ವಿಎಲ್​ಟಿ, ಪ್ಯಾನಿಕ್ ಬಟನ್ ಇಲ್ಲದಿದ್ರೆ ಎಫ್​ಸಿ ಕೊಡಲ್ಲ!

ker
Published on

ಸಾರ್ವಜನಿಕ ವಾಹನಗಳಲ್ಲಿ ಅಳವಡಿಕೆ ಕಡ್ಡಾಯ | ಸೆ.10ರೊಳಗೆ ಹಾಕಿಸಲು ಸಾರಿಗೆ ಇಲಾಖೆ ಆದೇಶ

| ಕೀರ್ತಿನಾರಾಯಣ ಸಿ.ಬೆಂಗಳೂರು

ಸಾರ್ವಜನಿಕ ಸೇವಾ ವಾಹನಗಳು ಹಾಗೂ ರಾಷ್ಟ್ರೀಯ ರಹದಾರಿ ಹೊಂದಿದ ಸರಕು ಸಾಗಾಣಿಕೆ ವಾಹನಗಳಿಗೆ ವೆಹಿಕಲ್ ಲೊಕೇಷನ್ ಟ್ರಾ್ಯಕಿಂಗ್ (ವಿಎಲ್​ಟಿ) ಹಾಗೂ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಸಿರದಿದ್ದರೆ ಫಿಟ್​ನೆಸ್ ಸರ್ಟಿಫಿಕೇಟ್ (ಎಫ್​ಸಿ) ನವೀಕರಣ ಮಾಡದಿರಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಕಚೇರಿ (ಆರ್​ಟಿಒ)ಗಳಿಗೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಲಿಖಿತ ಆದೇಶ ಹೊರಡಿಸಿದ್ದಾರೆ. ಆದರೆ, ಸಮರ್ಪಕ ವ್ಯವಸ್ಥೆ ಕಲ್ಪಿಸದೆ ಜಾರಿಗೊಳಿಸುತ್ತಿರುವ ಬಗ್ಗೆ ಕೆಲ ಅಧಿಕಾರಿಗಳಿಂದ ಅಸಮಾಧಾನ ವ್ಯಕ್ತವಾಗಿದೆ.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ವಿಎಲ್​ಟಿ ಹಾಗೂ ಪ್ಯಾನಿಕ್ ಬಟನ್ ಅಳವಡಿಸುವ ಕಡ್ಡಾಯ ನಿಯಮವನ್ನು 2024ರ ಮಾ.11ರಿಂದ ಸಾರಿಗೆ ಇಲಾಖೆ ಅನುಷ್ಠಾನಕ್ಕೆ ತಂದಿದೆ. 2024ರ ಸೆ.10ರವರೆಗೆ ಅವಕಾಶ ನೀಡಿದ್ದು, ಅಷ್ಟರೊಳಗೆ ಎಲ್ಲ ವಾಹನ ಮಾಲೀಕರು ಡಿವೈಸ್​ಗಳನ್ನು ಅಳವಡಿಸಿಕೊಳ್ಳಲು ಸೂಚಿಸಿದೆ. ಆದರೆ, ಯೋಜನೆ ಜಾರಿಯಾಗಿ 3 ತಿಂಗಳು ಸಮೀಪಿಸುತ್ತಿದ್ದರೂ ಡಿವೈಸ್​ಗಳ ಅಳವಡಿಕೆಗೆ ವಾಹನ ಮಾಲೀಕರು ಆಸಕ್ತಿ ತೋರುತ್ತಿಲ್ಲ. ಕಡಿಮೆ ವಾಹನಗಳಿಗೆ ಡಿವೈಸ್​ಗಳನ್ನು ಹಾಕಿಸಿದ್ದು, ತ್ವರಿತ ಕ್ರಮ ಕೈಗೊಳ್ಳಲು ಸಾರಿಗೆ ಆಯುಕ್ತ ಎ.ಎಂ.ಯೋಗೀಶ್ ಸೂಚಿಸಿದ್ದಾರೆ.

ಆರ್​ಟಿಒ ಕಚೇರಿಗಳಿಗೆ ಎಫ್​ಸಿ ನವೀಕರಣಕ್ಕೆ ಬರುವ ವಾಹನಗಳಲ್ಲಿ ವಿಎಲ್​ಟಿ ಹಾಗೂ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಸಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಎಫ್​ಸಿ ನವೀಕರಣ ಮಾಡಬೇಕು. ಇಲ್ಲದಿದ್ದರೆ ನವೀಕರಣ ಮಾಡದಂತೆ ಆಯುಕ್ತರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚನೆ ನೀಡುವಂತೆ ಆರ್​ಟಿಒ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ನಿರ್ವಹಣೆಗೆ ಹೇಗೆ?

1. ಬೆಂಗಳೂರಿನ ಶಾಂತಿನಗರದಲ್ಲಿರುವ ಸಾರಿಗೆ ಇಲಾಖೆ ಪ್ರಧಾನ ಕಚೇರಿಯಲ್ಲಿ ಕಮಾಂಡ್ ಸೆಂಟರ್ ಸ್ಥಾಪನೆಯಾಗಿದೆ.

2. ಎಲ್ಲ ಸಾರ್ವಜನಿಕ ಸೇವಾ ವಾಹನಗಳಲ್ಲಿ ಅಳವಡಿಸುವ ಡಿವೈಸ್​ಗಳಿಂದ ಕಮಾಂಡ್ ಸೆಂಟರ್​ಗೆ ನೇರವಾಗಿ ಸಂಪರ್ಕ ಇರಲಿದೆ.

3. ನಿರ್ದಿಷ್ಟ ವಾಹನ ಎಲ್ಲಿದೆ? ಯಾವ ಮಾರ್ಗದಲ್ಲಿ ಪ್ರಯಾಣಿಸುತ್ತಿದೆ? ಮಾರ್ಗ ಬದಲಾವಣೆ? ಸೇರಿ ಎಲ್ಲ ಮಾಹಿತಿ ಲಭ್ಯ.

4. ತುರ್ತ ಪರಿಸ್ಥಿತಿಯಲ್ಲಿ ಪ್ಯಾನಿಕ್ ಬಟನ್ ಒತ್ತಿದರೆ ಸಾಕು ಕಮಾಂಡ್ ಸೆಂಟರ್​ಗೆ ಎಚ್ಚರಿಕೆ ಸಂದೇಶ ರವಾನೆ.

ಲಿಂಕ್ ಆದ್ರೆ ಹೊಸದಾಗಿ ಬೇಕಿಲ್ಲ: ಎಐಎಸ್ 140 ಪ್ರಮಾಣೀಕೃತ ವೆಹಿಕಲ್ ಲೋಕೇಷನ್ ಟ್ರಾ್ಯಕಿಂಗ್ ಮತ್ತು ಪ್ಯಾನಿಕ್ ಬಟನ್​ಗಳನ್ನು ಈಗಾಗಲೇ ಅಳವಡಿಸಿದ್ದು, ಅದು ಕಮಾಂಡ್ ಸೆಂಟರ್​ಗೆ ಸಂಪರ್ಕ ಹೊಂದಿದಲ್ಲಿ ಮತ್ತೆ ಹೊಸದಾಗಿ ಹಾಕಿಸುವ ಅವಶ್ಯಕತೆ ಇಲ್ಲ. ಇಲ್ಲದಿದ್ದರೆ ಇಲಾಖೆ ಗುರುತಿಸಿರುವ 12 ಕಂಪನಿಗಳಲ್ಲೇ ಹಾಕಿಸಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವೆಲ್ಲ ವಾಹನ?

. ಯೆಲ್ಲೋ ಬೋರ್ಡ್​ನ ಟ್ಯಾಕ್ಸಿಗಳು, ಕ್ಯಾಬ್​ಗಳು, ಖಾಸಗಿ ಬಸ್​ಗಳು, ನ್ಯಾಷನಲ್ ಪರ್ವಿುಟ್ ಹೊಂದಿರುವ ಗೂಡ್ಸ್ ವಾಹನಗಳು.

ಕೇಂದ್ರ ಕಚೇರಿಯಲ್ಲಿ ಇಂದು ಟ್ರೇನಿಂಗ್: ಗುರುವಾರ (ಜೂ.6) ಶಾಂತಿನಗರದ ಪ್ರಧಾನ ಕಚೇರಿಯಲ್ಲಿ ನಡೆಯುವ ಸಭೆಗೆ ಆರ್​ಟಿಒ, ಎಆರ್​ಟಿಒ, ಬ್ರೇಕ್ ಇನ್​ಸ್ಪೆಕ್ಟರ್​ಗಳನ್ನು ಕರೆಯಲಾಗಿದೆ. ಡಿವೈಸ್ ಅಳವಡಿಕೆ ಹಾಗೂ ಕಮಾಂಡ್ ಸೆಂಟರ್ ನಿರ್ವಹಣೆ ಬಗ್ಗೆ ತರಬೇತಿ ಕೊಡಲಿದ್ದಾರೆ ಎಂದು ಗೊತ್ತಾಗಿದೆ.

ಅಧಿಕಾರಿಗಳ ಅಸಮಾಧಾನ ಏಕೆ?

. ಡಿವೈಸ್ ಎಲ್ಲಿ ಸಿಗುತ್ತೆ? ವಾಹನ ಮಾಲೀಕರು ಯಾರನ್ನು ಸಂರ್ಪಸಬೇಕೆಂಬ ಮಾಹಿತಿ ಇಲ್ಲ ್ಞ ಒಂದು ವಾಹನಕ್ಕೆ ಅಳವಡಿಸಬೇಕಾದರೆ ಕನಿಷ್ಠ 45 ನಿಮಿಷ ಬೇಕಾಗುತ್ತದೆ ್ಞ ಯೋಜನೆ, ಡಿವೈಸ್ ಅಳವಡಿಕೆ ಬಗ್ಗೆ ಜಾಗೃತಿ, ಜಾಹೀರಾತು ನೀಡುವ ಕೆಲಸವಾಗಿಲ್ಲ

ಕೇಂದ್ರ ಸರ್ಕಾರದ ಯೋಜನೆ ಜಾರಿಗೊಳಿಸಬೇಕೆ ಬೇಡವೇ ಎಂಬುದು ರಾಜ್ಯ ಸರ್ಕಾರ ವಿವೇಚನೆಗೆ ಬಿಟ್ಟದ್ದು. ಅನುಕೂಲಕ್ಕೆ ತಕ್ಕಂತೆ ಅಗತ್ಯ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಇದೆ. 2 ರಿಂದ 3 ಸಾವಿರ ರೂ.ಗೆ ಜಿಪಿಆರ್​ಎಸ್ ಸಿಗುತ್ತಿದ್ದು, ಬಹುತೇಕ ವಾಹನಗಳಿಗೆ ಅಳವಡಿಸಲಾಗಿದೆ. ಆದರೀಗ ವಿಎಲ್​ಟಿ/ಪ್ಯಾನಿಕ್ ಬಟನ್ ಅಳವಡಿಸಬೇಕಾದರೆ 12 ಸಾವಿರ ರೂ. ನಿಗದಿಪಡಿಸಿದೆ. ಯೋಜನೆ ಜಾರಿ ವಾಹನ ಮಾಲೀಕರಿಗೆ ಇಷ್ಟವಿಲ್ಲ.| ಭೈರವ ಸಿದ್ದರಾಮಯ್ಯ ಮ್ಯಾಕ್ಸಿ ಕ್ಯಾಬ್ ಸಂಸ್ಥಾಪಕ, ಕರ್ನಾಟಕ ಪ್ರವಾಸೋದ್ಯಮ ಖಾಸಗಿ ವಾಹನ ಮಾಲೀಕರ ಸಂಘ

 ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ ಹಾಗೂ ಸಂಪರ್ಕ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ ವಿಭಾಗದ ಎಡಿಜಿಪಿ ಎಸ್.ಮುರುಗನ್ ಅವರನ್ನು ಭೇಟಿ ಮಾಡಿ ರ್ಚಚಿಸಲಾಗಿದೆ. ಕಮಾಂಡ್ ಸೆಂಟರ್​ಗೆ ಬರುವ ಎಮರ್ಜೆನ್ಸಿ ಅಲರ್ಟ್​ಗಳನ್ನು ಮಾತ್ರ ಪೊಲೀಸ್ ಇಲಾಖೆಗೆ ರವಾನಿಸಿ, ತಕ್ಷಣ ನೆರವು ಪಡೆಯಲು ಮನವಿ ಮಾಡಲಾಗಿದೆ.| ಬಿ.ಪಿ.ಉಮಾಶಂಕರ ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ (ಆಡಳಿತ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net