿದ್ದಾರೆ. ಇವೆರಡರಲ್ಲಿ ಯಾವುದು ಸತ್ಯ? ಸದನದಲ್ಲಿ ಉತ್ತರ ನೀಡುವಾಗ ಸರ್ಕಾರ ಏಕೆ ಬಿತ್ತು ಎಂದು ಅವರೇ ಹೇಳಿದ್ದಾರೆ, ಸದನಕ್ಕೆ ಹೇಳಿದ್ದು ಸುಳ್ಳಾಗುತ್ತಾ? ಈಗ ಹೇಳಿದ್ದನ್ನು ಏಕೆ ನಂಬಬೇಕು. | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
ಕಲಬುರಗಿ: ಕೋಮುವಾದಿ ಬಿಜೆಪಿಯನ್ನು ಹತ್ತಿಕ್ಕಲು ಜೆಡಿಎಸ್ ಅಭ್ಯರ್ಥಿ ರಾಜ್ಯಸಭಾ ಚುನಾವಣೆ ಕಣದಿಂದ ನಿವೃತ್ತಿಯಾಗಬೇಕು ಎಂದಿರುವ ಸಿದ್ದರಾಮಯ್ಯ, ಮೊದಲು ಆ ಕೆಲಸ ಅವರೇ ಮಾಡಿಸಲಿ. ಜೆಡಿಎಸ್ನವರು 32 ಶಾಸಕರಿದ್ದು, ಕಾಂಗ್ರೆಸ್ನಲ್ಲಿ ಹೆಚ್ಚುವರಿ 22 ಮತಗಳಿವೆ. ಈ ಹಿಂದೆ ನಾವು ಹಾಕಿದ್ದ ಮುಸ್ಲಿಂ ಅಭ್ಯರ್ಥಿ ಬಗ್ಗೆ ಅನುಕಂಪ ಇರಲಿಲ್ಲವಾ? ಮುಸ್ಲಿಂ ಅಭ್ಯರ್ಥಿ ವಿರುದ್ಧ ದುಡ್ಡು ಕೊಟ್ಟು ನಮ್ಮ ಶಾಸಕರ ಮತ ಪಡೆದು ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡರಲ್ಲ. ಕೊನೆಗೆ ಆ ಅಭ್ಯರ್ಥಿಯೇ ಕಾಂಗ್ರೆಸ್ಗೆ ಟೋಪಿ ಹಾಕಿ ಬಿಜೆಪಿಗೆ ಹೋದ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಂಡು ನಮ್ಮನ್ನು ಬೆಂಬಲಿಸಲಿ ಎಂದರು.
ದೇವೇಗೌಡರನ್ನು ಪ್ರಧಾನಿ ಮಾಡಿದಾಗ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಇರಲಿಲ್ಲ, ಜನತಾದಳದಲ್ಲಿದ್ದರು. ಆಗ ಇದೇ ಸಿದ್ದರಾಮಯ್ಯ ಪಕ್ಷ ಸಂಘಟನೆ ಬಗ್ಗೆ ಗಮನವೇ ಕೊಡಲಿಲ್ಲ. ಸಿಎಂ ಖುರ್ಚಿ ಮೇಲೆ ಟವಲ್ ಹಾಕೋದರಲ್ಲಿ ಬಿಜಿಯಾಗಿದ್ದರು. | ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ
ರಾಜ್ಯಸಭೆ ಚುನಾವಣೆಯಲ್ಲಿ ‘ಆತ್ಮಸಾಕ್ಷಿ’ ಮತಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. 224 ಶಾಸಕರು ಮತದಾನದ ಹಕ್ಕು ಹೊಂದಿದ್ದು, ಅಡ್ಡ ಮತದಾನದ ಅನುಮಾನ ಮೂರು ಪಕ್ಷಗಳನ್ನು ಕಾಡುತ್ತಿದೆ. ಬಿಜೆಪಿ 3ನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಜೆಡಿಎಸ್ ಮತ್ತು ಕಾಂಗ್ರೆಸ್ನ ಕೆಲವು ಶಾಸಕರನ್ನು ಮತದಾನದಿಂದಲೇ ದೂರ ಉಳಿಸುವ ಆಲೋಚನೆಯಲ್ಲಿದೆ ಎಂಬ ಚರ್ಚೆ ಕೈ ಪಾಳಯದಲ್ಲಿದೆ. ಅಡ್ಡ ಮತದಾನ ಮಾಡಿಸಿ ವಿವಾದ ಮೈಮೇಲೆ ಎಳೆದುಕೊಳ್ಳುವ ಬದಲು ಮತದಾನದಿಂದ ದೂರ ಉಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬುದು ಕೈ ನಾಯಕರ ಅನುಮಾನ.
ಜೆಡಿಎಸ್ ವಿಚಾರಕ್ಕೆ ಬಂದರೆ, ತನ್ನೆಲ್ಲ 32 ಮತ ಚದುರದಂತೆ ನೋಡಿಕೊಳ್ಳುವುದು ಹಾಗೂ ಕಾಂಗ್ರೆಸ್ನ 2-3 ಮತಗಳನ್ನು ತನ್ನತ್ತ ಸೆಳೆದುಕೊಳ್ಳಲು ಯತ್ನಿಸಿದೆ. ಈಗ ಮುಖ್ಯವಾಗಿ ಕಾಂಗ್ರೆಸ್ ಶಾಸಕರ ನಿಲುವುಗಳೇ ಮಹತ್ವ ಪಡೆದಿವೆ. ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿದ ಬಳಿಕ ಉಳಿದಿರುವ ಹೆಚ್ಚುವರಿ ಮತಗಳೊಂದಿಗೆ ಜೆಡಿಎಸ್ ಮತ ಬುಟ್ಟಿಗೆ ಕೈ ಇಡುವ ಪ್ರಯತ್ನದಲ್ಲಿ ಕೈ ನಾಯಕರಿದ್ದಾರೆ. ತನ್ನ ಪ್ರಥಮ ಪ್ರಾಶಸ್ತ್ಯ ಮತಗಳ ಸಂಖ್ಯೆಯನ್ನು 30ಕ್ಕಿಂತ ಹೆಚ್ಚು ಮಾಡಿಕೊಳ್ಳುವ ಪ್ರಯತ್ನದಲ್ಲಿದೆ. ಇದೇ ವೇಳೆ ಬಿಜೆಪಿಯ ಜಾರಕಿಹೊಳಿ ತಂಡ, ಕಾಂಗ್ರೆಸ್ನ ಬಳ್ಳಾರಿ ಭಾಗದ ಕೆಲವು ಶಾಸಕರು, ಜೆಡಿಎಸ್ನ ಐದಕ್ಕೂ ಹೆಚ್ಚು ಶಾಸಕರ ಹೆಸರು ಚಲಾವಣೆಯಲ್ಲಿದ್ದು, ಅವರು ಮತದಾನದಿಂದ ದೂರ ಉಳಿಯುವುದೋ ಅಥವಾ ಅಡ್ಡ ಮತದಾನ ಮಾಡಿದರೆ ಆಗುವ ಲೆಕ್ಕಾಚಾರದ ಬದಲಾವಣೆ ಬಗ್ಗೆ ಚರ್ಚೆಯಂತೂ ನಡೆಯುತ್ತಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಆತ್ಮಸಾಕ್ಷಿ ಮತಗಳು ಬೀಳಲಿದೆ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ಹಿಂದೆ ಸಾಕಷ್ಟು ಚರ್ಚೆಯೂ ಆಗುತ್ತಿದೆ. ಈ ಹಿಂದೆ ಅಡ್ಡ ಮತದಾನ ನಡೆದಿದ್ದು, ಸಿದ್ದರಾಮಯ್ಯ ಜತೆ ಈಗ ಗುರುತಿಸಿಕೊಂಡಿರುವ ಹಲವು ಶಾಸಕರೇ ‘ಆತ್ಮಸಾಕ್ಷಿ’ ಮತದಾನ ಮಾಡಿದ್ದರು ಎಂಬುದು ಉಲ್ಲೇಖಾರ್ಹ ಸಂಗತಿಯಾಗಿದೆ.