ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ, 1 ಸಾವಿರ ಕೋಟಿ ಅನುದಾನ ಮೀಸಲಿಡಿ

HDK_Gowrishankar
Published on

ತುಮಕೂರು: ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ಕನಿಷ್ಟ 1 ಸಾವಿರ ಕೋ.ರೂ., ಅನುದಾನ ಮೀಸಲಿಡುವಂತೆ ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಆಗ್ರಹಿಸಿದರು.

ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಇಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ 64ನೇ ವರ್ಷದ ಹುಟ್ಟಹಬ್ಬ ಕಾರ್ಯಕ್ರಮಕ್ಕೆ ಕೇಕ್ ಕತ್ತರಿಸಿ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ-ಲಿಂಗಾಯಿತ ಅಭಿವೃದ್ಧಿ ನಿಗಮ ಸ್ಥಾಪಿಸಿ, ಅಧ್ಯಕ್ಷರನ್ನು ನೇಮಕ ಮಾಡಿ 500 ಕೋ. ರೂ., ಅನುದಾನ ಮೀಸಲಿಟ್ಟಿದ್ದಾರೆ. ಆದರೆ, ಅದಕ್ಕಿಂತ ಮುಂಚೆ ಸ್ಥಾಪಿಸಿದ ಕಾಡುಗೊಲ್ಲರ ಅಭಿವೃದ್ದಿ ನಿಗಮಕ್ಕೆ ಇದುವರೆಗೂ ಅನುದಾನವಾಗಲಿ, ಪದಾಧಿಕಾರಿಗಳನ್ನು ನೇಮಕ ಮಾಡಿಲ್ಲ ಎಂದರು.

ತಿಗಳ ಸಮುದಾಯವೂ ಸಹ ಅಭಿವೃದ್ಧಿ ನಿಗಮಕ್ಕೆ ಬೇಡಿಕೆ ಸಲ್ಲಿಸಿದೆ. ಒಕ್ಕಲಿಗ ಸಮುದಾಯವೂ ಸಹ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯ ಸಲ್ಲಿಸಿದೆ. ಹಾಗಾಗಿ, ಸರ್ಕಾರ ಕೂಡಲೇ ಒಕ್ಕಲಿಗ, ತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಸರ್ಕಾರ ಚುನಾವಣೆ ಸಂದರ್ಭದಲ್ಲಿ ಹಾಗೂ ಇನ್ನಿತರ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಹಲವು ನಿಗಮಗಳನ್ನು ಸ್ಥಾಪಿಸಿದೆ. ಆದರೆ, ಈವರೆಗೆ ನಿಗಮಗಳಿಗೆ ಸರಿಯಾದ ಅನುದಾನ ನೀಡಿಲ್ಲ.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯ 2018-19, 2019-20ರ ಕೊಳವೆ ಬಾವಿ ಕೊರೆಸಲು ಟೆಂಡರ್ ಕರೆದಿಲ್ಲ. ಕೆಲವು ನಿಗಮಗಳಿಗೆ ಸ್ವಂತ ಕಚೇರಿ ಇಲ್ಲ. ಜಾತಿಗೊಂದು ನಿಗಮ ಸ್ಥಾಪನೆಯ ಬದಲು, ಬಡವರ ಅಭಿವೃದ್ಧಿ ನಿಗಮ ಸ್ಥಾಪಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಗೌರಿಶಂಕರ್ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net