ಹಣಕ್ಕೆ ನಿರ್ಮಾಪಕರಿಗೆ ಬ್ಲ್ಯಾಕ್​ಮೇಲ್...! ವಿವಾದಕ್ಕೆ ಸಿಲುಕಿದ್ದ 'ಬೆಂಗಾಲ್​ ಫೈಲ್ಸ್'​ ಬಗ್ಗೆ ವಿವೇಕ್​ ಬಿಚ್ಚುನುಡಿ​ | The Bengal Files

ವಿಜಯವಾಣಿ - 2025-08-22T202937.644
Published on

The Bengal Files: 2022ರಲ್ಲಿ ತೆರೆಕಂಡ ‘ದಿ ಕಾಶ್ಮೀರ್ ಫೈಲ್ಸ್’​ ಸಿನಿಮಾ ಮೂಲಕ ಕಾಶ್ಮೀರಿ ಪಂಡಿತರ ವಲಸೆ ಹಿಂದಿದ್ದ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಇದೀಗ ಮತ್ತೊಂದು ‘ಫೈಲ್ಸ್’​ನೊಂದಿಗೆ ಸಿನಿಪ್ರೇಕ್ಷಕರ ಎದುರು ಹಾಜರಾಗಲು ಸಜ್ಜಾಗಿದ್ದಾರೆ. ಸರಣಿ ಫೈಲ್ಸ್​​ಗಳ ಲೋಕಕ್ಕೆ ನುಸುಳಿರುವ ನಿರ್ದೇಶಕರು, ಇದೀಗ ‘ದಿ ಬೆಂಗಾಲ್ ಫೈಲ್ಸ್’​ ಮೂಲಕ ಸಿನಿಪ್ರಿಯರಿಗೆ ಮತ್ತೊಂದು ರೋಚಕ ಸಂಗತಿಯನ್ನು ಹೇಳಲು ಹೊರಟ್ಟಿದ್ದಾರೆ.

ವಿವಾದಗಳ ಸುಳಿಯಲ್ಲಿ 'ಫೈಲ್ಸ್'​ ಕಥನ

ಈ ಹಿಂದೆ ಚಿತ್ರಕ್ಕೆ ‘ದಿ ಡೆಲ್ಲಿ ಫೈಲ್ಸ್’ ಎಂಬ ಶೀರ್ಷಿಕೆಯಿಟ್ಟಿದ್ದ ವಿವೇಕ್​, ನಂತರದಲ್ಲಿ ಅದನ್ನು ‘ದಿ ಬೆಂಗಾಲ್ ಫೈಲ್ಸ್’ ಎಂದು ಮರುನಾಮಕರಣ ಮಾಡಿದರು. ಈ ಚಿತ್ರದಲ್ಲಿ ವಿವೇಕ್ ಅಗ್ನಿಹೋತ್ರಿ ಅವರ ಪತ್ನಿ, ನಟಿ ಹಾಗೂ ನಿರ್ಮಾಪಕಿಯೂ ಆದ ಪಲ್ಲವಿ ಜೋಶಿ ಕೂಡ ಅಭಿನಯಿಸಿದ್ದಾರೆ. ಇದೇ ಸೆ.05ರಂದು ಜಾಗತಿಕವಾಗಿ ತೆರೆಕಾಣಲು ಸಜ್ಜಾಗಿರುವ ಈ ಚಿತ್ರವು ಭಾರೀ ವಿವಾದಗಳಿಗೆ ಗುರಿಯಾಗಿತ್ತು. ಇದೀಗ ಸಿನಿಮಾಗೆ ಸಂಬಂಧಿಸಿದಂತೆ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿರುವ ನಿರ್ದೇಶಕರು, ತಮ್ಮ ಚಿತ್ರವು ವಿವಾದಗಳಿಂದ ಕೂಡಲು ಕಾರಣವೇನು? ಎಂಬುದನ್ನು ಬಹಿರಂಗಪಡಿಸಿದ್ದಾರೆ.

ನಿರ್ಮಾಪಕರಿಗೆ ಬ್ಲ್ಯಾಕ್​ಮೇಲ್​

ಸಂದರ್ಶನದಲ್ಲಿ ಮಾತನಾಡಿರುವ ವಿವೇಕ್ ಅಗ್ನಿಹೋತ್ರಿ, ನಮ್ಮ ಸಿನಿಮಾ ಆಗಸ್ಟ್ 16, 1946ರ ಕಲ್ಕತ್ತಾ ಗಲಭೆಯ ಸುತ್ತ ನಡೆಯುವ ನೈಜ ಕಥೆಯನ್ನು ಒಳಗೊಂಡಿದೆ. ಹಲವರು ಚಿತ್ರದ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವೊಮ್ಮೆ ಏನಾಗುತ್ತದೆ ಅಂದರೆ, ಈ ರೀತಿಯ ಚಿತ್ರಗಳು ಇನ್ನೇನು ರಿಲೀಸ್ ಆಗುತ್ತಿದೆ ಎನ್ನುವ ಕೊನೆಯ ಕ್ಷಣದಲ್ಲಿ ಅಡ್ಡಿಪಡಿಸಲು ಒಂದಷ್ಟು ಜನರು ಮುಂದಾಗುತ್ತಾರೆ. ಅನೇಕರು ನಿರ್ಮಾಪಕರನ್ನೇ ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಾರೆ ಎಂದರು.

"ಚಿತ್ರಕ್ಕೆ ಕಾನೂನು ಸಂಕಷ್ಟ ಅಥವಾ ಬೆದರಿಕೆಗಳನ್ನು ಹಾಕುವ ಮೂಲಕ ನಿರ್ಮಾಪಕರಿಂದ ಭಾರೀ ಮೊತ್ತದ ಹಣವನ್ನು ಪಡೆಯಬಹುದು ಎಂದು ಭಾವಿಸುತ್ತಾರೆ. ಆದರೆ, ಬ್ಲ್ಯಾಕ್‌ಮೇಲ್​ಗಳಿಗೆ ಹೆದರದ ನಾನು, ಅಂಥವರಿಗೆ ಒಂದು ಪೈಸೆಯನ್ನೂ ಇಲ್ಲಿಯವರೆಗೆ ಕೊಟ್ಟಿಲ್ಲ. ಸಣ್ಣ ವಿವಾದಕ್ಕೆ ಸಿಲುಕುವ ಸಿನಿಮಾಗಳಿಂದ ಲಾಭ ಪಡೆಯಲು ಕೆಲವರು ಕಾಯುತ್ತಿರುತ್ತಾರೆ. ಇಲ್ಲಿ ನಾನು ಯಾರ ಹೆಸರನ್ನು ತೆಗೆದುಕೊಳ್ಳಲು ಬಯಸುವುದಿಲ್ಲ" ಎಂದಿದ್ದಾರೆ.

ಚಿತ್ರದ ಕಥೆಯೇನು?

1946ರ ಕಲ್ಕತ್ತಾ ಗಲಭೆಯಲ್ಲಿ ಸಂಭವಿಸಿದ ಕೊಲೆಗಳು ಮತ್ತು ನೋಖಾಲಿ ಗಲಭೆಗಳ ಸುತ್ತ ಸುತ್ತುವ ಕಥಾಹಂದರವನ್ನು ಚಿತ್ರ ಒಳಗೊಂಡಿದೆ.

ಏನೀ ವಿವಾದ?

ಈ ಚಿತ್ರವು ಜಾಲತಾಣಗಳಲ್ಲಿ ಭಾರೀ ವಿವಾದಕ್ಕೆ ಗುರಿಯಾಯಿತು. ಕೆಲವರು ಇದು ಸಮಾಜವನ್ನು ಒಡೆಯುವ ಉದ್ದೇಶವನ್ನು ಹೊಂದಿದೆ ಮತ್ತು ದ್ವೇಷವನ್ನು ಹರಡುವ ದೃಶ್ಯಗಳನ್ನು ಒಳಗೊಂಡಿದೆ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, 1946ರ ಹಿಂದೂ ಜನಸಂಹಾರದ ಅಪ್ರಕಟಿತ ಸತ್ಯವನ್ನು ಬೆಂಗಾಲ್​ ಫೈಲ್ಸ್ ಮೂಲಕ ತೋರಿಸಿದ್ದೇವೆ ಎಂದು ಹೇಳಿದ್ದಾರೆ.

ರಾಜಕೀಯ ಒತ್ತಡ

ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್​ ಬಿಡುಗಡೆಗೊಂಡಿದ್ದು, ಸಿನಿಪ್ರಿಯರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿತು. ಇದಕ್ಕೂ ಮೊದಲು ಪಶ್ಚಿಮ ಬಂಗಾಳದಲ್ಲಿ ಟ್ರೇಲರ್ ಬಿಡುಗಡೆಗೆ ರಾಜಕೀಯ ಒತ್ತಡ ಹೇರಲಾಗಿತ್ತು. ಒಂದಷ್ಟು ಅಡೆತಡೆಗಳ ಬಳಿಕ ಟ್ರೇಲರ್​ ಯೂಟ್ಯೂಬ್​ನಲ್ಲಿ ತೆರೆಕಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net