

ನವದೆಹಲಿ: ರೈಲ್ವೆ ವಿಚಾರಕ್ಕೆ ಬಂದಾಗ ಐಆರ್ಸಿಟಿಸಿ ಎಂಬುದು ಒಂದು ಮಹತ್ವದ ಸಂಗತಿ. ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ (ಐಆರ್ಸಿಟಿಸಿ) ರೈಲ್ವೆಗೆ ಸಂಬಂಧಿತ ಟಿಕೆಟ್, ಕೇಟರಿಂಗ್ ಮತ್ತು ಪ್ರವಾಸ ಸೇವೆಗಳನ್ನು ಒದಗಿಸುವ ಸರ್ಕಾರಿ ಸ್ವಾಮ್ಯದ ಒಂದು ಸಂಸ್ಥೆಯಾಗಿದೆ.
ರೈಲಿನಲ್ಲಿ ಪ್ರಯಾಣ ಮಾಡುವವರು ಸಾಮಾನ್ಯವಾಗಿ ಐಆರ್ಸಿಟಿಸಿ ಅಂತರ್ಜಾಲ ತಾಣ ಅಥವಾ ಮೊಬೈಲ್ಫೋನ್ ತಂತ್ರಾಂಶವನ್ನು ಬಳಸಿಕೊಂಡು ಮುಂಗಡವಾಗಿ ಟಿಕೆಟ್ ಕಾಯ್ದಿರಿಸುತ್ತಾರೆ. ಸಾರ್ವಜನಿಕರು ತಮ್ಮ ಹೆಸರು, ಫೋನ್ ನಂಬರ್, ಇಮೇಲ್ ಐಡಿ ಹಾಗೂ ಆಧಾರ್ ಸಂಖ್ಯೆ ವಿವರ ನೀಡಿ ಈ ಸೇವೆಗಳನ್ನು ಪಡೆಯಬಹುದಾಗಿದೆ.
ಆದರೆ ಇದಕ್ಕೂ ಒಂದು ಮಿತಿ ಇದೆ. ಅಂದರೆ ಈ ಮೂಲಕ ಸಾರ್ವಜನಿಕರು ತಿಂಗಳಿಗೆ ನಿಗದಿತ ಸಂಖ್ಯೆಯ ಟಿಕೆಟ್ಗಳನ್ನಷ್ಟೇ ಕಾದಿರಿಸಬಹುದು. ಇದುವರೆಗೆ ಐಆರ್ಸಿಟಿಸಿ ವೆಬ್ಸೈಟ್ ಅಥವಾ ಆ್ಯಪ್ ಮೂಲಕ ತಿಂಗಳಿಗೆ 12 ಟಿಕೆಟ್ಗಳನ್ನಷ್ಟೇ ಕಾದಿರಿಸಬಹುದಿತ್ತು. ಇದು ಆಧಾರ್ ನಂಬರ್ ಲಿಂಕ್ ಮಾಡಿದ್ದರೆ ಮಾತ್ರ, ಲಿಂಕ್ ಮಾಡದಿರುವವರು ಮಾಸಿಕ 6 ಟಿಕೆಟ್ಗಳನ್ನು ಕಾದಿರಿಸಬಹುದಿತ್ತು.
ಈಗ ಈ ಮಿತಿಯನ್ನು ಹೆಚ್ಚಿಸಿ ದುಪ್ಪಟ್ಟು ಮಾಡಲಾಗಿದೆ. ಅಂದರೆ ಯೂಸರ್ ಐಡಿಗೆ ಆಧಾರ್ ನಂಬರ್ ಲಿಂಕ್ ಮಾಡಿರುವ ಸಾರ್ವಜನಿಕರು ಐಆರ್ಸಿಟಿಸಿ ವೆಬ್ಸೈಟ್ ಅಥವಾ ಆ್ಯಪ್ ಮೂಲಕ ತಿಂಗಳಿಗೆ 24 ಟಿಕೆಟ್ಗಳನ್ನು ಮುಂಗಡವಾಗಿ ಕಾದಿರಿಸಬಹುದು. ಒಂದುವೇಳೆ ಆಧಾರ್ ನಂಬರ್ ಲಿಂಕ್ ಮಾಡಿರದಿದ್ದರೆ ತಿಂಗಳಿಗೆ 12 ಟಿಕೆಟ್ಗಳನ್ನು ಮುಂಗಡವಾಗಿ ಕಾದಿರಿಸಿಬಹುದು.